ಕನ್ನಡ ಸುದ್ದಿ  /  Cricket  /  Cricket News Ind Vs Eng 5th Test Team India All Out For 477 Runs In First Innings 259 Runs Leading Rmy

Ind vs Eng 5th Test: 477 ರನ್‌ಗಳ ಬೃಹತ್ ಮೊತ್ತ ಪೇರಿಸಿ ಟೀಂ ಇಂಡಿಯಾ ಆಲೌಟ್‌; ಮೊದಲ ಇನ್ನಿಂಗ್ಸ್‌ನಲ್ಲಿ 259 ರನ್‌ಗಳ ಮುನ್ನಡೆ

Ind vs Eng 5th Test: ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 477 ರನ್‌ಗಳ ಬೃಹತ್ ಮೊತ್ತ ಪೇರಿಸಿ ಆಲೌಟ್ ಆಗಿದ್ದು, 259 ರನ್‌ಗಳ ಮುನ್ನಡೆ ಪಡೆದಿದೆ.

15 ರನ್ ಗಳಿಸಿದ್ದಾಗ ಟಾಪ್ ಹಾರ್ಟ್ಲಿ ಅವರ ಬೌಲಿಂಗ್‌ನಲ್ಲಿ ಎನ್‌ಬಿಡಬ್ಲ್ಯು ಬಲೆಗೆ ಬಿದ್ದ ರವೀಂದ್ರ ಜಡೇಜಾ ಅವರು ಪೆವಿಲಿಯನ್‌ನತ್ತ ತೆರಳುತ್ತಿರುವುದು. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 477 ರನ್ ಸಿಡಿಸಿದೆ. (REUTERS)
15 ರನ್ ಗಳಿಸಿದ್ದಾಗ ಟಾಪ್ ಹಾರ್ಟ್ಲಿ ಅವರ ಬೌಲಿಂಗ್‌ನಲ್ಲಿ ಎನ್‌ಬಿಡಬ್ಲ್ಯು ಬಲೆಗೆ ಬಿದ್ದ ರವೀಂದ್ರ ಜಡೇಜಾ ಅವರು ಪೆವಿಲಿಯನ್‌ನತ್ತ ತೆರಳುತ್ತಿರುವುದು. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 477 ರನ್ ಸಿಡಿಸಿದೆ. (REUTERS)

ಧರ್ಮಶಾಲ (ಹಿಮಾಚಲ ಪ್ರದೇಶ): ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ (India vs England 5th Test) 3ನೇ ದಿನದಾಟದಲ್ಲಿ ಟೀಂ ಇಂಡಿಯಾ 477 ರನ್‌ಗಳಿಗೆ ಆಲೌಟ್ ಆಗಿದ್ದು, 257 ರನ್‌ಗಳ ಮುನ್ನಡೆ ಪಡೆದಿದೆ. ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರ ಆಕರ್ಷಕ ಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. 3ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕುಲ್ದೀಪ್ ಯಾದವ್ 30 ರನ್ ಹಾಗೂ ಜಸ್ಪ್ರೀತ್ ಬುಮ್ರಾ 20 ರನ್‌ಗಳೊಂದಿಗೆ ಆಟವನ್ನು ಮುಗಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಮೊದಲ 5 ಬ್ಯಾಟರ್‌ಗಳು ಫಿಫ್ಟಿ ಪ್ಲಸ್ ರನ್‌ಗಳ ಸಾಧನೆ ಮಾಡಿದರು. ಆರಂಭಿಕರಾದ ಯಶಸ್ವಿ ಜೈಸ್ವಾಲ್ 57, ರೋಹಿತ್ ಶರ್ಮಾ 103 ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಶುಭ್ಮನ್ ಗಿಲ್ 110, ದೇವದತ್ ಪಡಿಕ್ಕಲ್ 65, ಸರ್ಫರಾಜ್ ಖಾನ್ 56 ರನ್ ಗಳಿಸಿದರು. ಇಂಗ್ಲೆಂಡ್ ಪರ ಶೋಯಬ್ ಬಷೀರ್ 5 ವಿಕೆಟ್‌ಗಳ ಸಾಧನೆ ಮಾಡಿದರು. ಟಾಮ್ ಹಾರ್ಟ್ಲಿ ಹಾಗೂ ಜೇಮ್ಸ್ ಆಂಡರ್ಸನ್ ತಲಾ 2 ವಿಕೆಟ್ ಕಿತ್ತರು.

ಐದು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 3-1 ಅಂತರದ ಮುನ್ನಡೆ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 218 ರನ್‌ಗಳಿಗೆ ಆಲೌಟ್ ಆಗಿದೆ . ಇಂಗ್ಲೆಂಡ್ ಪರ ಆರಂಭಿಕ ಬ್ಯಾಟರ್ ಝಾಕ್ ಕ್ರಾಲಿ ಸಿಡಿಸಿದ 79 ರನ್ ತಂಡದ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರ ಈ ಅರ್ಧಶಕದಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸೇರಿತ್ತು.

ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರ ಆಕರ್ಷಕ ಶತಕಗಳ ನೆರವಿನಿಂದ 2ನೇ ದಿನದಾಟದ (ಮಾರ್ಚ್ 8, ಶುಕ್ರವಾರ) ಅಂತ್ಯದ ವೇಳೆಗೆ 120 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 473 ರನ್ ಗಳಿಸಿತ್ತು. ಆ ಮೂಲಕ 255 ರನ್‌ಗಳ ಮುನ್ನಡೆಯನ್ನು ಪಡೆದಿತ್ತು. 3ನೇ ದಿನದಾಟದ ಮೊದಲ ಸೆಷನ್‌ನಲ್ಲಿ 4 ರನ್ ಸೇರಿಸುವಷ್ಟರಲ್ಲಿ ಉಳಿದ 2 ವಿಕೆಟ್ ಕಳೆದು ಕೊಂಡಿತು.

259 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿದೆ. ಇನ್ನಿಂಗ್ಸ್‌ನ 2ನೇ ಓವರ್‌ನಲ್ಲಿ ಬೆನ್ ಡಕೆಟ್ 2 ರನ್ ಗಳಿಸಿ ಔಟಾದರೆ, ಝಾಕ್ ಕ್ರಾಲಿ 6ನೇ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ಸರ್ಫರಾಜ್ ಖಾನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. 19 ರನ್ ಗಳಿಸಿದ್ದ ಒಲಿ ಪೋಪ್ ಮತ್ತು 39 ರನ್ ಗಳಿಸಿ ಜಾನಿ ಬೈರ್‌ಸ್ಟೋ ಕೂಡ ಪೆವಿಲಿಯನ್ ಸೇರಿಕೊಂಡಿದ್ದಾರೆ. 19 ಓವರ್‌ ಮುಗಿಯುವ ವೇಳೆಗೆ ಇಂಗ್ಲೆಂಡ್ 4 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ. ಭಾರತ-ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 3-1 ಅಂತರದ ಮುನ್ನಡೆ ಸಾಧಿಸಿದೆ. ಆ ಮೂಲಕ ವಿಶ್ವಕಪ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )