ವಿರಾಟ್ ಕೊಹ್ಲಿ ಭೇಟಿಗೆ ಕೋಲ್ಕತ್ತಾ ಪಿಚ್‌ಗೆ ನುಗ್ಗಿ ಬಂದ ಅಭಿಮಾನಿ; ಕಾಲಿಗೆ ಬಿದ್ದು ತಬ್ಬಿಕೊಂಡು ಖುಷಿಪಟ್ಟ ಫ್ಯಾನ್
ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಬಂದು ತನ್ನ ಆರಾಧ್ಯ ದೇವರನ್ನು ಭೇಟಿಯಾಗಿದ್ದಾರೆ. ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳ ನಡುವಿನ ಪಂದ್ಯದ ವೇಳೆ ಘಟನೆ ನಡೆದಿದ್ದು, ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನಕ್ಕೆ ನುಗ್ಗಿದ ಅಭಿಮಾನಿ ಕೊಹ್ಲಿಯನ್ನು ತಬ್ಬಿಕೊಂಡಿದ್ದಾನೆ.
ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders vs Royal Challengers Bengaluru) ತಂಡವನ್ನು ಅವರದ್ದೇ ತವರಲ್ಲಿ ಮಣಿಸಿ, ಸೀಸನ್ 18ರಲ್ಲಿ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 59 ರನ್ ಗಳಿಸುವ ಮೂಲಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು. ಈ ನಡುವೆ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ ಘಟನೆಯೂ ನಡೆದಿದೆ.
ಆರ್‌ಸಿಬಿ ತಂಡದ ಚೇಸಿಂಗ್ ವೇಳೆ ಈ ಘಟನೆ ನಡೆದಿದೆ. 13ನೇ ಓವರ್ ವೇಳೆ ಅಭಿಮಾನಿಯೊಬ್ಬ ತನ್ನ ಆರಾಧ್ಯ ದೈವ ವಿರಾಟ್ ಕೊಹ್ಲಿಯನ್ನು ಭೇಟಿಯಾಗಲು ಮೈದಾನದ ಬಿಗಿ ಭದ್ರತೆಯನ್ನು ಉಲ್ಲಂಘಿಸಿದ್ದಾನೆ. ಮೈದಾನದ ಪಿಚ್‌ಗೆ ನುಗ್ಗಿ ಬಂದ ಆತ, ಬ್ಯಾಟ್ ಹಿಡಿದು ನಿಂತಿದ್ದ ವಿರಾಟ್ ಕೊಹ್ಲಿಯ ಪಾದಗಳನ್ನು ಮುಟ್ಟಿದ್ದಾನೆ. ಅಷ್ಟರಲ್ಲಿ ಮೈದಾನದ ಭದ್ರತಾ ಸಿಬ್ಬಂದಿ ಕೂಡಾ ತ್ವರಿತವಾಗಿ ಅಭಿಮಾನಿಯತ್ತ ಧಾವಿಸಿದ್ದಾರೆ. ವಿರಾಟ್ ಅವನನ್ನು ತಬ್ಬಿಕೊಂಡಿದ್ದ ಅಭಿಮಾನಿಯನ್ನು ಬಿಡಿಸಿ ಮೈದಾನದಿಂದ ಆಚೆಗೆ ಕರೆತಂದಿದ್ದಾರೆ.
ಭದ್ರತಾ ಅಧಿಕಾರಿಗಳು ಅಭಿಮಾನಿಯನ್ನು ಕರೆದೊಯ್ಯಲು ಹತ್ತಿರ ಬಂದಾಗ, ಆತನೊಂದಿಗೆ ಸೌಮ್ಯವಾಗಿ ನಡೆದುಕೊಳ್ಳುವಂತೆ ಮತ್ತು ಆತನಿಗೆ ತೊಂದರೆ ಮಾಡದಂತೆ ಕೊಹ್ಲಿ ಕೇಳಿಕೊಂಡಿದ್ದಾರೆ.
ಇಲ್ಲಿದೆ ವಿಡಿಯೋ
ಆರ್‌ಸಿಬಿ ಅಭಿಮಾನಿಗಳ ಘೋಷಣೆ
ಪಂದ್ಯವು ಕೆಕೆಆರ್ ತವರು ಮೈದಾನದಲ್ಲಿ ನಡೆದರೂ, ಆರ್‌ಸಿಬಿ ಹಾಗೂ ಕೊಹ್ಲಿ ಅಭಿಮಾನಿಗಳೇ ಹೆಚ್ಚಿದ್ದಂತೆ ಭಾಸವಾಗುತ್ತಿತ್ತು. ಇದು ಐಪಿಎಲ್‌ನ 18ನೇ ಆವೃತ್ತಿ. ಮತ್ತೊಂದೆಡೆ ಕೊಹ್ಲಿಯ ಜೆರ್ಸಿ ಸಂಖ್ಯೆ ಕೂಡಾ 18. ಪ್ರಸಕ್ತ ಆವೃತ್ತಿಯ ಋತುವಿನ ಆರಂಭಿಕ ಪಂದ್ಯದ ಸಮಯದಲ್ಲಿ ಕ್ರೀಡಾಂಗಣದಲ್ಲಿ ಜೋರಾಗಿ 'ಆರ್‌ಸಿಬಿ ಆರ್‌ಸಿಬಿ' ಎಂಬ ಘೋಷಣೆಗಳು ಕೇಳಿಬಂದವು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, 174 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಚೇಸಿಂಗ್ ಮಾಡಿದ ಆರ್‌ಸಿಬಿ 16.2 ಓವರ್‌ಗಳಲ್ಲೇ 3 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಪವರ್‌ಪ್ಲೇನಲ್ಲಿ 75ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಆರ್‌ಸಿಬಿಗೆ ಉತ್ತಮ ಆರಂಭ ನೀಡಿದರು. ಆರ್‌ಸಿಬಿ ಪರ ತಮ್ಮ ಮೊದಲ ಪಂದ್ಯವಾಡಿದ ಫಿಲ್ ಸಾಲ್ಟ್ 31 ಎಸೆತಗಳಲ್ಲಿ 56 ರನ್ ಗಳಿಸಿದರು. ಕೊಹ್ಲಿ 36 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಗಳ ಸಹಾಯದಿಂದ 59 ರನ್ ಗಳಿಸಿದರು. ಈ ವೇಳೆ ಹಲವು ದಾಖಲೆಗಳನ್ನು ನಿರ್ಮಿಸಿದರು.
ನಾಯಕ ರಜತ್ ಪಾಟೀದಾರ್ 16 ಎಸೆತಗಳಲ್ಲಿ 34 ರನ್ ಗಳಿಸಿದರು. ತಂಡದ ಪರ ಬೌಲಿಂಗ್‌ನಲ್ಲಿ ಕೃನಾಲ್ ಪಾಂಡ್ಯ 29 ರನ್ ಬಿಟ್ಟುಕೊಟ್ಟು 3 ಪ್ರಮುಖ ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
