ಭಾರತ-ಪಾಕಿಸ್ತಾನ ಗೆದ್ದರೆ ಅಥವಾ ಸೋತರೆ ಹೇಗಿರಲಿದೆ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಲೆಕ್ಕಾಚಾರ?
India vs Pakistan: ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್ ಕದನದಲ್ಲಿ ಭಾರತ ಮತ್ತು ಪಾಕಿಸ್ತಾನ ಸೋತರೆ ಅಥವಾ ಗೆದ್ದರೆ ಸೆಮಿಫೈನಲ್ ಲೆಕ್ಕಾಚಾರ ಹೇಗಿರಲಿದೆ?

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈವೋಲ್ಟೇಜ್ ಕದನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು (India and Pakistan) ಸೆಣಸುತ್ತಿವೆ. ಈ ಪಂದ್ಯ ಕಾವು ಜಗತ್ತಿಗೆ ಆವರಿಸಿದೆ. ಭಾರತ ತಂಡ ಸೆಮಿಫೈನಲ್ ಟಿಕೆಟ್ ಖಾತ್ರಿಪಡಿಸಿಕೊಳ್ಳುವ ಗುರಿಯ ಜೊತೆಗೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲೂ ಇದೆ. ಈಗಾಗಲೇ ಮೊದಲ ಸೋಲು ಕಂಡಿರುವ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳುವುದನ್ನು ತಪ್ಪಿಸಿಕೊಳ್ಳಬೇಕಾಗಿರುವುದರ ಜೊತೆಗೆ ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವುದರ ಒತ್ತಡವೂ ತನ್ನಲ್ಲಿದೆ. ಈ ರೋಚಕ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸುತ್ತಿದೆ.
ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ 3-2ರಲ್ಲಿ ಮುನ್ನಡೆಯಲ್ಲಿರುವ ಪಾಕಿಸ್ತಾನ ಅದೇ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲೂ ಇದೆ. ಮತ್ತೊಂದೆಡೆ ದುಬೈ ಪಾಕ್ಗೆ ಚಿರಪರಿತವೂ ಹೌದು. ಚಾಂಪಿಯನ್ಸ್ ಟ್ರೋಫಿ ಹೊರತುಪಡಿಸಿ ಉಳಿದ ಐಸಿಸಿ ಟೂರ್ನಿಗಳಲ್ಲಿ ಮೇಲುಗೈ ಸಾಧಿಸಿರುವುದು ಭಾರತದ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಅಲ್ಲದೆ, ಪ್ರಮುಖ ಆಟಗಾರರು ಅತ್ಯುತ್ತಮ ಲಯದಲ್ಲಿರುವುದು ಕೂಡ ತಂಡದ ಸಕಾರಾತ್ಮಕ ಅಂಶವಾಗಿದೆ. ಒಟ್ಟಾರೆ ಉಭಯ ತಂಡಗಳ ಆಟಗಾರರ ನಡುವೆ ವ್ಯಾಪಕ ನಿರೀಕ್ಷೆಗಳು ಹುಟ್ಟಿಕೊಂಡಿದ್ದು, ಯಾರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಸದ್ಯದ ಕುತೂಹಲ. ಇದರ ಮಧ್ಯೆ ಸೋತರೆ-ಗೆದ್ದರೆ ಸೆಮೀಸ್ ಲೆಕ್ಕಾಚಾರ ಹೇಗಿರಲಿದೆ? ಇಲ್ಲಿದೆ ವಿವರ.
ಭಾರತ ಗೆದ್ದರೆ...
ಭಾರತ ತಂಡ ಗೆದ್ದರೆ ಸೆಮಿಫೈನಲ್ ಪ್ರವೇಶ ಬಹುತೇಕ ಖಾತ್ರಿ (ಏಕೆಂದರೆ ಮೂರು ತಂಡಗಳಿಗೆ 4 ಅಂಕ ಪಡೆಯುವ ಅವಕಾಶ ಇದೆ)
ಬಾಂಗ್ಲಾ ವಿರುದ್ಧ ನ್ಯೂಜಿಲೆಂಡ್ ಗೆದ್ದರೆ ಸೆಮೀಸ್ ಪ್ರವೇಶ ಅಧಿಕೃತ
ನ್ಯೂಜಿಲೆಂಡ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೆಮೀಸ್ಗೆ ಲಗ್ಗೆ
ಭಾರತ ಸೋತರೆ...
ಭಾರತ ಸೋತರೆ ಸೆಮೀಸ್ ಪ್ರವೇಶಿಸಲು ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವುದು ಅನಿವಾರ್ಯ
ಬಾಂಗ್ಲಾ ವಿರುದ್ಧ ಕಿವೀಸ್ ಮತ್ತು ಪಾಕಿಸ್ತಾನ ಗೆದ್ದರೆ ಭಾರತ ಅಂತಿಮ ಲೀಗ್ ಪಂದ್ಯದಲ್ಲಿ ಗೆಲ್ಲುವುದಷ್ಟೆ ಸಾಲದು, ಉತ್ತಮ ರನ್ ರೇಟ್ ಕೂಡ ಉಳಿಸಿಕೊಳ್ಳುವುದು ಅಗತ್ಯ.
ಪಾಕಿಸ್ತಾನ ಗೆದ್ದರೆ...
ಪಾಕ್ ಗೆದ್ದರೆ ಕೊನೆ ಲೀಗ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧವೂ ಜಯಿಸಿ ಸೆಮಿಫೈನಲ್ಗೆ ಪ್ರವೇಶಿಸಬಹುದು.
ಭಾರತ ತಂಡವು ಕೊನೆಯ ಲೀಗ್ ಪಂದ್ಯದಲ್ಲೂ ಸೋಲಬೇಕು ಅಥವಾ ನ್ಯೂಜಿಲೆಂಡ್ ಉಳಿದ ಎರಡೂ ಪಂದ್ಯಗಳಲ್ಲಿ ಸೋಲಬೇಕು.
ಭಾರತ-ಕಿವೀಸ್ ನಡುವೆ ಒಂದು ತಂಡವಷ್ಟೇ ಗುಂಪಿನ ಕನಿಷ್ಠ 2 ಪಂದ್ಯ ಗೆಲ್ಲಬೇಕು ಅಥವಾ ರನ್ ರೇಟ್ನಲ್ಲಿ ಇವೆರಡಲ್ಲಿ ಒಂದು ತಂಡವನ್ನಾದರೂ ಹಿಂದಿಕ್ಕಬೇಕು.
ಪಾಕಿಸ್ತಾನ ಸೋತರೆ...
ಪಾಕ್ ಸೋತರೆ ಸೆಮಿಫೈನಲ್ ರೇಸ್ನಿಂದ ಹೊರಕ್ಕೆ. ಹೀಗಾಗಿ ಪ್ರಶಸ್ತಿ ಉಳಿಸಿಕೊಳ್ಳುವ ಅವಕಾಶ ಇರುವುದಿಲ್ಲ.
| ತಂಡ (ಗ್ರೂಪ್ ಎ) | ಪಂದ್ಯ | ಗೆಲುವು | ಸೋಲು | ಅಂಕ | ರನ್ರೇಟ್ |
|---|---|---|---|---|---|
| ನ್ಯೂಜಿಲೆಂಡ್ | 1 | 1 | 0 | 2 | +1.200 |
| ಭಾರತ | 1 | 1 | 0 | 2 | +0.408 |
| ಬಾಂಗ್ಲಾದೇಶ | 1 | 0 | 1 | 0 | -0.408 |
| ಪಾಕಿಸ್ತಾನ | 1 | 0 | 1 | 0 | -1.200 |
| ತಂಡ (ಗ್ರೂಪ್ ಬಿ) | ಪಂದ್ಯ | ಗೆಲುವು | ಸೋಲು | ಅಂಕ | ರನ್ರೇಟ್ |
|---|---|---|---|---|---|
| ದಕ್ಷಿಣ ಆಫ್ರಿಕಾ | 1 | 1 | 0 | 2 | +2.140 |
| ಆಸ್ಟ್ರೇಲಿಯಾ | 1 | 1 | 0 | 2 | +0.475 |
| ಇಂಗ್ಲೆಂಡ್ | 1 | 0 | 1 | 0 | -0.475 |
| ಅಫ್ಘಾನಿಸ್ತಾನ | 1 | 0 | 1 | 0 | -2.140 |


