ಕೆಕೆಆರ್ ವಿರುದ್ಧ ಆರ್ಸಿಬಿ ತಂಡಕ್ಕೆ ವಿರೋಚಿತ ಸೋಲು; ಫಾಫ್ ಪಡೆ ಪ್ಲೇಆಫ್ ರೇಸ್ನಿಂದ ಬಹುತೇಕ ಔಟ್
KKR vs RCB: 17ನೇ ಆವೃತ್ತಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 1 ರನ್ನಿಂದ ರೋಚಕ ಗೆಲುವು ದಾಖಲಿಸಿತು. ಇದರೊಂದಿಗೆ ಆರ್ಸಿಬಿ ಪ್ಲೇಆಫ್ ರೇಸ್ನಿಂದ ಬಹುತೇಕ ಬೀಳುವಂತಾಯಿತು.
ವಿಲ್ ಜಾಕ್ಸ್ ಮತ್ತು ರಜತ್ ಪಾಟೀದಾರ್ ಹೋರಾಟದ ನಡುವೆಯೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ರನ್ನಿಂದ ವಿರೋಚಿತ ಸೋಲು ಅನುಭವಿಸಿತು. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್ಸಿಬಿ ಸತತ 6ನೇ ಹಾಗೂ ಒಟ್ಟು 7ನೇ ಸೋಲಿಗೆ ಶರಣಾಯಿತು. ಅಲ್ಲದೆ, ಪ್ಲೇಆಫ್ ರೇಸ್ನಿಂದ ಬಹುತೇಕ ಹೊರಬಿದ್ದಿತು. ಉಳಿದ ಆರು 6 ಪಂದ್ಯಗಳಲ್ಲಿ ಗೆದ್ದರೂ ಪ್ಲೇಆಫ್ಗೇರುವುದು ಅಸಾಧ್ಯ. ಮತ್ತೊಂದೆಡೆ ಕೆಕೆಆರ್, ಟೂರ್ನಿಯಲ್ಲಿ 5ನೇ ಜಯದ ನಗೆ ಬೀರಿತು.
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಬೃಹತ್ ಮೊತ್ತ ಪೇರಿಸಿತು. ಫಿಲ್ ಸಾಲ್ಟ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಆಕರ್ಷಕದ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ 221ಕ್ಕೆ ಆಲೌಟ್ ಆಯಿತು. ವಿಲ್ ಜಾಕ್ಸ್ ಮತ್ತು ರಜತ್ ಪಾಟೀದಾರ್ ಅವರು ತಲಾ ಸ್ಫೋಟಕ ಅರ್ಧಶತಕ ಶತಕ ಸಿಡಿಸಿ ಮಿಂಚಿದರೂ ಗೆಲುವು ಸಾಧ್ಯವಾಗಲಿಲ್ಲ. ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ಸೋಲಿಗೆ ಶರಣಾಯಿತು.
ಆರ್ಸಿಬಿ ಬ್ಯಾಟಿಂಗ್
223 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ, ಆರಂಭದಲ್ಲೇ ಆರಂಭಿಕರನ್ನು ಕಳೆದುಕೊಂಡಿತು. ವಿರಾಟ್ ಕೊಹ್ಲಿ (18), ಫಾಫ್ ಡು ಪ್ಲೆಸಿಸ್ (7) ಬೇಗನೇ ಔಟಾದರು. ಬಳಿಕ ರಜತ್ ಪಾಟೀದಾರ್ ಮತ್ತು ವಿಲ್ ಜಾಕ್ಸ್ ಮೂರನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದರು. ಅಲ್ಲದೆ, ಇಬ್ಬರು ಸಹ ಬಿರುಸಿನ ಅರ್ಧಶತಕಗಳನ್ನು ಸಿಡಿಸಿ ತಂಡಕ್ಕೆ ಆಸರೆಯಾದರು. ಆರ್ಸಿಬಿ ಡಗೌಟ್ನಲ್ಲೂ ಆಟಗಾರರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ ಆಂಡ್ರೆ ರಸೆಲ್ ಆರ್ಸಿಬಿ ಕನಸನ್ನು ನುಚ್ಚು ನೂರು ಮಾಡಿದರು.
ಜಾಕ್ಸ್ 32 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಿತ 55 ರನ್ ಗಳಿಸಿದರೆ, ಪಾಟೀದಾರ್ 23 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸಹಿತ 52 ರನ್ ಸಿಡಿಸಿ ಔಟಾದರು. ರಸೆಲ್ ಒಂದೇ ಓವರ್ನಲ್ಲಿ ಔಟ್ ಮಾಡಿದರು. ಇದರೊಂದಿಗೆ ಕ್ಯಾಮರೂನ್ ಗ್ರೀನ್ 6, ಸುಯೇಶ್ ಪ್ರಭುದೇಸಾಯಿ 24, ಮಹಿಪಾಲ್ ಲೊಮ್ರೊರ್ 4, ದಿನೇಶ್ ಕಾರ್ತಿಕ್ 25 ರನ್ ಸಿಡಿಸಿದರು. ಕೊನೆಯ ಓವರ್ನಲ್ಲಿ ಗೆಲುವಿಗೆ 21 ರನ್ ಬೇಕಿತ್ತು. ಆದರೆ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ 6 ಸಿಕ್ಸರ್ ಬಾರಿಸಿದ ಕರ್ಣ್ ಶರ್ಮಾ, ಕೆಕೆಆರ್ ಗೆಲುವು ಕಸಿಯಲು ಯತ್ನಿಸಿದರು.
ಕೆಕೆಆರ್ ಬ್ಯಾಟಿಂಗ್
ಆದರೆ ಕೊನೆಯ ಓವರ್ನ 5ನೇ ಎಸೆತದಲ್ಲಿ ಔಟಾದರು. ಹಾಗಾಗಿ ಅಂತಿಮ ಎಸೆತದಲ್ಲಿ ಎರಡು ರನ್ ಓಡಲು ಪ್ರಯತ್ನಿಸಿ ಲಾಕಿ ಫರ್ಗುಸನ್ ಔಟ್ ಆದರು. ಹೀಗಾಗಿ ಆರ್ಸಿಬಿ 1 ರನ್ನಿಂದ ಸೋಲೊಪ್ಪಿಕೊಂಡಿತು. ಆಂಡ್ರೆ ರಸೆಲ್ 3 ವಿಕೆಟ್, ಹರ್ಷಿತ್ ರಾಣಾ, ಸುನಿಲ್ ನರೇನ್ ತಲಾ 2 ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ಉತ್ತಮ ಆರಂಭ ಪಡೆಯಿತು. ಫಿಲ್ ಸಾಲ್ಟ್ ನಾಲ್ಕನೇ ಓವರ್ನಲ್ಲಿ 28 ರನ್ ಚಚ್ಚುವ ಮೂಲಕ ಮೊದಲ ವಿಕೆಟ್ಗೆ 50 ರನ್ಗಳ ಜೊತೆಯಾಟ ತಂದುಕೊಟ್ಟರು. ಸಾಲ್ಟ್ ಅಬ್ಬರಿಸಿದರೆ, ಸುನಿಲ್ ನರೇನ್ (10) ನಿರಾಸೆ ಮೂಡಿಸಿದರು. ನರೇನ್ ಬಳಿಕ ಆಂಗ್ಕ್ರಿಶ್ ರಘುವಂಶಿ (3), ವೆಂಕಟೇಶ್ ಅಯ್ಯರ್ (16) ಕೂಡ ಬೇಗನೇ ನಿರ್ಗಮಿಸಿದರು. ಅಲ್ಲದೆ, ಕೇವಲ 14 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 48 ಚಚ್ಚಿದ ಸಾಲ್ಟ್ ಕೂಡ ಔಟಾದರು.
ಯಶ್ ದಯಾಳ್, ಸಿರಾಜ್, ಕ್ಯಾಮರೂನ್ ಗ್ರೀನ್ ಈ ಹಂತದಲ್ಲಿ ಮೇಲುಗೈ ಸಾಧಿಸಿದರು. ನಂತರ ಶ್ರೇಯಸ್ ಅಯ್ಯರ್ ಆಕರ್ಷಕ ಅರ್ಧಶತಕ ಸಿಡಿಸಿದರು. ರಿಂಕು ಸಿಂಗ್ 24, ಆಂಡ್ರೆ ರಸೆಲ್ 27* ಮತ್ತು ರಮಣ್ದೀಪ್ 24 ರನ್ಗಳ ಕಾಣಿಕೆ ನೀಡಿದರು. ಹೀಗಾಗಿ ಕೆಕೆಆರ್ 200 ರನ್ಗಳ ಗಡಿದಾಟಿತು. ಯಶ್ ದಯಾಳ್, ಗ್ರೀನ್ ತಲಾ 2 ವಿಕೆಟ್ ಪಡೆದರು. ಸಿರಾಜ್, ಲಾಕಿ ಫರ್ಗುಸನ್ ತಲಾ 1 ವಿಕೆಟ್ ಪಡೆದರು.