IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ. ವಿರಾಟ್ ಕೊಹ್ಲಿ, ನಾಯಕ ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್ ಹಾಗೂ ಗ್ರೀನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಬೆಂಗಳೂರು: ಗೆಲ್ಲಲೇಬೇಕಾದ ಹೈವೋಲ್ಟೇಜ್ ಪಂದ್ಯದಲ್ಲಿ ಅಗ್ರ ಬ್ಯಾಟರ್‌ಗಳ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಫಲವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗೆ 219 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ತಂಡಕ್ಕೆ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟರು. ಈ ಜೋಡಿ ಮುರಿಯದ ಮೊದಲ ವಿಕೆಟ್ ನಷ್ಟಕ್ಕೆ 9.4 ಓವರ್‌ಗಳಲ್ಲಿ 78 ರನ್ ಗಳಿಸಿತು. ವಿರಾಟ್ ಕೊಹ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದರು. 3 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ ಸೇರಿ 47 ರನ್ ಗಳಿಸಿದ್ದಾಗ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು.
ಫಾಫ್ ಡು ಪ್ಲೆಸಿಸ್ ಕೂಡ ಅಬ್ಬರದ ಬ್ಯಾಟಿಂಗ್ ಮಾಡಿದರರು. ನಾಯಕ 39 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ 54 ರನ್ ಗಳಿಸಿ ಮೂರನೇ ಅಂಪೈರ್ ನೀಡಿದ ಕೆಟ್ಟ ತೀರ್ಪಿನಿಂದ ರನೌಟ್ ಆಗಿ ಬೇಸರದಿಂದಲೇ ಪೆವಿಲಿಯನ್‌ಗೆ ತೆರಳಿದರು.
ವಿರಾಟ್ ಮತ್ತು ಡು ಪ್ಲೆಸಿಸ್ ವಿಕೆಟ್ ಬಳಿಕ ಜೊತೆಗೂಡಿದ ರಜತ್ ಪಾಟಿದಾರ್ ಮತ್ತು ಕ್ಯಾಮರೂನ್ ಗ್ರೀನ್ ಅದ್ಭುತ ಬೌಂಡರಿಗಳ ಮೂಲಕ ತಂಡವನ್ನು ಮೊತ್ತವನ್ನು 150 ರ ಗಡಿದಾಟಿಸಿದರು. ಹಿಂದಿನ ಪಂದ್ಯಗಳಲ್ಲಿ ಸತತ 5 ಅರ್ಧ ಶತಕಗಳನ್ನು ಸಿಡಿಸಿದ್ದ ರಜತ್ ಪಾಟಿದಾರ್ ಅವರ ಬ್ಯಾಟ್ ಇವತ್ತೂ ಕೂಡ ಚೆಂಡನ್ನು ಬೌಂಡರಿ ಗೆರೆದಾಟಿಸುತ್ತಿದ್ದರೆ ನೆರೆದಿದ್ದ ಅಭಿಮಾನಿಗಳು ಹರ್ಷೋದ್ಗಾರಗಳು ಮುಗಿಲು ಮುಟ್ಟುವಂತಿದ್ದವು. ಪಾಟಿದಾರ್ 23 ಎಸೆತಗಳಿಂದ 2 ಬೌಂಡರಿ ಹಾಗೂ 4 ಸೂಪರ್ ಸಿಕ್ಸರ್ ಸೇರಿ 41 ರನ್ ಗಳಿಸಿ ಔಟಾದರು.
ದಿನೇಶ್ ಕಾರ್ತಿಕ್ 14 ರನ್ ಗಳಿಸಿ ತುಷಾರ್ ದೇಶಪಾಂಡೆ ಅವರಿಗೆ ವಿಕೆಟ್ ಒಪ್ಪಿಸಿದರು. ಮ್ಯಾಕ್ಸ್‌ವೆಲ್ 5 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡು 16 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಲು ನೆರವಾದರು. ಗ್ರೀನ್ 17 ಎಸೆತಗಳಿಂದ 37 ರನ್ ಗಳಿಸಿ ಔಟಾಗದೆ ಉಳಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಪೇರಿಸಿದೆ. ಸಿಎಸ್‌ಕೆ ಪರ ಶಾರ್ದೂಲ್ ಠಾಕೂರ್ ಎರಡು ವಿಕೆಟ್ ಪಡೆದಿದ್ದಾರೆ. ತುಷಾರ್ ದೇಶಪಾಂಡೆ ಹಾಗೂ ಸ್ಯಾಂಟ್ನರ್ ತಲಾ 1 ವಿಕೆಟ್ ಕಿತ್ತರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
