ತಪ್ಪಾಗಿ ಖರೀದಿಸಿದ್ದ ಶಶಾಂಕ್ ಸಿಂಗ್ ಕುರಿತು ಮೌನ ಮುರಿದ ಪ್ರೀತಿ ಜಿಂಟಾ; ಸುದೀರ್ಘ ಪೋಸ್ಟ್ ಮೂಲಕ ಆತನನ್ನು ಕೊಂಡಾಡಿದ ನಟಿ!
Preity Zinta on Shashank Singh : ಹರಾಜಿನಲ್ಲಿ ಅಂದು ತಪ್ಪಾಗಿ ಖರೀದಿಸಲಾಗಿದ್ದ ಶಶಾಂಕ್ ಸಿಂಗ್ ಅವರ ಆಟಕ್ಕೆ ಮನಸೋತ ಪಂಜಾಬ್ ಕಿಂಗ್ಸ್ ತಂಡದ ಮಾಲಕಿ ಪ್ರೀತಿ ಜಿಂಟಾ ಆತನ ಆಟವನ್ನು ಶ್ಲಾಘಿಸಿದ್ದಾರೆ.

2023ರ ಡಿಸೆಂಬರ್ 19ರಂದು 2024ರ ಐಪಿಎಲ್ ಮಿನಿ ಹರಾಜಿನಲ್ಲಿ (IPL Mini Auction) ತಪ್ಪಾಗಿ ಖರೀದಿಸಿದ್ದ ಆಟಗಾರ ಶಶಾಂಕ್ ಸಿಂಗ್ (Shashank Singh) ಕುರಿತು ಪಂಜಾಬ್ ಕಿಂಗ್ಸ್ (Punjab Kings) ಒಡತಿ ಹಾಗೂ ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ಅವರು ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ. 17ನೇ ಆವೃತ್ತಿಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಪಂಜಾಬ್ ಕಿಂಗ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದ ಶಶಾಂಕ್ ಸಿಂಗ್ ಅವರನ್ನು ಖರೀದಿಸಿದ್ದೇ ತಪ್ಪಾಗಿ!
ಪಂಜಾಬ್ ಕಿಂಗ್ಸ್ ತನ್ನ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಂತಿಮ ಓವರ್ನಲ್ಲಿ ಮಿಂಚಿದ್ದ ಶಶಾಂಕ್ ಸಿಂಗ್, ಮತ್ತೊಮ್ಮೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ವಿರುದ್ಧ ಮ್ಯಾಚ್-ವಿನಿಂಗ್ ಇನ್ನಿಂಗ್ಸ್ ಕಟ್ಟಿದ ಶಶಾಂಕ್ 29 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 61 ರನ್ ಗಳಿಸಿದರು. ಸೋಲುವ ಪಂದ್ಯವನ್ನೂ ಗೆಲ್ಲಿಸಿಕೊಟ್ಟರು.
ಅಂದು ಹರಾಜಿನಲ್ಲಿ ಈತನನ್ನು ಪಿಬಿಕೆಎಸ್ ತಪ್ಪಾಗಿ ಖರೀದಿಸಿತ್ತು. ಆದರೆ ಆ ಒಂದು ತಪ್ಪು ಇಂದು ಪಂಜಾಬ್ಗೆ ವರವಾಗಿದ್ದು, ಆತನೇ ತಂಡದ ಪರ ಹೀರೋ ಆಗಿರುವುದು ವಿಶೇಷ. ದೇಶೀಯ ಕ್ರಿಕೆಟರ್ಗಳ ಬಿಡ್ನಲ್ಲಿದ್ದ ಹೆಸರುಗಳ ಪೈಕಿ ಶಶಾಂಕ್ ಸಿಂಗ್ ಕೂಡ ಒಬ್ಬರಾಗಿದ್ದರು. ಈತನ ಹೆಸರು ಕೂಗಿದಾಗ ಪ್ರೀತಿ ಜಿಂಟಾ 20 ಲಕ್ಷ ಮೂಲ ಬೆಲೆಗೆ ಬಿಡ್ ಸಲ್ಲಿಸಿದರು. ಆದರೆ ಯಾವ ತಂಡವು ಬಿಡ್ ಸಲ್ಲಿಸದ ಕಾರಣ ಪಿಬಿಕೆಎಸ್ ಪಾಲಾದರು.
ಆದರೆ, ಆ ಬಳಿಕ ತಾವು ಖರೀದಿಸಬೇಕಿದ್ದ ಆಟಗಾರ ಇವರಲ್ಲ ಎಂದು ತಿಳಿದುಕೊಂಡ ಪಂಜಾಬ್, ಬಿಡ್ಡಿಂಗ್ ವಾಪಸ್ ಪಡೆಯುವಂತೆ ಹರಾಜು ನಡೆಸಿಕೊಟ್ಟ ಮಲ್ಲಿಕಾ ಸಾಗರ್ಗೆ ಮನವಿ ಮಾಡಿತ್ತು. ಆದರೆ ಮಲ್ಲಿಕಾ ನಿರಾಕರಿಸಿದ್ದರು. ಅಂದು ತಪ್ಪಾಗಿ ಖರೀದಿಸಲಾಗಿದ್ದ ಆಟಗಾರ ಪಂದ್ಯ ಗೆಲ್ಲಿಸಿಕೊಟ್ಟು ತಂಡದ ಮಾಲಕಿ ಪ್ರೀತಿ ಜಿಂಟಾ ಮನ ಗೆದ್ದಿದ್ದಾರೆ. ಆತನ ಟಿಪ್ಪಣಿ ಬರೆದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. 32 ವರ್ಷದ ಶಶಾಂಕ್ ಆಟವನ್ನು ಶ್ಲಾಘಿಸಿದ್ದಾರೆ.
ಶಶಾಂಕ್ ಬಗ್ಗೆ ಪ್ರೀತಿ ಜಿಂಟಾ ಸುದೀರ್ಘ ಪೋಸ್ಟ್
'ಹರಾಜಿನಲ್ಲಿ ನಮ್ಮ ಬಗ್ಗೆ ಹಿಂದೆ ಹೇಳಿದ ವಿಷಯಗಳ ಬಗ್ಗೆ ಅಂತಿಮವಾಗಿ ಮಾತನಾಡಲು ಇಂದು ಸೂಕ್ತ ದಿನವೆಂದು ತೋರುತ್ತದೆ. ಇದೇ ರೀತಿಯ ಪರಿಸ್ಥಿತಿಗಳಲ್ಲಿ ಬಹಳಷ್ಟು ಜನರು ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಒತ್ತಡದಲ್ಲಿ ಕುಗ್ಗಿ ಹೋಗಿದ್ದಾರೆ ಅಥವಾ ಡಿ-ಮೋಟಿವೇಟೆಡ್ ಆಗಿದ್ದಾರೆ. ಆದರೆ ಶಶಾಂಕ್ ಆ ರೀತಿ ಆಗಿಲ್ಲ! ಕೇವಲ ಆಟಗಾರರಾಗಿ ಕೌಶಲ್ಯದಿಂದಾಗಿ ಮಾತ್ರವಲ್ಲದೆ ಸಕಾರಾತ್ಮಕ ಮನೋಭಾವ ಮತ್ತು ನಂಬಲಾಗದ ಆತ್ಮ ವಿಶ್ವಾಸದಿಂದ ಅವರು ನಿಜವಾಗಿಯೂ ವಿಶೇಷ ಮತ್ತು ವಿಭಿನ್ನ ವ್ಯಕ್ತಿ' ಎಂದು ಶಶಾಂಕ್ ಅವರನ್ನು ಜಿಂಟಾ ಕೊಂಡಾಡಿದ್ದಾರೆ.
'ಶಶಾಂಕ್ ಅವರು ಕಾಮೆಂಟ್ಗಳು, ಜೋಕ್ಗಳನ್ನು ತುಂಬಾ ಕ್ರೀಡಾ ಮನೋಭಾವದಿಂದ ತೆಗೆದುಕೊಂಡರು. ಇದರಿಂದ ಎಂದಿಗೂ ಬಲಿಪಶುವಾಗಲಿಲ್ಲ. ಅವರು ತನ್ನನ್ನು ತಾನೇ ಬೆಂಬಲಿಸಿಕೊಂಡರು. ತಾನು ಏನು ಮಾಡಬೇಕೆಂದು ಬಯಸಿದ್ದರು ಎಂಬುದನ್ನು ನಮಗೆ ತೋರಿಸಿದ್ದಾರೆ. ಅದಕ್ಕಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ. ಅವರು ನನ್ನ ಮೇಲೆ ವಿಶೇಷ ಅಭಿಮಾನ ಮತ್ತು ಗೌರವ ಹೊಂದಿದ್ದಾರೆ' ಎಂದು ಪಂಜಾಬ್ ಕಿಂಗ್ಸ್ ಒಡತಿ ಹೇಳಿದ್ದಾರೆ.
'ಶಶಾಂಕ್ ಸಾಕಷ್ಟು ಮಂದಿಗೆ ಉದಾಹರಣೆಯಾಗಬಹುದು ಎಂದು ನಾನು ಭಾವಿಸುತ್ತೇನೆ. ಜನರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದು ಮುಖ್ಯವಲ್ಲ, ಆದರೆ ನಿಮ್ಮ ಬಗ್ಗೆ ನೀವು ಏನು ಯೋಚಿಸುತ್ತೀರಿ! ಹಾಗಾಗಿ ಶಶಾಂಕ್ ಅವರಂತೆ ನಿಮ್ಮ ಮೇಲೆ ನಂಬಿಕೆ ಇಡುವುದನ್ನು ನಿಲ್ಲಿಸಬೇಡಿ. ಜೀವನದ ಆಟದಲ್ಲಿ ನೀವು ಮ್ಯಾನ್ ಆಫ್ ದಿ ಮ್ಯಾಚ್ ಆಗುತ್ತೀರಿ ಎಂದು ನನಗೆ ಖಾತ್ರಿಯಿದೆ' ಎಂದು ಜಿಂಟಾ ಇನ್ಸ್ಟಾಗ್ರಾಂ ಸುದೀರ್ಘ ಪೋಸ್ಟ್ ಹಾಕಿದ್ದಾರೆ.
