ಮಿಚೆಲ್ ಮಾರ್ಷ್ ಪ್ಯಾಡ್‌ಗೆ ಚೆಂಡು ಸ್ಪಷ್ಟವಾಗಿ ತಾಗಿದ್ದರೂ ನಾಟೌಟ್ ಕೊಟ್ಟ 3ನೇ ಅಂಪೈರ್; ಮತ್ತೊಂದು DRS ವಿವಾದ!
Mitchell Marsh Wicket Controversy: ಅಡಿಲೇಡ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ 2ನೇ ಟೆಸ್ಟ್ನ 2ನೇ ದಿನದಂದು ಮಿಚೆಲ್ ಮಾರ್ಷ್ ಅವರ ಪ್ಯಾಡ್‌ಗೆ ಚೆಂಡು ತಾಗಿರುವುದು ಸ್ಪಷ್ಟವಾಗಿ ಕಾಣುತ್ತಿದ್ದರೂ ಮೂರನೇ ಅಂಪೈರ್ ನಾಟೌಟ್ ಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಅಥವಾ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಡಿಆರ್‌ಎಸ್ ಕುರಿತು ವಿವಾದ ಉಂಟಾಗಿದೆ. 2ನೇ ದಿನದಂದು ಟೀಮ್ ಇಂಡಿಯಾ ಮತ್ತೊಂದು ಡಿಆರ್‌ಎಸ್ ವಿವಾದವನ್ನು ಎದುರಿಸಿತು. ಆಸ್ಟ್ರೇಲಿಯಾ ಇನ್ನಿಂಗ್ಸ್‌ನ 58ನೇ ಓವರ್‌ನಲ್ಲಿ ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬೌಲಿಂಗ್ನಲ್ಲಿ ಈ ಘಟನೆ ಸಂಭವಿಸಿದೆ. ಮಿಚೆಲ್ ಮಾರ್ಷ್ ಎಲ್‌ಬಿಡಬ್ಲ್ಯೂ ಔಟಿದ್ದರೂ ಮೂರನೇ ಅಂಪೈರ್ ತೆಗೆದುಕೊಂಡ ನಿರ್ಧಾರ ಅಚ್ಚರಿ ಮೂಡಿಸಿತು.
ಮಿಚೆಲ್ ಮಾರ್ಷ್ ಬ್ಯಾಟ್‌ಗೆ ತಾಗದೆ ಸ್ಪಷ್ಟವಾಗಿ ಪ್ಯಾಡ್‌ಗೆ ಚೆಂಡು ತಗುಲಿದ್ದರೂ ಮೈದಾನದಲ್ಲಿದ್ದ ಅಂಪೈರ್ ನಾಟೌಟ್ ಎಂದು ಘೋಷಿಸಿದರು. ಹೀಗಾಗಿ ಅಶ್ವಿನ್, ನಾಯಕ ರೋಹಿತ್ ಶರ್ಮಾ ಮನವೊಲಿಸಿ ಡಿಆರ್‌ಎಸ್ ತೆಗೆದುಕೊಂಡರು. ಆದರೆ ಇದು ಯಶಸ್ವಿಯಾಗಲಿಲ್ಲ. ಏಕೆಂದರೆ ಥರ್ಡ್ ಅಂಪೈರ್ ಸರಿಯಾದ ಪರಿಶೀಲನೆ ನಡೆಸದೆಯೇ ಮಾರ್ಷ್ ಪರವಾಗಿ ತೀರ್ಪು ಪ್ರಕಟಿಸಿದರು. ಅಂಪೈರ್ ನಿರ್ಧಾರದಿಂದ ಭಾರತದ ಆಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಾಲತಾಣಗಳಲ್ಲಿ ಫ್ಯಾನ್ಸ್ ಕೂಡ ಕಿಡಿಕಾರಿದ್ದಾರೆ.
ಚೆಂಡು ಪ್ಯಾಡ್‌ಗೆ ತಗುಲಿದ್ದರೂ ನಾಟೌಟ್ ಕೊಟ್ಟ ಅಂಪೈರ್
ಚೆಂಡು ಮೊದಲು ಮಾರ್ಷ್ ಅವರ ಪ್ಯಾಡ್‌ಗೆ ಬಡಿದಿದ್ದು, ಬಳಿಕ ಮಧ್ಯ ವಿಕೆಟ್ಗೆ ಅಪ್ಪಳಿಸಿದೆ. ಇದೆಲ್ಲದರ ಬಗ್ಗೆ ಚರ್ಚಿಸಿಯೇ ಡಿಆರ್‌ಎಸ್ ಮೊರೆ ಹೋದರು. 3ನೇ ಅಂಪೈರ್ ರಿಚರ್ಡ್ ಕೆಟಲ್‌ಬರೋ ಅಲ್ಟ್ರಾ ಎಡ್ಜ್ ಮತ್ತು ರಿಪ್ಲೇಗಳನ್ನು ಪರಿಶೀಲಿಸಿದರು. ಒಂದೇ ಸಮಯದಲ್ಲಿ ಬ್ಯಾಟ್ ಅಥವಾ ಪ್ಯಾಡ್‌ಗೆ ಚೆಂಡು ತಗುಲಿದಂತೆ ಕಂಡು ಬಂತು. ಆದರೆ ಮೊದಲು ಪ್ಯಾಡ್‌ಗೆ ತಗುಲುತ್ತಿರುವುದು ಸ್ಪಷ್ಟವಾಗಿ ಕಂಡು ಬಂದರೂ ಮೂರನೇ ಅಂಪೈರ್, ಆನ್ಫೀಲ್ಡ್ ಅಂಪೈರ್ ನಿರ್ಧಾರವನ್ನೇ ಎತ್ತಿ ಹಿಡಿದರು. ಹೀಗಾಗಿ ಭಾರತವು ಡಿಆರ್‌ಎಸ್ ಕಳೆದುಕೊಳ್ಳಬೇಕಾಯಿತು.
ಮೂರನೇ ಅಂಪೈರ್ ತುಣುಕನ್ನು ಪರಿಶೀಲಿಸಲು ಸಮಯ ತೆಗೆದುಕೊಂಡರು. ಚೆಂಡು ಮೊದಲು ಮಾರ್ಷ್ ಅವರ ಪ್ಯಾಡ್‌ಗೆ ತಗುಲಿದಂತೆ ತೋರಿದರೂ, ಚೆಂಡು ಬ್ಯಾಟ್‌ಗೆ ಸಂಪರ್ಕ ಸಾಧಿಸಿದೆಯೇ ಎಂಬ ಬಗ್ಗೆ ಅನುಮಾನ ಉಂಟಾಗಿತ್ತು. ಅಲ್ಟ್ರಾ ಎಡ್ಜ್ ಪರಿಶೀಲನೆ ನಡೆಸಿದ ನಂತರ ಟಿವಿ ಅಂಪೈರ್, ಆನ್-ಫೀಲ್ಡ್ ಅಂಪೈರ್ ನೀಡಿದ "ನಾಟ್ ಔಟ್" ನಿರ್ಧಾರವನ್ನೇ ಪ್ರಕಟಿಸಿದರು. ಆದರೆ ಕೆಲವು ಸೆಕೆಂಡುಗಳ ನಂತರ, ಬಾಲ್ ಟ್ರ್ಯಾಕಿಂಗ್ ಚೆಂಡು ಸ್ಟಂಪ್‌ಗೆ ಬಡಿದಿದೆ ಎಂದು ತೋರಿಸಿದೆ.
ಇದೇ ರೀತಿ ರಾಹುಲ್ ಔಟಾಗಿದ್ರು ಎಂದ ಕೊಹ್ಲಿ
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾಗೆ ಥರ್ಡ್ ಅಂಪೈರ್ ಇಂತಹ ವಿಚಿತ್ರ ನಿರ್ಧಾರಗಳನ್ನು ನೀಡಿರುವುದು ಇದೇ ಮೊದಲಲ್ಲ. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಇದೇ ರೀತಿಯ ನಿರ್ಧಾರ ನೀಡಿದ್ದರು. ಪರ್ತ್ ಟೆಸ್ಟ್‌ನಲ್ಲಿ ಮಿಚೆಲ್ ಮಾರ್ಷ್‌ನಂತೆ ಆಸ್ಟ್ರೇಲಿಯಾ ಕೆಎಲ್ ರಾಹುಲ್‌ಗೆ ಮನವಿ ಮಾಡಿತ್ತು. ಆಗಲೂ ಸಾಕಷ್ಟು ಸಾಕ್ಷ್ಯಗಳಿರಲಿಲ್ಲ. ಆಗ ಥರ್ಡ್ ಅಂಪೈರ್ ಆನ್ ಫೀಲ್ಡ್ ಅಂಪೈರ್ ನಿರ್ಧಾರ ತಳ್ಳಿಹಾಕಿ ಔಟ್ ನೀಡಿದ್ದರು. ಇದನ್ನೇ ನೆನಪಿಸಿದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಕೂಡ ಇಂತಹದ್ದೇ ಇದಕ್ಕೆ ಔಟಾಗಿದ್ದರು ಎಂದು ಅಂಪೈರ್ ಜೊತೆ ವಾದ ನಡೆಸಿದರು.
ಪ್ಯಾಡ್‌ಗೆ ತಗುಲಿರುವುದು ಸ್ಪಷ್ಟವಾಗಿ ಕಂಡು ಬಂದಿದ್ದರೂ ನಾಟೌಟ್ ನೀಡಿರುವುದು ವಿವಾದ ಸೃಷ್ಟಿಸಿದೆ. ಅಂಪೈರ್ಗಳು ಆಸೀಸ್ ಆಟಗಾರರ ಪರವಾಗಿ ತೀರ್ಪುಗಳನ್ನು ನೀಡುತ್ತಿದ್ದಾರೆ ಎಂದು ಕ್ರಿಕೆಟ್ ಫ್ಯಾನ್ಸ್ ಕಿಡಿಕಾರಿದ್ದಾರೆ. ನಾಟೌಟ್ ಆಗಿ ಉಳಿದ ಮಾರ್ಷ್ ಮತ್ತೆ ಅಂಪೈರ್‌ನ ತಪ್ಪು ನಿರ್ಧಾರಕ್ಕೆ ಮಿಚೆಲ್ ಮಾರ್ಷ್ ಬಲಿಯಾದರು. ಸ್ಕೋರ್ 9 ರನ್ ಆಗಿರುವಾಗ ಅಶ್ವಿನ್ ಎಸೆತವನ್ನು ಡಿಫೆಂಡ್ ಮಾಡಿಕೊಳ್ಳಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ ತಪ್ಪಿಸಿ ರಿಷಭ್ ಪಂತ್ ಕೈ ಸೇರಿತು. ಆದರೆ, ಚೆಂಡು ಬ್ಯಾಟ್‌ಗೆ ತಾಗದೇ ಇದ್ದರೂ ಅಂಪೈರ್ ಔಟ್ ನೀಡಿದರು. ಮಾರ್ಷ್ ರಿವ್ಯೂ ತೆಗೆದುಕೊಳ್ಳದೆ ಪೆವಿಲಿಯನ್ ತೊರೆದರು.