ಗೆದ್ದು ಲೀಗ್​ ಮುಗಿಸಿದ ಲಕ್ನೋ ಸೂಪರ್ ಜೈಂಟ್ಸ್; ತವರಿನಲ್ಲಿ ಮುಂಬೈ ಇಂಡಿಯನ್ಸ್​ಗೆ ಮತ್ತೆ ಮುಖಭಂಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಗೆದ್ದು ಲೀಗ್​ ಮುಗಿಸಿದ ಲಕ್ನೋ ಸೂಪರ್ ಜೈಂಟ್ಸ್; ತವರಿನಲ್ಲಿ ಮುಂಬೈ ಇಂಡಿಯನ್ಸ್​ಗೆ ಮತ್ತೆ ಮುಖಭಂಗ

ಗೆದ್ದು ಲೀಗ್​ ಮುಗಿಸಿದ ಲಕ್ನೋ ಸೂಪರ್ ಜೈಂಟ್ಸ್; ತವರಿನಲ್ಲಿ ಮುಂಬೈ ಇಂಡಿಯನ್ಸ್​ಗೆ ಮತ್ತೆ ಮುಖಭಂಗ

MI vs LSG Highligts: 17ನೇ ಆವೃತ್ತಿಯ ಐಪಿಎಲ್​​ನ 67ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್ _ ರನ್​ಗಳ ಅಂತರದಿಂದ ಗೆಲುವು ಸಾಧಿಸಿದೆ.

ಗೆದ್ದು ಲೀಗ್​ ಮುಗಿಸಿದ ಲಕ್ನೋ ಸೂಪರ್ ಜೈಂಟ್ಸ್; ತವರಿನಲ್ಲಿ ಸೋತು ಮುಖಭಂಗಕ್ಕೆ ಒಳಗಾದ ಮುಂಬೈ ಇಂಡಿಯನ್ಸ್
ಗೆದ್ದು ಲೀಗ್​ ಮುಗಿಸಿದ ಲಕ್ನೋ ಸೂಪರ್ ಜೈಂಟ್ಸ್; ತವರಿನಲ್ಲಿ ಸೋತು ಮುಖಭಂಗಕ್ಕೆ ಒಳಗಾದ ಮುಂಬೈ ಇಂಡಿಯನ್ಸ್ (AP)

ಐಪಿಎಲ್​ ಪ್ಲೇಆಫ್​​ಗೆ ಪ್ರವೇಶ ಪಡೆಯಲು ಅಲ್ಲದಿದ್ದರೂ ಪ್ರತಿಷ್ಠೆಗಾಗಿ ಹೋರಾಡಿದ ಕದನದಲ್ಲಿ ಲಕ್ನೋ ಸೂಪರ್ ಜೈಂಟ್ಸ್​ (LSG) ಗೆಲುವು ಸಾಧಿಸಿ ಅಭಿಯಾನ ಮುಕ್ತಾಯಗೊಳಿಸಿದೆ. ಆದರೆ ಮುಂಬೈ ಇಂಡಿಯನ್ಸ್ (MI)​ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ತವರಿನ ಮೈದಾನದಲ್ಲಿ ಸೋತು, ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಟೂರ್ನಿಯಲ್ಲಿ 10ನೇ ಪರಾಜಯದೊಂದಿಗೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದೊಂದಿಗೆ ಟೂರ್ನಿ ಮುಗಿಸಿದೆ. ಇತ್ತ ಗೆದ್ದರೂ ಪ್ಲೇಆಫ್​ಗೆ​ ಲಗ್ಗೆಯಿಡಲಾಗದ ಲಕ್ನೋ 6ನೇ ಸ್ಥಾನಕ್ಕೇರಿದ್ದು, ಸತತ 3ನೇ ಬಾರಿಗೆ ಅಗ್ರ-4ರಲ್ಲಿ ಸ್ಥಾನ ಪಡೆಯಲು ವಿಫಲವಾಯಿತು.

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರತಿಷ್ಠೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್, ನಿಕೋಲಸ್ ಪೂರನ್ (75) ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಬೃಹತ್ ಮೊತ್ತ ಪೇರಿಸಿತು. 20 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ನುವಾನ್ ತುಷಾರ ಮತ್ತು ಪಿಯೂಷ್ ಚಾವ್ಲಾ ತಲಾ 3 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಅಂತಿಮವಾಗಿ 18 ರನ್​​ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಲಯಕ್ಕೆ ಮರಳಿದ ರೋಹಿತ್​ ಅರ್ಧಶತಕ ವ್ಯರ್ಥ

215 ರನ್​​ಗಳ ಗುರಿ ಬೆನ್ನಟ್ಟಿದ ಮುಂಬೈ ಉತ್ತಮ ಆರಂಭ ಪಡೆಯಿತು. ರೋಹಿತ್​ ಶರ್ಮಾ ಮತ್ತು ಡೆವಾಲ್ಡ್ ಬ್ರೆವಿಸ್ ಮೊದಲ ವಿಕೆಟ್​ಗೆ 88 ರನ್ ಕಲೆ ಹಾಕಿದರು. ಬ್ರೆವಿಸ್ 23 ರನ್ ಗಳಿಸಿ ರೋಹಿತ್​ಗೆ ಸಖತ್ ಸಾಥ್ ನೀಡಿದರು. ಹಿಟ್​ಮ್ಯಾನ್​ ತನ್ನ ಕೊನೆಯ ಲೀಗ್​ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಲಯಕ್ಕೆ ಮರಳಿದರು. ಕಳೆದ ಆರು ಪಂದ್ಯಗಳಲ್ಲಿ ಘನಘೋರ ವೈಫಲ್ಯ ಅನುಭವಿಸಿದರು. 38 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್​​ಗಳ ಸಹಿತ 68 ರನ್ ಗಳಿಸಿ ಔಟಾದರು.

ಇನ್ನು ಸೂರ್ಯಕುಮಾರ್ ಯಾದ ಡಕೌಟ್ ಆದರೆ, ಹಾರ್ದಿಕ್ ಪಾಂಡ್ಯ 16ಕ್ಕೆ ಆಟ ಮುಗಿಸಿದರು. ನೇಹಾಲ್ ವದೇರಾ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಇಶಾನ್ ಕಿಶನ್ ಮತ್ತು ನಮನ್ ಧೀರ್ ಹೋರಾಟ ನಡೆಸಿದರಾದರೂ ಪ್ರಯತ್ನ ವಿಫಲವಾಯಿತು. ನಮನ್ ಧೀರ್​ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ಇಶಾನ್ ಕಿಶನ್ 14 ರನ್ ಗಳಿಸಿದರೆ, ನಮನ್ ಅಜೇಯ 62 ರನ್ ಕಲೆ ಹಾಕಿದರು. ಲಕ್ನೋ ಪರ ನವೀನ್ ಉಲ್ ಹಕ್, ರವಿ ಬಿಷ್ಣೋಯ್​ ತಲಾ 2 ವಿಕೆಟ್ ಪಡೆದರು.

ನಿಕೋಲಸ್ ಪೂರನ್ ಅಬ್ಬರದ ಅರ್ಧಶತಕ

ಮೊದಲು ಬ್ಯಾಟ್ ಮಾಡಿದ ಲಕ್ನೋ, ಮೊದಲ ಓವರ್​​ನಲ್ಲೇ ದೇವದತ್ ಪಡಿಕ್ಕಲ್ (0)​ ಅವರನ್ನು ಕಳೆದುಕೊಂಡಿತು. ಬಳಿಕ ಮಾರ್ಕಸ್ ಸ್ಟೋಯ್ನಿಸ್ 28 ರನ್​​ಗಳಿಗೆ ಆಟ ಮುಗಿಸಿದರು. ದೀಪಕ್ ಹೂಡಾ (11) ಸಹ ನಿರಾಸೆ ಮೂಡಿಸಿದರು. ಆದರೆ ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೆಎಲ್ ರಾಹುಲ್ ಆಕರ್ಷಕ ಅರ್ಧಶತಕ ಸಿಡಿಸಿ ಆಸರೆಯಾದರು. ನಿಕೋಲಸ್ ಪೂರನ್ ಸಿಡಿಲಬ್ಬರದ ಹಾಫ್ ಸೆಂಚುರಿ ಸಿಡಿಸಿದರು. ಹೀಗಾಗಿ ಎಲ್​ಎಸ್​ಜಿ ಬೃಹತ್​ ಮೊತ್ತವನ್ನು ದಾಖಲಿಸಲು ನೆರವಾದರು.

ರಾಹುಲ್ ಮತ್ತು ಪೂರನ್ ನಾಲ್ಕನೇ ವಿಕೆಟ್​ಗೆ 109 ರನ್​ಗಳ ಪಾಲುದಾರಿಕೆ ನೀಡಿದರು. ಕೆಎಲ್ ರಾಹುಲ್ ನಿಧಾನವಾಗಿ ಬ್ಯಾಟ್ ಬೀಸಿ 41 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್​ ಸಹಿತ 55 ರನ್ ಕಲೆ ಹಾಕಿದರು. ಪೂರನ್, ಕೇವಲ 29 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ ಭರ್ಜರಿ 75 ರನ್ ಗಳಿಸಿದರು. ಕೊನೆಯಲ್ಲಿ ಆಯುಷ್ ಬದೋನಿ 22, ಕೃನಾಲ್ ಪಾಂಡ್ಯ ಅಜೇಯ 12 ರನ್​ಗಳ ಕಾಣಿಕೆ ನೀಡಿದರು. ಪಿಯೂಷ್ ಚಾವ್ಲಾ ಮತ್ತು ನುವಾನ್ ತುಷಾರ ತಲಾ 3 ವಿಕೆಟ್ ಉರುಳಿಸಿದರು.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner