ಐಪಿಎಲ್ನಲ್ಲಿ ಹೇಗೆ ಯಶಸ್ವಿಯಾಗಬೇಕೆಂದು ನನಗೆ ಗೊತ್ತು; ಹಾರ್ದಿಕ್ ಪಾಂಡ್ಯಗೆ ಟಾಂಗ್ ಕೊಟ್ರಾ ರೋಹಿತ್ ಶರ್ಮಾ
2013 ರಿಂದ 2023 ರವರೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ರೋಹಿತ್, ಐಪಿಎಲ್ನಲ್ಲಿ ಯಶಸ್ಸನ್ನು ಹೇಗೆ ಸಾಧಿಸಬೇಕೆಂದು ತಿಳಿದಿದ್ದರಿಂದ ತಮ್ಮ ಆಲೋಚನಾ ಪ್ರಕ್ರಿಯೆಗೆ ಅನುಗುಣವಾಗಿ ತಂಡವನ್ನು ರೂಪಿಸಲು ಯಾವಾಗಲೂ ಬಯಸುತ್ತೇನೆ ಎಂದು ಹೇಳಿದರು

ಪ್ರತಿ ಸೀಸನ್ನಲ್ಲೂ ನಿಧಾನಗತಿಯ ಆರಂಭ ಪಡೆಯುವ ಮುಂಬೈ ಇಂಡಿಯನ್ಸ್ (Mumbai Indians), ಕೊನೆಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಲೀಗ್ ಮುಗಿಸುತ್ತದೆ. ಆರಂಭದಲ್ಲಿ ಹ್ಯಾಟ್ರಿಕ್ ಸೋಲಿನ ನಂತರ ಕೊನೆಯ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ಮುಂಬೈ, ಉತ್ತಮ ಲಯದಲ್ಲಿದೆ. ಐದು ಬಾರಿ ಚಾಂಪಿಯನ್ ಆಗಿರುವ ಎಂಐ, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಒಟ್ಟು ಏಳು ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಹಾರ್ದಿಕ್ ಪಾಂಡ್ಯ (Hardik Pandya) ಪಡೆ, ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ತನ್ನ ನಾಯಕತ್ವದ ಕುರಿತು ಹೇಳಿದ ರೋಹಿತ್
ಐಪಿಎಲ್ನಲ್ಲಿ ಮುಂಬೈ ಕಳಪೆ ಪ್ರದರ್ಶನದ ಆರಂಭ ಪಡೆದು ಪುಟಿದೇಳುವ ಕುರಿತು ಮಾತನಾಡಿದ ರೋಹಿತ್ ಶರ್ಮಾ (Rohit Sharma), ಕಳೆದ 10 ವರ್ಷಗಳಿಂದ ಸಂಸ್ಕೃತಿಯನ್ನು ಸೃಷ್ಟಿಸಲು ಸಹಾಯಕ ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಇದು ತಂಡವು ಕಠಿಣ ಪರಿಸ್ಥಿತಿಗಳಿಂದ ಪುಟಿದೇಳಲು ಸಹಾಯ ಮಾಡಿದೆ ಎಂದು ನಾಯಕ ಹೇಳಿದ್ದಾರೆ. ಈ ಎಲ್ಲಾ ವರ್ಷಗಳಲ್ಲಿ ಇದು ಮುಂಬೈ ಇಂಡಿಯನ್ಸ್ನ ಕಥೆಯಾಗಿದೆ. ನಾವು ನಿಧಾನವಾಗಿ ಪ್ರಾರಂಭಿಸುತ್ತೇವೆ. ನಂತರ ವಿಷಯಗಳು ಬದಲಾಗಲು ಪ್ರಾರಂಭಿಸುತ್ತವೆ ಎಂದು ರೋಹಿತ್ ಕ್ಲಬ್ ಪ್ರೈರಿ ಫೈರ್ ಪಾಡ್ಕಾಸ್ಟ್ನಲ್ಲಿ ಹೇಳಿದ್ದಾರೆ.
2013 ರಿಂದ 2023 ರವರೆಗೆ ಮುಂಬೈ ತಂಡವನ್ನು ಮುನ್ನಡೆಸಿದ ರೋಹಿತ್, ಐಪಿಎಲ್ನಲ್ಲಿ ಯಶಸ್ಸು ಹೇಗೆ ಸಾಧಿಸಬೇಕೆಂದು ತಿಳಿದಿರುವ ಕಾರಣ ತಮ್ಮ ಆಲೋಚನಾ ಪ್ರಕ್ರಿಯೆಗೆ ಅನುಗುಣವಾಗಿ ತಂಡವನ್ನು ರೂಪಿಸಲು ಯಾವಾಗಲೂ ಬಯಸುತ್ತೇನೆ ಎಂದು ಹೇಳಿದ್ದಾರೆ. ಕಳೆದ 10 ವರ್ಷಗಳಿಂದ ನಾಯಕ ಬದಲಾಗಿರಲಿಲ್ಲ. ಕೋಚ್ಗಳು ಮಾತ್ರ ಬದಲಾಗಿದ್ದಾರೆ. ಆದರೆ ಅದೇ ಒಂದೇ ರೀತಿಯ ಆಲೋಚನಾ ಪ್ರಕ್ರಿಯೆಗಳೊಂದಿಗೆ ಹೋಗಿದ್ದೇನೆ ಎಂದು ತನ್ನ ನಾಯಕತ್ವದ ಕುರಿತು ಹೇಳಿದ್ದಾರೆ.
ಹಾರ್ದಿಕ್ಗೆ ಟಾಂಗ್ ಕೊಟ್ರಾ ರೋಹಿತ್?
ತಂಡಕ್ಕೆ ಬರುವ ಹೊಸಬರು, ನನ್ನ ಆಲೋಚನಾ ಪ್ರಕ್ರಿಯೆ ಅನುಸರಿಸಲು ಸ್ಪಷ್ಟವಾಗಿ ಹೇಳುತ್ತಿದ್ದೆ. ಏಕೆಂದರೆ ಐಪಿಎಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಶಸ್ವಿ ತಂಡವಾಗಲು ಏನು ಬೇಕು ಎಂಬುದು ನನಗೆ ತಿಳಿದಿದೆ. ಕೆಲವರನ್ನು ದಾರಿಗೆ ತರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಹಾರ್ದಿಕ್ಗೆ ಟಾಂಗ್ ಕೊಟ್ಟಿದ್ದಾರೆ. ಇದೇ ವೇಳೆ ವಾಂಖೆಡೆ ಮೈದಾನದಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಅವರ ಸ್ವಿಂಗ್ ಹೆಚ್ಚಿಸಲು ಏನೆಲ್ಲಾ ಮಾಡಬೇಕಾಯಿತು ಎಂಬುದನ್ನು ವಿವರಿಸಿದ್ದಾರೆ.
ನನಗೆ ವಾಂಖೆಡೆ ಸ್ಟೇಡಿಯಂ ಗೊತ್ತು. ನಾನು ಅಲ್ಲಿಯೇ ಆಡಿ ಬೆಳೆದಿದ್ದೇನೆ. ಅಲ್ಲಿ ಏನು ಕೆಲಸ ಮಾಡುತ್ತದೆ, ನೀವು ಏನು ಮಾಡಬೇಕೆಂದು ನನಗೆ ತಿಳಿದಿದೆ. ಉದಾಹರಣೆಗೆ, ಮಿಚೆಲ್ ಜಾನ್ಸನ್, ನಮಗೆಲ್ಲರಿಗೂ ತಿಳಿದಿರುವಂತೆ ಡೆಕ್ನಲ್ಲಿ ಜೋರಾಗಿ ಚೆಂಡು ಹೊಡೆಯಲು ಇಷ್ಟಪಡುತ್ತಾರೆ. ಆದರೆ ಅದು ವಾಂಖೆಡೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ತಿಳಿದಿತ್ತು. ಚೆಂಡನ್ನು ಸ್ವಲ್ಪ ಸ್ವಿಂಗ್ ಮಾಡಬೇಕು ಎಂದು ಹೇಳಿದ್ದೆವು. ಅದು ವರ್ಕೌಟ್ ಆಗಿತ್ತು ಎಂದು ರೋಹಿತ್ ಹೇಳಿದ್ದಾರೆ.
ಮುಂಬೈ ತಂಡಕ್ಕೆ ತಾನು ನಾಯಕನಾಗಿದ್ದ ಅವಧಿಯಲ್ಲಿ ನೆರವಾಗಿದ್ದ ಕೋಚ್ ಮತ್ತು ಸಹಾಯಕ ಸಿಬ್ಬಂದಿಯನ್ನು ರೋಹಿತ್ ಶ್ಲಾಘಿಸಿದ್ದಾರೆ. ನನ್ನ ಆಲೋಚನಾ ಪ್ರಕ್ರಿಯೆ ಏನೆಂದು ಅವರಿಗೆ (ಕೋಚ್) ಹೇಳುತ್ತಿದ್ದೆ. ಏನು ಮಾಡಬೇಕು ಎಂಬುದನ್ನು ಮೊದಲೇ ತಿಳಿಸುತ್ತಿದ್ದೆ. ನಂತರ ನಾವು ನಾಯಕ ಮತ್ತು ಆಟಗಾರನ ನಡುವೆ ಸಮತೋಲನವನ್ನು ಕಂಡುಕೊಳ್ಳುತ್ತೇವೆ. ಕೊನೆಗೆ ನಾವು ಒಂದು ತೀರ್ಮಾನಕ್ಕೆ ಬರುತ್ತಿದ್ದೆವು. ರಿಕಿ ಪಾಂಟಿಂಗ್ನಿಂದ ಹಿಡಿದು ಜಯವರ್ಧನೆವರೆಗೆ ಎಲ್ಲರೂ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ.
