ಚಾಂಪಿಯನ್ಸ್ ಟ್ರೋಫಿಯೇ ರೋಹಿತ್ ಶರ್ಮಾ ಕೊನೆಯ ಅಂತಾರಾಷ್ಟ್ರೀಯ ಪಂದ್ಯ; ಇಂಗ್ಲೆಂಡ್ ಟೆಸ್ಟ್ ಸರಣಿ ಆಡುವ ಸಾಧ್ಯತೆ ಇಲ್ಲ
ಕಳೆದ ಮೂರು ಸರಣಿಗಳಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಹೆಚ್ಚು ಸಮಯ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಸಾಧ್ಯತೆ ಇಲ್ಲ. ಚಾಂಪಿಯನ್ಸ್ ಟ್ರೋಫಿಯು ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ಹೇಳಿದೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡ ಸೋಲು ಕಂಡಿತು. ಇದೇ ವೇಳೆ ಭಾರತದ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವದ ಜೊತೆಗೆ ಅವರ ಕಳಪೆ ಪ್ರದರ್ಶನವನ್ನೂ ಟೀಕಿಸಲಾಯಿತು. ಸರಣಿ ಸೋಲಿನೊಂದಿಗೆ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದಿದ್ದು ಮಾತ್ರವಲ್ಲದೆ, ಬಿಜಿಟಿ ಟ್ರೋಫಿಯನ್ನು ಕೂಡಾ ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿತು. ಹೀಗಾಗಿ ಹಿಟ್‌ಮ್ಯಾನ್ ಭವಿಷ್ಯದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಸಿಡ್ನಿ ಟೆಸ್ಟ್ ಪಂದ್ಯದಿಂದ ಅವರು ಹೊರಗುಳಿದ ಬೆನ್ನಲ್ಲೇ, 37 ವರ್ಷದ ರೋಹಿತ್ ಶರ್ಮಾ ನಿವೃತ್ತಿಯ ಕುರಿತು ಮಾತುಗಳು ಹೆಚ್ಚುತ್ತಿವೆ. ಈ ನಡುವೆ ಚಾಂಪಿಯನ್ಸ್ ಟ್ರೋಫಿ ನಂತರ ರೋಹಿತ್ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಮುಂದುವರಿಸುವ ಸಾಧ್ಯತೆಯಿಲ್ಲ ಎಂದು ವರದಿಯೊಂದು ತಿಳಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಿಂದ ರೋಹಿತ್ ಹೊರಗುಳಿದ ಬೆನ್ನಲ್ಲೇ, ಮೆಲ್ಬೋರ್ನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಅವರ ವೃತ್ತಿಜೀವನದ ಕೊನೆಯ ಟೆಸ್ಟ್ ಎಂದೇ ಊಹಿಸಲಾಗಿತ್ತು. ಆದರೆ, ಸಿಡ್ನಿ ಟೆಸ್ಟ್ ಪಂದ್ಯದ 2ನೇ ದಿನದಂದು ಎಲ್ಲಾ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದರು. ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನಿವೃತ್ತಿ ಸದ್ಯಕ್ಕಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ಆದರೆ, ದೈನಿಕ್ ಜಾಗರಣ್ ಮಾಡಿರುವ ವರದಿ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯೇ ಅವರ ಕೊನೆಯ ಸರಣಿಯಾಗಲಿದೆ.
ಮುಂಬೈನಲ್ಲಿ ಶನಿವಾರ (ಜ.11) ನಡೆದ ಪರಿಶೀಲನಾ ಸಭೆಯಲ್ಲಿ ಬಿಸಿಸಿಐ ಅಧಿಕಾರಿಗಳು ರೋಹಿತ್ ವಿಷಯವನ್ನು ಪ್ರಸ್ತಾಪಿಸಿದರು. ಮುಂದಿನ ತಿಂಗಳು ಪ್ರಾರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಮುಂಚಿತವಾಗಿ ಮಂಡಳಿಯು ಅಚ್ಚರಿಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಂತೂ ಇಲ್ಲ. ಆದರೆ ಆಯ್ಕೆದಾರರು ರೋಹಿತ್ ಪ್ರದರ್ಶನದ ಬಗ್ಗೆ ಚಿಂತಿತರಾಗಿರುವುದು ಸತ್ಯ.
ಕಳೆದ ಮೂರು ಸರಣಿಗಳಲ್ಲಿ ರೋಹಿತ್ ಗಳಿಸಿರುವುದು ಕೇವಲ 164 ರನ್ ಮಾತ್ರ. ಅವುಗಳಲ್ಲಿ 31 ರನ್‌ಗಳು ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಂದಿವೆ.
ರೋಹಿತ್ ಶರ್ಮಾ ಇಂಗ್ಲೆಂಡ್ ಪ್ರಯಾಣಿಸುವ ಸಾಧ್ಯತೆ ಇಲ್ಲ
ಹೌದು, ಸುದ್ದಿಸಂಸ್ಥೆ ದೈನಿಕ್ ಜಾಗರಣ್ ಸೋಮವಾರ (ಜ.13) ಮಾಡಿರುವ ವರದಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯೇ ರೋಹಿತ್ ಅವರ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಲಿದೆ. ಐಸಿಸಿ ಪಂದ್ಯಾವಳಿಯ ನಂತರ, ಭಾರತವು ನೂತನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತು ಇಂಗ್ಲೆಂಡ್ ಪ್ರವಾಸದೊಂದಿಗೆ ಆರಂಭವಾಗಲಿದೆ. ಅಲ್ಲಿ ಐದು ಟೆಸ್ಟ್ ಪಂದ್ಯಗಳು ನಡೆಯಲಿದೆ. “ರೋಹಿತ್ ಐದು ಟೆಸ್ಟ್ ಪಂದ್ಯಗಳಿಗಾಗಿ ಇಂಗ್ಲೆಂಡ್‌ಗೆ ಹೋಗುವ ಸಾಧ್ಯತೆ ತುಂಬಾ ಕಡಿಮೆ” ಎಂದು ವರದಿ ಹೇಳಿದೆ.
