ಭಾರತೀಯರು ಶ್ರೀಮಂತರು, ನಾವು ಬಡ ದೇಶಗಳಿಗೆ ಹೋಗಲ್ಲ: ಗಿಲ್‌ಕ್ರಿಸ್ಟ್ ಪ್ರಶ್ನೆಗೆ ವೀರೇಂದ್ರ ಸೆಹ್ವಾಗ್ ಅಚ್ಚರಿ ಹೇಳಿಕೆ
Adam Gilchrist : ಅಂತಾರಾಷ್ಟ್ರೀಯ ಟಿ20 ಲೀಗ್‌ಗಳಲ್ಲಿ ಭಾರತೀಯ ಕ್ರಿಕೆಟಿಗರು ಭಾಗವಹಿಸುವ ಕುರಿತು ಆ್ಯಡಂ ಗಿಲ್‌ಕ್ರಿಸ್ಟ್ ಕೇಳಿದ ಪ್ರಶ್ನೆಗೆ ವೀರೇಂದ್ರ ಸೆಹ್ವಾಗ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕ್ರಿಕೆಟ್ ಮೈದಾನದ ಒಳಗೆ ಮತ್ತು ಹೊರಗೆ ತಮ್ಮ ಕಠಿಣ ಹೇಳಿಕೆ ಮತ್ತು ಹಾಸ್ಯಕ್ಕೆ ಹೆಸರುವಾಸಿಯಾಗಿರುವ ಭಾರತೀಯ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag) ಅವರು, ಕ್ಲಬ್ ಪ್ರೈರೀ ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಾಮಾಣಿಕ ಹೇಳಿಕೆಗಳೊಂದಿಗೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್‌ಕ್ರಿಸ್ಟ್ (Adam Gilchrist) ಅವರೊಂದಿಗಿನ ಮಾತುಕತೆಯಲ್ಲಿ ಸೆಹ್ವಾಗ್ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಹುಟ್ಟುಹಾಕಿದೆ.
ಪಾಡ್ಕಾಸ್ಟ್ನಲ್ಲಿ ಅಂತಾರಾಷ್ಟ್ರೀಯ ಟಿ20 ಲೀಗ್‌ಗಳಲ್ಲಿ ಭಾರತೀಯ ಕ್ರಿಕೆಟಿಗರು ಭಾಗವಹಿಸುವ ಕುರಿತು ಗಿಲ್‌ಕ್ರಿಸ್ಟ್ ಕೇಳಿದ ಪ್ರಶ್ನೆಗೆ ಸೆಹ್ವಾಗ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಭಾರತದ ಆಟಗಾರರು ಇತರ ಟಿ20 ಲೀಗ್‌ಗಳಲ್ಲಿ ಆಡಲು ಸಾಧ್ಯವಾಗುವ ಸಮಯ ನೀವು ನೋಡುತ್ತೀರಾ ಎಂದು ಗಿಲ್‌ಕ್ರಿಸ್ಟ್ ಕೇಳಿದ್ದಾರೆ. ಸೆಹ್ವಾಗ್ ಉತ್ತರವು ತಮಾಷೆಯ ಜೊತೆಗೆ ಉತ್ಪ್ರೇಕ್ಷೆಯಿಂದ ಕೂಡಿತ್ತು. ಇಲ್ಲ, ನಮಗೆ ಅಗತ್ಯವಿಲ್ಲ. ನಾವು ಶ್ರೀಮಂತರು, ನಾವು ಇತರ ಲೀಗ್‌ಗಳಿಗಾಗಿ ಬಡ ದೇಶಗಳಿಗೆ ಹೋಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನನ್ನ ಪಾರ್ಟಿ ಬಿಲ್ಲಿಗೂ ಸಮವಲ್ಲ ಎಂದಿದ್ದ ವೀರು
ಇದೇ ವೇಳೆ ಬಿಗ್ ಬ್ಯಾಷ್ ಲೀಗ್‌ನ ಆಫರ್ ನಿರಾಕರಿಸಿದ ಎಪಿಸೋಡ್ ನೆನಪಿಸಿಕೊಂಡ ಸೆಹ್ವಾಗ್ ಅವರು, ಕಡಿಮೆ ಮೊತ್ತಕ್ಕೆ ಆಫರ್ ನೀಡಿದ್ದ ಕಾರಣಕ್ಕೆ ರಿಜೆಕ್ಟ್ ಮಾಡಿದ್ದೆ ಎಂದು ಹೇಳಿದ್ದಾರೆ. ನನ್ನನ್ನು ಭಾರತ ತಂಡದಿಂದ ಕೈಬಿಟ್ಟಾಗ ಮತ್ತು ನಾನು ಐಪಿಎಲ್ ಆಡುತ್ತಿದ್ದಾಗ ನನಗೆ ಬಿಗ್ ಬ್ಯಾಷ್ ಲೀಗ್ನಿಂದ ಆಫರ್ ಬಂದಿತು. ಆಗ ನಾನು ಓಕೆ, ಎಷ್ಟು ಮೊತ್ತ ಎಂದು ಕೇಳಿದೆ. ಆದರೆ, 100,000 ಡಾಲರ್ ಹೇಳಿದ್ದರು ಎಂಬುದು ನನಗೆ ಇನ್ನೂ ನೆನೆಪಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.
ನಾನು ಆ ಹಣವನ್ನು ನನ್ನ ರಜಾ ದಿನಗಳಲ್ಲಿ ಖರ್ಚು ಮಾಡುವುದಕ್ಕಿಂತ ಕಡಿಮೆ ಎಂದಿದ್ದೆ. ಕಳೆದ ರಾತ್ರಿಯ ಬಿಲ್ ಕೂಡ ಅದಕ್ಕಿಂತ ಹೆಚ್ಚಾಗಿದೆ ಎಂದು 45 ವರ್ಷದ ತಮಾಷೆಯಾಗಿ ಹೇಳಿದ್ದಾರೆ. ಆದರೆ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬ ಕ್ರಿಕೆಟಿಗನಾಗಿ ತಮಾಷೆಯಾಗಿಯಾದರೂ ಇಂತಹ ಹೇಳಿಕೆ ನೀಡಬಾರದು ಎಂದು ಕೆಲವರು ಬುದ್ಧಿವಾದ ಹೇಳಿದ್ದಾರೆ. ಕೆಲವರು ಸೆಹ್ವಾಗ್ ಅವರನ್ನು ಬೆಂಬಲಿಸಿದ್ದಾರೆ.
ಜೈಸ್ವಾಲ್ಗೆ ಟಿ20 ವಿಶ್ವಕಪ್ ಟಿಕೆಟ್ ಖಚಿತ ಎಂದ ಸೆಹ್ವಾಗ್
ಇನ್ನು ಕ್ರಿಕ್ಬಜ್ ಚರ್ಚೆಯಲ್ಲಿ ಟಿ20 ವಿಶ್ವಕಪ್ ಕುರಿತು ಮಾತನಾಡಿದ ಸೆಹ್ವಾಗ್, ಯುವ ಆಟಗಾರ ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಲು ಬೆಂಬಲಿಸಿದ್ದಾರೆ. ಯಶಸ್ವಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ಗೆ ವಿಮಾನ ಹತ್ತುವುದು ಖಚಿತ ಎಂದು ಹೇಳಿದ್ದಾರೆ. ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಜೊತೆಗಿನ ಹೋಲಿಕೆಯ ಬಗ್ಗೆ ಜೈಸ್ವಾಲ್ ಹೆಚ್ಚು ಯೋಚಿಸಬಾರದು ಎಂದು ಸೆಹ್ವಾಗ್ ಸಲಹೆ ನೀಡಿದ್ದಾರೆ.
ನೋಡಿ, ನನ್ನ ಆರಂಭಿಕ ದಿನಗಳಲ್ಲಿ ನನ್ನನ್ನು ಸಚಿನ್ ತೆಂಡೂಲ್ಕರ್ ಜತೆ ಹೋಲಿಸಲಾಯಿತು. ಆದರೆ ನೀವು ಅದನ್ನು ಎಷ್ಟು ಬೇಗ ನಿಮ್ಮ ಮನಸ್ಸಿನಿಂದ ದೂರವಿಟ್ಟರೆ ಅಷ್ಟು ಒಳ್ಳೆಯದು. ಯಶಸ್ವಿ ಜೈಸ್ವಾಲ್ ನನ್ನೊಂದಿಗೆ ಹೋಲಿಸುವ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಹೋಲಿಕೆ ನಿಮಗೆ ನೋವುಂಟು ಮಾಡಬಹುದು. ತೆಂಡೂಲ್ಕರ್ ಅವರಂತೆ ನಾನು ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಜೈಸ್ವಾಲ್ಗೆ ತಿಳಿಸಿದ್ದಾರೆ.
ಸೆಹ್ವಾಗ್ ಸೆಹ್ವಾಗ್ ಆಗಿರಲಿ. ನಿಮ್ಮ ಆಟದ ಬಗ್ಗೆ ನಿಮಗೆ ಹೆಚ್ಚು ತಿಳಿದಿದೆ, ಅದರ ಮೇಲೆ ಕೆಲಸ ಮಾಡುವತ್ತ ಗಮನಹರಿಸಿ. ನಾನು ಹೋಲಿಕೆಗಳನ್ನು ನಂಬುವುದಿಲ್ಲ. ನನ್ನನ್ನು ಹೋಲಿಸಿದಾಗ, ನಾನು ನಿಲುವು ಮತ್ತು ಆಡುವ ರೀತಿಯಲ್ಲಿ ಕೆಲವು ಬದಲಾವಣೆ ಮಾಡಿದ್ದೇನೆ. ಆದ್ದರಿಂದ ಜನರು ನಾನು ತೆಂಡೂಲ್ಕರ್‌ನಂತೆ ಕಾಣುತ್ತೇನೆ ಅಥವಾ ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳುವುದನ್ನು ನಿಲ್ಲಿಸಿದ್ದರು. ಹೋಲಿಕೆಯ ಟ್ಯಾಗ್ ಅಪಾರ ಒತ್ತಡ ಹೊತ್ತು ತರುತ್ತದೆ. ಜೈಸ್ವಾಲ್ ಮೇಲೆ ನನಗೆ ಹೆಚ್ಚಿನ ಭರವಸೆ ಇದೆ. ಆತ ವಿಶ್ವಕಪ್ಗೆ ಅವಕಾಶ ಸಿಗುತ್ತದೆ ಎಂದು ಸೆಹ್ವಾಗ್ ಹೇಳಿದ್ದಾರೆ.