ಗೆಲುವಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಸಿಎಸ್‌ಕೆ; ಗುಜರಾತ್ ಟೈಟನ್ಸ್‌ಗೆ ಸೋಲು, ಆರ್‌ಸಿಬಿ ಟಾಪ್ 2 ಆಸೆ ಜೀವಂತ
ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ 5 ವಿಕೆಟ್ ಕಳೆದುಕೊಂಡು 230 ರನ್ ಕಲೆ ಹಾಕಿತು. ಚೇಸಿಂಗ್ ನಡೆಸಿದ ಗುಜರಾತ್ ಟೈಟನ್ಸ್, 18.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನೊಂದಿಗೆ ಐಪಿಎಲ್ 2025ರ ಅಭಿಯಾನ ಮುಗಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 18ನೇ ಆವೃತ್ತಿಯಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಅತ್ತ, ಈ ಬಾರಿಯ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸತತ ಎರಡು ಸೋಲು ಕಂಡಿರುವ ಗುಜರಾತ್ ಟೈಟನ್ಸ್ ತಂಡವು, ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಇದೆ. ಆದರೆ, ಲೀಗ್ ಹಂತದ ಮುಗಿಯುವ ವೇಳೆಗೆ ಅಗ್ರ ಎರಡು ಸ್ಥಾನಗಳಲ್ಲಿ ಉಳಿಯುವ ಸಾಧ್ಯತೆ ಕಡಿಮೆಯಾಗಿದೆ. ಗುಜರಾತ್ ತಂಡದ ಸೋಲಿನೊಂದಿಗೆ ಆರ್‌ಸಿಬಿ ತಂಡ ಹಾಗೂ ಅಭಿಮಾನಿಗಳಿಗೆ ಖುಷಿಯಾಗಿದೆ. ಆರ್‌ಸಿಬಿ ಅಗ್ರ ಎರಡು ಸ್ಥಾನಗಳಲ್ಲಿ ಲೀಗ್ ಹಂತವನ್ನು ಮುಗಿಸುವ ಅವಕಾಶ ಹೆಚ್ಚಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ, ಪ್ರಸಕ್ತ ಆವೃತ್ತಿಯಲ್ಲಿ ತನ್ನ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಸ್ಫೋಟಕ ಪ್ರದರ್ಶನದೊಂದಿಗೆ 5 ವಿಕೆಟ್ ಕಳೆದುಕೊಂಡು 230 ರನ್ ಕಲೆ ಹಾಕಿತು. ಚೇಸಿಂಗ್ ನಡೆಸಿದ ಟೈಟನ್ಸ್, ಬ್ಯಾಟಿಂಗ್‌ನಲ್ಲಿ ಭಾರಿ ಕುಸಿತ ಕಂಡು 18.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 83 ರನ್‌ಗಳಿಂದ ಗೆದ್ದು ಬೀಗಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಎಂದಿನಂತೆ ಅಬ್ಬರಿಸಿದ ಆಯುಷ್ ಮ್ಹಾತ್ರೆ 200ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 17 ಎಸೆತಗಳಲ್ಲಿ 34 ರನ್ ಗಳಿಸಿದರು. ಈ ವೇಳೆ ಕಾನ್ವೆ ಹಾಗೂ ಊರ್ವಿಲ್ ಪಟೇಲ್ ಅರ್ಧಶತಕದ ಜೊತೆಯಾಟವಾಡಿದರು. 37 ರನ್ ಗಳಿಸಿ ಊರ್ವಿಲ್ ಪಟೇಲ್ ಔಟಾದರೆ, ಅವರ ಬೆನ್ನಲ್ಲೇ ಶಿವಂ ದುಬೆ ಕೂಡಾ 17 ರನ್ ಗಳಿಸಿ ನಿರ್ಗಮಿಸಿದರು. ಜವಾಬ್ದಾರಿಯುತ ಆಟವಾಡಿದ ಕಾನ್ವೆ 52 ರನ್ ಸಿಡಿಸಿ ಔಟಾದರು.
ಕೊನೆಯಲ್ಲಿ ಡೆವಾಲ್ಡ್ ಬ್ರೆವಿಸ್ ಅಬ್ಬರದ ಬ್ಯಾಟಿಂಗ್ ನಡೆಸಿದರು. ಜಡೇಜಾ ಜೊತೆಗೂಡಿ ತಾವೊಬ್ಬರೇ 23 ಎಸೆತಗಳಲ್ಲಿ 5 ಸ್ಫೋಟಕ ಸಿಕ್ಸರ್ ಸಹಿತ 57 ರನ್ ಬಾರಿಸಿದರು. ಹೀಗಾಗಿ ತಂಡದ ಮೊತ್ತವು 230ಕ್ಕೇರಿತು.
ಚೇಸಿಂಗ್‌ನಲ್ಲಿ ವಿಫಲವಾದ ಟೈಟನ್ಸ್
ಬೃಹತ್ ಮೊತ್ತದ ಗುರಿಯೊಂದಿಗೆ ಚೇಸಿಂಗ್ ಆರಂಭಿಸಿದ ಗುಜರಾತ್, ಈ ಬಾರಿ ಅಂದುಕೊಂಡಂತೆ ಆಡಲು ಸಾಧ್ಯವಾಗಲಿಲ್ಲ. ತಂಡದ ಸ್ಟಾರ್ ಆರಂಭಿಕರಾದ ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಬ್ಯಾಟ್‌ನಿಂದ ಈ ಬಾರಿ ಜವಾಬ್ದಾರಿಯುತ ಆಟ ಬರಲಿಲ್ಲ. ಬೇಗನೆ ದೊಡ್ಡ ಹೊಡೆತಕ್ಕೆ ಮುಂದಾದ ಶುಭ್ಮನ್ ಗಿಲ್ 13 ರನ್ ಗಳಿಸಿ ಔಟಾದರು. ಅವರ ಬೆನ್ನಲ್ಲೇ ಬಟ್ಲರ್ 5 ಹಾಗೂ ರುದರ್‌ಫೋರ್ಡ್ 0ಗೆ ಔಟಾದರು. ಶಾರುಖ್ ಖಾನ್ ಕೂಡಾ 19 ರನ್‌ಗೆ ಆಟ ಮುಗಿಸಿದರು. ಟೂರ್ನಿಯಲ್ಲಿ ಹೆಚ್ಚು ರನ್‌ಗಳೊಂದಿಗೆ ಆರೇಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸುದರ್ಶನ್ 28 ಎಸೆತಗಳಲ್ಲಿ 41 ರನ್ ಗಳಿಸಿದರು.
ಕೊನೆಯಲ್ಲಿ ರಾಹುಲ್ ತೆವಾಟಿಯಾ 14, ರಶೀದ್ ಖಾನ್ 12 ಹಾಗೂ ಅರ್ಷದ್ ಖಾನ್ 20 ರನ್ ಗಳಸಿದರು. ಸಿಎಸ್‌ಕೆ ಪರ 3 ವಿಕೆಟ್ ಪಡೆದ ನೂರ್ ಅಹ್ಮದ್ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡರು.
ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಅಂತಿಮವಾಗಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಯಾವುವು ಎಂಬ ಕುತೂಹಲ ಇನ್ನಷ್ಟು ಮುಂದುವರೆದಿದೆ. ಎಲ್ಲಾ ನಾಲ್ಕು ತಂಡಗಳಿಗೆ ಮೊದಲ ಎರಡು ಸ್ಥಾನ ಪಡೆಯುವ ಅವಕಾಶಗಳಿವೆ. ಆದರೆ, ತನ್ನ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಗೆದ್ದರೆ ಮಾತ್ರ ಇದು ಸಾಧ್ಯ.