ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಟಾಸ್ ಗೆದ್ದ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ, ಧರ್ಮಶಾಲಾದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಪದಾರ್ಪಣೆ
ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದಾರೆ.

ಧರ್ಮಶಾಲಾ (ಹಿಮಾಚಲ ಪ್ರದೇಶ): ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಸರಣಿಯ ಕೊನೆಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕನ್ನಡಿಗ ದೇವದತ್ ಪಡಿಕ್ಕಲ್ ಪದಾರ್ಪಣೆ ಮಾಡಿದ್ದಾರೆ. ರಜತ್ ಪಾಟಿದಾರ್ ಬದಲಿಗೆ ಪಡಿಕ್ಕಲ್ ಅವರು ಅವಕಾಶ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ ತಂಡಕ್ಕೆ ವಾಪಸ್ ಆಗಿದ್ದು, ಆಕಾಶ್ ದೀಪ್ ಆಡುವ 11ರ ಬಳಗದಿಂದ ಅವಕಾಶ ವಂಚಿತರಾಗಿದ್ದಾರೆ. ರವಿಚಂದ್ರನ್ ಅಶ್ವಿನ್‌ಗೆ ಇದು 100ನೇ ಟೆಸ್ಟ್ ಪಂದ್ಯವಾಗಿದೆ. ವಿಶೇಷ ಸಮಾರಂಭದಲ್ಲಿ ಕೋಚ್ ರಾಹುಲ್ ದ್ರಾವಿಡ್ ಅವರು ಆರ್ ಅಶ್ವಿನ್ ಅವರಿಗೆ 100ನೇ ಟೆಸ್ಟ್ ಪಂದ್ಯದ ಕ್ಯಾಪ್ ನೀಡಿ ಗೌರವಿಸಿದರು. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಕೊನೆಯ ಟೆಸ್ಟ್ ಪೈಪೋಟಿ ನಡೆಯುತ್ತಿದೆ.
ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದು, ಒಲ್ಲಿ ರಾಬಿನ್ಸನ್ ಬದಲಿಗೆ ಮಾರ್ಕ್‌ವುಡ್‌ಗೆ ಸ್ಥಾನ ನೀಡಲಾಗಿದೆ. ಸ್ಪಿನ್ನರ್‌ಗಳಾದ ಶೋಯೆಬ್ ಬಶೀರ್ ಮತ್ತು ಟಾಮ್ ಟಾರ್ಟ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮಾರ್ಚ್ 6ರ ಬುಧವಾರ ಟೀಂ ಇಂಡಿಯಾದ ಅಭ್ಯಾಸದ ಅವಧಿಯಲ್ಲಿ ರಜತ್ ಪಾಟೀದಾರ್ ಎಡ ಪಾದಕ್ಕೆ ಗಾಯ ಮಾಡಿಕೊಂಡಿದ್ದಾರೆ. ಅವರು ಗಾಯಗೊಂಡಿರುವ ಕಾರಣ 5ನೇ ಟೆಸ್ ಪಂದ್ಯದ ಆಯ್ಕೆಗೆ ಲಭ್ಯರಿರಲಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ರಾಂಚಿಯಲ್ಲಿ ನಡೆದಿದ್ದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇದಾಗ ಬಳಿಕ 10 ದಿನಗಳ ಬಳಿಕ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಧರ್ಮಶಾಲಾದ ಹೆಚ್‌ಪಿಸಿಎಂ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಧರ್ಮಶಾಲಾದಲ್ಲಿ ಕನಿಷ್ಠ ತಾಪಮಾನ 1 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ ಮುಂದಿನ 5 ದಿನಗಳಲ್ಲಿ 7 ರಿಂದ 8 ಡಿಗ್ರಿ ಸೆಲ್ಸಿಯಸ್ ಮೀರುವುದಿಲ್ಲ. ಹೀಗಾಗಿ ಇಲ್ಲಿ ತುಂಬಾ ಚಳಿಯ ವಾತಾವರಣವಿದೆ. ಮಂಜಿನ ಜೊತೆಗೆ ಮಳೆಯ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ವಿಂಡೀಸ್ ವಿರುದ್ಧ ಪಾದಾರ್ಪಣೆ ಮಾಡಿದ್ದ ಅಶ್ವಿನ್ ಮತ್ತು ಜಾನಿ ಬೇರ್‌ಸ್ಟೋಗೆ 100ನೇ ಪಂದ್ಯ
ಅಶ್ವಿನ್ ಮಾತ್ರವಲ್ಲದೆ, ಇಂಗ್ಲೆಂಡ್ ಪರ ಜಾನಿ ಬೈರ್‌ಸ್ಟೋ ಅವರಿಗೂ ಇದು 100ನೇ ಟೆಸ್ಟ್ ಪಂದ್ಯವಾಗಿದೆ. ಕಾಕತಾಳೀಯ ಎಂಬಂತೆ ಈ ಇಬ್ಬರೂ ಆಟಗಾರರು ಆರ್ ಅಶ್ವಿನ್ ಮತ್ತು ಬೈರ್‌ಸ್ಟೋ ಇಬ್ಬರೂ ವೆಸ್ಟ್ ಇಂಡೀಸ್ ವಿರುದ್ಧ ಪದಾರ್ಪಣೆ ಮಾಡಿದ್ದರು ಎಂಬುದು ಗಮನಾರ್ಹ. ಈ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 4-1 ಅಂತರದಿಂದ ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಕೊಳಿಸಿಕೊಳ್ಳಲಿದೆ.
ಟೀಂ ಇಂಡಿಯಾ ಆಡುವ 11ರ ಬಳಗ
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ದೇವದತ್ ಪಡಿಕ್ಕಲ್, ರವೀಂದ್ರ ಜಡೇಜಾ, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪ್), ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ,
ಇಂಗ್ಲೆಂಡ್ ಆಡುವ 11ರ ಬಳಗ
ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋ, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್
(This copy first appeared in Hindustan Times Kannada website. To read more like this please logon to kannada.hindustantimes.com )
