ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್ ಟೂರ್ನಿ​ಗೆ ಎಂಎಸ್ ಧೋನಿ ಕಂಬ್ಯಾಕ್? ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಕೊಟ್ಟರು ಅಚ್ಚರಿ ಉತ್ತರ!

ಟಿ20 ವಿಶ್ವಕಪ್ ಟೂರ್ನಿ​ಗೆ ಎಂಎಸ್ ಧೋನಿ ಕಂಬ್ಯಾಕ್? ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಕೊಟ್ಟರು ಅಚ್ಚರಿ ಉತ್ತರ!

MS Dhoni : ಪ್ರಸಕ್ತ ಆವೃತ್ತಿಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಎಂಎಸ್ ಧೋನಿ ಅವರು ತಮ್ಮ ನಿವೃತ್ತಿ ಹಿಂಪಡೆದು ಟಿ20 ವಿಶ್ವಕಪ್ ಆಡಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ರೋಹಿತ್​ ಶರ್ಮಾ ಅಚ್ಚರಿಯ ಉತ್ತರ ಕೊಟ್ಟಿದ್ದಾರೆ.

ದಿನೇಶ್ ಕಾರ್ತಿಕ್ ಮತ್ತು ಎಂಎಸ್ ಧೋನಿ ಕುರಿತು ರೋಹಿತ್​ ಶರ್ಮಾ ಹೇಳಿಕೆ
ದಿನೇಶ್ ಕಾರ್ತಿಕ್ ಮತ್ತು ಎಂಎಸ್ ಧೋನಿ ಕುರಿತು ರೋಹಿತ್​ ಶರ್ಮಾ ಹೇಳಿಕೆ

ಮಹೇಂದ್ರ ಸಿಂಗ್ ಧೋನಿ ಅವರು 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಶ್ರೀಮಂತ ಲೀಗ್​​ನಲ್ಲಿ ಧೋನಿ ಅವರ ಪ್ರದರ್ಶನ ಕಣ್ತುಂಬಿಕೊಳ್ಳ ಅಭಿಮಾನಿಗಳು, ಅವರನ್ನು ಮತ್ತೆ ಭಾರತೀಯ ತಂಡದಲ್ಲಿ ನೋಡಲು ಒಲವು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾ ಜೊತೆ ಅಮೆರಿಕ ಮತ್ತು ವೆಸ್ಟ್​​ ಇಂಡೀಸ್​ಗೆ ಪ್ರಯಾಣ ಬೆಳೆಸಲಿ. ಆ ಮೂಲಕ ಭಾರತ ವಿಶ್ವಕಪ್​ ಗೆಲ್ಲಲು ನೆರವಾಗಲಿ ಎಂದು ಆಶಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆದರೆ ಅಸಾಧ್ಯವಾದದ್ದನ್ನು ನೋಡಲು ಸಾಧ್ಯವೇ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಇದರ ಮಧ್ಯೆ ಭಾರತೀಯ ನಾಯಕ ರೋಹಿತ್ ಶರ್ಮಾ ಅವರು ಧೋನಿ ನಿವೃತ್ತಿ ಹಿಂಪಡೆಯುತ್ತಾರಾ ಎಂಬುದರ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಆಡಮ್ ಗಿಲ್‌ಕ್ರಿಸ್ಟ್ ಮತ್ತು ಮೈಕೆಲ್ ವಾನ್ ಒಳಗೊಂಡ ಕ್ಲಬ್ ಪ್ರೈರೀ ಫೈರ್ ಪಾಡ್​​ಕಾಸ್ಟ್‌ನಲ್ಲಿ ಪಾಲ್ಗೊಂಡು ಟಿ20 ವಿಶ್ವಕಪ್ ಮತ್ತು ತಂಡದ ಆಯ್ಕೆಯ ಕುರಿತು ಮಾತನಾಡುವ ವೇಳೆ ರೋಹಿತ್​ ಈ ಬಗ್ಗೆ ಹೇಳಿದ್ದಾರೆ. ಧೋನಿ ಅವರನ್ನು ಮನವೊಲಿಸುವುದು ಕಷ್ಟ ಎಂದಿದ್ದಾರೆ.

ಪ್ರಸ್ತುತ ನಿವೃತ್ತಿ ಹಿಂಪಡೆದು ಧೋನಿ ಟೀಮ್ ಇಂಡಿಯಾ ಪರ ಟಿ20 ವಿಶ್ವಕಪ್‌ ಆಡುವ ಸಾಧ್ಯತೆ ತಳ್ಳಿ ಹಾಕಿದ ರೋಹಿತ್ ಶರ್ಮಾ​, 43ನೇ ವಯಸ್ಸಲ್ಲೂ ಅದ್ಭುತ ಪ್ರದರ್ಶನಕ್ಕೆ ಫಿದಾ ಆಗಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್​ನಲ್ಲಿ ಧೋನಿ ಅದ್ಭುತ ಲಯದಲ್ಲಿದ್ದಾರೆ. ವಿಕೆಟ್ ಹಿಂದೆ ನಿಂತು ಚಾಣಾಕ್ಷತೆ ಪ್ರದರ್ಶಿಸುತ್ತಿರುವ ಧೋನಿ, ಬ್ಯಾಟಿಂಗ್‌ನಲ್ಲಿ 200ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ ಕಾಯ್ದುಕೊಂಡಿದ್ದಾರೆ. ತಮ್ಮ ಫಿನಿಷರ್‌ ಪಾತ್ರವನ್ನು ಅದ್ಭುತವಾಗಿ ನಿಭಾಯಿಸುತ್ತಿದ್ದಾರೆ. ಆದರೆ, 43 ವರ್ಷದ ಸಿಎಸ್​ಕೆ ಮಾಜಿ ನಾಯಕ ಭಾರತ ತಂಡಕ್ಕೆ ಮತ್ತೆ ಮರಳುವುದು ಅಸಾಧ್ಯವಾದ ಮಾತಾಗಿದೆ.

2019ರ ಏಕದಿನ ವಿಶ್ವಕಪ್ ಸೆಮಿಫೈನಲ್​​ನಲ್ಲಿ ಕಾಣಿಸಿಕೊಂಡಿದ್ದೇ ಧೋನಿ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಆ ಬಳಿಕ ಭಾರತದ ಪರ ಕಣಕ್ಕಿಳಿಯದ ಧೋನಿ, 2020ರ ಆಗಸ್ಟ್​ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದರು. ಆ ಬಳಿಕ ಐಪಿಎಲ್​ನಲ್ಲಿ ಮಾತ್ರ ಕಾಣಿಸಿಕೊಂಡ ಧೋನಿ, 17ನೇ ಆವೃತ್ತಿಯ ಐಪಿಎಲ್ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ, ಹಾರ್ದಿಕ್ ಬೌಲಿಂಗ್​​​ನಲ್ಲಿ ಹ್ಯಾಟ್ರಿಕ್ ಸಿಕ್ಸರ್​ ಸಿಡಿಸಿದ್ದು, ಎಲ್ಲರ ಗಮನ ಸೆಳೆದಿತ್ತು.

‘ಡಿಕೆಯನ್ನು ಒಪ್ಪಿಸಬಹುದು, ಧೋನಿಯನ್ನು ಕಷ್ಟ’

ನಿಜ ಹೇಳಬೇಕೆಂದರೆ ದಿನೇಶ್‌ ಕಾರ್ತಿಕ್‌ ಅವರ ಪ್ರದರ್ಶನ ನನ್ನ ಗಮನ ಸೆಳೆದಿದೆ. ಈ ಬಾರಿ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದಾರೆ. ಧೋನಿ ಸಹ ಅದ್ಭುತವಾಗಿ ಆಡುತ್ತಿದ್ದಾರೆ. ಎದುರಿಸಿದ 4 ಬಾಲ್​ಗಳಲ್ಲೇ 20 ರನ್ ಬಾರಿಸಿ ನಮ್ಮ ಗೆಲುವನ್ನು ಕಸಿದರು. ಮುಂಬೈ ಮತ್ತು ಚೆನ್ನೈ ನಡುವಿನ ಪಂದ್ಯದ ಗೆಲುವು-ಸೋಲನ್ನು ನಿರ್ಧರಿಸಿದ್ದೇ ಮಾಹಿ ಬಾರಿಸಿದ ರನ್‌ಗಳು ಎಂದು ಹಿಟ್​ಮ್ಯಾನ್​ ಹೇಳಿದ್ದಾರೆ. ಕೊನೆಯಲ್ಲಿ ಧೋನಿ ಬಾರಿಸಿದ್ದ 20 ರನ್​ಗಳ ಅಂತರದಿಂದಲೇ ಸಿಎಸ್‌ಕೆ ಗೆದ್ದಿತ್ತು.

ವಿದಾಯವನ್ನು ವಾಪಸ್ ಪಡೆದು ಮತ್ತೊಮ್ಮೆ ಟೀಮ್ ಇಂಡಿಯಾ ಪರ ಆಡಿ ಎಂದು ಧೋನಿ ಅವರನ್ನು ಮನವೊಲಿಸುವುದು ತುಂಬಾ ಕಷ್ಟ. ಪ್ರಸ್ತುತ ಅವರು ದಣಿದಿದ್ದು, ಟಿ20 ವಿಶ್ವಕಪ್​​ ಅವಧಿಯಲ್ಲಿ ಅಮೆರಿಕಕ್ಕೆ ಬರಲಿದ್ದಾರೆ. ವಿಶ್ವಕಪ್ ವೇಳೆ ಧೋನಿ ಅಮೆರಿಕದಲ್ಲಿ ಗಾಲ್ಪ್ ಆಡಲಿದ್ದಾರೆ. ಎಂಎಸ್​ ಅವರನ್ನು ಮನವೊಲಿಸುವುದು ಕಷ್ಟವಾದರೂ ವಿಶ್ವಕಪ್‌ಗೆ ಟೀಮ್ ಇಂಡಿಯಾಗೆ ಆಡುವಂತೆ ದಿನೇಶ್‌ ಕಾರ್ತಿಕ್‌ ಅವರನ್ನು ಸುಲಭವಾಗಿ ಒಪ್ಪಿಸಬಹುದು ಎಂದಿದ್ದಾರೆ. 2024ರ ಐಪಿಎಲ್​ನಲ್ಲಿ ದಿನೇಶ್‌ ಕಾರ್ತಿಕ್‌ ಶ್ರೇಷ್ಠ ಲಯದಲ್ಲಿದ್ದು, ಮುಂಬೈ ವಿರುದ್ಧ 23 ಎಸೆತಗಳಲ್ಲಿ 53* ರನ್‌, ನಂತರ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 35 ಎಸೆತಗಳಲ್ಲಿ 83 ರನ್‌ ಬಾರಿಸಿ ಆರ್ಭಟಿಸಿದ್ದರು.

IPL_Entry_Point