ಕನ್ನಡ ಸುದ್ದಿ  /  Cricket  /  Chris Gayle Predicts Virat Kohli Future Ahead Of Ipl 2024 On Indian Cricket Team Rcb Vs Csk Indian Premier League Jra

ಇನ್ನೂ ಕೆಲವು ವರ್ಷ ಕ್ರಿಕೆಟ್ ಆಡಬಲ್ಲ ಸಾಮರ್ಥ್ಯ ಅವರಲ್ಲಿದೆ; ವಿರಾಟ್ ಕೊಹ್ಲಿ ಕುರಿತು ಭವಿಷ್ಯ ನುಡಿದ ಕ್ರಿಸ್ ಗೇಲ್

Virat Kohli:‌ ಭಾರತೀಯ ಕ್ರಿಕೆಟ್‌ ತಂಡದಲ್ಲಿ ವಿರಾಟ್‌ ಕೊಹ್ಲಿ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ಆರ್‌ಸಿಬಿ ದಂತಕಥೆ ಹಾಗೂ ಕೊಹ್ಲಿಯ ಮಾಜಿ ಸಹ ಆಟಗಾರ ಕ್ರಿಸ್ ಗೇಲ್, ವಿರಾಟ್‌ ಕೊಹ್ಲಿ ಭವಿಷ್ಯದ ಕುರಿತು ಮಾತನಾಡಿದ್ದಾರೆ. ಆರ್‌ಸಿಬಿ ಆಟಗಾರನ ಸಾಮರ್ಥ್ಯ ಏನೆಂದು ವಿವರಿಸಿದ್ದಾರೆ.

ವಿರಾಟ್ ಕೊಹ್ಲಿ ಕುರಿತು ಭವಿಷ್ಯ ನುಡಿದ ಕ್ರಿಸ್ ಗೇಲ್
ವಿರಾಟ್ ಕೊಹ್ಲಿ ಕುರಿತು ಭವಿಷ್ಯ ನುಡಿದ ಕ್ರಿಸ್ ಗೇಲ್ (IPL/Twitter)

ಭಾರತೀಯ ಕ್ರಿಕೆಟ್‌ನ ಅದ್ಧೂರಿ ಸಂಭ್ರಮ ಆರಂಭವಾಗುತ್ತಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ 2024ರ ಉದ್ಘಾಟನೆ ಹಾಗೂ ಮೊದಲ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Chennai Super Kings vs Royal Challengers Bengaluru) ಸವಾಲೆಸೆಯಲು ಸಜ್ಜಾಗಿದ್ದು, ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ. ಈ ಪಂದ್ಯದ ಮೂಲಕ ಭಾರತೀಯ ಕ್ರಿಕೆಟ್‌ನ ಅನುಭವಿ ಆಟಗಾರ ವಿರಾಟ್ ಕೊಹ್ಲಿ (Virat Kohli) ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮತ್ತೆ ಮರಳಲಿದ್ದಾರೆ. ಅತ್ತ ಸಿಎಸ್‌ಕೆ ಮಾಜಿ ನಾಯಕ ಎಂಎಸ್‌ ಧೋನಿ ಕೂಡಾ ವರ್ಷಗಳ ಬಳಿಕ ಕ್ರಿಕೆಟ್‌ ಆಡುತ್ತಿದ್ದಾರೆ.

ಜನವರಿ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ವಿರಾಟ್‌ ಕೊಹ್ಲಿ ಐಪಿಎಲ್ ಮೂಲಕ ಮೈದಾನಕ್ಕಿಳಿಯುತ್ತಿದ್ದು, ನಿರೀಕ್ಷೆ ಹೆಚ್ಚಿದೆ. ಕಳೆದ ವರ್ಷ ನಡೆದ ಐಪಿಎಲ್‌ ಪಂದ್ಯಾವಳಿಯ ನಂತರ, ಅವರು ಕೇವಲ ಎರಡು ಟಿ20 ಪಂದ್ಯಗಳಲ್ಲಿ ಮಾತ್ರ ಆಡಿದ್ದಾರೆ. ಈ ವರ್ಷದ ಜನವರಿ ತಿಂಗಳಲ್ಲಿ ಅಫ್ಘಾನಿಸ್ತಾನ ವಿರುದ್ಧ ಕಣಕ್ಕಿಳಿದಿದ್ದರು. ಸದ್ಯ ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ವಿರಾಟ್‌ ಅವರ ಸ್ಥಾನದ ಬಗ್ಗೆ ಅನುಮಾನಗಳಿವೆ. ಹೀಗಾಗಿ ಮಿಲಿಯನ್‌ ಡಾಲರ್‌ ಟೂರ್ನಿಯಲ್ಲಿ ಅವರ ಪ್ರದರ್ಶನವು ನಿರ್ಣಾಯಕವಾಗಲಿದೆ.

ಟೀಮ್ ಇಂಡಿಯಾದಲ್ಲಿ ವಿರಾಟ್‌ ಕೊಹ್ಲಿ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ಅದರಲ್ಲೂ ಟಿ20 ತಂಡದಲ್ಲಿ ಆರ್‌ಸಿಬಿ ಮಾಜಿ ನಾಯಕನ ಸ್ಥಾನ ಇನ್ನೂ ಗೊಂದಲದಲ್ಲೇ ಇದೆ. ಆದರೆ, ಆರ್‌ಸಿಬಿ ದಂತಕಥೆ ಹಾಗೂ ಕೊಹ್ಲಿಯ ಮಾಜಿ ಸಹ ಆಟಗಾರ ಕ್ರಿಸ್ ಗೇಲ್, ವಿರಾಟ್‌ ಕೊಹ್ಲಿ ವಿರಾಟ ಸಾಮರ್ಥ್ಯವನ್ನು ಎತ್ತಿ ತೋರಿಸಿದ್ದಾರೆ.

ಇದನ್ನೂ ಓದಿ | Photo: ಸಿಎಸ್‌ಕೆ ನಾಯಕನಾಗಿ ಎಂಎಸ್‌ ಧೋನಿ ಗೆದ್ದ ಆ ಐದು ಕಪ್‌ಗಳು; ಅದೃಷ್ಟದ ನಾಯಕನಿಗೆ ಸರಿಸಾಟಿ ಯಾರು?

ಸುದ್ದಿಸಂಸ್ಥೆ ಕ್ರಿಕ್‌ಬಜ್ ಜೊತೆ ಮಾತನಾಡಿದ ಕಿಸ್ ಗೇಲ್, 35 ವರ್ಷದ ಅನುಭವಿ ಆಟಗಾರ ಕೊಹ್ಲಿ ಅವರಲ್ಲಿ ಇನ್ನೂ ಸಾಕಷ್ಟು ಸಾಮರ್ಥ್ಯವಿದೆ ಎಂದಿದ್ದಾರೆ. ಮುಂದೆಯೂ ಸಾಕಷ್ಟು ವರ್ಷಗಳ ಕಾಲ ಎಲ್ಲಾ ಸ್ವರೂಪಗಳಲ್ಲಿ ಆಡಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.

“ವಿರಾಟ್ ಕೊಹ್ಲಿ ಇನ್ನೂ ಆಡುತ್ತಾರೆ, ತುಂಬಾ ಬಲವಾಗಿ ಮುಂದುವರೆಯುತ್ತಿದ್ದಾರೆ. ಕ್ರಿಕೆಟ್‌ನ ಎಲ್ಲಾ ಸ್ವರೂಪಗಳನ್ನು ಆಡಲು ಅವರಲ್ಲಿ ಇನ್ನೂ ಹುಮ್ಮಸ್ಸಿದೆ. ಅವರು ಇನ್ನೂ ಸಾಕಷ್ಟು ವರ್ಷಗಳ ಕಾಲ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ತಮಗಾಗಿ ಮತ್ತು ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದಂತೆ‌ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ,” ಎಂದು ಗೇಲ್‌ ಹೇಳಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಒಟ್ಟು 237 ಪಂದ್ಯಗಳಲ್ಲಿ ಆಡಿರುವ ವಿರಾಟ್‌, ಬರೋಬ್ಬರಿ 7263 ರನ್ ಗಳಿಸಿದ್ದಾರೆ. ಆ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.‌ ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸ್‌ ಪರ ಆಡಿದ ಏಕೈಕ ಆಟಗಾರ ವಿರಾಟ್‌ ಕೊಹ್ಲಿ ಎಂಬುದು ವಿಶೇಷ.

ಈ ಬಾರಿಯ ಐಪಿಎಲ್‌ನಲ್ಲಿ ಋತುರಾಜ್ ಗಾಯಕ್ವಾಡ್ ಸಿಎಸ್‌ಕೆ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಐಪಿಎಲ್ 2023ರ ನಂತರ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಧೋನಿ, ಇದೇ ಮೊದಲ ಬಾರಿ ಆಡುತ್ತಿದ್ದಾರೆ. ಇತ್ತ ಮೊದಲ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ, ಗೆಲುವಿನ ಆರಂಭವನ್ನು ಎದುರು ನೋಡುತ್ತಿದೆ.