ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್ ಪಂದ್ಯ; ಚೆಪಾಕ್‌ನಲ್ಲಿ ಸ್ಪಿನ್ನರ್‌ಗಳು ಆಡಿದ್ದೇ ಆಟ, ಚೆನ್ನೈ ಪಿಚ್ ಹಾಗೂ ಹವಾಮಾನ ವರದಿ
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್‌ಕೆ ಹಾಗೂ ಆರ್‌ಸಿಬಿ ತಂಡಗಳ ನಡುವೆ ಐಪಿಎಲ್ ಪಂದ್ಯ ನಡೆಯುತ್ತಿದೆ. ಉಭಯ ತಂಡಗಳು ಪ್ರಸಕ್ತ ಆವೃತ್ತಿಯಲ್ಲಿ ಸತತ ಎರಡನೇ ಗೆಲುವಿಗೆ ಎದುರು ನೋಡುತ್ತಿವೆ.

2024ರ ಐಪಿಎಲ್‌ನ ಆ ರೋಚಕ ಪಂದ್ಯವನ್ನು ಆರ್‌ಸಿಬಿ ಅಭಿಮಾನಿಗಳು ಮರೆಯಲು ಹೇಗೆ ತಾನೆ ಸಾಧ್ಯ. ತುಂಬಿದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ತಂಡವು, ಸಿಎಸ್‌ಕೆ ಆಟಗಾರರು ಹಾಗೂ ಅಭಿಮಾನಿಗಳ ಸದ್ದಡಗಿಸಿದ ದಿನವು ಕ್ರಿಕೆಟ್ ಲೋಕದಲ್ಲಿ ಮಾತ್ರವಲ್ಲದೆ ಇಂಟರ್ನೆಟ್‌ನಲ್ಲೂ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು. ಅದು ಕೇವಲ ಪಂದ್ಯವಷ್ಟೇ ಆಗಿರಲಿಲ್ಲ. ಸಿಎಸ್‌ಕೆ ತಂಡವನ್ನು ಸೋಲಿಸಿ ಆರ್‌ಸಿಬಿ ತಂಡವು ಪ್ಲೇಆಫ್‌ಗೆ ಪ್ರವೇಶಿಸಿದ್ದು ಒಂದೆಡೆಯಾದರೆ, ಸಿಎಸ್‌ಕೆ ತಂಡವನ್ನು ಪ್ಲೇಆಫ್ ರೇಸ್‌ನಿಂದ ಹೊರದಬ್ಬಿದ್ದು ಮತ್ತೊಂದು ಪ್ರಮುಖ ಅಂಶ. ಇದೀಗ ಇದೇ ಎರಡು ತಂಡಗಳ ಮತ್ತೊಂದು ರೋಚಕ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಐಪಿಎಲ್ 2025ರ ಆವೃತ್ತಿಯಲ್ಲಿ ಮಾರ್ಚ್ 28ರ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ವಿರುದ್ಧ ಎರಡನೇ ಗೆಲುವಿಗೆ ಆರ್‌ಸಿಬಿ ಎದುರು ನೋಡುತ್ತಿದೆ. ಕೆಕೆಆರ್ ವಿರುದ್ಧದ ಮೊದಲ ಪಂದ್ಯ ಗೆದ್ದ ಖುಷಿಯಲ್ಲಿರುವ ತಂಡ, ಸಿಎಸ್‌ಕೆ ತಂಡವನ್ನು ಅವರದ್ದೇ ತವರಿನಲ್ಲಿ ಮಣಿಸುವ ವಿಶ್ವಾಸದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಆರ್‌ಸಿಬಿ ತಂಡ ಈವರೆಗೆ ಗೆದ್ದ ಪ್ರಮಾಣ ತುಂಬಾ ಕಡಿಮೆ. ಉಭಯ ತಂಡಗಳ ಮುಖಾಮುಖಿಯಲ್ಲಿ ಆರ್‌ಸಿಬಿ 11 ಪಂದ್ಯಗಳನ್ನು ಗೆದ್ದರೆ, ಚೆನ್ನೈ 22 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಚೆನ್ನೈನಲ್ಲಿ ಆರ್‌ಸಿಬಿ ಈವರೆಗೆ ಗೆದ್ದಿದ್ದು 1 ಪಂದ್ಯ ಮಾತ್ರ. ಅದು ಕೂಡಾ 2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ. ಚೆಪಾಕ್‌ನಲ್ಲಿ ಸಿಎಸ್‌ಕೆ 8 ಪಂದ್ಯಗಳಲ್ಲಿ ಸತತವಾಗಿ ಆರ್‌ಸಿಬಿಯನ್ನು ಮಣಿಸಿದೆ.
ಚೆಪಾಕ್ ಪಿಚ್ ವರದಿ
ಭಾರತದಲ್ಲಿರುವ ಕ್ರಿಕೆಟ್ ಪಿಚ್‌ಗಳ ಪೈಕಿ ಚೆನ್ನೈ ಪಿಚ್ ವಿಭಿನ್ನ. ಇದು ಬ್ಯಾಟಿಂಗ್ ಹಾಗೂ ಬೌಲರ್‌ಗಳಿಗೆ ಸಮಾನಾಗಿ ನೆರವಾಗುತ್ತದೆ. ಇಲ್ಲಿ ಸ್ಪಿನ್ ಬೌಲರ್‌ಗಳು ಆಡಿದ್ದೇ ಆಟ. ಹೀಗಾಗಿ ನಿಧಾನಗತಿಯ ಬೌಲರ್‌ಗಳಿಗೆ ಪಿಚ್ ಸಹಾಯ ಮಾಡುತ್ತದೆ ಎಂಬುವುದನ್ನು ನಿರೀಕ್ಷಿಸಬಹುದು. ಸಿಎಸ್‌ಕೆ ತಂಡಕ್ಕೆ ಈ ಪಿಚ್ ಮರ್ಮ ಚೆನ್ನಾಗಿ ಗೊತ್ತಿದೆ. ಹೀಗಾಗಿ ಇಲ್ಲಿ ಸತತವಾಗಿ ಮೇಲುಗೈ ಸಾಧಿಸುತ್ತಿದೆ. ಸಿಎಸ್‌ಕೆ ಪಾಲಿಗೆ ನೂರ್ ಅಹ್ಮದ್, ಅಶ್ವಿನ್, ಜಡೇಜಾ ನಿರ್ಣಾಯಕರಾದರೆ, ಆರ್‌ಸಿಬಿಗೆ ಕೃನಾಲ್, ಸುಯೇಶ್ ನಿರ್ಣಾಯಕ ಆಗಲಿದ್ದಾರೆ.
ಚೆನ್ನೈ ಹವಾಮಾನ ವರದಿ
ಚೆನ್ನೈನಲ್ಲಿ ನಡೆಯಲಿರುವ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿಲ್ಲ. ಸಮುದ್ರ ತೀರವಾದ ಚೆನ್ನೈನಲ್ಲಿ ಪಂದ್ಯದುದ್ದಕ್ಕೂ ತಾಪಮಾನವು ಹೆಚ್ಚಿರಲಿದ್ದು, ಆಟಗಾರರಿಗೆ ಬಿಸಿ ವಾತಾವರಣ ಕಾಡಲಿದೆ. ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ
1 ವಿರಾಟ್ ಕೊಹ್ಲಿ, 2 ಫಿಲ್ ಸಾಲ್ಟ್, 3 ರಜತ್ ಪಾಟೀದಾರ್ (ನಾಯಕ), 4 ದೇವದತ್ ಪಡಿಕ್ಕಲ್/ಮೋಹಿತ್ ರಥಿ, 5 ಲಿಯಾಮ್ ಲಿವಿಂಗ್‌ಸ್ಟನ್, 6 ಜಿತೇಶ್ ಶರ್ಮಾ (ವಿಕೆಟ್ ಕೀಪರ್), 7 ಟಿಮ್ ಡೇವಿಡ್, 8 ಕೃನಾಲ್ ಪಾಂಡ್ಯ, 9 ರಾಸಿಖ್ ಸಲಾಬ್/ಭುವನೇಶ್ವರ್ ಕುಮಾರ್/ ಸ್ವಪ್ನಿಲ್ ಸಿಂಗ್, 10 ಜೋಶ್ ಹೇಜಲ್‌ವುಡ್, 11 ಯಶ್ ದಯಾಳ್, 12 ಸುಯಾಶ್ ಶರ್ಮಾ.
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ
1 ರಚಿನ್ ರವೀಂದ್ರ, 2 ರುತುರಾಜ್ ಗಾಯಕ್‌ವಾಡ್ (ನಾಯಕ), 3 ರಾಹುಲ್ ತ್ರಿಪಾಠಿ, 4 ದೀಪಕ್ ಹೂಡಾ, 5 ಶಿವಂ ದುಬೆ, 6 ಸ್ಯಾಮ್ ಕರಾನ್, 7 ರವೀಂದ್ರ ಜಡೇಜಾ, 8 ಎಂಎಸ್ ಧೋನಿ (ವಿಕೆಟ್ ಕೀಪರ್), 9 ಆರ್ ಅಶ್ವಿನ್, 10 ನಾಥನ್ ಎಲ್ಲಿಸ್, 11 ನೂರ್ ಅಹ್ಮದ್ , 12 ಖಲೀಲ್ ಅಹ್ಮದ್.
