ಕನ್ನಡ ಸುದ್ದಿ  /  Cricket  /  Chennai Super Kings Ipl 2024 Swot Strengths Weakness Analysis Preview Predicted Playing Xi Full Squad Impact Player Prs

CSK SWOT Analysis: ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೌರ್ಬಲ್ಯಕ್ಕಿಂತ ಸಾಮರ್ಥ್ಯವೇ ಜಾಸ್ತಿ; ಸಿಎಸ್​ಕೆ ಬಲಾಬಲ ವಿಶ್ಲೇಷಣೆ

Chennai Super Kings - IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ ಸಜ್ಜಾಗಿರುವ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಸಾಮರ್ಥ್ಯ, ದೌರ್ಬಲ್ಯ, ಸಂಭಾವ್ಯ ತಂಡ ಹೇಗಿದೆ ಎಂಬುದರ ನೋಟ ಇಲ್ಲಿದೆ.

ಚೆನ್ನೈ ಸೂಪರ್​ ಕಿಂಗ್ಸ್ ತಂಡ.
ಚೆನ್ನೈ ಸೂಪರ್​ ಕಿಂಗ್ಸ್ ತಂಡ.

ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಸ್ಥಿರ ಮತ್ತು ಯಶಸ್ವಿ ತಂಡ. 16 ಐಪಿಎಲ್ ಸೀಸನ್‌ಗಳ ಪೈಕಿ 14ರಲ್ಲಿ ಕಾಣಿಸಿಕೊಂಡ ಯೆಲ್ಲೋ ಆರ್ಮಿ, 17ನೇ ಆವೃತ್ತಿಯಲ್ಲಿ ನೂತನ ನಾಯಕನೊಂದಿಗೆ ಹೊಸ ಭರವಸೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಎಂಎಸ್ ಧೋನಿ ಅವರಿಂದ ನಾಯಕತ್ವ ಪಡೆದಿರುವ ಋತುರಾಜ್ ಗಾಯಕ್ವಾಡ್, ಅನೇಕ ಸವಾಲುಗಳ ಜತೆಗೆ ಒತ್ತಡವನ್ನೂ ಹೊತ್ತು ಮುಂದೆ ಸಾಗಬೇಕಿದೆ.

ಎಂಎಸ್ ಧೋನಿ ಕಟ್ಟಿ ಬೆಳೆಸಿದ ಖ್ಯಾತಿ, ಪರಂಪರೆ, ಸಾಮ್ರಾಜ್ಯ ಮತ್ತು ಅಭಿಮಾನಿಗಳ ನಂಬಿಕೆಗೆ ಕಿಂಚಿತ್ತೂ ಧಕ್ಕೆ ತರದಂತೆ ನೋಡಿಕೊಳ್ಳುವ ಜವಾಬ್ದಾರಿ ಗಾಯಕ್ವಾಡ್​ ಮೇಲಿದೆ. ಚೆನ್ನೈ ಆಡಿದ 14 ಆವೃತ್ತಿಗಳಲ್ಲಿ 10 ಸಲ ಫೈನಲ್ ಪ್ರವೇಶಿಸಿದ್ದು, 5 ಬಾರಿ ಟ್ರೋಫಿ ಗೆದ್ದಿದೆ. 6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸಿಎಸ್​ಕೆ ಬಳಗವು ನೂತನ ತಂಡ, ಹೊಸ ನಾಯಕ, ಭರವಸೆಗಳೊಂದಿಗೆ ಅಖಾಡಕ್ಕೆ ಪ್ರವೇಶಿಸಲು ಸಜ್ಜಾಗಿದೆ.

2023ರ ಸೀಸನ್​ನ ಫೈನಲ್​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಐದು ವಿಕೆಟ್‌ಗಳಿಂದ ಗೆದ್ದು ಸಿಎಸ್‌ಕೆ ಚಾಂಪಿಯನ್ ಆಗಿತ್ತು. ಐಪಿಎಲ್ ಮಿನಿ ಹರಾಜಿನಲ್ಲಿ ಗುಣಮಟ್ಟದ ಆಟಗಾರರಿಗೆ ಮಣೆ ಹಾಕುವ ಮೂಲಕ ತನ್ನ ಬಳಗ ಮತ್ತಷ್ಟು ಬಲಿಷ್ಠ ಮಾಡಿಕೊಂಡಿದೆ ಚೆನ್ನೈ. ಈಗಲೂ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅಲ್ಲದೆ, ಪ್ರಶಸ್ತಿ ಸಂಖ್ಯೆ ವಿಸ್ತರಿಸಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.

ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿದರೂ ಪರೋಕ್ಷವಾಗಿ ಧೋನಿ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯಕ್ವಾಡ್ ನೂತನ ಸಾರಥಿಯಾದರೂ ಮಾಹಿ ತಂಡದಲ್ಲಿರುವುದು ಸಿಎಸ್​ಕೆಗೆ ನೂರಾನೆ ಬಲ. ಆದರೆ ಈ ಹಿಂದೆ ಜಡೇಜಾಗೆ ಕ್ಯಾಪ್ಟನ್ಸಿ ಕೊಟ್ಟು ಕೈ ಸುಟ್ಟುಕೊಂಡಿದ್ದು ಸಹ ಚೆನ್ನೈಗೆ ಪಾಠವಾಗಬೇಕಿದೆ. ಅನಾನುಭವಿಗಳಿದ್ದರೂ ಅವರನ್ನು ಅನುಭವಿಗಳಾಗಿ ರೂಪಿಸುವ ಶಿಲ್ಪಿ ಧೋನಿ.

ಮಾರ್ಚ್​ 22ರಂದು ಹೊಸ ಕನಸು, ಭರವಸೆಗಳೊಂದಿಗೆ ಬರುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಕದನಕ್ಕೆ ಸಿದ್ಧಗೊಂಡಿರುವ ಚೆನ್ನೈ, ತನ್ನ ತವರು ಮೈದಾನದಲ್ಲಿ ಮತ್ತೊಂದು ದಿಗ್ವಿಜಯಕ್ಕೆ ಕಾದುಕುಳಿದಿದೆ. 2008ರ ನಂತರ ಚೆಪಾಕ್​ನಲ್ಲಿ ಗೆಲ್ಲದ ಆರ್​ಸಿಬಿ ಸೇಡಿನೊಂದಿಗೆ ಗೆಲುವಿನ ಶುಭಾರಂಭಕ್ಕೆ ಕಾಯುತ್ತಿದೆ. ಚೆನ್ನೈ ತಂಡಕ್ಕಿರುವ ಬೆದರಿಕೆ, ದೌರ್ಬಲ್ಯ, ಸಾಮರ್ಥ್ಯಗಳ ನೋಟ ಇಲ್ಲಿದೆ.

ಚೆನ್ನೈ ಸಾಮರ್ಥ್ಯವೇನು? (Strengths)

ಸಿಎಸ್​ಕೆ ಬಹುದೊಡ್ಡ ಅಸ್ತ್ರವೆಂದರೆ ಬ್ಯಾಟಿಂಗ್ ಘಟಕ. ಋತುರಾಜ್ ಗಾಯಕ್ವಾಡ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಶಿವಂ ದುಬೆ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಮೊಯಿನ್ ಅಲಿ, ಸಮೀರ್ ರಿಜ್ವಿ ಮತ್ತು ಧೋನಿ ಕಣಕ್ಕಿಳಿದ್ದಾರೆ. ಅಲ್ಲದೆ, ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹರ್ ಸಹ ಹಿಟ್ಟರ್​​ಗಳಾಗಿದ್ದಾರೆ. ಎಂತಹದ್ದೇ ಬೌಲಿಂಗ್​​ ದಾಳಿಯನ್ನು ಎದುರಿಸುವ ಸಾಮರ್ಥ್ಯ ಈ ಬ್ಯಾಟಿಂಗ್​ ವಿಭಾಗಕ್ಕಿದೆ.

ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿಯೂ ಆಳವಿದೆ. ಈ ಸಲ ಮುಕೇಶ್ ಚೌಧರಿ, ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹರ್ ಮರಳಿದ್ದಾರೆ. ಗಾಯದ ಕಾರಣ ಮುಕೇಶ್ ಐಪಿಎಲ್ 2023ರ ಆವೃತ್ತಿಯನ್ನು ಮಿಸ್ ಮಾಡಿಕೊಂಡಿದ್ದರು. ಗಾಯದ ಸಮಸ್ಯೆಗಳಿಂದ ಚಹರ್ ಕೂಡ ಹಲವು ಪಂದ್ಯಗಳಿಗೆ ಅಲಭ್ಯರಾಗಿದ್ದರು. ತಂಡಕ್ಕೆ ಮರಳಿದ ಈ ಮೂವರಿಗೆ ಮಹೇಶ್ ತೀಕ್ಷಣ, ಮತೀಶ ಪತಿರಾಣ ಸಾಥ್ ನೀಡಲಿದ್ದಾರೆ.

ಸಿಎಸ್​ಕೆ ದೌರ್ಬಲ್ಯಗಳೇನು? (Weakness)

2023ರಲ್ಲಿ ಸಿಎಸ್​​​ಕೆ ಪರ ಗರಿಷ್ಠ ಸ್ಕೋರರ್​ ಆಗಿದ್ದ ಡೆವೊನ್ ಕಾನ್ವೆ, ಗಾಯದ ಕಾರಣ ಮೊದಲಾರ್ಧ ಟೂರ್ನಿ ಕಳೆದುಕೊಳ್ಳಲಿದ್ದಾರೆ. ಅಲ್ಲದೆ, ಶಿವಂ ದುಬೆ, ಮಥೀಶ ಪತಿರಾಣ ಕೂಡ ಗಾಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ, ರಹಾನೆ ಫಾರ್ಮ್​ನಲ್ಲಿ ಇಲ್ಲದಿರುವುದು ಸಿಎಸ್​ಕೆ ಆತಂಕಕ್ಕೆ ಕಾರಣವಾಗಬಹುದು. ಅಂಬಟಿ ರಾಯುಡು ಸ್ಥಾನ ತುಂಬುವವರು ಯಾರೆಂಬುದಕ್ಕೂ ಉತ್ತರ ಇಲ್ಲ.

ಆಟಗಾರರಿಗೆ ಅವಕಾಶ (Opportunities)

ಜೂನ್​ 1ರಿಂದ ಆರಂಭವಾಗುವ ಟಿ20 ವಿಶ್ವಕಪ್ ಟೂರ್ನಿಗೆ ಅವಕಾಶ ಉತ್ತಮ ಅವಕಾಶವನ್ನು ಹೊಂದಿರುವ ಆಟಗಾರರಿಗೆ ಈ ಐಪಿಎಲ್​ ಮಹತ್ವವಾಗಿದೆ. ಗಾಯಕ್ವಾಡ್, ದುಬೆ, ಶಾರ್ದೂಲ್, ಚಹರ್‌ರಂಥ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದೇ ಆದರೆ ಟಿ20 ವಿಶ್ವಕಪ್​ನಲ್ಲಿ ಅವಕಾಶ ಪಡೆಯುವುದು ಖಚಿತ. ಉತ್ತಮ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸಲು ರಹಾನೆಗೆ ಒಂದೊಳ್ಳೆಯ ಅವಕಾಶ ಇದೆ. ತವರು ಮೈದಾನ ಚೆಪಾಕ್‌ನಲ್ಲಿ ಆಡುವುದು ಬಲ ಹೆಚ್ಚಿಸಿದೆ.

ತಂಡಕ್ಕಿರುವ ಬೆದರಿಕೆ (Threats)

ಕಳೆದ ವರ್ಷ ಬ್ಯಾಟ್​​ನೊಂದಿಗೆ ಸಿಎಸ್​​ಕೆ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಕಾನ್ವೆ, ಇಲ್ಲದಿರುವುದು ಹಿನ್ನಡೆಯಾಗಿದೆ. ದುಬೆ ಅವರು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ರಹಾನೆ ಫಾರ್ಮ್​ನಲ್ಲಿಲ್ಲ. ಮೆನ್ ಇನ್ ಯೆಲ್ಲೋ ಪರ ದೊಡ್ಡ ರನ್ ಗಳಿಸುವ ಜವಾಬ್ದಾರಿ ಗಾಯಕ್ವಾಡ್ ಮತ್ತು ಕಿವೀಸ್ ಜೋಡಿ ರಚಿನ್-ಮಿಚೆಲ್ ಮೇಲಿರುತ್ತದೆ.

ಆರ್​ಸಿಬಿ ವಿರುದ್ಧದ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ XI

ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಶಿವಂ ದುಬೆ, ಡೇರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್​), ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಮಹೇಶ್ ತೀಕ್ಷಣ, ಮತೀಶ ಪತಿರಾಣ.

ಇಂಪ್ಯಾಕ್ಟ್ ಪ್ಲೇಯರ್ಸ್: ಅಜಿಂಕ್ಯ ರಹಾನೆ, ಮುಕೇಶ್ ಚೌಧರಿ, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ರೆಹಮಾನ್, ಮೊಯಿನ್ ಅಲಿ.

ಚೆನ್ನೈ ಸೂಪರ್ ಕಿಂಗ್ಸ್ ಸಂಪೂರ್ಣ ತಂಡ

ಎಂಎಸ್ ಧೋನಿ (ವಿಕೆಟ್ ಕೀಪರ್​), ಮೊಯಿನ್ ಅಲಿ, ದೀಪಕ್ ಚಹರ್, ಡಿವೊನ್ ಕಾನ್ವೆ, ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್ (ನಾಯಕ), ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಕೇಶ್ ಚೌಧರಿ, ಮತೀಶಾ ಪತಿರಾಣ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಸಿಮರ್​ಜಿಂತ್​ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.

IPL_Entry_Point