ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್​ಗೆ 10 ಆಟಗಾರರು ಖಚಿತ; ಬಿಸಿಸಿಐ ಸಭೆಯಲ್ಲಿ ಚರ್ಚಿಸಿದ ಪ್ರಮುಖ ಅಂಶಗಳು, 15 ಸದಸ್ಯರ ಸಂಭಾವ್ಯ ತಂಡ ಇಲ್ಲಿದೆ

ಟಿ20 ವಿಶ್ವಕಪ್​ಗೆ 10 ಆಟಗಾರರು ಖಚಿತ; ಬಿಸಿಸಿಐ ಸಭೆಯಲ್ಲಿ ಚರ್ಚಿಸಿದ ಪ್ರಮುಖ ಅಂಶಗಳು, 15 ಸದಸ್ಯರ ಸಂಭಾವ್ಯ ತಂಡ ಇಲ್ಲಿದೆ

T20 World Cup 2024: ಟಿ20 ವಿಶ್ವಕಪ್​ಗೆ ಸಂಬಂಧಿಸಿ ನಾಯಕ ರೋಹಿತ್​ ಶರ್ಮಾ, ಕೋಚ್​ ರಾಹುಲ್ ದ್ರಾವಿಡ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಸಭೆಯಲ್ಲಿ ಚರ್ಚಿಸಿದ ಅಂಶಗಳ ಕುರಿತು ಯಾವುವು ಎಂಬುದನ್ನು ಮುಂದೆ ನೋಡೋಣ.

ಐಸಿಸಿ ಟಿ20 ವಿಶ್ವಕಪ್​ಗೆ ಭಾರತ ಸಂಭಾವ್ಯ ತಂಡ.
ಐಸಿಸಿ ಟಿ20 ವಿಶ್ವಕಪ್​ಗೆ ಭಾರತ ಸಂಭಾವ್ಯ ತಂಡ.

ಜೂನ್​ 1ರಿಂದ ಐಸಿಸಿ 2024ರ ಟಿ20 ಕ್ರಿಕೆಟ್​ ವಿಶ್ವಕಪ್​ (T20 World Cup 2024) ಪ್ರಾರಂಭವಾಗಲಿದ್ದು, ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ಜರುಗಲಿದೆ. ಜೂನ್ 5ರಂದು ಐರ್ಲೆಂಡ್ ಎದುರು ಕಣಕ್ಕಿಳಿಯುವ ಮೂಲಕ ರೋಹಿತ್​ ಶರ್ಮಾ (Rohit Sharma) ನೇತೃತ್ವದ ಭಾರತ ಅಭಿಯಾನ ಆರಂಭಿಸಲಿದೆ. 2023ರ ಒಡಿಐ ಕ್ರಿಕೆಟ್ ವಿಶ್ವಕಪ್​ ಫೈನಲ್​ ಸೋಲಿನ ನಂತರ ಮೆನ್ ಇನ್ ಬ್ಲ್ಯೂ ಟಿ20 ವಿಶ್ವಕಪ್ ಗೆಲ್ಲುವ ಕನಸಿನಲ್ಲಿದೆ. ಇತ್ತೀಚೆಗೆ ಟಿ20 ವಿಶ್ವಕಪ್​ಗೆ 15 ಸದಸ್ಯರ ಭಾರತ ತಂಡವನ್ನು ಕಟ್ಟುವ ಕುರಿತಂತೆ ಮಹತ್ವದ ಸಭೆ ನಡೆದಿದ್ದು, ಹಲವು ನಿರ್ಧಾರ ಕೈಗೊಳ್ಳಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಕಳೆದ ವಾರ ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ನಾಯಕ ರೋಹಿತ್​ ಶರ್ಮಾ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್​ ಮಹತ್ವದ ಸಭೆ ನಡೆಸಿದ್ದರು. ಟಿ20 ವಿಶ್ವಕಪ್​ಗೆ ಯಾರನ್ನೆಲ್ಲಾ ಆಯ್ಕೆ ಮಾಡಬೇಕು? ಯಾರನ್ನು ಕೈ ಬಿಡಬೇಕು ಎನ್ನುವುದರ ಕುರಿತು ಸುದೀರ್ಘ ಚರ್ಚೆ ನಡೆಯಿತು. ಈ ಸಭೆಯಲ್ಲಿ ಕೆಲವು ಅಚ್ಚರಿಯ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆರಂಭಿಕರು, ಆಲ್​ರೌಂಡರ್ಸ್ ಮತ್ತು ಯುವ ಆಟಗಾರರ ಪೈಕಿ ಯಾರಿಗೆ ತಂಡದಲ್ಲಿ ಸ್ಥಾನ ನೀಡಬೇಕೆಂಬ ಚಿಂತನೆ ನಡೆದಿದೆ.

ಆರಂಭಿಕ ಸ್ಥಾನಕ್ಕೆ ವಿರಾಟ್ ಕೊಹ್ಲಿ

ಐಪಿಎಲ್​ ಆರಂಭದಲ್ಲಿ ವಿರಾಟ್ ಕೊಹ್ಲಿ ಸ್ಟ್ರೈಕ್​ರೇಟ್​ ಬಗ್ಗೆ ಪ್ರಶ್ನೆ ಎದ್ದಿತ್ತು. ಕೊಹ್ಲಿಗೆ ಅವಕಾಶ ನೀಡಬಾರದೆಂದು ಹಲವರು ಬಿಸಿಸಿಐಗೆ ಮನವಿ ಮಾಡಿದ್ದರು. ಆದರೆ ಆರ್​ಸಿಬಿ ಪರ ಆರಂಭಿಕನಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೊಹ್ಲಿಯನ್ನು ಟಿ20 ವಿಶ್ವಕಪ್​ಗೆ ರೋಹಿತ್​ ಶರ್ಮಾ ಜತೆ ಇನ್ನಿಂಗ್ಸ್​ ಆರಂಭಿಸಬೇಕೆಂದು ನಿರ್ಧಾರ ಕೈಗೊಳ್ಳಲಾಗಿದೆ. ಈ ಸ್ಥಾನಕ್ಕೆ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಆದರೆ ಯಶಸ್ವಿ ವಿಫಲರಾದ ಕಾರಣ ಗಿಲ್​ ಅವರನ್ನು ಬ್ಯಾಕಪ್ ಓಪನರ್ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

ರಿಯಾನ್ ಪರಾಗ್​ ಬಗ್ಗೆ ಸಕರಾತ್ಮಕ ಚರ್ಚೆ

ಪ್ರಸಕ್ತ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡದ ರಿಯಾನ್ ಪರಾಗ್​ ಕುರಿತು ಟಿ20 ವಿಶ್ವಕಪ್ ಕುರಿತ ಸಭೆಯಲ್ಲಿ ಸಕಾರಾತ್ಮಕವಾಗಿ ಚರ್ಚಿಸಲಾಗಿದೆ. 4ನೇ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಆರೆಂಜ್ ಕ್ಯಾಪ್ ರೇಸ್​​ನಲ್ಲಿರುವ ರಿಯಾನ್ ಪರಾಗ್ 318 ರನ್ ಗಳಿಸಿ 3ನೇ ಸ್ಥಾನದಲ್ಲಿದ್ದಾರೆ. ಆಡಿದ 7 ಪಂದ್ಯಗಳಲ್ಲಿ 3 ಅರ್ಧಶತಕಗಳನ್ನೂ ಸಿಡಿಸಿದ್ದಾರೆ. 63.60ರ ಬ್ಯಾಟಿಂಗ್ ಸರಾಸರಿ ಮತ್ತು 161.42ರ ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಉಳಿದ ಪಂದ್ಯಗಳಲ್ಲಿ ಇದೇ ಪ್ರದರ್ಶನ ನೀಡಿದರೆ, ಆಯ್ಕೆ ಮಾಡಬಹುದು ಎಂಬ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ.

ಹಾರ್ದಿಕ್​ಗೆ ಷರತ್ತು ಹಾಕಿದ ಬಿಸಿಸಿಐ

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್​ ಪಾಂಡ್ಯಗೆ ಬಿಸಿಸಿಐ ಷರತ್ತು ವಿಧಿಸಿದೆ. ಮುಂಬರುವ ಪಂದ್ಯಗಳಲ್ಲಿ ತನ್ನ ಬೌಲಿಂಗ್​​ನಲ್ಲಿ ಸಾಮರ್ಥ್ಯ ಸಾಬೀತುಪಡಿಸಿದರಷ್ಟೆ, ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ, ಸೂಚಿಸಿದೆ. ಒಂದ್ವೇಳೆ ಬೌಲಿಂಗ್​ನಲ್ಲಿ ವಿಫಲರಾದರೆ, ತಂಡದಲ್ಲಿ ಸ್ಥಾನ ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಆಲ್​ರೌಂಡರ್​ ಪಟ್ಟಿಗೆ ಶಿವಂ ದುಬೆ ಆಯ್ಕೆಯ ಕುರಿತು ಚರ್ಚೆ ನಡೆದಿದೆ. ಆದರೆ, ಸಿಎಸ್​ಕೆ ತಂಡದಲ್ಲಿ ಕೇವಲ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಬಳಸಿಕೊಳ್ಳುತ್ತಿರುವ ಕಾರಣ ಬೌಲಿಂಗ್ ಮಾಡುತ್ತಿಲ್ಲ. ಹಾಗಾಗಿ, ಆಯ್ಕೆದಾರರು ದುಬೆ ಆಯ್ಕೆಗೆ ಹಿಂದೇಟು ಹಾಕಿದ್ದಾರೆ.

ವಿಕೆಟ್ ಕೀಪರ್​ ಮೊದಲ ಆಯ್ಕೆ ಯಾರು?

ಇದರ ಮಧ್ಯೆ ವಿಕೆಟ್​ ಕೀಪರ್ ಸ್ಥಾನಕ್ಕೆ ಆರು ಮಂದಿ ನಡುವೆ ಪೈಪೋಟಿ ನಡೆಯುತ್ತಿರುವ ಕುರಿತು ಸಹ ಚರ್ಚೆ ನಡೆಯಿತು. ಜಿತೇಶ್ ಶರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್​ ನಡುವೆ ಪೈಪೋಟಿ ಇದೆ. ಆದರೆ ಈ ಎಲ್ಲರ ಪೈಕಿ ಮೊದಲ ಆದ್ಯತೆ ರಿಷಭ್ ಪಂತ್​ಗೆ ನೀಡಲು ಚರ್ಚೆ ನಡೆದಿದೆ. ದಿನೇಶ್ ಕಾರ್ತಿಕ್, ಐಪಿಎಲ್​​ನಲ್ಲಿ ಸ್ಫೋಟಕ ಫಾರ್ಮ್‌ನ ಹೊರತಾಗಿಯೂ, ಮೆಗಾ ಟೂರ್ನಮೆಂಟ್‌ಗೆ ಆಯ್ಕೆಯಾಗುವ ಲೆಕ್ಕಾಚಾರದಲ್ಲಿಲ್ಲ.

ಐಪಿಎಲ್​ನಲ್ಲಿ ಅಬ್ಬರಿಸಿದವರ ಕುರಿತು ಚರ್ಚೆ

ಸಭೆಯಲ್ಲಿ ಕೇವಲ ರಿಯಾನ್ ಪರಾಗ್ ಕುರಿತು ಮಾತ್ರವಲ್ಲ, ಸನ್​ರೈಸರ್ಸ್ ಹೈದರಾಬಾದ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಲಕ್ನೋ ಸೂಪರ್​ ಜೈಂಟ್ಸ್ ವೇಗಿ ಮಯಾಂಕ್ ಯಾದವ್ ಕುರಿತು ಸಹ ಚರ್ಚೆ ನಡೆದಿದೆ. ಆದರೆ ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಹೀಗಾಗಿ ಈ ಇಬ್ಬರು ಮತ್ತೊಮ್ಮೆ ಭಾರತ ತಂಡದಲ್ಲಿ ಅವಕಾಶ ಪಡೆಯುವುದು ಅನುಮಾನವಾಗಿದೆ. ಶ್ರೇಯಸ್ ಅಯ್ಯರ್ ಕೂಡ ತಂಡದ ಭಾಗವಾಗುವುದು ಅನುಮಾನ.

10 ಆಟಗಾರರು ಖಚಿತ ಮತ್ತು ಸಂಭಾವ್ಯ ತಂಡ

ಪಿಟಿಐ ವರದಿ ಪ್ರಕಾರ, ಟಿ20 ವಿಶ್ವಕಪ್ 2024 ತಂಡಕ್ಕೆ ಖಚಿತವಾಗಿರುವ 10 ಆಟಗಾರರಲ್ಲಿ ರಿಷಭ್​ ಪಂತ್ ಒಬ್ಬರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ (ಉತ್ತಮ ಬೌಲಿಂಗ್ ಮಾಡಿದರೆ ಆಯ್ಕೆ ಖಚಿತ) ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದು ವರದಿ ಹೇಳಿದೆ. ಇನ್ನು ಉಳಿದ ಐದು ಸ್ಥಾನಗಳಿಗೆ ಚರ್ಚೆ ಮುಂದುವರೆದಿದೆ.

ಶುಭ್ಮನ್ ಗಿಲ್ (ಬ್ಯಾಕಪ್ ಓಪನರ್​), ರವಿ ಬಿಷ್ಣೋಯ್ (ಬ್ಯಾಕಪ್ ಸ್ಪಿನ್ನರ್​), ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ಬ್ಯಾಕಪ್ ವಿಕೆಟ್ ಕೀಪರ್) ಮತ್ತು ಮಯಾಂಕ್ ಯಾದವ್ (ಬ್ಯಾಕಪ್ ಪೇಸರ್​) ಇವರನ್ನು ಆಯ್ಕೆ ಮಾಡಲು ಆಯ್ಕೆದಾರರು ಚಿಂತನೆ ನಡೆಸಿದ್ದಾರೆ. ಅಲ್ಲದೆ, ಕೆಎಲ್ ರಾಹುಲ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಚರ್ಚೆ ನಡೆಸುತ್ತಿದ್ದಾರೆ. ವಿಶ್ವಕಪ್​ಗೆ ಭಾರತ ತಂಡವನ್ನು ಏಪ್ರಿಲ್ ಕೊನೆಯ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಮೇ 1ರೊಳಗೆ ತಮ್ಮ 15 ಜನರ ತಂಡ ಸಲ್ಲಿಸಬೇಕಿದೆ. ಜತೆಗೆ ಮೇ 25ರೊಳಗೆ ತಂಡವನ್ನು ಬದಲಿಸಲು ಅವಕಾಶ ನೀಡಲಾಗಿದೆ.

IPL_Entry_Point