ಕೊನೆಗೂ ಗೆದ್ದು ಬೀಗಿದ ಸಿಎಸ್ಕೆ, ಲಕ್ನೋಗೆ 3ನೇ ಸೋಲು; ಗುರು ಎದುರು ತೊಡೆ ತಟ್ಟಿ ಮಕಾಡೆ ಮಲಗಿದ ಶಿಷ್ಯ
2025ರ ಐಪಿಎಲ್ 30ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈಗೆ ಸಿಕ್ಕ ಮೊದಲ ಗೆಲುವು ಇದಾಗಿದೆ.
ಸತತ 5 ಸೋಲುಗಳಿಂದ ಕಂಗೆಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಜಯದ ಹಳಿಗೆ ಮರಳಿದೆ. ಶಿವಂ ದುವೆ (43*), ಎಂಎಸ್ ಧೋನಿ (26*) ಬ್ಯಾಟಿಂಗ್ ಮತ್ತು ರವೀಂದ್ರ ಜಡೇಜಾ ಬೌಲಿಂಗ್ (24/2) ಬಲದಿಂದ ಸಿಎಸ್ಕೆ 5 ವಿಕೆಟ್ ಗೆಲುವು ದಾಖಲಿಸಿತು. ಪ್ರಸ್ತುತ ಆಡಿದ 7ರಲ್ಲಿ 2 ಗೆಲುವು, 5 ಸೋಲು ಕಂಡಿರುವ ಸೂಪರ್ ಕಿಂಗ್ಸ್ ಪ್ಲೇಆಫ್ ಹಾದಿ ಸುಲಭವಾಗಬೇಕೆಂದರೆ ಉಳಿದ 7 ಪಂದ್ಯಗಳನ್ನೂ ಗೆಲ್ಲುವುದು ಅಗತ್ಯ. ಗೆದ್ದರೂ ಸಿಎಸ್ಕೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲೇ ಮುಂದುವರೆದಿದೆ. ಟೂರ್ನಿಯಲ್ಲಿ 3ನೇ ಸೋಲು ಕಂಡ ಲಕ್ನೋ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನದಲ್ಲಿದೆ.
ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಚೆನ್ನೈ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. 2025ರಲ್ಲಿ ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಪಂತ್ ಅವರ ಅಮೋಘ ಆಟದ ನೆರವಿನಿಂದ ಎಲ್ಎಸ್ಜಿ ಸಾಧಾರಣ ಮೊತ್ತ ಕಲೆ ಹಾಕಿತು. 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ, 19.3 ಓವರ್ಗಳಲ್ಲೇ 5 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ ಗೆದ್ದು ಬೀಗಿತು. ದುಬೆ ಮತ್ತು ಎಂಎಸ್ ಧೋನಿ ಅಜೇಯ 58 ರನ್ಗಳ ಜತೆಯಾಟ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇದು 2025ರಲ್ಲಿ ಧೋನಿ ನಾಯಕತ್ವದಲ್ಲಿ ಸಿಕ್ಕ ಮೊದಲ ಗೆಲುವು.
ಎಂಎಸ್ ಧೋನಿ ಮಿಂಚು
ಬೌಲಿಂಗ್ ಟ್ರ್ಯಾಕ್ನಲ್ಲಿ 168 ರನ್ಗಳ ಸವಾಲಿನ ಮೊತ್ತವನ್ನೇ ಬೆನ್ನಟ್ಟಿದ ಸಿಎಸ್ಕೆ, ಉತ್ತಮ ಆರಂಭ ಪಡೆಯಿತು. ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಆಡುವ ಅವಕಾಶ ಪಡೆದ ಶೇಕ್ ರಶೀದ್ ಬಿರುಸಿನ ಆರಂಭ ಒದಗಿಸಿದರು. ಆದರೆ, ಅವರ ಆವೇಶಕ್ಕೆ (19 ಎಸೆತ, 6 ಬೌಂಡರಿ, 27 ರನ್) ಆವೇಶ್ ಖಾನ್ ಕಡಿವಾಣ ಹಾಕಿದರು. ಬಳಿಕ ಮತ್ತೊಬ್ಬ ಆರಂಭಿಕ ರಚಿನ್ ರವೀಂದ್ರ 37 ರನ್ ಸಿಡಿಸಿದ್ದಾಗ ಏಡನ್ ಮಾರ್ಕ್ರಮ್ ಬೌಲಿಂಗ್ನಲ್ಲಿ ಎಲ್ಬಿ ಆದರು. ಹೀಗಿದ್ದರೂ ಸ್ಕೋರ್ ಉತ್ತಮವಾಗಿತ್ತು. ಆದರೆ ಮಧ್ಯಮ ಕ್ರಮಾಂಕ ಮತ್ತೆ ಕೈಕೊಟ್ಟಿತು. ರಚಿನ್ ಬೆನ್ನಲ್ಲೇ ರಾಹುಲ್ ತ್ರಿಪಾಠಿ (9), ರವೀಂದ್ರ ಜಡೇಜಾ (7), ವಿಜಯ್ ಶಂಕರ್ (9) ಹಿಂದಿದೆಯೇ ಪೆವಿಲಿಯನ್ ಸೇರಿದರು.
ಕೊನೆಯ 5 ಓವರ್ಗಳಿಗೆ 56 ರನ್ ಬೇಕಿದ್ದ ಅವಧಿಯಲ್ಲಿ ಕಣಕ್ಕಿಳಿದ ಧೋನಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅದಾಗಲೇ ಕ್ರೀಸ್ನಲ್ಲಿದ್ದ ಶಿವಂ ದುಬೆ ದೊಡ್ಡ ಹೊಡೆತಗಳಿಗೆ ಕೈ ಹಾಕುವ ಮೂಲಕ ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಶಿವ ದುಬೆ 37 ಎಸೆತಗಳಿಗೆ 3 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 43 ರನ್ ಸಿಡಿಸಿದರೆ, ಮತ್ತೊಂದೆಡೆ ಧೋನಿ 11 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 26 ರನ್ ಗಳಿಸಿ ನಾಟೌಟ್ ಆದರು. ವಿಕೆಟ್ ಕೀಪಿಂಗ್ನಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದ ಎಂಎಸ್ ಧೋನಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರೆಯಿತು. ರವಿ ಬಿಷ್ಣೋಯ್ (2), ದಿಗ್ವೇಶ್ ಸಿಂಗ್ ರಾಠಿ, ಏಡನ್ ಮಾರ್ಕ್ರಮ್ ಉತ್ತಮ ಬೌಲಿಂಗ್ ನಡೆಸಿದ ಹೊರತಾಗಿಯೂ ಲಕ್ನೋ ಪಂದ್ಯ ಕೈಚೆಲ್ಲಿತು.
ರಿಷಭ್ ಪಂತ್ ಚೊಚ್ಚಲ ಅರ್ಧಶತಕ
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ನಡೆಸಲಿಲ್ಲ. ಇಲ್ಲಿನ ಪಿಚ್ ಬ್ಯಾಟರ್ಗಳಿಗೆ ನೆರವಾಗಲಿಲ್ಲ. ಕಳೆದ ಪಂದ್ಯಗಳಲ್ಲಿ ಸತತ ಅರ್ಧಶತಕ ಬಾರಿಸಿದ್ದ ಏಡನ್ ಮಾರ್ಕ್ರಮ್ (6) ಮೊದಲ ಓವರ್ನ ಕೊನೆಯ ಎಸೆತದಲ್ಲೇ ರಾಹುಲ್ ತ್ರಿಪಾಠಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಬಳಿಕೆ ಪವರ್ ಹಿಟ್ಟಿಂಗ್ ಮೂಲಕ ಪಂದ್ಯದ ಚಿತ್ರಣವನ್ನೇ ಬದಲಿಸುತ್ತಿರುವ ನಿಕೋಲಸ್ ಪೂರನ್ (8) ಕೂಡ ನಿರಾಸೆ ಮೂಡಿಸಿದರು. ಆರೆಂಜ್ ಕ್ಯಾಪ್ ಲಿಸ್ಟ್ನಲ್ಲಿರುವ ಮಿಚೆಲ್ ಮಾರ್ಷ್ ಅವರು ನಾಯಕ ಪಂತ್ ಜೊತೆಗೆ ಸ್ಲೋ ಇನ್ನಿಂಗ್ಸ್ ಕಟ್ಟಿದರು. ಪರಿಣಾಮ 25 ಎಸೆತಗಳಿಗೆ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಪಂತ್ ನಾಯಕನಾಟ ಆಡಿದರು.
ಸತತ ವಿಕೆಟ್ ಪತನಗೊಳ್ಳುತ್ತಿದ್ದಂತೆಯೇ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟರು. ಕೊನೆಯ ತನಕ ಕ್ರೀಸ್ ಕಾಯ್ದುಕೊಂಡರು. ಪ್ರಸಕ್ತ ಆವೃತ್ತಿಯಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ 27 ಕೋಟಿ ಒಡೆಯ 49 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಿತ 62 ರನ್ ಗಳಿಸಿ ಕ್ಯಾಚ್ ಕೊಟ್ಟರು. ಮತೀಶಾ ಪತಿರಾಣ ಬೌಲಿಂಗ್ನಲ್ಲಿ ಔಟಾದರು. ಆಯುಷ್ ಬದೋನಿ 22 ರನ್, ಅಬ್ದುಲ್ ಸಮದ್ 20 ರನ್ ಕಾಣಿಕೆ ನೀಡಿದರು. ಶಾರ್ದೂಲ್ ಠಾಕೂರ್ ಅಜೇಯ 6 ರನ್ ಸಿಡಿಸಿದರು. ಸಿಎಸ್ಕೆ ಪರ ಪತಿರಾಣ ಮತ್ತು ಜಡೇಜಾ ತಲಾ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್ ತಲಾ 1 ವಿಕೆಟ್ ಕಿತ್ತರು.
