ದೇವರೇ ಕಾಪಾಡಪ್ಪ; ಸತತ ಸೋಲುಗಳಿಂದ ಕಂಗೆಟ್ಟು ಗುಜರಾತ್ನಲ್ಲಿ 'ಸೋಮನಾಥ'ನಿಗೆ ವಿಶೇಷ ಪೂಜೆ ಸಲ್ಲಿಸಿದ ಹಾರ್ದಿಕ್ ಪಾಂಡ್ಯ, VIDEO
Hardik Pandya : ಸತತ ಸೋಲು ಮತ್ತು ಟ್ರೋಲ್ಗಳಿಂದ ಕಂಗೆಟ್ಟಿರುವ ಹಾರ್ದಿಕ್ ಪಾಂಡ್ಯ ಗುಜರಾತ್ನಲ್ಲಿ ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ಚರ್ಚೆಗೊಳಪಟ್ಟ ಆಟಗಾರ ಅಂದರೆ ಅದು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ (Hardik Pandya). 2023ರ ಮಿನಿ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ (Gujarat Titans) ತಂಡದಿಂದ ಟ್ರೇಡ್ ಮೂಲಕ ಎಂಐ ತಂಡ ಸೇರಿಕೊಂಡಾಗಿನಿಂದ ಇವತ್ತಿನವರೆಗೂ ಹೆಚ್ಚು ಚರ್ಚೆಯಾಗುತ್ತಿದೆ. ಅದರಲ್ಲೂ ರೋಹಿತ್ ಶರ್ಮಾ (Rohit Sharma) ಬದಲಿಗೆ ಹಾರ್ದಿಕ್ ನಾಯಕನಾಗಿ ನೇಮಕಗೊಂಡ ಬಳಿಕವಂತೂ ಈ ಚರ್ಚೆ ದುಪ್ಪಟಾಗುತ್ತಿದೆ.
ಐಪಿಎಲ್ ಟೂರ್ನಿ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿರುವ ಹಾರ್ದಿಕ್, ರೋಹಿತ್ ಶರ್ಮಾ ಅಭಿಮಾನಿಗಳಿಂದ ತೀವ್ರ ವಿರೋಧ ಎದುರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಅವರ ವಿರುದ್ಧ ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈಗಾಗಲೇ ಪಾಂಡ್ಯ ಕ್ಯಾಪ್ಟನ್ಸಿಯಡಿ ಮುಂಬೈ ಮೂರಕ್ಕೆ ಮೂರು ಪಂದ್ಯಗಳನ್ನು ಸೋತು ಗೆಲುವಿಗಾಗಿ ಪರದಾಟ ನಡೆಸುತ್ತಿದೆ. ಈ ಎಲ್ಲದರ ನಡುವೆ ನಾಯಕ ಹಾರ್ದಿಕ್ ದೇವರ ಮೊರೆ ಹೋಗಿದ್ದಾರೆ.
ಮಾರ್ಚ್ 24 ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಸೋಲಿನೊಂದಿಗೆ ತಮ್ಮ ಅಭಿಯಾನ ಪ್ರಾರಂಭಿಸಿದ ಮುಂಬೈ, ಮಾರ್ಚ್ 27 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಎರಡನೇ ಸೋಲು ಅನುಭವಿಸಿತು. ಆ ಬಳಿಕ ರಾಜಸ್ಥಾನ್ ರಾಯಲ್ಸ್ ವಿರುದ್ಧ ಘೋರ ಪರಾಭವಗೊಂಡಿತು. ಈಗ ನಾಲ್ಕನೇ ಪಂದ್ಯದಲ್ಲಿ ಏಪ್ರಿಲ್ 7ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ ಹಾರ್ದಿಕ್ ನೇತೃತ್ವದ ಸೇನೆ.
ವಿಶೇಷ ಪೂಜೆ ಸಲ್ಲಿಸಿದ ಹಾರ್ದಿಕ್ ಪಾಂಡ್ಯ
ತನ್ನ ನಾಲ್ಕನೇ ಪಂದ್ಯಕ್ಕೆ ಆರು ದಿನಗಳ ವಿರಾಮ ಪಡೆದ ಹಾರ್ದಿಕ್, ಗುಜರಾತ್‌ಗೆ ಪ್ರಯಾಣಿಸಿ ಸೋಮನಾಥನಿಗೆ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಸ್ತುತ ಎದುರಿಸುತ್ತಿರುವ ಕೆಟ್ಟ ಹಂತವನ್ನು ದೂರವಿಡಲು ಹಾರ್ದಿಕ್ ಸೋಮನಾಥನಲ್ಲಿ ಪ್ರಾರ್ಥಿಸಿದ್ದಾರೆ. ಐಪಿಎಲ್ ಆರಂಭದ ಬಳಿಕ ಸಾಕಷ್ಟು ಟೀಕೆಗೆ ಗುರಿಯಾಗಿದ ಪಾಂಡ್ಯ, ಮುಂಬೈನಿಂದ ಗುಜರಾತ್‌ಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಾರ್ದಿಕ್ ಪೂಜೆ ಸಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸತತ ಟ್ರೋಲ್ಗಳಿಂದ ಬೇಸತ್ತಿರುವ ಹಾರ್ದಿಕ್ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೂ ಮುನ್ನ ಸೋಮನಾಥನ ದರ್ಶನ ಪಡೆದಿದ್ದಾರೆ. ಆದರೆ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಶಿವನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ ಪಾಂಡ್ಯ ತನ್ನ ಮತ್ತು ತಂಡದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ. ಹಾಗಾಗಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅವರು ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಮುಂಬೈಗೆ ಬಂತು ಆನೆ ಬಲ
ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಮುಂಬೈ ತಂಡಕ್ಕೆ ಪ್ರಮುಖ ಆಟಗಾರ ಸೇರ್ಪಡೆಗೊಂಡಿದ್ದಾರೆ. ಮಿಸ್ಟರ್ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಗಾಯದಿಂದ ಚೇತರಿಸಿಕೊಂಡು ತಂಡವನ್ನು ಕೂಡಿಕೊಂಡಿದ್ದಾರೆ. ಡಿಸೆಂಬರ್ 2023 ರಿಂದ ಯಾವುದೇ ಸ್ಪರ್ಧಾತ್ಮಕ ಆಟವನ್ನು ಆಡದ ಸೂರ್ಯ, ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅವರ ಆಗಮನದಿಂದ ಮುಂಬೈಗೆ ಆನೆಬಲ ಬಂದಂತಾಗಿದೆ.
ಈಗಾಗಲೇ ಮುಂಬೈ ಕ್ಯಾಂಪ್ ಸೇರಿರುವ ಸೂರ್ಯ, ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯ ವೇಳೆ ಅವರು ಗಾಯಗೊಂಡಿದ್ದ ಸೂರ್ಯ, ನೇರವಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರ್ಪಡೆಯಾಗಲಿದ್ದಾರೆ. ಹಾಗಾಗಿ ನಮನ್ ಧೀರ್ ಅವರು ಜಾಗ ಬಿಟ್ಟುಕೊಡಲಿದ್ದಾರೆ.
