ಎಂಎಸ್ ಧೋನಿ ಹುಕ್ಕಾ ಸೇದುವ ವಿಡಿಯೋ ವೈರಲ್; ನಿಮ್ಮಿಂದ ನಿರೀಕ್ಷಿಸಿರಲಿಲ್ಲ ಎಂದ ನೆಟ್ಟಿಗರು
ಕನ್ನಡ ಸುದ್ದಿ  /  ಕ್ರಿಕೆಟ್  /  ಎಂಎಸ್ ಧೋನಿ ಹುಕ್ಕಾ ಸೇದುವ ವಿಡಿಯೋ ವೈರಲ್; ನಿಮ್ಮಿಂದ ನಿರೀಕ್ಷಿಸಿರಲಿಲ್ಲ ಎಂದ ನೆಟ್ಟಿಗರು

ಎಂಎಸ್ ಧೋನಿ ಹುಕ್ಕಾ ಸೇದುವ ವಿಡಿಯೋ ವೈರಲ್; ನಿಮ್ಮಿಂದ ನಿರೀಕ್ಷಿಸಿರಲಿಲ್ಲ ಎಂದ ನೆಟ್ಟಿಗರು

MS Dhoni smoking hookah: ಕ್ರಿಕೆಟ್ ಲೋಕದಲ್ಲಿ ಅನೇಕರಿಗೆ ಮಾದರಿಯಾಗಿರುವ ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ, ಅವರ ನಡತೆಯಿಂದಲೇ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಆದರೆ ಧೋನಿ ಹುಕ್ಕಾ ಸೇದುವ ವಿಡಿಯೋ ನೋಡಿದ ಅವರ ಅಭಿಮಾನಿಗಳು ದಂಗಾಗಿದ್ದಾರೆ.

ಎಂಎಸ್ ಧೋನಿ ಹುಕ್ಕಾ ಸೇದುವ ವಿಡಿಯೋ ವೈರಲ್.
ಎಂಎಸ್ ಧೋನಿ ಹುಕ್ಕಾ ಸೇದುವ ವಿಡಿಯೋ ವೈರಲ್.

ಟೀಮ್ ಇಂಡಿಯಾ ಮಾಜಿ ನಾಯಕ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ (MS Dhoni) ಅವರ ವಿಡಿಯೋವೊಂದು ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಈ ಹಿಂದೆ ಧೋನಿ ಹುಕ್ಕಾ ಸೇದಲು ಇಷ್ಟಪಡುತ್ತಾರೆ ಎಂದಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ಜಾರ್ಜ್​ ಬೈಲಿ ಮಾತು ಇದೀಗ ಸತ್ಯ ಎಂದು ಒಪ್ಪಿಕೊಳ್ಳುವಂತಾಗಿದೆ. ಹೌದು, ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಧೋನಿ ಹುಕ್ಕಾ ಸೇದುತ್ತಿದ್ದಾರೆ.

ಧೋನಿ ಭಾರತದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಇಬ್ಬರು. ಅವರು ಏನು ಮಾಡಿದರೂ ಅದು ಟ್ರೆಂಡ್ ಆಗುತ್ತದೆ. ಆದರೆ, ಇತ್ತೀಚೆಗೆ ಸಿಎಸ್‌ಕೆ ಕ್ಯಾಪ್ಟನ್ ಹುಕ್ಕಾ ಸೇದುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಧೋನಿ ವಿರುದ್ಧ ತಿರುಗಿಬಿದ್ದಿದ್ದಾರೆ. ಇದೇನಾ ಸಮಾಜಕ್ಕೆ ನೀಡುವ ಸಂದೇಶ ಎಂದು ಪ್ರಶ್ನಿಸಿದ್ದಾರೆ. ಆದರೆ ಕೆಲವು ಅಭಿಮಾನಿಗಳು ತನ್ನ ನೆಚ್ಚಿನ ಆಟಗಾರರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಕೆಲವರು ತಪ್ಪು ಎಂದಿದ್ದಾರೆ.

ಈ ಹಿಂದೆಯೇ ಹೇಳಿದ್ದ ಜಾರ್ಜ್ ಬೈಲಿ

ಈ ಹಿಂದೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಆಟಗಾರನಾಗಿ ಧೋನಿ ಜೊತೆ ಆಡಿದ್ದ ಆಸಿಸಿ ಮಾಜಿ ಕ್ಯಾಪ್ಟನ್ ಜಾರ್ಜ್ ಬೈಲಿ ಈ ಬಗ್ಗೆ ಬಹಿರಂಗಪಡಿಸಿದ್ದರು. ಧೋನಿಗೆ ಹುಕ್ಕಾ ಸೇದುವುದು ಎಂದರೆ ತುಂಬಾ ಇಷ್ಟ. ಆಗಾಗ್ಗೆ ತನ್ನ ಕೋಣೆಯಲ್ಲಿ ಈ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಅಲ್ಲದೆ, ಸಹ ಆಟಗಾರರಿಗೂ ವ್ಯವಸ್ಥೆ ಮಾಡುತ್ತಾರೆ. ಜೊತೆಗೆ ಕ್ರಿಕೆಟ್​ಗೆ ಸಂಬಂಧಿಸಿದ ಚರ್ಚೆಗಳನ್ನೂ ನಡೆಸುತ್ತಾರೆ. ಆ ಮೂಲಕ ಆನಂದದ ಕ್ಷಣಗಳನ್ನು ಕಳೆಯುತ್ತಾರೆ ಎಂದು ಬೈಲಿ ಹೇಳಿದ್ದರು.

"ಧೋನಿಗೆ ಹುಕ್ಕಾ ಸೇದುವಾಗ ಬಾಗಿಲು ತೆರೆದೇ ಇರುತ್ತಿತ್ತು. ಅವರು ಎಂದು ಮುಚ್ಚಿರುವುದಿಲ್ಲ. ಆಟಗಾರರು ಯಾರು ಬೇಕಾದರೂ ಹೋಗಬಹುದು. ಅದರಲ್ಲೂ ಕಿರಿಯರೇ ಆ ರೂಮ್​ನಲ್ಲಿ ತುಂಬಿರುತ್ತಿದ್ದರು. ಭಾರತ ಅಥವಾ ದೇಶೀ ಕ್ರಿಕೆಟ್​ ತಂಡಗಳ ಆಟಗಾರರು ಅವರೊಂದಿಗೆ ಸಲಹೆ ಪಡೆಯುತ್ತಿದ್ದರು. ಕ್ರಿಕೆಟ್​ಗೆ ಸಂಬಂಧಿಸಿ ಟಿಪ್ಸ್​​​ಗಳನ್ನು ಕೊಡುತ್ತಿದ್ದರು ಎಂದು ಕ್ರಿಕೆಟ್.ಕಾಮ್.ಔಗೆ ನೀಡಿದ ಸಂದರ್ಶನದಲ್ಲಿ ಬೈಲಿ ಹೇಳಿದ್ದರು. ಆದರೆ ಬೈಲಿ ಹೇಳಿದ್ದನ್ನು ಯಾರೂ ನಂಬಿರಲಿಲ್ಲ. ಅಲ್ಲದೆ, ಟೀಕೆಗೂ ಗುರಿಯಾಗಿದ್ದರು.

ಐಪಿಎಲ್​ನಲ್ಲಿ ಅಬ್ಬರಿಸಲು ಧೋನಿ ಸಿದ್ಧ

ಐಪಿಎಲ್ 2024ರಲ್ಲಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಬರಲಿರುವ ಧೋನಿ, ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಚಾಂಪಿಯನ್ ಮಾಡಿರುವ ಕೂಲ್ ಕ್ಯಾಪ್ಟನ್, ಟೂರ್ನಿ ನಂತರ ವಿದಾಯ ಹೇಳುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ಈ ಎಲ್ಲಾ ಊಹಾಪೋಹಗಳನ್ನು ತಳ್ಳಿ ಹಾಕಿದರು. ಮತ್ತೆ ಐಪಿಎಲ್ ಆಡುವುದಾಗಿ ಖಚಿತಪಡಿಸಿದರು. ಸದ್ಯ ಮೊಣಕಾಲಿನ ಶಸ್ತ್ರಚಿಕಿತ್ಸೆ ನಂತರ ಈಗ ಫಿಟ್​ನೆಸ್​​ ಕಡೆ ಮರಳುತ್ತಿದ್ದಾರೆ.

ಬಲಿಷ್ಠ ತಂಡವನ್ನು ಕಟ್ಟಿದ ಚೆನ್ನೈ

2023ರ ಡಿಸೆಂಬರ್ 19ರಂದು ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಘಟಾನುಘಟಿ ಆಟಗಾರರನ್ನೇ ಸಿಎಸ್​ಕೆ ಖರೀದಿಸಿದೆ. ನ್ಯೂಜಿಲೆಂಡ್ ತಂಡದ ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ ಮತ್ತು ಶಾರ್ದೂಲ್ ಠಾಕೂರ್ ಅವರಂತಹ ಆಟಗಾರರನ್ನು ಆಯ್ಕೆ ಖರೀದಿಸಿದೆ. ಅಲ್ಲದೆ, ಯಂಗ್ ಸೆನ್​ಸೇಷನ್ ಭಾರತದ ಬ್ಯಾಟರ್ ಸಮೀರ್ ರಿಜ್ವಿಯನ್ನು ಖರೀದಿಸಿ ಎಲ್ಲರನ್ನೂ ಅಚ್ಚರಿಗೊಳಿಸಿತು.

2024ರ ಐಪಿಎಲ್​ಗೆ ಸಿಎಸ್​ಕೆ ತಂಡ

ಎಂಎಸ್ ಧೋನಿ (ನಾಯಕ), ಮೊಯಿನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೆ, ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್‌ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಕೇಶ್ ಚೌಧರಿ, ಮತೀಶ ಪತಿರಾನ, ಅಜಿಂಕ್ಯ ರಹಾನೆ, ಶೇಖ್ ರಶೀದ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.

Whats_app_banner