ಟಿ20ಐನಲ್ಲಿ 200 ಸಿಕ್ಸರ್, ನಾಯಕನಾಗಿ ಅಧಿಕ ಗೆಲುವು; ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಮುರಿಯಲಿರುವ 6 ದಾಖಲೆಗಳು
Rohit Sharma Records: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಮುರಿಯಲಿರುವ 6 ದಾಖಲೆಗಳ ಪಟ್ಟಿಯನ್ನು ಈ ಮುಂದೆ ನೋಡೋಣ.
Rohit Sharma Records: ಜೂನ್ 1 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024ರಲ್ಲಿ ರೋಹಿತ್ ಶರ್ಮಾ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ವರ್ಷ ಚುಟುಕು ಕ್ರಿಕೆಟ್ನ ಮೆಗಾ ಈವೆಂಟ್‌ನಲ್ಲಿ ಒಟ್ಟು 20 ತಂಡಗಳು ದೊಡ್ಡ ಬಹುಮಾನಕ್ಕಾಗಿ ಹೋರಾಡಲಿವೆ. ಟಿ20 ವಿಶ್ವಕಪ್‌ನ ಹಿಂದಿನ ಎಲ್ಲಾ 8 ಆವೃತ್ತಿಗಳಲ್ಲಿ ಆಡಿರುವ ಭಾರತದ ನಾಯಕ ಇದೀಗ 9ನೇ ಆವೃತ್ತಿಯಲ್ಲೂ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.
2007ರಲ್ಲಿ ಎಂಎಸ್ ಧೋನಿ ನಾಯಕತ್ವದ ಅಡಿಯಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಭಾಗವಾಗಿದ್ದ ಹಿಟ್ಮ್ಯಾನ್, ಮತ್ತೊಂದು ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಅಭಿಯಾನದ ಪ್ರಾರಂಭಕ್ಕೂ ಮುನ್ನ ರೋಹಿತ್ ಶರ್ಮಾ ಮುರಿಯಬಹುದಾದ ಐದು ದಾಖಲೆಗಳ ನೋಟ ಇಲ್ಲಿದೆ.
ಎರಡು ಟಿ20 ವಿಶ್ವಕಪ್ ಗೆದ್ದ ಮೊದಲ ಭಾರತೀಯ
1st Indian to Win 2 T20 World Cups: 2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಏಕೈಕ ಸಕ್ರಿಯ ಸದಸ್ಯರಾಗಿರುವ ರೋಹಿತ್, ಈ ಬಾರಿ ಟ್ರೋಫಿ ಗೆದ್ದರೆ, 2 ಟಿ20 ವಿಶ್ವಕಪ್ ಜಯಿಸಿದ ಮೊದಲ ಭಾರತೀಯ ಆಟಗಾರ ಎನಿಸಲಿದ್ದಾರೆ. 2007ರ ಟಿ20 ವಿಶ್ವಕಪ್ ಆಡಿದ್ದ ರೋಹಿತ್, 9ನೇ ಆವೃತ್ತಿಯಲ್ಲೂ ಆಡುತ್ತಿದ್ದಾರೆ.
ಟಿ20ಐಗಳಲ್ಲಿ 200 ಸಿಕ್ಸರ್‌ಗಳು
200 sixes in T20Is: ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವ ದಾಖಲೆಯನ್ನು ರೋಹಿತ್ ಹೊಂದಿದ್ದಾರೆ. ಈವರೆಗೆ ಆಡಿದ 151 ಪಂದ್ಯಗಳಲ್ಲಿ 190 ಸಿಕ್ಸರ್ ಚಚ್ಚಿದ್ದಾರೆ. ಟಿ20 ವಿಶ್ವಕಪ್ 2024ರಲ್ಲಿ 10 ಸಿಕ್ಸರ್ ಗಳಿಸಿದರೆ, 200 ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್
600 Sixes in International Cricket: ರೋಹಿತ್ ಭಾರತದ ಪರ ಎಲ್ಲಾ ಫಾರ್ಮ್ಯಾಟ್ಗಳಲ್ಲಿ 472 ಪಂದ್ಯಗಳ ಪೈಕಿ 597 ಸಿಕ್ಸರ್ ಹೊಡೆದಿದ್ದಾರೆ. ಇನ್ನು 3 ಸಿಕ್ಸರ್ ಚಚ್ಚಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳನ್ನು ಹೊಡೆದ ವಿಶ್ವದ ಮೊದಲ ಕ್ರಿಕೆಟಿಗನಾಗಲಿದ್ದಾರೆ. ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟರ್ ಕ್ರಿಸ್ ಗೇಲ್ 483 ಪಂದ್ಯಗಳಿಂದ 553 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಟಿ20ಐಗಳಲ್ಲಿ ಭಾರತದ ನಾಯಕನಾಗಿ ಹೆಚ್ಚಿನ ಗೆಲುವು
Most wins as India captain in T20Is: ರೋಹಿತ್ ಶರ್ಮಾ ಇದುವರೆಗೆ 54 ಟಿ20ಐಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ 41ರಲ್ಲಿ ಜಯಿಸಿದ್ದಾರೆ. ಎಂಎಸ್ ಧೋನಿ ಕೂಡ ಅಷ್ಟೇ ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಇನ್ನೊಂದು ಗೆಲುವು ಸಾಧಿಸಿದರೆ ಧೋನಿಯನ್ನು ಹಿಂದಿಕ್ಕಿ ಭಾರತದ ನಾಯಕನಾಗಿ ದಾಖಲೆ ಬರೆಯಲಿದ್ದಾರೆ.
ಟಿ20ಐನಲ್ಲಿ ಅತ್ಯಧಿಕ ಶತಕಗಳು
Most 100s in T20Is: ರೋಹಿತ್ ಇದುವರೆಗೆ ಆಡಿದ 151 ಟಿ20ಐಗಳಲ್ಲಿ 5 ಶತಕ ಬಾರಿಸಿದ್ದಾರೆ. ಇದು ಆಟದ ಕಡಿಮೆ ಸ್ವರೂಪದಲ್ಲಿ ಅತ್ಯಧಿಕ ಸೆಂಚುರಿ ಬಾರಿಸಿದ ಜಂಟಿ ದಾಖಲೆಯನ್ನು ಗ್ಲೆನ್ ಮ್ಯಾಕ್ಸ್ವೆಲ್ ಜತೆಗೆ ಹಂಚಿಕೊಂಡಿದ್ದಾರೆ. ಇಬ್ಬರು ಸಹ ತಲಾ 5 ಶತಕ ಬಾರಿಸಿದ್ದಾರೆ. ಇನ್ನೊಂದು ಶತಕ ದಾಖಲಿಸಿದರೆ, ನಂಬರ್ 1 ಸ್ಥಾನಕ್ಕೇರಲಿದ್ದಾರೆ.
ಟಿ20ಐನಲ್ಲಿ 4000 ರನ್ಗಳು
4000 runs in T20I: ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಸಾವಿರ ರನ್ ಗಳಿಸಿದ ವಿಶ್ವದ ಮೂರನೇ ಹಾಗೂ ಭಾರತದ ಎರಡನೇ ಆಟಗಾರನಾಗಲು ಸಜ್ಜಾಗಿದ್ದಾರೆ. ಈ ಸಾಧನೆಗೆ ರೋಹಿತ್ಗೆ ಕೇವಲ 26 ರನ್ಗಳ ಅಗತ್ಯ ಇದೆ. ಪ್ರಸ್ತುತ 151 ಟಿ20ಐ ಪಂದ್ಯಗಳಲ್ಲಿ 3974 ರನ್ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿದ್ದಾರೆ. ನಂತರ ಬಾಬರ್ ಅಜಮ್ ಈ ದಾಖಲೆ ಬರೆದ ಎರಡನೇ ಆಟಗಾರ ಆಗಿದ್ದಾರೆ.