ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತೊಂದು ವಿವಾದ; ಡಿಆರ್​ಎಸ್ ಮೋಸದಾಟ ನಡೆಸಿ ಸಿಕ್ಕಿಬಿದ್ದ ಅಂಬಾನಿ ಬ್ರಿಗೇಡ್, ವಿಡಿಯೋ
ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತೊಂದು ವಿವಾದ; ಡಿಆರ್​ಎಸ್ ಮೋಸದಾಟ ನಡೆಸಿ ಸಿಕ್ಕಿಬಿದ್ದ ಅಂಬಾನಿ ಬ್ರಿಗೇಡ್, ವಿಡಿಯೋ

ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತೊಂದು ವಿವಾದ; ಡಿಆರ್​ಎಸ್ ಮೋಸದಾಟ ನಡೆಸಿ ಸಿಕ್ಕಿಬಿದ್ದ ಅಂಬಾನಿ ಬ್ರಿಗೇಡ್, ವಿಡಿಯೋ

Mumbai Indians - DRS Controversy : ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಡಿಆರ್​ಎಸ್​​ನಲ್ಲಿ ಮೋಸದಾಟ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಫ್ರಾಂಚೈಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

 ಡಿಆರ್​ಎಸ್ ಮೋಸದಾಟ ನಡೆಸಿ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್
ಡಿಆರ್​ಎಸ್ ಮೋಸದಾಟ ನಡೆಸಿ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್

17ನೇ ಆವೃತ್ತಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಒಂದಿಲ್ಲೊಂದು ಆರೋಪಗಳು ಕೇಳಿ ಬರುತ್ತಿವೆ. ಏಪ್ರಿಲ್ 11ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಎದುರಿನ ಪಂದ್ಯದಲ್ಲಿ ಟಾಸ್ ವಿವಾದದ ಬಳಿಕ ಏಪ್ರಿಲ್ 18ರಂದು ಜರುಗಿದ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಪಂದ್ಯದಲ್ಲಿ ಡಿಆರ್​ಎಸ್​ನಲ್ಲಿ (DRS) ಮೋಸದಾಟ ಆಡಿರುವ ಕುರಿತು ಮತ್ತೊಂದು ವಿವಾದ ಎದ್ದಿದೆ. ಮೋಸದಾಟ ಆಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.

ಐಪಿಎಲ್​ನ 34ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ನಡೆಸುತ್ತಿದ್ದ ಅವಧಿಯಲ್ಲಿ ಈ ಘಟನೆ ಜರುಗಿದೆ. ಎಂಐ ಇನ್ನಿಂಗ್ಸ್​ನ 15ನೇ ಓವರ್​​ನಲ್ಲಿ ಬೌಲರ್​ ಅರ್ಷ್​ದೀಪ್ ಸಿಂಗ್​ ಎಸೆದ ಐದನೇ ಚೆಂಡು ಯಾರ್ಕರ್​ ಆಗಿ ವಿಕೆಟ್ ಕೀಪರ್​ ಜಿತೇಶ್ ಶರ್ಮಾ ಕೈ ಸೇರಿತ್ತು. ಆಗ ಕ್ರೀಸ್​ನಲ್ಲಿದ್ದದ್ದು ಸ್ಟೈಲಿಶ್ ಬ್ಯಾಟರ್ ಸೂರ್ಯಕುಮಾರ್ ಯಾದವ್. ಸೂರ್ಯ ಸುಮ್ಮನಿದ್ದರೂ ಡಗೌಟ್​ನಲ್ಲಿದ್ದ ಟಿಮ್ ಡೇವಿಡ್​ ಡಿಆರ್​ಎಸ್​ ತೆಗೆದುಕೊಳ್ಳಲು ಕೈಸನ್ನೆ ಮೂಲಕ ಮನವಿ ಮಾಡಿದರು.

ಆಗ ಸೂರ್ಯ ಡಿಆರ್​​ಎಸ್​ ತೆಗೆದುಕೊಂಡರು. ಆದರೆ ನಾಯಕ ಸ್ಯಾಮ್ ಕರನ್ ಅಂಪೈರ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಟಿಮ್ ಡೇವಿಡ್ ಮತ್ತು ಮಾರ್ಕ್​ ಬೌಚರ್​ ಡಿಆರ್​ಎಸ್​ ತೆಗೆದುಕೊಳ್ಳುವಂತೆ ಸಿಗ್ನಲ್​ ಕೊಟ್ಟಿದ್ದರ ಬಗ್ಗೆ ಕರನ್, ಅಂಪೈರ್​ ಗಮನಕ್ಕೆ ತಂದಿದ್ದಾರೆ. ಆದರೆ, ಸ್ಯಾಮ್ ಕರನ್ ಮಾತು ಲೆಕ್ಕಿಸದ ಅಂಪೈರ್​ ರಿವ್ಯೂ ಪರಿಶೀಲನೆ ನಡೆಸಲು ಮುಂದಾಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಫ್ರಾಂಚೈಸಿಗೆ ಛೀಮಾರಿ ಹಾಕಿದ್ದಾರೆ. ಸದ್ಯ ನೆಟ್ಸ್​​ನಲ್ಲಿ ವಿಡಿಯೋ ಡಿಲೀಟ್ ಮಾಡಲಾಗಿದೆ.

ಆದರೆ ಇದೇ ಪಂದ್ಯದ ವೇಳೆ ಪಂಜಾಬ್ ಬ್ಯಾಟಿಂಗ್ ಮಾಡುವಾಗ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿದ 19ನೇ ಎಸೆತದಲ್ಲಿ ಬ್ಯಾಟರ್​​ನ ಲೆಗ್ ಸೈಡ್​​ನಿಂದ ಚೆಂಡು ವಿಕೆಟ್ ಕೀಪರ್ ಇಶಾನ್​ ಕಿಶನ್ ಕೈಸೇರಿದರೂ ಅಂಪೈರ್ ವೈಡ್ ತೀರ್ಪು ನೀಡಲಿಲ್ಲ. ಅಂಪೈರ್​ ನಿರ್ಧಾರ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹೀಗಾಗಿ ಅಂಪೈರ್ ವಿರುದ್ಧ ಭಾರಿ ಟೀಕೆ ವ್ಯಕ್ತವಾಗಿದೆ. ಮುಂಬೈ ಇಂಡಿಯನ್ಸ್ ಹೆಸರು ಬದಲಿಸಲು ನೆಟ್ಟಿಗರು ಆಗ್ರಹಿಸಿದ್ದು, ಮುಂಬೈ ಅಂಪೈರ್ಸ್​ ಎಂದು ಹೆಸರಿಡಲು ಸೂಚಿಸಿದ್ದಾರೆ.

ಹಾರ್ದಿಕ್​ಗೆ ದಂಡ ವಿಧಿಸಿದ ಬಿಸಿಸಿಐ

ಪಂಜಾಬ್ ಕಿಂಗ್ಸ್ ವಿರುದ್ಧ ನಿಧಾನಗತಿಯ ಬೌಲಿಂಗ್ ನಡೆಸಿದ ಕಾರಣಕ್ಕೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ 12 ಲಕ್ಷ ದಂಡ ವಿಧಿಸಲಾಗಿದೆ. 90 ನಿಮಿಷಗಳಲ್ಲಿ ತನ್ನ ಇನ್ನಿಂಗ್ಸ್​​ನಲ್ಲಿ ಓವರ್​​ಗಳನ್ನು ಮುಗಿಸಬೇಕು. ಆದರೆ ಅದರ ಮೇಲೆ ಸಮಯ ತೆಗೆದುಕೊಂಡರೆ, ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ದಂಡ ವಿಧಿಸಲಾಗಿದೆ. ಈ ಐಪಿಎಲ್​ನಲ್ಲಿ ಮೊದಲ ಬಾರಿಗೆ ಸ್ಲೋ ಓವರ್​ ರೇಟ್​ನಿಂದ ದಂಡಕ್ಕೆ ಒಳಗಾಗಿದ್ದಾರೆ.

ಪಂದ್ಯದ ಸಂಕ್ಷಿಪ್ತ ವಿವರ

ಚಂಡೀಗಢದ ಮುಲ್ಲನ್​ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ 183 ರನ್​ಗಳಿಗೆ ಆಲೌಟ್ ಆಯಿತು. ಮುಂಬೈ 9 ರನ್​ಗಳ ಅಂತರದಲ್ಲಿ ಗೆದ್ದು ಬೀಗಿತು. ಪಂಜಾಬ್ ಪರ ಅಶುತೋಷ್ ಶರ್ಮಾ ಬೆಂಕಿ-ಬಿರುಗಾಳಿ ಬ್ಯಾಟಿಂಗ್ ನಡೆಸಿ ಹೋರಾಡಿದರೂ ಜಯ ದಕ್ಕಲಿಲ್ಲ.

Whats_app_banner