ಮಹತ್ವದ ನಿರ್ಧಾರ; ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಚೇತೇಶ್ವರ ಪೂಜಾರ ಎಂಟ್ರಿ, ಆದರೆ…
Cheteshwar Pujara: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ ವಿಶೇಷ ಜವಾಬ್ದಾರಿ ಪಡೆದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪೂಜಾರ ಹಿಂದಿ ಕಾಮೆಂಟರಿ ಮಾಡಲಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಮೂಲಕ ಪ್ರತಿಷ್ಠಿತ ಭಾರತ vs ಆಸ್ಟ್ರೇಲಿಯಾ ಸರಣಿಯಲ್ಲಿ ಅಭಿಮಾನಿಗಳೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಉಭಯ ತಂಡಗಳ ನಡುವಣ ಮೊದಲ ಟೆಸ್ಟ್ ಪಂದ್ಯ ನವೆಂಬರ್ 22ರಿಂದ ಪರ್ತ್‌ನಲ್ಲಿ ಶುರುವಾಗಲಿದೆ. ಈ ಮಹತ್ವದ ಸರಣಿಗೆ ಟೀಮ್ ಇಂಡಿಯಾ ಚೇತೇಶ್ವರ ಪೂಜಾರ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಿಲ್ಲ. ಆದರೆ, ಇದೀಗ ಈ ಆಟಗಾರನನ್ನು ಈ ಸರಣಿಯುದ್ದಕ್ಕೂ ಕಾಣಬಹುದು. ಆದರೆ, ಮೈದಾನದ ಒಳಗೆ ಅಲ್ಲ. ಚೇತೇಶ್ವರ ಪೂಜಾರ ಮೈದಾನದ ಹೊರಗೆ ಮ್ಯಾಜಿಕ್ ತೋರಿಸಲಿದ್ದಾರೆ.
ಚೇತೇಶ್ವರ ಪೂಜಾರ ಈ ಸರಣಿಯಲ್ಲಿ ವಿಶೇಷ ಜವಾಬ್ದಾರಿಯನ್ನು ಪಡೆದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಪೂಜಾರ ಅವರನ್ನು ಹಿಂದಿ ಕಾಮೆಂಟರಿಗಾಗಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಕರೆಸಿಕೊಂಡಿದೆ. ಹೀಗಾಗಿ ಅವರು ಈ ಪ್ರತಿಷ್ಠಿತ ಸರಣಿಯಲ್ಲಿ ಅಭಿಮಾನಿಗಳೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ. ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯೊಂದಿಗೆ ಪೂಜಾರ ಕಾಮೆಂಟೇಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಬಳಿಕ ಚೇತೇಶ್ವರ ಪೂಜಾರ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇತ್ತೀಚೆಗಷ್ಟೇ ಇವರು ರಣಜಿ ಟ್ರೋಫಿ ಹಾಗೂ ಕೌಂಟಿ ಕ್ರಿಕೆಟ್‌ನಲ್ಲಿ ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದರೂ ಟೀಮ್ ಇಂಡಿಯಾಗೆ ಮರಳಲು ಸಾಧ್ಯವಾಗಿರಲಿಲ್ಲ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಪೂಜಾರ ಅವರ ದಾಖಲೆಯೂ ಅದ್ಭುತವಾಗಿದೆ. ಅವರು ಈ ಪ್ರತಿಷ್ಠಿತ ಸರಣಿಯಲ್ಲಿ 50.82 ಸರಾಸರಿಯಲ್ಲಿ 2033 ರನ್ ಗಳಿಸಿದ್ದಾರೆ.
ಚೇತೇಶ್ವರ ಪೂಜಾರ ದಾಖಲೆಗಳು
ಬಾರ್ಡರ್-ಗಾವಸ್ಕರ್ ಸರಣಿಯ ಬಗ್ಗೆ ಮಾತನಾಡುತ್ತಾ, ಚೇತೇಶ್ವರ ಪೂಜಾರ 4 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಒಮ್ಮೆ ಮಾತ್ರ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸ್ಟೀವ್ ಸ್ಮಿತ್ ಮತ್ತು ನಾಥನ್ ಲಿಯಾನ್ ಅವರಂತಹ ಆಟಗಾರರು ತಲಾ 3 ಬಾರಿ ಈ ಪ್ರಶಸ್ತಿಯನ್ನು ಗಳಿಸಲು ಸಮರ್ಥರಾಗಿದ್ದಾರೆ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಪೂಜಾರ ಅದ್ಭುತ ಪ್ರದರ್ಶನ ನೀಡಿದ್ದರೂ ಇನ್ನು ಮುಂದೆ ಈ ಸರಣಿಯಲ್ಲಿ ಆಡದಿರುವುದು ವಿಷಾದದ ಸಂಗತಿಯಾಗಿದೆ.
2020-21ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಚೇತೇಶ್ವರ ಪೂಜಾರ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. 8 ಇನಿಂಗ್ಸ್ ಆಡಿದ್ದ ಪೂಜಾರ ಮೂರು ಅರ್ಧಶತಕಗಳೊಂದಿಗೆ ಒಟ್ಟು 271 ರನ್ ಕಲೆಹಾಕಿದ್ದರು. ಈ ಮೂಲಕ ಭಾರತ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಅಲಭ್ಯ
ನವೆಂಬರ್ 22ರಿಂದ ಭಾರತ-ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆರಂಭವಾಗಲಿದೆ. ಪರ್ತ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಇದಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸುತ್ತಿದೆ. ಕಳೆದ ಎರಡು ಟೆಸ್ಟ್ ಸರಣಿಗಳಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ತವರಿನಲ್ಲಿ ಸೋಲಿಸಿದ್ದು, ಈ ಬಾರಿಯೂ ಅಭಿಮಾನಿಗಳು ಅದೇ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ಬಾರಿ ಮೊದಲ ಟೆಸ್ಟ್ ಪಂದ್ಯಕ್ಕೆ ಪೂರ್ಣ ಸಾಮರ್ಥ್ಯದ ತಂಡವನ್ನು ಕಣಕ್ಕಿಳಿಸುತ್ತಿಲ್ಲ. ನಾಯಕ ರೋಹಿತ್ ಶರ್ಮಾ ಕೂಡ ಮೊದಲ ಪಂದ್ಯದಲ್ಲಿ ಕಾಣಿಸುಕೊಳ್ಳುವುದು ಬಹುತೇಕ ಅಸಾಧ್ಯ. ಅತ್ತ ಶುಭ್ಮನ್ ಗಿಲ್ ಕೂಡ ಗಾಯಗೊಂಡಿದ್ದಾರೆ.
ವರದಿ: ವಿನಯ್ ಭಟ್.
ಇದನ್ನೂ ಓದಿ | ಪರ್ತ್‌ನಲ್ಲಿ ಮಳೆ ಭೀತಿ; ಭಾರತ vs ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಪಂದ್ಯಕ್ಕೆ ಹವಾಮಾನ ಅಡ್ಡಿಯಾಗುತ್ತಾ?