ಆರ್ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು 3 ಕಾರಣಗಳು; ಆಟಗಾರರು ಮ್ಯಾಜಿಕ್ ನಡೆಸಿದರೆ 'ಹೊಸ ಅಧ್ಯಾಯ' ಆರಂಭ ಖಚಿತ
Royal challengers bengaluru: ರಾಯಲ್ ಚಾಲೆಂಜರ್ಸ್ ಬೆಂಗಳೂರು 17ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ಲೇಆಫ್ ಪ್ರವೇಶಿಸಲು ಈ ಮೂರು ಅಂಶಗಳನ್ನು ಅನುಕರಿಸಬೇಕಿದೆ. ವಿವರ ಇಲ್ಲಿದೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಕಷ್ಟದಲ್ಲಿದೆ. ಪ್ಲೇಆಫ್ ಹಾದಿ ಸುಗಮಗೊಳಿಸಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ರೆಡ್ ಆರ್ಮಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಉಳಿದ ಪಂದ್ಯಗಳಲ್ಲಿ ಕಣಕ್ಕಿಳಿದರೆ, ದೊಡ್ಡ ಗೆಲುವುಗಳನ್ನೇ ಸಾಧಿಸಲಿದೆ. ಆ ಮೂಲಕ ಪ್ಲೇಆಫ್ ಕನಸನ್ನು ನನಸು ಮಾಡಿಕೊಳ್ಳಲಿದೆ.
6 ಪಂದ್ಯಗಳಲ್ಲಿ 5 ಸೋಲು, 1 ಗೆಲುವು ದಾಖಲಿಸಿದೆ. ಏಪ್ರಿಲ್ 11ರಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 197 ರನ್ಗಳನ್ನು ರಕ್ಷಿಸಿಕೊಳ್ಳಲು ವಿಫಲವಾದ ಆರ್ಸಿಬಿ, ಅದಕ್ಕೂ ಹಿಂದಿನ ಪಂದ್ಯಗಳಲ್ಲೂ 180+ ರನ್ಗಳನ್ನು ಡಿಫೆಂಡ್ ಮಾಡಿಕೊಳ್ಳಲು ಎಡವಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 16 ಓವರ್‌ಗಳಲ್ಲಿ 182 ರನ್ ಬಿಟ್ಟುಕೊಟ್ಟಿತ್ತು. ಆದರೆ ಇದೇ ಸ್ಕೋರ್ ಬೆನ್ನಟ್ಟಲು ವೈಫಲ್ಯ ಅನುಭವಿಸಿತ್ತು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 181 ರನ್ ಗುರಿ ಮುಟ್ಟಲು ವಿಫಲವಾಗಿತ್ತು. ಕೊನೆಯ ಓವರ್ ಥ್ರಿಲ್ಲರ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 178 ರನ್ ಗಳಿಸಿ ಗೆಲುವು ಸಾಧಿಸಿತ್ತು. ಆದರೆ ಐದು ಸೋಲಿನ ನಂತರ ಆರ್ಸಿಬಿ ಪ್ಲೇಆಫ್‌ಗೆ ಪ್ರವೇಶಿಸಬಹುದೇ ಎಂಬ ಪ್ರಶ್ನೆ ಎದ್ದಿದೆ. ಇಂತಹ ಸಂದರ್ಭದಲ್ಲಿ ಸ್ವಯಂ-ನಂಬಿಕೆಯು ತಂಡದ ಪ್ರಮುಖ ಕೀವರ್ಡ್ ಆಗಿದೆ. ಪ್ಲೇಆಫ್ ಪ್ರವೇಶಿಸುವ ಅವಕಾಶ ಇನ್ನೂ ಇದೆ. ಅದಕ್ಕಾಗಿ ಈ ಮೂರು ಅಂಶಗಳನ್ನು ಅನುಕರಿಸಿದರೆ ತಂಡಕ್ಕೆ ನೆರವಾಗುವ ಸಾಧ್ಯತೆ ಇದೆ.
1. 2016ರ ಋತುವಿನಿಂದ ಸ್ಫೂರ್ತಿ ಪಡೆಯಿರಿ!
2016ರ ಆವೃತ್ತಿಯಲ್ಲಿ ಆರ್ಸಿಬಿ ಎದುರಿಸಿದ ಪರಿಸ್ಥಿತಿಯನ್ನೇ ಐಪಿಎಲ್ 2024ರಲ್ಲೂ ಎದುರಿಸುತ್ತಿದೆ. ಅಂದು 7 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿತ್ತು. ಆ ಬಳಿಕ ಗೇರ್ ಬದಲಿಸಿದ ಆರ್ಸಿಬಿ, ಉಳಿದ 7ರಲ್ಲಿ 6 ಗೆದ್ದು ಪ್ಲೇಆಫ್ ಪ್ರವೇಶಿಸಿತ್ತು. ಅಲ್ಲದೆ, ಫೈನಲ್ಗೂ ಹೋಗಿತ್ತು. ಆತ್ಮವಿಶ್ವಾಸ ಇದ್ದರೆ ಮಾತ್ರ ಅಸಾಧ್ಯವನ್ನೂ ಸಾಧಿಸಲು ಸಾಧ್ಯ ಎಂಬುದಕ್ಕೆ 2016 ರಲ್ಲಿ ಆರ್ಸಿಬಿ ನೀಡಿದ್ದ ಪ್ರದರ್ಶನವೇ ಸಾಕ್ಷಿ. ಇದೇ ಆತ್ಮವಿಶ್ವಾಸ ಬೆಳೆಸಿಕೊಂಡರೆ 2024ರ ಐಪಿಎಲ್ನಲ್ಲೂ ಆರ್ಸಿಬಿ ಪ್ಲೇಆಫ್ ಪ್ರವೇಶಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇದರ ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ
2. ಕೊಹ್ಲಿ, ಡಿಕೆಗೆ ಬೇಕು ಸಾಥ್
ವಿರಾಟ್ ಕೊಹ್ಲಿ 2016ರ ಋತುವಿನಲ್ಲಿ 973 ರನ್ ಗಳಿಸಿದ್ದರು. ಈ ಬಾರಿಯೂ ಅವರು ಅದೇ ರೀತಿಯ ಫಾರ್ಮ್ನಲ್ಲಿದ್ದಾರೆ. ಮಾಜಿ ನಾಯಕ ಆರು ಪಂದ್ಯಗಳಲ್ಲಿ 141.77 ಸ್ಟ್ರೈಕ್ ರೇಟ್‌ನಲ್ಲಿ 1 ಶತಕ ಮತ್ತು 2 ಅರ್ಧಶತಕ ಸಹಿತ 319 ರನ್ ಗಳಿಸಿದ್ದಾರೆ. ದಿನೇಶ್ ಕಾರ್ತಿಕ್ ತಮ್ಮ ಫಿನಿಶಿಂಗ್ ಕೌಶಲ್ಯದೊಂದಿಗೆ ಹೆಜ್ಜೆ ಹಾಕುತ್ತಿದ್ದು, 190.66ರ ಸ್ಟ್ರೈಕ್ರೇಟ್ನಲ್ಲಿ 11 ಸಿಕ್ಸರ್ ಸಹಿತ 143 ರನ್ ಚಚ್ಚಿದ್ದಾರೆ. ಇಬ್ಬರೂ ಇತರರ ನೆರವಿನೊಂದಿಗೆ ಇದೇ ಪ್ರದರ್ಶನ ಮುಂದುವರೆಸಿದರೆ ದ್ವಿತೀಯಾರ್ಧದಲ್ಲಿ ಆರ್ಸಿಬಿ ಮ್ಯಾಜಿಕ್ ನಡೆಸುವುದು ಖಚಿತ.
3. ಇಬ್ಬರು ವಿದೇಶಿ ಬೌಲರ್ಗಳನ್ನು ಆಡಿಸಬೇಕು
ಉತ್ತಮ ಪ್ರದರ್ಶನ ನೀಡಿದರೂ ಒಂದು ಪಂದ್ಯದ ನಂತರ ವಿಜಯ್ ಕುಮಾರ್ ವೈಶಾಕ್ ಅವರನ್ನು ಕೈಬಿಟ್ಟರು. ಮಹಿಪಾಲ್ ಲೊಮ್ರೋರ್ ಆಡುವ XIನಲ್ಲಿ ಕಣಕ್ಕಿಳಿಸಲಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಬ್ಬರದ ಪ್ರದರ್ಶನ ನೀಡಿದರೂ ಮುಂದಿನ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಅಚ್ಚರಿ ಅಂದರೆ ಲಾಕಿ ಫರ್ಗುಸನ್ ಅವರು ಇಲ್ಲಿಯವರೆಗೂ ಬೆಂಚ್ನಲ್ಲಿರುವುದು. ತಮ್ಮ ಯಾರ್ಕರ್ ಮತ್ತು ವೇಗದ ಮೂಲಕ ನಡುಕ ಹುಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ.
ಫಾರ್ಮ್ನಲ್ಲಿಲ್ಲದ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಕ್ಯಾಮರೂನ್ ಗ್ರೀನ್ರನ್ನು ಕೈಬಿಟ್ಟು ರೀಸ್ ಟೋಪ್ಲಿ ಮತ್ತು ಲಾಕಿ ಫರ್ಗುಸನ್ ಅವರನ್ನು ಕಣಕ್ಕಿಳಿಸಬೇಕು. ಅನುಜ್ ರಾವತ್, ಲೊಮ್ರೋರ್ ಅವರಂತಹ ಭಾರತೀಯ ಬ್ಯಾಟರ್‌ಗಳನ್ನು ಆಡಿಸಬೇಕು. ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಮತ್ತು ವಿಲ್ ಜಾಕ್ಸ್ ಬ್ಯಾಟಿಂಗ್ನಲ್ಲಿ ಆಡಬೇಕಿದೆ. ಮೊಹಮ್ಮದ್ ಸಿರಾಜ್, ಟೋಪ್ಲಿ ಮತ್ತು ಫರ್ಗುಸನ್ ಮೂವರು ವೇಗಿಗಳೊಂದಿಗೆ ಬೌಲಿಂಗ್ ದಾಳಿ ಎದುರಾಳಿ ಮೇಲೆ ಪರಿಣಾಮ ಬೀರುತ್ತದೆ. ಈ 3 ಕಾರಣಗಳಿಂದ ಆರ್ಸಿಬಿ ಪ್ಲೇಆಫ್ ಪ್ರವೇಶಿಸಬಹುದು.