ಕ್ರಿಕೆಟ್ 11 ಆಟಗಾರರ ಆಟವಷ್ಟೆ, 12 ಮಂದಿಯದ್ದಲ್ಲ; ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ರೋಹಿತ್ ಶರ್ಮಾ ಅಸಮ್ಮತಿ
Rohit Sharma : ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜಾರಿಗೆ ತಂದಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಭಾರತದ ನಾಯಕ ರೋಹಿತ್ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) 2023ರಲ್ಲಿ ಜಾರಿಗೆ ತರಲಾದ ಇಂಪ್ಯಾಕ್ಟ್ ಪ್ಲೇಯರ್ ನಿಯಮದ (Impact Player rule) ಕುರಿತು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಎಂಬುದು 11 ಆಟಗಾರರು ಆಡುವ ಸುಂದರ ಆಟ. ಆದರೆ ಇಲ್ಲಿ 12 ಪ್ಲೇಯರ್ಸ್ ಆಡಬಾರದು ಎಂದು ಮುಂಬೈ ಇಂಡಿಯನ್ಸ್ (Mumbai Indians) ಮಾಜಿ ನಾಯಕ ಈ ನಿಯಮ ತೆಗೆದುಹಾಕುವಂತೆ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
ಈ ನಿಯಮದ ಕಾರಣದಿಂದ ಭಾರತೀಯ ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳ ಬೆಳವಣಿಗೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹಿಟ್ಮ್ಯಾನ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ ಮತ್ತು ಇಂಗ್ಲೆಂಡ್ನ ಮೈಕೆಲ್ ವಾನ್ ಹೋಸ್ಟ್ ಮಾಡಿದ ಕ್ಲಬ್ ಪ್ರೈರೀ ಪಾಡ್‌ಕ್ಯಾಸ್ಟ್‌ನ ಸಂಚಿಕೆಯಲ್ಲಿ ರೋಹಿತ್ ಈ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಆಲ್‌ರೌಂಡರ್‌ಗಳ ಅಭಿವೃದ್ಧಿಗೆ ಕುತ್ತು ತರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಏಕೆಂದರೆ ಕ್ರಿಕೆಟ್ ಆಡಬೇಕಿರುವುದು 11 ಆಟಗಾರರು, 12 ಮಂದಿ ಅಲ್ಲ ಎಂದು ರೋಹಿತ್ ಟೀಕಿಸಿದ್ದಾರೆ. ಅಲ್ಲದೆ, ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಅಗತ್ಯವನ್ನು ಪ್ರಶ್ನಿಸಿದ್ದಾರೆ. ನಾನು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ದೊಡ್ಡ ಅಭಿಮಾನಿಯಲ್ಲ. ಸುತ್ತಮುತ್ತಲಿನ ಜನರಿಗೆ ಸ್ವಲ್ಪ ಮನರಂಜನೆ ಒದಗಿಸುವ ಸಲುವಾಗಿ ಈ ನಿಮಯ ತರಲಾಗಿದೆ ಎಂದು ಹೇಳಿದ ರೋಹಿತ್, ಎಂತಹ ಆಟಗಾರರಿಗೆ ಇದರಿಂದ ಪರಿಣಾಮ ಬೀರುತ್ತಿದೆ ಎಂಬುದರ ಕುರಿತು ಒತ್ತಿ ಹೇಳಿದ್ದಾರೆ.
ಆಲ್‌ರೌಂಡರ್‌ಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದ ಹಿಟ್ಮ್ಯಾನ್
ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕೊಡುಗೆ ನೀಡುವ ಆಲ್ರೌಂಡರ್ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಅವರಂತಹ ಆಟಗಾರರಿಗೆ ಕುತ್ತು ತರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ಟಿ20 ವಿಶ್ವಕಪ್ಗೆ ಬೌಲಿಂಗ್ ಆಯ್ಕೆಯಲ್ಲಿ ಸೆಲೆಕ್ಟರ್ಗಳು ಗೊಂದಲಕ್ಕೆ ಒಳಗಾಗಿರುವ ಕುರಿತು ಪರೋಕ್ಷವಾಗಿ ಈ ಹೇಳಿಕೆ ನೀಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅನಿಯಮಿತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಎದುರಾದ ಸವಾಲುಗಳನ್ನು ಒಪ್ಪಿದ ರೋಹಿತ್, ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಹೇಳಿದ್ದಾರೆ. 'ನೀವು ಇದರ ಬಗ್ಗೆ ಏನು ಮಾಡಬಹುದೆಂದು ನನಗೆ ತಿಳಿದಿಲ್ಲ. ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ ನಾನು ಅದರ ಅಭಿಮಾನಿಯಲ್ಲ' ಎಂದು ರೋಹಿತ್ ಹೇಳಿದ್ದಾರೆ. ಐಪಿಎಲ್ 2023 ರಲ್ಲಿ ಪರಿಚಯಿಸಲಾದ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಟಾಸ್ ನಂತರ ಪ್ಲೇಯಿಂಗ್ ಇಲೆವೆನ್ನಿಂದ ಒಬ್ಬ ಆಟಗಾರನನ್ನು ಬದಲಿಸಲು ಪಂದ್ಯದ ಯಾವುದೇ ಹಂತದಲ್ಲಿ 12ನೇ ಆಟಗಾರನನ್ನು ತರಲು ತಂಡಗಳಿಗೆ ಅವಕಾಶ ನೀಡುತ್ತದೆ.
ಧೋನಿಯನ್ನು ಒಪ್ಪಿಸುವುದು ಅಸಾಧ್ಯ ಎಂದ ಹಿಟ್ಮ್ಯಾನ್
ಇದೇ ವೇಳೆ ಎಂಎಸ್ ಧೋನಿ ನಿವೃತ್ತಿ ವಾಪಸ್ ಪಡೆದು ಭಾರತ ತಂಡಕ್ಕೆ ಕಂಬ್ಯಾಕ್ ಮಾಡುತ್ತಾರೆ ಎನ್ನುವ ಸುದ್ದಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ರೋಹಿತ್, ದಿನೇಶ್ ಕಾರ್ತಿಕ್ ಅವರನ್ನು ಒಪ್ಪಿಸಬಹುದು. ಆದರೆ ಮನವೊಲಿಸುವುದು ಅಸಾಧ್ಯ. ನಿಜ ಹೇಳುವುದಾದರೆ ಇಬ್ಬರು (ದಿನೇಶ್ ಕಾರ್ತಿಕ್-ಎಂಎಸ್ ಧೋನಿ) ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರ ಪ್ರದರ್ಶನ ನನ್ನ ಗಮನ ಸೆಳೆದಿದೆ ಎಂದು ಹೇಳಿದ್ದಾರೆ. ಆದರೆ ದಿನೇಶ್ ಕಾರ್ತಿಕ್ ಎಷ್ಟೇ ಅಬ್ಬರಿಸಿದರೂ ಟಿ20 ವಿಶ್ವಕಪ್ಗೆ ಅವಕಾಶ ಪಡೆಯುವುದು ಬಹುತೇಕ ಅನುಮಾನ.
