ಟಿ20 ವಿಶ್ವಕಪ್ಗೆ ದಿನೇಶ್ ಕಾರ್ತಿಕ್ ಸೇರಿ 6 ವಿಕೆಟ್ ಕೀಪರ್ಸ್ ಮಧ್ಯೆ ಸ್ಪರ್ಧೆ; ಆದರೆ 26 ವರ್ಷದ ಆಟಗಾರನಿಗೆ ಮೊದಲ ಆದ್ಯತೆ
T20 World Cup 2024 : ಟಿ20 ವಿಶ್ವಕಪ್ಗೆ ಭಾರತದ ವಿಕೆಟ್ ಕೀಪರ್ಗಳ ಆಯ್ಕೆ ವಿಷಯದಲ್ಲಿ ಸೆಲೆಕ್ಟರ್ಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಆರು ವಿಕೆಟ್ ಕೀಪರ್ಸ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಜಿದ್ದಿಗೆ ಬಿದ್ದವರಂತೆ ಪೈಪೋಟಿ ನಡೆಸಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) 15 ಸದಸ್ಯರ ತಂಡವನ್ನು ಐಸಿಸಿಗೆ ಸಲ್ಲಿಸಲು ದಿನಗಣನೆ ಆರಂಭವಾಗಿದೆ. ಅದಕ್ಕಾಗಿ ಬಿಸಿಸಿಐ (BCCI) ವಲಯದಲ್ಲಿ ಯಾರಿಗೆ ಮಣೆ ಹಾಕಬೇಕು ಎನ್ನುವುದರ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಜೂನ್ 1ರಿಂದ ಟಿ20 ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಗಲಿದ್ದು, ಮೇ 1ರೊಳಗೆ 15 ಸದಸ್ಯರ ತಂಡವನ್ನು ಪ್ರಕಟಿಸಬೇಕಿದೆ. ಮೇ 25ರೊಳಗೆ ತಂಡದಲ್ಲಿ ಬದಲಾವಣೆ ಮಾಡಲು ಅವಕಾಶ ಇದೆ. ಭಾರತ ತಂಡದ ಆಯ್ಕೆಗೆ ಬಿಸಿಸಿಐ ಸಾಕಷ್ಟು ಕಸರತ್ತು ನಡೆಸುತ್ತಿದೆ. ಆದರೆ ವಿಕೆಟ್ ಕೀಪರ್ ಆಯ್ಕೆಗೆ ಸಂಬಂಧಿಸಿ ಸೆಲೆಕ್ಟರ್ಗಳಿಗೆ ಗೊಂದಲ ಏರ್ಪಟ್ಟಿದೆ.
ಜೂನ್ 5ರಿಂದ ಟೀಮ್ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ 11 ವರ್ಷಗಳಲ್ಲಿ ಟ್ರೋಫಿ ಗೆಲ್ಲಲು ಪರದಾಟ ನಡಡಸುತ್ತಿರುವ ಭಾರತ, ಈ ವರ್ಷ ಪ್ರಶಸ್ತಿ ಬರ ನೀಗಿಸಲು ಸಜ್ಜಾಗಿದೆ. ಅದಕ್ಕಾಗಿ ತಂಡದಲ್ಲಿ ಪ್ರಯೋಗ ನಡೆಸಲು ಮುಂದಾಗದೆ, ಸಿದ್ಧಸೂತ್ರಕ್ಕೆ ಒತ್ತು ಕೊಡುತ್ತಿದೆ. ಅದರಲ್ಲೂ ವಿಕೆಟ್ ಕೀಪರ್ಗಳ ಆಯ್ಕೆ ವಿಷಯದಲ್ಲಿ ಸೆಲೆಕ್ಟರ್ಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಆರು ವಿಕೆಟ್ ಕೀಪರ್ಗಳು ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಜಿದ್ದಿಗೆ ಬಿದ್ದವರಂತೆ ಪೈಪೋಟಿ ನಡೆಸಿದ್ದಾರೆ. ಐಪಿಎಲ್ನಲ್ಲಿ ಈ ಆರು ವಿಕೆಟ್ ಕೀಪರ್ಗಳಿಂದಲೂ ಅಮೋಘ ಪ್ರದರ್ಶನ ಹೊರ ಬರುತ್ತಿದೆ.
ಆರು ವಿಕೆಟ್ಗಳ ನಡುವೆ ಪೈಪೋಟಿ
ಟಿ20 ವಿಶ್ವಕಪ್ಗೆ ರೇಸ್ನಲ್ಲಿರುವ ಭಾರತೀಯ ವಿಕೆಟ್ ಕೀಪರ್ಗಳು ಅಂದರೆ ರಿಷಭ್ ಪಂತ್, ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್, ಜಿತೇಶ್ ಶರ್ಮಾ, ಇಶಾನ್ ಕಿಶನ್ ಮತ್ತು ದಿನೇಶ್ ಕಾರ್ತಿಕ್. ಈ ಆರು ಆಟಗಾರರ ಮಧ್ಯೆ ಹೆಚ್ಚಿನ ಪೈಪೋಟಿ ನಡೆಯುತ್ತಿದೆ. ಪ್ರತಿ ಪಂದ್ಯದಲ್ಲೂ ಅದ್ಭುತ, ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಇಬ್ಬರಿಗಷ್ಟೆ ಇಲ್ಲಿ ಅವಕಾಶ ಸಿಗಲು ಸಾಧ್ಯತೆ. ಒಬ್ಬರು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವ ಮತ್ತು ಅವರಿಗೆ ಬ್ಯಾಕಪ್ ವಿಕೆಟ್ ಕೀಪರ್ ಬೇಕಿದೆ. ಯಾರು ಎಷ್ಟೇ ಪ್ರದರ್ಶನ ನೀಡಿದರೂ 26 ವರ್ಷದ ಆಟಗಾರನಿಗೆ ಮಾತ್ರ ಮೊದಲ ಆದ್ಯತೆ ನೀಡಲಾಗಿದೆ. ಆತ ಬೇರೆ ಯಾರು ಅಲ್ಲ, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್.
ಪಿಟಿಐ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಟಿ20 ವಿಶ್ವಕಪ್ 2024 ತಂಡಕ್ಕೆ ಖಚಿತವಾಗಿರುವ 10 ಆಟಗಾರರಲ್ಲಿ ರಿಷಭ್ ಪಂತ್ ಕೂಡ ಒಬ್ಬರು. ವಾಸ್ತವವಾಗಿ, 10 ಆಟಗಾರರಲ್ಲಿ ಒಬ್ಬನೇ ವಿಕೆಟ್ ಕೀಪರ್-ಬ್ಯಾಟರ್. ಪಂತ್ ವಿಕೆಟ್ ಕೀಪರ್ ಸ್ಥಾನಕ್ಕೆ ಮೊದಲ ಆದ್ಯತೆ ಆಗಿದ್ದು, ಈ ಬಗ್ಗೆ ಸೆಲೆಕ್ಟರ್ಗಳು ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಭೀಕರ ಅಪಘಾತಕ್ಕೆ ಒಳಗಾಗಿ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಚೇತರಿಸಿ ನಂತರ ಮೈದಾನಕ್ಕೆ ಮರಳಿದ ರಿಷಭ್, ವಿಕೆಟ್ ಕೀಪಿಂಗ್ ಮತ್ತು ಬ್ಯಾಟ್ ಮೂಲಕ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಹಾಗಾಗಿ ಅವರನ್ನೇ ಮೊದಲ ಆಯ್ಕೆಯನ್ನಾಗಿ ಪರಿಗಣಿಸಿದ್ದಾರೆ.
ಹಾಗಾದರೆ ಬ್ಯಾಕಪ್ ಯಾರು?
ರಿಷಭ್ ಮೊದಲ ಆಯ್ಕೆಯಾದರೆ, ಆತನಿಗೆ ಬ್ಯಾಕಪ್ ವಿಕೆಟ್ ಕೀಪರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ಗೆ ಮಣೆ ಹಾಕುವ ನಿರೀಕ್ಷೆ ಹೆಚ್ಚಾಗಿದೆ. ಬ್ಯಾಟಿಂಗ್ನಲ್ಲೂ ಉತ್ತಮ ಫಾರ್ಮ್ನಲ್ಲಿರುವ ಕೇರಳದ ಹುಡುಗ, ಟಿ20 ವಿಶ್ವಕಪ್ ಮೆಗಾ ಟೂರ್ನಿಯಲ್ಲಿ ಅವಕಾಶ ಸಿಕ್ಕರೆ ತನ್ನ ಸಾಮರ್ಥ್ಯ ವಿಶ್ವಮಟ್ಟಕ್ಕೆ ಪರಿಚಯಿಸಲು ಸನ್ನದ್ಧಗೊಂಡಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾ ಪರ ಪರವಾಗಿಲ್ಲ ಎನಿಸಿಕೊಂಡಿದ್ದ ಜಿತೇಶ್ ಶರ್ಮಾ, ಐಪಿಎಲ್ನಲ್ಲಿ ಒಂದೂ ಇನ್ನಿಂಗ್ಸ್ನಲ್ಲಿ ನೆನಪಿಟ್ಟುಕೊಳ್ಳುವಂತಹ ಇನ್ನಿಂಗ್ಸ್ ಕಟ್ಟಿಲ್ಲ. ಆ ಮೂಲಕ ಆಯ್ಕೆದಾರರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ.
ಮತ್ತೊಂದೆಡೆ ದಿನೇಶ್ ಕಾರ್ತಿಕ್ ಎಷ್ಟೇ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರೂ ಆಯ್ಕೆಯ ಲೆಕ್ಕಾಚಾರದಿಂದ ಅವರು ಹೊರಗಿದ್ದಾರೆ. ಸೆಲೆಕ್ಟರ್ಗಳು ಅವರನ್ನು ಆಯ್ಕೆ ಮಾಡುವ ಯೋಜನೆಯಲ್ಲೂ ಇಲ್ಲ. ಹಾಗೆಯೇ ಇಶಾನ್ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಇತ್ತೀಚೆಗೆ ಆತನ ವರ್ತನೆಯಿಂದ ಬೇಸತ್ತಿರುವ ಸೆಲೆಕ್ಟರ್ಗಳು ಆ ಹೆಸರು ಪರಿಗಣಿಸದಿರಲು ಚಿಂತಿಸಿದ್ದಾರೆ. ಇನ್ನು ಕೊನೆಯದಾಗಿ ಕೆಎಲ್ ರಾಹುಲ್ ಟಿ20 ವಿಶ್ವಕಪ್ ಪ್ಲಾನ್ನಲ್ಲಿದ್ದರೂ ಅವರನ್ನು ಆಯ್ಕೆ ಮಾಡಬೇಕೇ ಎನ್ನುವ ಗೊಂದಲದಲ್ಲೂ ಇದ್ದಾರೆ. ಅವರನ್ನು ವಿಕೆಟ್ ಕೀಪರ್ ಸ್ಥಾನಕ್ಕೆ ಆಯ್ಕೆ ಮಾಡದಿದ್ದರೂ ಬ್ಯಾಟರ್ ಆಗಿ ಪರಿಗಣಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಟಿ20 ವಿಶ್ವಕಪ್ಗೆ ಖಚಿತಗೊಂಡ 10 ಹೆಸರು
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಕುಲ್ದೀಪ್, ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದು ವರದಿ ಹೇಳಿದೆ.