ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ-ಡೆಲ್ಲಿ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಕ್ಯಾಂಟಿನ್ ಆಹಾರ ಸೇವಿಸಿ ವ್ಯಕ್ತಿ ಅಸ್ವಸ್ಥ; ಎಫ್‌ಐಆರ್ ದಾಖಲು

ಆರ್‌ಸಿಬಿ-ಡೆಲ್ಲಿ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಕ್ಯಾಂಟಿನ್ ಆಹಾರ ಸೇವಿಸಿ ವ್ಯಕ್ತಿ ಅಸ್ವಸ್ಥ; ಎಫ್‌ಐಆರ್ ದಾಖಲು

ಚಿನ್ನಸ್ವಾಮಿ ಕ್ರೀಡಾಂಗಣದ ಆಡಳಿತ ಮಂಡಳಿ ಮತ್ತು ಕ್ಯಾಂಟೀನ್ ಅಧಿಕಾರಿಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 284 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಆರ್‌ಸಿಬಿ-ಡಿಸಿ ಐಪಿಎಲ್ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಕ್ಯಾಂಟಿನ್ ಆಹಾರ ಸೇವಿಸಿ ವ್ಯಕ್ತಿ ಅಸ್ವಸ್ಥಗೊಂಡಿರುವ ಪರಿಣಾಮ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಆರ್‌ಸಿಬಿ-ಡಿಸಿ ಐಪಿಎಲ್ ಪಂದ್ಯದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನ ಕ್ಯಾಂಟಿನ್ ಆಹಾರ ಸೇವಿಸಿ ವ್ಯಕ್ತಿ ಅಸ್ವಸ್ಥಗೊಂಡಿರುವ ಪರಿಣಾಮ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. (AFP)

ಬೆಂಗಳೂರು: ಕಳೆದ ವಾರ ಐಪಿಎಲ್ (IPL 2024) ಪಂದ್ಯದ ವೇಳೆ ಹಳಸಿದ ಆಹಾರವನ್ನು ಬಡಿಸಿದ ಆರೋಪದ ಮೇಲೆ ಬೆಂಗಳೂರಿನ 23 ವರ್ಷದ ಯುವಕನೊಬ್ಬ ಚಿನ್ನಸ್ವಾಮಿ ಕ್ರೀಡಾಂಗಣದ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದಾರೆ. ಕ್ರೀಡಾಂಗಣದ ಕ್ಯಾಂಟೀನ್‌ನಲ್ಲಿ ನೀಡಲಾಗುವ ಆಹಾರವನ್ನು ಸೇವಿಸಿದ ನಂತರ ಅವರು ಅನಾರೋಗ್ಯಕ್ಕೆ ಒಳಗಾದರು ಎಂದು ಆರೋಪಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವರದಿಗಳ ಪ್ರಕಾರ, ಚೈತನ್ಯ ಮೇ 12 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ನಡುವಿನ ಪಂದ್ಯಕ್ಕೆ ಹಾಜರಾಗಿ ಅಲ್ಲಿನ ಕ್ಯಾಂಟಿನ್ ಆಹಾರವನ್ನು ಸೇವಿಸಿದ್ದರು. ಊಟ ಮುಗಿಸಿದ ಕೆಲವೇ ನಿಮಿಷಗಳಲ್ಲಿ ಚೈತನ್ಯ ತನ್ನ ಸೀಟಿನಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, "ಪಂದ್ಯದ ಸಮಯದಲ್ಲಿ, ನಾನು ಸ್ವಲ್ಪ ಆಹಾರವನ್ನು ತಿನ್ನಲು ಕ್ಯಾಂಟೀನ್‌ಗೆ ಹೋಗಿದ್ದೆ. ನಾನು ತುಪ್ಪದ ಅನ್ನ, ಚನ್ನಾ ಮಸಾಲಾ, ಒಣ ಜಾಮೂನ್ ಮತ್ತು ಕಟ್ಲೆಟ್ ತಿನ್ನುತ್ತಿದ್ದೆ. ನಾನು ಊಟ ಮುಗಿಸಿದ ಎರಡು ನಿಮಿಷಗಳ ನಂತರ, ನಾನು ಅನಾರೋಗ್ಯಕ್ಕೆ ಒಳಗಾದೆ. ಮತ್ತು ಐದು ನಿಮಿಷಗಳ ನಂತರ, ನಾನು ಕುಸಿದುಬಿದ್ದೆ." ಕ್ಯಾಂಟೀನ್‌ನಲ್ಲಿ ಹಳಸಿದ ಆಹಾರದಿಂದಾಗಿ ಅನಾರೋಗ್ಯ ಉಂಟಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಚಿನ್ನಸ್ವಾಮಿ ಕ್ರೀಡಾಂಗಣದ ಆಡಳಿತ ಮಂಡಳಿ ಹಾಗೂ ಕ್ಯಾಂಟಿನ್ ಅಧಿಕಾರಿಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 284 (ವಿಷಕಾರಿ ವಸ್ತುವಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣದ ಬಗ್ಗೆ 'ಡೆಕ್ಕನ್ ಹೆರಾಲ್ಡ್' ಜೊತೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, 'ಘಟನೆ ನಡೆದ ದಿನ ಬಡಿಸಿದ ಆಹಾರದ ಬಗ್ಗೆ ವರದಿ ನೀಡುವಂತೆ ಕ್ರೀಡಾಂಗಣದ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದ್ದಾರೆ.

ಮೇ 12ರ ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 47 ರನ್‌ಗಳ ಅಮೋಘ ಗೆಲುವು ಸಾಧಿಸಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಗಿಟ್ಟಿಸಿಕೊಂಡ ಫಾಫ್ ಡು ಪ್ಲೆಸ್ಸಿಸ್ ನೇತೃತ್ವದ ಆರ್‌ಸಿಬಿ ನಿಗದಿತ 20 ಓವರ್‌ಗಳಿಗೆ 9 ವಿಕೆಟ್ ಕಳೆದು ಕೊಂಡು 187 ರನ್ ಪೇರಿಸಿತ್ತು. ರಜತ್ ಪಟಿದಾರ್ 52, ವಿಲ್ ಜಾಕ್ಸ್ 41, ಔಟಾಗದೆ ಗ್ರೀನ್ 32 ರನ್ ಗಳ ಮೂಲಕ ಸವಾಲಿನ ಮೊತ್ತ ಪೇರಿಸಲು ನೆರವಾಗಿದ್ದರು. ಆರಂಭಿಕ ಬ್ಯಾಟರ್ ಕೊಹ್ಲಿ (27) ಮತ್ತು ನಾಯಕ ಡುಪ್ಲೆಸ್ಸಿಸ್ (6) ಬೇಗ ಔಟಾಗಿದ್ದರು.

ಆರ್‌ಸಿಬಿ ನೀಡಿದ 188 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡಿಸಿ 19.1 ಓವರ್‌ಗಳಲ್ಲಿ 140 ರನ್ ಗಳಿಸಿ ಸರ್ವ ಪತನ ಕಂಡಿತು. ನಾಯಕರಾಗಿದ್ದ ಅಕ್ಸರ್ ಪಟೇಲ್ 57 ರನ್ ಹೊರತುಪಡಿಸಿದರೆ ಯಾವೊಬ್ಬ ಆಟಗಾರರು ತಂಡವನ್ನು ಗೆಲ್ಲಿಸುವ ಪ್ರಯತ್ನ ಮಾಡಲಿಲ್ಲ. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇ-ಆಫ್‌ ಕನಸನ್ನು ಜೀವಂತವಾಗಿಸಿಕೊಂಡಿದೆ. ನಾಳೆ (ಮೇ 18, ಶನಿವಾರ) ಇದೇ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 18 ರನ್‌ಗಳಿಂದ ಗೆದ್ದರೆ ಪ್ಲೇ-ಆಫ್‌ಗೆ ಪ್ರವೇಶಿಸಲಿದೆ. ಆದರೆ ಪಂದ್ಯಕ್ಕೆ ಮಳೆಯ ಭೀತಿ ಇದೆ.

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ