ಸಿಎಸ್‌ಕೆ ಆಲ್‌ರೌಂಡ್‌ ಆಟಕ್ಕೆ ತಲೆಬಾಗಿದ ಗುಜರಾತ್ ಟೈಟಾನ್ಸ್; ಚೆಪಾಕ್‌ನಲ್ಲಿ ಎರಡನೇ ಗೆಲುವು ಸಾಧಿಸಿದ ಚೆನ್ನೈ
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್‌ಕೆ ಆಲ್‌ರೌಂಡ್‌ ಆಟಕ್ಕೆ ತಲೆಬಾಗಿದ ಗುಜರಾತ್ ಟೈಟಾನ್ಸ್; ಚೆಪಾಕ್‌ನಲ್ಲಿ ಎರಡನೇ ಗೆಲುವು ಸಾಧಿಸಿದ ಚೆನ್ನೈ

ಸಿಎಸ್‌ಕೆ ಆಲ್‌ರೌಂಡ್‌ ಆಟಕ್ಕೆ ತಲೆಬಾಗಿದ ಗುಜರಾತ್ ಟೈಟಾನ್ಸ್; ಚೆಪಾಕ್‌ನಲ್ಲಿ ಎರಡನೇ ಗೆಲುವು ಸಾಧಿಸಿದ ಚೆನ್ನೈ

Chennai Super Kings vs Gujarat Titans: ಐಪಿಎಲ್‌ 2024ರ ಆವೃತ್ತಿಯಲ್ಲಿ ಸಿಎಸ್‌ಕೆ ತಂಡವು ಸತತ ಎರಡನೇ ಗೆಲುವು ಸಾಧಿಸಿದೆ. ತವರು ನೆಲ ಚೆನ್ನೈನಲ್ಲಿ ಅಭಿಮಾನಿಗಳ ಭಾರಿ ಬೆಂಬಲದೊಂದಿಗೆ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮಣಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದೆ.

ಸಿಎಸ್‌ಕೆ ಆಲ್‌ರೌಂಡ್‌ ಆಟಕ್ಕೆ ತಲೆಬಾಗಿದ ಗುಜರಾತ್ ಟೈಟಾನ್ಸ್
ಸಿಎಸ್‌ಕೆ ಆಲ್‌ರೌಂಡ್‌ ಆಟಕ್ಕೆ ತಲೆಬಾಗಿದ ಗುಜರಾತ್ ಟೈಟಾನ್ಸ್ (PTI)

ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಐಪಿಎಲ್ 2024ರ ಆವೃತ್ತಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಕಳೆದ ಆವೃತ್ತಿಯ ಪಂದ್ಯಾವಳಿಯ ಫೈನಲ್‌ ಪಂದ್ಯದ ಎದುರಾಳಿ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧದ ಪಂದ್ಯದಲ್ಲಿ ರುತುರಾಜ್‌ ಗಾಯಕ್ವಾಡ್‌ ಪಡೆ 63 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ತವರು ಮೈದಾನ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸತತ ಎರಡನೇ ಗೆಲುವು ಸಾಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಇದರೊಂದಿಗೆ ಐಪಿಎಲ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ಮೈ ಸೂಪರ್‌ ಕಿಂಗ್ಸ್‌ ತಂಡವು 6 ವಿಕೆಟ್‌ ಕಳೆದುಕೊಂಡು 206 ರನ್‌ ಪೇರಿಸಿತು. ಇದಕ್ಕೆ ಪ್ರತಿಯಾಗಿ ಗುಜರಾತ್‌ ತಂಡವು, 8 ವಿಕೆಟ್‌ ಕಳೆದುಕೊಂಡು 143 ರನ್‌ ಗಳಿಸಲಷ್ಟೇ ಶಕ್ತವಾಯ್ತು.

206 ರನ್‌ಗಳ ಬೃಹತ್‌ ಗುರಿ ಪಡೆದ ಟೈಟಾನ್ಸ್‌, ಆರಂಭದಿಂದಲೇ ವೇಗದ ಆಟಕ್ಕೆ ಮಣೆ ಹಾಕಿತು. ಆದರೆ ಶುಭ್ಮನ್‌ ಗಿಲ್‌ ಕೇವಲ 8 ರನ್‌ ಗಳಿಸಿದ್ದಾಗ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಅವರ ಬೆನ್ನಲ್ಲೇ ವೃದ್ಧಿಮಾನ್‌ ಸಾಹಾ ಕೂಡಾ 21 ರನ್‌ ಗಳಿಸಿ ಔಟಾದರು. ಅಬ್ಬರಿಸುವ ಸುಳಿವು ಕೊಟ್ಟ ವಿಜಯ್‌ ಶಂಕರ್‌ 12 ರನ್ ಗಳಿಸಿ ನಿರ್ಗಮಿಸಿದರೆ, ಕೆಲಕಾಲ ಕ್ರೀಸ್‌ಕಚ್ಚಿ ಆಡಿದ ಡೇವಿಡ್‌ ಮಿಲ್ಲರ್‌ ಆಟ 21 ರನ್‌ಗಳಿಗೆ ಅಂತ್ಯವಾಯ್ತು.

ಇದನ್ನೂ ಓದಿ | ಫುಟ್ಬಾಲ್‌ ಆಡೋ ಆಸಕ್ತಿಯೇ ಕುಂದಿದೆ ಎಂದು ಗಳಗಳನೆ ಅತ್ತ ಬ್ರೆಜಿಲ್ ಆಟಗಾರ; ವರ್ಣಭೇದ ನೀತಿಗೆ ಕೊನೆ ಎಂದು?

ಓಮರ್ಜಾಯ್‌ 11, ರಶೀದ್‌ ಖಾನ್‌ 1 ರನ್‌ ಗಳಿಸುವಲ್ಲಿ ಸುಸ್ತು ಹೊಡೆದರು. ಡೆತ್‌ ಓವರ್‌ಗಳಲ್ಲಿ ತಂಡವು ಪ್ರತಿ ಓವರ್‌ನಲ್ಲೂ 20ಕ್ಕೂ ಹೆಚ್ಚು ರನ್‌ ಗಳಿಸಬೇಕಿತ್ತು. ಆದರೆ ಕೆಳ ಕ್ರಮಾಂಕದ ಆಟಗಾರರಿಂದ ಇದು ಸಾಧ್ಯವಾಗಲಿಲ್ಲ. ತಂಡದ ಗೆಲುವಿಗಾಗಿ ರಾಹುಲ್‌ ತೆವಾಟಿಯ ಪ್ರಯತ್ನಿಸಿದರಾದರೂ, 6 ರನ್‌ ಮಾತ್ರವೇ ಗಳಿಸಲು ಅವರಿಂದ ಸಾಧ್ಯವಾಯ್ತು.

ಸಿಎಸ್‌ಕೆ ಪರ ದೀಪಕ್‌, ಮುಸ್ತಫಿಜುರ್‌ ಹಾಗೂ ದೇಶ್‌ಪಾಂಡೆ ತಲಾ 2 ವಿಕೆಟ್‌ ಪಡೆದರು. ಮಿಚೆಲ್‌ ಹಾಗೂ ಪತಿರಾನಾ ತಲಾ 1 ವಿಕೆಟ್‌ ಕಬಳಿಸಿದರು.

ಚೆನ್ನೈ ಅಬ್ಬರದ ಬ್ಯಾಟಿಂಗ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ, ಸ್ಫೋಟಕ ಆಟವಾಡಿತು. ನಾಯಕ ರುತುರಾಜ್‌ ಗಾಯಕ್ವಾಡ್‌ ಮತ್ತು ರಚಿನ್‌ ರವೀಂದ್ರ ಮೊದಲ ವಿಕೆಟ್‌ಗೆ 62 ರನ್‌ಗಳ ಜೊತೆಯಾಟವಾಡಿದರು. ಪವರ್‌ಪ್ಲೇನಲ್ಲಿ ಇಬ್ಬರೂ‌ ಅಬ್ಬರಿಸಿದರು. ವೇಗದ ಆಟಕ್ಕೆ ಮಣೆ ಹಾಕಿದ ರಚಿನ್‌ ಕೇವಲ 20 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 46 ರನ್‌ ಗಳಿಸಿದರು. ನಾಯಕ ಕೂಡಾ 46 ರನ್‌ ಗಳಿಸಿ ಔಟಾದರು.

ಅಜಂಕ್ಯಾ ರಹಾನೆ 46 ರನ್‌ ಗಳಿಸಿದರೆ, ಶಿವಂ ದುಬೆ ಸ್ಫೋಟಕ 51 ರನ್‌ ಸಿಡಿಸಿದರು. ಇದು ಇಂದಿನ ಪಂದ್ಯದಲ್ಲಿ ದಾಖಲಾದ ಏಕೈಕ ಅರ್ಧಶತಕ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ತಂಡವನ್ನು ಅಜೇಯವಾಗಿ ಗೆಲುವಿನ ದಡ ಸೇರಿಸಿದ್ದ ದುಬೆ, ಈ ಪಂದ್ಯದಲ್ಲಿ ಸ್ಫೋಟಕ 5 ಸಿಕ್ಸರ್‌ ಸಿಡಿಸಿದರು. ಅಲ್ಲದೆ ಪಂದ್ಯದ ಗರಿಷ್ಠ ರನ್‌ ಸ್ಕೋರರ್‌ ಎನಿಸಿಕೊಂಡರು. ಡೆತ್‌ ಓವರ್‌ಗಳಲ್ಲಿ ಅಬ್ಬರಿಸಿದ ಸಮೀರ್‌ ರಿಜ್ವಿ 2 ಸಿಕ್ಸರ್‌ ಸಹಿತ 14 ರನ್‌ ಸಿಡಿಸಿದರು. ಡೇರಿಲ್‌ ಮಿಚೆಲ್‌ 24 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸಿಎಸ್‌ಕೆ ತಂಡ

ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್‌ ಕೀಪರ್), ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್.

ಗುಜರಾತ್‌ ಟೈಟಾನ್ಸ್‌ ತಂಡ

ವೃದ್ಧಿಮಾನ್ ಸಹಾ (ವಿಕೆಟ್‌ ಕೀಪರ್), ಶುಭ್ಮನ್ ಗಿಲ್‌ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಸ್ಪೆನ್ಸರ್ ಜಾನ್ಸನ್.

Whats_app_banner