ಬೆಟ್ಟಿಂಗ್ ಆಡಿ ಬಿಡ್ಬೇಡ್ರೋ ನಿಮ್ ಊರು; ಸುಮ್ನೆ ಆಟ ಎಂಜಾಯ್ ಮಾಡು ದೇವರು; ಕವಿತೆ ಮೂಲಕ ಎಚ್ಚರಿಸಿದ ಚಿಕ್ಕಮಗಳೂರು ಪೊಲೀಸರು
Chikkamagaluru District Police: ಬೆಟ್ಟಿಂಗ್ ಆಡುವವರಿಗೆ ಕವಿತೆ ಮೂಲಕ ಎಚ್ಚರಿಸಿದ್ದಾರೆ ಚಿಕ್ಕಮಗಳೂರು ಪೊಲೀಸರು. ಬರೆದಿರುವ ಕವಿತೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಐಪಿಎಲ್ ಆರಂಭಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ಮುಖಾಮುಖಿಯಾದವು. ಹಾಲಿ ಚಾಂಪಿಯನ್ ಚೆನ್ನೈ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಸಿಎಸ್ಕೆ 18.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿತು.
ಐಪಿಎಲ್ ಹಬ್ಬ ಶುರುವಾಗುತ್ತಿದ್ದಂತೆ ಬೆಟ್ಟಿಂಗ್ ದಂದೆ ಜೋರಾಗಿ ನಡೆಯುತ್ತಿದೆ. ಗಲ್ಲಿಯಿಂದ ದಿಲ್ಲಿವರೆಗೂ ದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ್ ಭೂತಕ್ಕೆ ನಡೆಯುತ್ತದೆ. ಹಾಗಾಗಿ ಡಿಸಿಪಿಗಳು ಹೈ ಅಲರ್ಟ್ ಆಗಿರುವಂತೆ ಡಿಸಿಪಿಗಳಿಗೆ ಕಮಿಷನರ್ ಸೂಷಿಸಿದ್ದಾರೆ. ಇದರ ನಡುವೆ ಬೆಟ್ಟಿಂಗ್ ತಡೆಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಜಾಗೃತಿ ಕೈಗೊಂಡಿದ್ದಾರೆ. ಈ ಹೊಸ ತರಹದ ಜಾಗೃತಿಗೆ ಜಿಲ್ಲಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಬೆಟ್ಟಿಂಗ್ ಆಡುವವರಿಗೆ ಕವಿತೆ ಮೂಲಕ ಎಚ್ಚರಿಸಿದ್ದಾರೆ ಚಿಕ್ಕಮಗಳೂರು ಪೊಲೀಸರು.
ಬೆಟ್ಟಿಂಗ್ ಆಡುವವರಿಗೆ ಬರೆದಿರುವ ಕವಿತೆಯನ್ನು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಆ ಕವಿತೆ ಇಲ್ಲಿದೆ ಓದಿ...
ಅಭಿಮಾನಕ್ಕೆ ಹೆಸರು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಬೆಟ್ಟಿಂಗ್ ಆಡಿ ಬಿಡ್ಬೇಡ್ರೋ ನಿಮ್ ಊರು..!
ಸಿಕ್ಕಾಂಕೊಂಡು ಕೆಡಿಸ್ಕೋಬೇಡಿ ನಿಮ್ ಹೆಸರು
ನಮ್ಮ ಕೈಗೆ ಸಿಕ್ರೆ ನಿಮ್ ಜೀವನ ಹುಷಾರು
ಈ ಸಲ ಕಪ್ ನಮ್ದೇ ಎಂಬ ಕೂಗು ಜೋರು
ಸುಮ್ನೆ ಆಟ ಎಂಜಾಯ್ ಮಾಡು ದೇವರು..!
ಆರ್ಸಿಬಿ ಹೊಗಳುತ್ತಲೇ ಬೆಟ್ಟಿಂಗ್ ಅಡುವವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು, ಚಿಕ್ಕಮಗಳೂರು ಪೊಲೀಸರ ಕಳಕಳಿಯ ಅಭಿಯಾನಕ್ಕೆ ಶ್ಲಾಘನೀಯವಾಗಿದೆ. ಈಗಾಗಲೇ ರಾಜ್ಯದಲ್ಲಿ ಬೆಟ್ಟಿಂಗ್ ಎಂಬ ಭೂತನಿಂದ ಹಲವು ಸಾವು-ನೋವುಗಳಾಗಿವೆ. ಕೆಲವರು ಮನೆ, ಜಮೀನು ಮಾರಿಕೊಂಡು ಬೀದಿಗೆ ಬಂದಿದ್ದಾರೆ. ಹಾಗೆಯೇ ಇನ್ನೂ ಹಲವರು ಮರ್ಯಾದೆಗೆ ಅಂಜಿ ಊರುಗಳನ್ನು ತೊರೆದಿದ್ದಾರೆ.
ಬೆಟ್ಟಿಂಗ್ನಿಂದ ಗಂಡ 54 ಲಕ್ಷ ಸಾಲ, ನೊಂದ ಪತ್ನಿ ಆತ್ಮಹತ್ಯೆ
ಬೆಟ್ಟಿಂಗ್ ದಂಧೆಗೆ ಸಿಲುಕಿ 54 ಲಕ್ಷ ಸಾಲ ಮಾಡಿದ್ದ ಗಂಡನಿಗೆ ಸಾಲಗಾರರು ಹಿಂಸೆ ನೀಡುತ್ತಿದ್ದ ಬೇಸತ್ತ 23 ವರ್ಷದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿತ್ತು. ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ದರ್ಶನ್ ಐಪಿಎಲ್ ಬೆಟ್ಟಿಂಗ್ನಲ್ಲಿ ತೊಡಗಿ ಸುಮಾರು 54 ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಿರುಕುಳ ಹೆಚ್ಚಾದ ಕಾರಣ ನೊಂದ ಪತ್ನಿ ನೇಣಿಗೆ ಶರಣಾಗಿದ್ದರು. ಇದು ಬರಿ ಉದಾಹರಣೆ ಅಷ್ಟೆ, ಇಂತಹ ಘಟನೆಗಳು ಸಾಕಷ್ಟಿವೆ.
ಬೆಂಗಳೂರು ನಗರದಲ್ಲಿ ಹೈ ಅಲರ್ಟ್
ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕಾವು ಹೆಚ್ಚಾಗಿದ್ದು, ಬೆಟ್ಟಿಂಗ್ ನಡೆಯುವ ಸಾಧ್ಯತೆ ಇದೆ. ಅಂತಹ ಜಾಲಕ್ಕೆ ಮಟ್ಟ ಹಾಕಲು ಮುಂದಾಗಿರುವ ಬೆಂಗಳೂರಿನ ಕಮಿಷನರ್, ಡಿಸಿಪಿಗಳಿಗೆ ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ. ನಗರದ ಲಾಡ್ಜ್, ಹೋಟೆಲ್ ರೂಮ್ಗಳಲ್ಲಿ ಕಣ್ಣಿಡುವಂತೆ ಸೂಚಿಸಿದ್ದಾರೆ. ಬುಕ್ಕಿಗಳ ಮೇಲೆ ನಿಗಾ ಇಡುವಂತೆ ಸೂಚಿಸಿರುವ ದಯಾನಂದ್, ಬೆಟ್ಟಿಂಗ್ ಪ್ರಕರಣಗಳಲ್ಲಿ ಬಂಧನವಾಗಿ ಜಾಮೀನಿಂದ ಬಿಡುಗಡೆಯಾದವರ ಮೇಲೂ ಕಣ್ಣಿಡಿ ಎಂದು ತಿಳಿಸಿದ್ದಾರೆ.