ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್-ಬೌಲಿಂಗ್ ವೈಭವ; ರೋಹಿತ್ ಶರ್ಮಾ ಶತಕ ವ್ಯರ್ಥ, ಮತ್ತೆ ಹಳಿ ತಪ್ಪಿದ ಮುಂಬೈ ಇಂಡಿಯನ್ಸ್
Mumbai Indians vs Chennai Super Kings : 17ನೇ ಆವೃತ್ತಿಯ ಐಪಿಎಲ್ನ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 20 ರನ್ಗಳ ಅಂತರದಿಂದ ಜಯ ಸಾಧಿಸಿತು. ರೋಹಿತ್ ಶರ್ಮಾ ಶತಕ ವ್ಯರ್ಥವಾಯಿತು.
ಋತುರಾಜ್ ಗಾಯಕ್ವಾಡ್ (69), ಶಿವಂ ದುವೆ (66) ಮತ್ತು ಎಂಎಸ್ ಧೋನಿ (20*) ಅವರ ಬ್ಯಾಟಿಂಗ್ ವೈಭವ ಮತ್ತು ಮತೀಶಾ ಪತಿರಾಣ ಅವರ (28/4) ಖಡಕ್ ಬೌಲಿಂಗ್ ನೆರವಿನಿಂದ ಸತತ ಎರಡು ಗೆಲುವು ದಾಖಲಿಸಿ ಲಯಕ್ಕೆ ಮರಳಿದ್ದ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ದಾಖಲಿಸಿದೆ. ಪ್ರಸಕ್ತ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ತನ್ನ ತವರಿನಿಂದ ಹೊರಗೆ ಚೆನ್ನೈ ಜಯದ ನಗೆ ಬೀರಿದೆ. ರೋಹಿತ್ ಶರ್ಮಾ ಸಿಡಿಸಿದ ಶತಕದ ಹೊರತಾಗಿಯೂ ಮುಂಬೈ 20 ರನ್ಗಳ ಅಂತರದಿಂದ ಸೋಲನುಭವಿಸಿದೆ. ಹಾರ್ದಿಕ್ ಪಡೆಗೆ ಇದು 4ನೇ ಸೋಲಾಗಿದೆ.
ಮುಂಬೈನ ಐಕಾನಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್ಕೆ ಬೃಹತ್ ಮೊತ್ತ ಪೇರಿಸಿತು. ಋತುರಾಜ್ ಮತ್ತು ದುಬೆ ತಲಾ ಅರ್ಧಶತಕ ಸಿಡಿಸಿದರೆ, ಕೊನೆಯಲ್ಲಿ ಧೋನಿ ವಿಧ್ವಂಸಕ ಬ್ಯಾಟಿಂಗ್ ನಡೆಸಿದರು. ಪರಿಣಾಮ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಮುಂಬೈ ಪರ ರೋಹಿತ್ ಶರ್ಮಾ ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿ ಶತಕ ಕೂಡ ಸಿಡಿಸಿದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಮುಂಬೈ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು.
207 ರನ್ಗಳ ಸವಾಲು ಬೆನ್ನಟ್ಟಿದ ಎಂಐ ಭರ್ಜರಿ ಆರಂಭ ಪಡೆದ ಮುಂಬೈ, ಮೊದಲ ವಿಕೆಟ್ಗೆ 70 ರನ್ ಕಲೆ ಹಾಕಿತು. ಅದು ಕೂಡ 7 ಓವರ್ಗಳಲ್ಲಿ. ಮಿಂಚುತ್ತಿದ್ದ ಆರಂಭಿಕ ಆಟಗಾರ ಇಶಾನ್ ಕಿಶನ್ 23ಕ್ಕೆ ಆಟ ಮುಗಿಸಿದರು. ಬಳಿಕ ಸೂರ್ಯಕುಮಾರ್ ಮತ್ತೊಮ್ಮೆ ಡಕೌಟ್ಗೆ ಹೊರ ನಡೆದರು. ಒಂದೇ ಓವರ್ನಲ್ಲಿ ಇಬ್ಬರನ್ನು ಮತೀಶಾ ಪತಿರಾಣ ಡಗೌಟ್ಗೆ ಕಳುಹಿಸಿದರು. ಇದರ ನಡುವೆಯೂ ಮತ್ತೊಬ್ಬ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಬೌಲರ್ಗಳ ಮೇಲೆ ಸವಾರಿ ಮಾಡಿದರು.
ಅಲ್ಲದೆ, ತಿಲಕ್ ವರ್ಮಾ ಜೊತೆಗೂಡಿ ಮತ್ತೊಂದು ಅರ್ಧಶತಕದ ಜೊತೆಯಾಟ ಕೂಡ ಆಡಿದರು. ಮತ್ತೆ ದಾಳಿ ನಡೆಸಿದ ಪತಿರಾಣ ಅಬ್ಬರಿಸಲು ಶುರುವಿಟ್ಟ ತಿಲಕ್ಗೆ ಗೇಟ್ಪಾಸ್ ಕೊಟ್ಟರು. ಹಾರ್ದಿಕ್ (2) ನಿರಾಸೆ ಮೂಡಿಸಿದರು. ಅದರಲ್ಲೂ 15 ಮತ್ತು 16ನೇ ಓವರ್ನಲ್ಲಿ ಕೇವಲ 5 ರನ್ಗಳು ಹರಿದು ಬಂದವು. ಟಿಮ್ ಡೇವಿಡ್ (13), ರೊಮಾರಿಯೊ ಶೆಫರ್ಡ್ (1) ನಿರಾಸೆ ಮೂಡಿಸಿದರು. ಆದರೆ ರೋಹಿತ್ ಶರ್ಮಾ ಕೊನೆಯವರೆಗೂ ಕ್ರೀಸ್ನಲ್ಲಿ ಉಳಿದರು. ಅಲ್ಲದೆ ಐಪಿಎಲ್ನಲ್ಲಿ 2ನೇ ಶತಕ ಸಿಡಿಸಿದರೂ ಮುಂಬೈಗೆ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ. 63 ಎಸೆತಗಳಲ್ಲಿ 13 ಬೌಂಡರಿ, 5 ಸಿಕ್ಸರ್ ಸಹಿತ 105 ನ್ ಗಳಿಸಿ ಅಜೇಯರಾಗಿ ಉಳಿದರು.
ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್
ಟಾಸ್ ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್ಕೆ, ಉತ್ತಮ ಆರಂಭ ಪಡೆಯಲಿಲ್ಲ. ಬಡ್ತಿ ಪಡೆದು ಆರಂಭಿಕನಾಗಿ ಕಣಕ್ಕಿಳಿದ ಅಜಿಂಕ್ಯ ರಹಾನೆ 5ಕ್ಕೆ ವಿಕೆಟ್ ಒಪ್ಪಿಸಿದರು. ರಚಿನ್ ರವೀಂದ್ರ (21) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಜೆರಾಲ್ಡ್ ಕೊಯೆಟ್ಜಿ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದು ವಿಕೆಟ್ ಪಡೆದರು. ಬಳಿಕ ಜೊತೆಯಾದ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಶಿವಂ ದುಬೆ 3ನೇ ವಿಕೆಟ್ಗೆ 90 ರನ್ಗಳ ಪಾಲುದಾರಿಕೆ ನೀಡಿದರು.
ಅದ್ಭುತ ಜೊತೆಯಾಟ ನೀಡಿದ ಈ ಜೋಡಿ, ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಋತುರಾಜ್ 40 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ 69 ರನ್ ಚಚ್ಚಿದರೆ, ಶಿವಂ ದುಬೆ 38 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 66 ರನ್ ಬಾರಿಸಿದರು. ಇವರಿಬ್ಬರ ಅಮೋಘ ಆಟದ ಪರಿಣಾಮ ಮುಂಬೈ ಬೌಲರ್ಸ್ ವಿಕೆಟ್ಗಾಗಿ ಪರದಾಡಿದರು. ಬಳಿಕ ಕ್ರೀಸ್ಗೆ ಬಂದ ಡ್ಯಾರಿಲ್ ಮಿಚೆಲ್ (17) ಕೊನೆಯಲ್ಲಿ ಮಿಂಚಲಿಲ್ಲ. ಕೊನೆಯ 4 ಎಸೆತಗಳಲ್ಲಿ ಕ್ರೀಸ್ಗೆ ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಹಿತ 20 ರನ್ ಬೆಂಡೆತ್ತಿದರು.