Shubman Gill: ಮೆಲ್ಬೋರ್ನ್ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ?; ಇಲ್ಲಿದೆ ಅಸಲಿ ಕಾರಣ
Shubman Gill: ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ಅವರನ್ನು ಪ್ಲೇಯಿಂಗ್ 11ನಿಂದ ಕೈಬಿಡಲು ಕಾರಣ ಏನೆಂಬುದನ್ನು ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರು ಬಹಿರಂಗಪಡಿಸಿದ್ದಾರೆ.
ಗಾಯದ ಕಾರಣ ಪರ್ತ್ ಟೆಸ್ಟ್ಗೆ ಅಲಭ್ಯರಾಗಿದ್ದರೂ ಚೇತರಿಕೆಯ ನಂತರ ಅಡಿಲೇಡ್, ಬ್ರಿಸ್ಬೇನ್ ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಬ್ಯಾಟರ್ ಶುಭ್ಮನ್ ಗಿಲ್ ಅವರು ನಾಲ್ಕನೇ ಪಂದ್ಯಕ್ಕೆ ಅವಕಾಶ ವಂಚಿತರಾಗಲು ಕಾರಣ ಏನೆಂಬುದು ಇದೀಗ ಬಹಿರಂಗಗೊಂಡಿದೆ. ಗಿಲ್ ಕೈಬಿಟ್ಟಿದ್ದೇಕೆ ಎಂದು ಭಾರತದ ಸಹಾಯಕ ಕೋಚ್ ಅಭಿಷೇಕ್ ನಾಯರ್ ತಿಳಿಸಿದ್ದಾರೆ. ‘ಪಿಚ್ ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ಲೇಯಿಂಗ್ 11 ನಲ್ಲಿ ಬದಲಾವಣೆ ಮಾಡಲಾಗಿದೆ. ಈ ಪಿಚ್ ಸ್ಪಿನ್ನರ್ಗಳಿಗೆ ನೆರವಾಗುವ ದೃಷ್ಟಿಯಿಂದ ರವೀಂದ್ರ ಜಡೇಜಾ ಅವರೊಂದಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿ ಶುಭ್ಮನ್ ಗಿಲ್ ಅವರನ್ನು ಕೈಬಿಡಲಾಯಿತು’ ಎಂದಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯ ಆರಂಭಿಕ ಪಂದ್ಯಕ್ಕೂ ಮುನ್ನ ಗಿಲ್ ಗಾಯಗೊಂಡಿದ್ದರು. ಹೀಗಾಗಿ ಪರ್ತ್ ಟೆಸ್ಟ್ಗೆ ಗಿಲ್ ಅಲಭ್ಯರಾಗಿದ್ದರು. ಬಳಿಕ 2ನೇ ಟೆಸ್ಟ್ಗೂ ಮುನ್ನವೇ ಚೇತರಿಸಿಕೊಂಡರು. ಅಡಿಲೇಡ್ ಮತ್ತು ಬ್ರಿಸ್ಬೇನ್ ಟೆಸ್ಟ್ಗಳಲ್ಲಿ ಕಣಕ್ಕಿಳಿದಿದ್ದ ಪಂಜಾಬ್ ಪುತ್ತರ್, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. 2 ಪಂದ್ಯಗಳ ಮೂರು ಇನ್ನಿಂಗ್ಸ್ಗಳಲ್ಲಿ ಗಿಲ್ ಸಿಡಿಸಿದ್ದು ಕೇವಲ 60 ರನ್. ಮೆಲ್ಬೋರ್ನ್ ಟೆಸ್ಟ್ಗೆ ಅವಕಾಶ ಪಡೆದು ಮಿಂಚುವ ಭರವಸೆಯಲ್ಲಿದ್ದ ಗಿಲ್ಗೆ ಇದೀಗ ನಿರಾಸೆಯಾಗಿದೆ. ಪ್ಲೇಯಿಂಗ್ 11ನಲ್ಲಿ ಅವಕಾಶ ವಿಫಲವಾದ ಗಿಲ್, ಅಂತಿಮ ಹಾಗೂ ಐದನೇ ಟೆಸ್ಟ್ಗೂ ಬೆಂಚ್ ಕಾಯುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. ಆದರೆ ನಾಲ್ಕನೇ ಟೆಸ್ಟ್ಗೆ ಅವರನ್ನು ಕೈಬಿಟ್ಟಿದ್ದರ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.
ಅನಿರೀಕ್ಷಿತ ನಿರ್ಧಾರ ಎಂದ ನಾಯರ್
ಶುಭ್ಮನ್ ಗಿಲ್ ಅವರನ್ನು ಆಡುವ 11ರ ಬಳಗದಿಂದ ಕೈ ಬಿಟ್ಟಿರುವ ಕುರಿತು ಕ್ರಿಕೆಟ್ ವಲಯದಲ್ಲಿ ಎದ್ದಿರುವ ಗೊಂದಲಗಳಿಗೆ ಸಹಾಯಕ ಕೋಚ್ ಅಭಿಷೇಕ್ ನಾಯರ್ ಉತ್ತರಿಸಿದ್ದು, ಪಿಚ್ ಪರಿಸ್ಥಿತಿಗಳಿಂದ ತಂಡದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದು ಹೇಳಿಕೆ ನೀಡಿದ್ದಾರೆ. ‘ಇದೊಂದು ಅನಿರೀಕ್ಷಿತ ನಿರ್ಧಾರ. ಆದರೆ ಗಿಲ್ ಅವರನ್ನು ಬೆಂಚ್ಗೆ ಕೂರಿಸಲು ತೆಗೆದುಕೊಂಡ ನಿರ್ಧಾರ ತುಂಬಾ ಕಷ್ಟಕರವಾಯಿತು. ಆದರೆ ಪಿಚ್ ಪ್ರಕ್ರಿಯೆ, ಪಾರದರ್ಶಕತೆ, ಬೌಲಿಂಗ್ ದಾಳಿಯನ್ನು ಗಮನಿಸಿದಾಗ ವಾಷಿಂಗ್ಟನ್ ಸುಂದರ್ ಬೇಕು ಎಂದು ನಮಗೆ ಅನಿಸಿತು. ಫಾರ್ಮ್ನಲ್ಲಿರುವ ಟ್ರಾವಿಸ್ ಹೆಡ್ ಸೇರಿ ಪ್ರಮುಖ ಆಟಗಾರರ ಬ್ಯಾಟಿಂಗ್ ಲೈನಪ್ಗೆ ಸರಿಯಾದ ಬೌಲಿಂಗ್ ಅಟ್ಯಾಕ್ ನಿರ್ಮಿಸಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡೆವು’ ಎಂದು ಹೇಳಿದ್ದಾರೆ.
ಕೆಟ್ಟ ಪ್ರದರ್ಶನಕ್ಕೆ ಕೈಬಿಡಲಾಯಿತೇ?
‘ಟ್ರಾವಿಸ್ ಹೆಡ್ ಮತ್ತು ಅಲೆಕ್ಸ್ ಕ್ಯಾರಿ ರನ್ ಗಳಿಸುತ್ತಿರುವ ರೀತಿ ನೋಡಿದರೆ, ಸುಂದರ್ ನಮಗೆ ಜಡ್ಡು ಜೊತೆ ಒಗ್ಗಟ್ಟು ಪ್ರದರ್ಶಿಸಬಹುದು ಎಂದು ನಾವು ಭಾವಿಸಿದೆವು. ಹೀಗಾಗಿ ಅವರ ಆಯ್ಕೆ ಅಂತಿಮವಾಯಿತು. ಹಾಗಂತ ಗಿಲ್ ಕೈಬಿಟ್ಟಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ನಾಯರ್ ಹೇಳಿದ್ದಾರೆ. ಪಿಂಕ್ ಬಾಲ್ ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 28 ಮತ್ತು 31 ರನ್ ಗಳಿಸಿದ್ದ ಗಿಲ್, ಬ್ರಿಸ್ಟೇನ್ನಲ್ಲಿ ಕಣಕ್ಕಿಳಿದ ಏಕೈಕ ಇನ್ನಿಂಗ್ಸ್ನಲ್ಲಿ 1 ರನ್ ಮಾತ್ರ ಕಲೆ ಹಾಕಿದ್ದರು. ಕೆಟ್ಟ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಗಿಲ್ ಅವರು ಪ್ಲೇಯಿಂಗ್ 11 ನಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸುತ್ತಿವೆ. 2020ರ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಇದೇ ಪಿಚ್ಗಳಲ್ಲಿ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದರು.
ಪ್ರಸ್ತುತ ನಡೆಯುತ್ತಿರುವ ಮೆಲ್ಬೋರ್ನ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಕೆಎಲ್ ರಾಹುಲ್ ಆರಂಭಿಕ ಸ್ಥಾನದಿಂದ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಕ್ರಮವಾಗಿ 4 ಮತ್ತು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಇವರಲ್ಲದೆ, ಸುಂದರ್, ಜಡೇಜಾ ಮತ್ತು ನಿತೀಶ್ ರೆಡ್ಡಿ ಬ್ಯಾಟ್ ಮಾಡಲಿದ್ದಾರೆ.