‘ಅಹ್ಮದ್​’ಗಳ ಅಬ್ಬರ, ಋತುರಾಜ್, ರಚಿನ್ ಸಮಯೋಚಿತ ಅರ್ಧಶತಕ; ಮುಂಬೈ ವಿರುದ್ಧ ಚೆನ್ನೈಗೆ ಸೂಪರ್ ಗೆಲುವು
ಕನ್ನಡ ಸುದ್ದಿ  /  ಕ್ರಿಕೆಟ್  /  ‘ಅಹ್ಮದ್​’ಗಳ ಅಬ್ಬರ, ಋತುರಾಜ್, ರಚಿನ್ ಸಮಯೋಚಿತ ಅರ್ಧಶತಕ; ಮುಂಬೈ ವಿರುದ್ಧ ಚೆನ್ನೈಗೆ ಸೂಪರ್ ಗೆಲುವು

‘ಅಹ್ಮದ್​’ಗಳ ಅಬ್ಬರ, ಋತುರಾಜ್, ರಚಿನ್ ಸಮಯೋಚಿತ ಅರ್ಧಶತಕ; ಮುಂಬೈ ವಿರುದ್ಧ ಚೆನ್ನೈಗೆ ಸೂಪರ್ ಗೆಲುವು

ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ನ ಮೂರನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್​ ಕಿಂಗ್ಸ್​ ಭರ್ಜರಿ ಗೆಲುವು ಸಾಧಿಸಿ ಅಭಿಯಾನ ಆರಂಭಿಸಿದೆ.

‘ಅಹ್ಮದ್​’ಗಳ ಅಬ್ಬರ, ಋತುರಾಜ್, ರಚಿನ್ ಸಮಯೋಚಿತ ಅರ್ಧಶತಕ; ಮುಂಬೈ ವಿರುದ್ಧ ಚೆನ್ನೈ ಗೆಲುವಿನ ಆರಂಭ
‘ಅಹ್ಮದ್​’ಗಳ ಅಬ್ಬರ, ಋತುರಾಜ್, ರಚಿನ್ ಸಮಯೋಚಿತ ಅರ್ಧಶತಕ; ಮುಂಬೈ ವಿರುದ್ಧ ಚೆನ್ನೈ ಗೆಲುವಿನ ಆರಂಭ (PTI)

ನೂರ್ ಅಹ್ಮದ್ (18/4), ಖಲೀಲ್ ಅಹ್ಮದ್ (29/3)​ ಕಟ್ಟುನಿಟ್ಟಾದ ಬೌಲಿಂಗ್ ದಾಳಿಯ ಜೊತೆಗೆ ಋತುರಾಜ್ ಗಾಯಕ್ವಾಡ್ (53), ರಚಿನ್ ರವೀಂದ್ರ (65*) ಅವರ ಸಮಯೋಚಿತ ಅರ್ಧಶತಕಗಳ ಬಲದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್​ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಕಳೆದ ವರ್ಷ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಮುಂಬೈ ಪರ 3 ವಿಕೆಟ್ ಉರುಳಿಸಿ ಪಂದ್ಯದ ದಿಕ್ಕು ಬದಲಿಸಲು ಯತ್ನಿಸಿದ ಯುವ ಸ್ಪಿನ್ನರ್​ ವಿಘ್ನೇಶ್‌ ಪುತ್ತೂರ್ ಹೋರಾಟ ವ್ಯರ್ಥವಾಯಿತು. ಚೆನ್ನೈನ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಿತು. ಸೂರ್ಯಕುಮಾರ್ ನಿಷೇಧಕ್ಕೆ ಒಳಗಾಗಿದ್ದ ಕಾರಣ ಸೂರ್ಯಕುಮಾರ್ ಯಾದವ್ ನಾಯಕತ್ವ ವಹಿಸಿದ್ದರು. ಹಾರ್ದಿಕ್ ಪಾಂಡ್ಯ ಮುಂದಿನ ಪಂದ್ಯದಲ್ಲಿ ನಾಯಕನಾಗಿ ಮರಳಲಿದ್ದಾರೆ.

ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ ನಡೆದ ಮುಂಬೈ ಇಂಡಿಯನ್ಸ್ ಪರ ಯಾರೊಬ್ಬರು ಮಿಂಚಿನ ಬ್ಯಾಟಿಂಗ್ ನಡೆಸಲಿಲ್ಲ. ಚೆನ್ನೈ ಸ್ಪಿನ್ ದಾಳಿಗೆ ಅಕ್ಷರಶಃ ನಲುಗಿದ ಸೂರ್ಯ ಪಡೆ, ನಿಗದಿತ 20 ಓವರ್​​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ನೂರ್ ಅಹ್ಮದ್ 18 ರನ್​ಗೆ 4 ವಿಕೆಟ್, ಖಲೀಲ್ ಅಹ್ಮದ್ 29 ರನ್​ಗೆ 3 ವಿಕೆಟ್ ಉರುಳಿಸಿ ಮುಂಬೈ ಪಲ್ಟಿ ಹೊಡೆಯುವಂತೆ ಮಾಡಿದರು. ಸ್ಪಿನ್ ಪಿಚ್​​ನಲ್ಲಿ 156 ರನ್​ ಗುರಿ ಹಿಂಬಾಲಿಸಿದ ಸಿಎಸ್​ಕೆ 19.1 ಓವರ್​ಗಳಲ್ಲಿ ಗೆದ್ದು ಸಂಭ್ರಮಿಸಿತು. ಋತುರಾಜ್ ಗಾಯಕ್ವಾಡ್ ಸ್ಪೋಟಕ ಅರ್ಧಶತಕ (53) ಮತ್ತು ರಚಿನ್ ರವೀಂದ್ರ (65) ಅವರ ಸಮಯೋಚಿತ ಅರ್ಧಶತಕದ ಸಹಾಯದಿಂದ ಮುಂಬೈ ಗೆದ್ದು ಬೀಗಿತು.

ಅಹ್ಮದ್​​ಗಳ ಅಬ್ಬರ, ಮುಂಬೈ ತತ್ತರ

ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಆರಂಭಿಕ ಓವರ್​​ನಲ್ಲೇ ರೋಹಿತ್​ ಶರ್ಮಾ (0) ಅವರನ್ನು ಕಳೆದುಕೊಂಡಿತು. ಒಟ್ಟಾರೆ ಐಪಿಎಲ್​ನಲ್ಲಿ 18ನೇ ಡಕೌಟ್ ಆಗುವ ಮೂಲಕ ಅನಗತ್ಯ ದಾಖಲೆ ಬರೆದರು. ಐಪಿಎಲ್​ಗೆ ಪದಾರ್ಪಣೆ ಮಾಡಿದ ರಿಯಾನ್ ರಿಕಲ್ಟನ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಇಬ್ಬರನ್ನೂ ಔಟ್ ಮಾಡಿದ್ದು ಖಲೀಲ್ ಅಹ್ಮದ್. ವಿಲ್ ಜಾಕ್ಸ್​ಗೆ ಅಶ್ವಿನ್ ಗೇಟ್ ಪಾಸ್ ಕೊಟ್ಟ ಬಳಿಕ ನೂರ್ ಅಹ್ಮದ್ ಮುಂಬೈಗೆ ಇನ್ನಿಲ್ಲದಂತೆ ಕಾಡಿದರು. ಬಳಿಕ ಸೂರ್ಯಕುಮಾರ್ ಯಾದವ್ (29), ತಿಲಕ್ ವರ್ಮಾ (31) ಅರ್ಧಶತಕದ ಜೊತೆಯಾಟವಾಡಿದರು. ತಂಡಕ್ಕೆ ಆಸರೆಯಾಗುತ್ತಿದ್ದ ಈ ಜೋಡಿ ಜೊತೆಯಾಟ ಮುರಿದ ನೂರ್​, ಪಂದ್ಯವನ್ನು ಸಿಎಸ್​ಕೆ ಹಿಡಿತಕ್ಕೆ ತೆಗೆದುಕೊಂಡರು. ಬಳಿಕ ನಮನ್ ಧೀರ್ (17), ರಾಬಿನ್ ಮಿಂಜ್​ರನ್ನೂ (3) ಕಡಿಮೆ ಮೊತ್ತಕ್ಕೆ ಹೊರ ಹಾಕಿದರು. ಇದರೊಂದಿಗೆ ನೂರ್ 4 ವಿಕೆಟ್​​ಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು. ಕೊನೆಯಲ್ಲಿ ದೀಪಕ್ ಚಹರ್​​ ಅಜೇಯ 28 ರನ್ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಟ್ರೆಂಟ್​ ಬೋಲ್ಟ್​ರನ್ನು 3ನೇ ವಿಕೆಟ್ ಆಗಿ ಪಡೆದರೆ, ಮಿಚೆಲ್ ಸ್ಯಾಂಟ್ನರ್ ಅವರನ್ನು ಔಟ್ ಮಾಡುವ ಮೂಲಕ ನಾಥನ್ ಎಲ್ಲಿಸ್ ಮೊದಲ ವಿಕೆಟ್ ಪಡೆದರು.

ಋತುರಾಜ್ ಅಬ್ಬರ, ರಚಿನ್ ಸಮಯೋಚಿತ ಅರ್ಧಶತಕ

156 ರನ್​ಗಳ ಬೆನ್ನಟ್ಟಿದ ಸಿಎಸ್​ಕೆ, ಉತ್ತಮ ಆರಂಭ ಪಡೆಯಲಿಲ್ಲ. ಮೊದಲಿಗೆ ರಾಹುಲ್ ತ್ರಿಪಾಠಿ 2 ರನ್​ ಗಳಿಸಿ ನಿರಾಸೆ ಮೂಡಿಸಿದರು. ಬಳಿಕ ಒಂದಾದ ರಚಿನ್ ರವೀಂದ್ರ ಮತ್ತು ಋತುರಾಜ್ ಗಾಯಕ್ವಾಡ್ ಅವರು ಆಕರ್ಷಕ ಜೊತೆಯಾಟವಾಡಿದರು. ಅದರಲ್ಲೂ ಋತುರಾಜ್ ಬಿರುಗಾಳಿ ಬ್ಯಾಟಿಂಗ್ ನಡೆಸಿ ವೇಗದ ಅರ್ಧಶತಕ ಬಾರಿಸಿದರು. 26 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ 53 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಾಗ ಔಟಾದರು. ಆದರೆ ಈ ಹಂತದಲ್ಲಿ ವಿಘ್ನೇಶ್ ಪಿತ್ತೂರ್ ಪ್ರಮುಖ ಮೂರು ವಿಕೆಟ್ ಕಿತ್ತು ಸಿಎಸ್​ಕೆ ಡಗೌಟ್​​ನಲ್ಲಿ ಆತಂಕ ಸೃಷ್ಟಿಸಿದ್ದರು. ಶಿವಂ ದುಬೆ 9, ದೀಪಕ್ ಹೂಡಾ 3, ಸ್ಯಾಮ್ ಕರನ್ 4 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಕೊನೆಯ ತನಕ ಸಮಯೋಚಿತ ಆಟ ಪ್ರದರ್ಶಿಸಿದ ರಚಿನ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಮುಂಬೈ ಗೆಲುವನ್ನು ಕಸಿದರು. 45 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 65 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ರವೀಂದ್ರ ಜಡೇಜಾ 17 ರನ್​ಗಳ ಕಾಣಿಕೆ ನೀಡಿದರೆ, ಧೋನಿ ಸೊನ್ನೆಯೊಂದಿಗೆ ಅಜೇಯರಾಗಿ ಉಳಿದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner