ಕನ್ನಡ ಸುದ್ದಿ  /  Cricket  /  Cricket News Ipl 2024 Srh Records Highest Total In Indian Premier League History With 277 Runs Beats Rcb 263 Vs Mi Jra

ಸನ್‌​ರೈಸರ್ಸ್ ಹೈದರಾಬಾದ್ ವಿಧ್ವಂಸಕ ಬ್ಯಾಟಿಂಗ್; ಆರ್‌​ಸಿಬಿ ನಿರ್ಮಿಸಿದ್ದ 263 ರನ್‌​ಗಳ ಸಾರ್ವಕಾಲಿಕ ದಾಖಲೆ ಧೂಳೀಪಟ!

Indian Premier League 2024 Updates: ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ದಾಖಲೆ ನಿರ್ಮಿಸಿದೆ. ಆ ಮೂಲಕ ಐಪಿಎಲ್‌ನಲ್ಲಿ ಆರ್‌ಸಿಬಿ ಮಾಡಿದ್ದ ದಾಖಲೆಯನ್ನು ಬ್ರೇಕ್‌ ಮಾಡಿದೆ. ಸ್ಫೋಟಕ 277 ರನ್‌ ಸಿಡಿಸುವ ಮೂಲಕ ಲೀಗ್‌ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಕಲೆ ಹಾಕಿದ ರೆಕಾರ್ಡ್‌ ನಿರ್ಮಿಸಿದೆ.

ಆರ್‌​ಸಿಬಿ ನಿರ್ಮಿಸಿದ್ದ 263 ರನ್‌​ಗಳ ಸಾರ್ವಕಾಲಿಕ ದಾಖಲೆ ಧೂಳೀಪಟ
ಆರ್‌​ಸಿಬಿ ನಿರ್ಮಿಸಿದ್ದ 263 ರನ್‌​ಗಳ ಸಾರ್ವಕಾಲಿಕ ದಾಖಲೆ ಧೂಳೀಪಟ (AP)

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಅಮೋಘ ದಾಖಲೆ ನಿರ್ಮಿಸಿದೆ. ಐಪಿಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ ಕಲೆ ಹಾಕಿದ ತಂಡ ಎಂಬ ನೂತನ ದಾಖಲೆ ನಿರ್ಮಿಸಿದ ಆ ಮೂಲಕ ಆರ್‌ಸಿಬಿ ತಂಡದ ಹೆಸರಲ್ಲಿದ್ದ ವಿಶೇಷ ದಾಖಲೆಯನ್ನು ಎಸ್‌ಆರ್‌ಎಚ್‌ ಅಳಿಸಿ ಹಾಕಿದೆ.

ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ನಡೆಸಿದ ಎಸ್‌ಆರ್‌ಎಚ್‌ ಸ್ಫೋಟಕ ಆಟವಾಡಿತು. ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ ಹಾಗೂ ಹೆನ್ರಿಚ್‌ ಕ್ಲಾಸೆನ್‌ ಅರ್ಧಶತಕದ ನೆರವಿಂದ ಕೇವಲ 3 ವಿಕೆಟ್‌ ಕಳೆದುಕೊಂಡು 277 ರನ್‌ ಸಿಡಿಸಿತು. ಇದು ಐಪಿಎಲ್‌ ಇತಿಹಾಸದಲ್ಲೇ ತಂಡವೊಂದರ ಅತ್ಯಧೀಕ ಮೊತ್ತವಾಗಿದೆ.

ಈ ಹಿಂದೆ ಐಪಿಎಲ್‌ ಇನ್ನಿಂಗ್ಸ್‌ ಒಂದರಲ್ಲಿ ಅಧಿಕ ರನ್‌ ಗಳಿಸಿದ ದಾಖಲೆ ಆರ್‌ಸಿಬಿ ಹೆಸರಲ್ಲಿತ್ತು. 2013ರ ಐಪಿಎಲ್‌ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ಆರ್‌ಸಿಬಿ 5 ವಿಕೆಟ್‌ ಕಳೆದುಕೊಂಡು 263 ರನ್‌ ಗಳಿಸಿತ್ತು. ಇದು ಈವರೆಗೂ ಐಪಿಎಲ್‌ನ ಅತ್ಯಧಿಕ ಮೊತ್ತವಾಗಿತ್ತು. ಆದರೆ, 11 ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಾಡಿದ್ದ ದಾಖಲೆ ಮುರಿದಿದೆ. ಈ ದಾಖಲೆ ಇದೀಗ ಸನ್‌ರೈಸರ್ಸ್‌ ಹೆಸರಿಗೆ ದಾಖಲಾಗಿದೆ.

ಐಪಿಎಲ್‌ ಇನ್ನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತ

  • 277/3 - ಎಸ್‌ಆರ್‌ಎಚ್‌ (ಮುಂಬೈ ಇಂಡಿಯನ್ಸ್‌ ವಿರುದ್ಧ) ಹೈದರಾಬಾದ್, 2024
  • 263/5 - ಆರ್‌ಸಿಬಿ (ಪುಣೆ ವಾರಿಯರ್ಸ್‌ ವಿರುದ್ಧ) ಬೆಂಗಳೂರು, 2013
  • 257/5 - ಎಲ್‌ಎಸ್‌ಜಿ (ಪಂಜಾಬ್‌ ಕಿಂಗ್ಸ್‌ ವಿರುದ್ಧ) ಮೊಹಾಲಿ, 2023
  • 248/3 - ಆರ್‌ಸಿಬಿ (ಗುಜರಾತ್‌ ಲಯನ್ಸ್‌ ವಿರುದ್ಧ) ಬೆಂಗಳೂರು, 2016
  • 246/5 - ಸಿಎಸ್‌ಕೆ (ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ) ಚೆನ್ನೈ, 2010

ಸನ್‌ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾಗಿ ಕಣಕ್ಕಿಳಿದ ಹೆಡ್‌, ಆರಂಭದಿಂದಲೇ ಸ್ಫೋಟಕ ಆಟವಾಡಿದರು. ಆ ಮೂಲಕ ವೇಗವಾಗಿ ಅರ್ಧಶತಕ ಸಿಡಿಸಿದರು. ಎಸ್‌ಆರ್‌ಎಚ್‌ ಪರ ಮೊದಲ ಪಂದ್ಯವಾಡಿದ ಅವರು, ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಮೂಲಕ ಸನ್‌ರೈಸರ್ಸ್‌ ಪರ ವೇಗದ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದರು. ಇದೇ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಕೇವಲ 16 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಮೂಲಕ ಹೆಡ್‌ ದಾಖಲೆ ಮುರಿದರು.

ಇದನ್ನೂ ಓದಿ | ಒಂದೇ ಪಂದ್ಯದಲ್ಲಿ ಎರಡು ವೇಗದ ಅರ್ಧಶತಕ; ಕೆಲವೇ ಓವರ್​ಗಳ ಅಂತರದಲ್ಲಿ ಟ್ರಾವಿಡ್ ಹೆಡ್ ದಾಖಲೆ ಮುರಿದ ಅಭಿಷೇಕ್ ಶರ್ಮಾ

ಹೈದರಾಬಾದ್‌ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದವರು ಅಭಿಷೇಕ್.‌ ಕೇವಲ 23 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್‌ ಸಹಿತ 63 ರನ್‌ ಪೇರಿಸಿದರು. ಹೆನ್ರಿಚ್‌ ಕ್ಲಾಸೆನ್‌ ಸತತ ಎರಡನೇ ಪಂದ್ಯದಲ್ಲಿ ಸ್ಫೋಟಕ ಪ್ರದರ್ಶನ ನೀಡಿ ಅರ್ಧಶತಕ ಸಿಡಿಸಿದರು. ಕೇವಕ 34 ಎಸೆತ ಎದುರಿಸಿದ ಅವರು 4 ಬೌಂಡರಿ ಹಾಗೂ 7 ಮಾರಕ ಸಿಕ್ಸರ್‌ ನೆರವಿಂದ 80 ರನ್‌ ಸಿಡಿಸಿದರು. ಇವರಿಗೆ ಜೊತೆಯಾದ ಐಡೆನ್‌ ಮರ್ಕ್ರಾಮ್‌ 42 ರನ್‌ ಗಳಿಸಿದರು.

ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಇದು ನಾಲ್ಕನೇ ಗರಿಷ್ಠ ಮೊತ್ತವಾಗಿದೆ. ಅಧಿಕ ರನ್‌ ಗಳಿಸಿದ ದಾಖಲೆ ನೇಪಾಳ ಹೆಸರಲ್ಲಿದೆ.

ಪಂದ್ಯದಲ್ಲಿ ಮುಂಬೈ ತಂಡವು ಟಾಸ್‌ ಗೆದ್ದು ಮೊದಲಿಗೆ ಬೌಲಿಂಗ್‌ ಆಯ್ಕೆ ಮಾಡಿತು. ಎಸ್‌ಆರ್‌ಎಚ್‌ ತಂಡವು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಜಾನ್ಸೆನ್‌ ಮತ್ತು ನಟರಾಜನ್‌ ಬದಲಿಗೆ ಜೈದೇವ್‌ ಉನದ್ಕತ್‌ ಮತ್ತು ಟ್ರಾವಿಸ್‌ ಹೆಡ್‌ ಆಡುತ್ತಿದ್ದಾರೆ.