ಹಾರ್ದಿಕ್ ಪಾಂಡ್ಯ ಉಪನಾಯಕತ್ವಕ್ಕೆ ಕುತ್ತು; 26 ವರ್ಷದ ಈ ಆಟಗಾರನಿಗೆ ಭಾರತ ತಂಡದ ವೈಸ್ ಕ್ಯಾಪ್ಟನ್ಸಿ ಪಟ್ಟ!
Hardik Pandya vs Rishabh Pant : ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಉಪನಾಯಕತ್ವದಲ್ಲಿ ಬದಲಾವಣೆಯಾಗುತ್ತದೆ ಎಂದು ವರದಿಯಾಗಿದೆ. ಹಾರ್ದಿಕ್ ಪಾಂಡ್ಯ ಬದಲಿಗೆ ರಿಷಭ್ ಪಂತ್ಗೆ ಮಣೆ ಸೆಲೆಕ್ಟರ್ಸ್ ನಿರ್ಧರಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ (Rishabh Pant) ಅವರು 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆಡಲು ಸಾಧ್ಯವಾಗುತ್ತದೆಯೇ ಎಂಬ ಅನುಮಾನ ಇತ್ತು. ಆದರೀಗ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ 2024 (T20 World Cup 2024) ಟೂರ್ನಿಯಲ್ಲಿ ಭಾರತದ ಉಪನಾಯಕತ್ವಕ್ಕೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಮೇ 1ರಂದು ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದ್ದು, ರಾಷ್ಟ್ರೀಯ ಆಯ್ಕೆದಾರರು ಪಂತ್ ಅವರನ್ನು ಭಾರತ ತಂಡದ ಉಪನಾಯಕನ್ನಾಗಿ ನೇಮಿಸುವ ಸಾಧ್ಯತೆ ದಟ್ಟವಾಗಿದೆ.
2022ರ ಡಿಸೆಂಬರ್ 30ರಂದು ಭೀಕರ ಅಪಘಾತಕ್ಕೆ ಗುರಿಯಾಗಿದ್ದ ರಿಷಭ್ ಪಂತ್ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ರಿಷಭ್, ಟಿ20 ವಿಶ್ವಕಪ್ ಭಾಗವಾಗುವುದು ಖಚಿತವಾಗಿದೆ. ಪ್ರಸ್ತುತ ಅವರು ಭಾರತ ವೈಸ್ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಹಾರ್ದಿಕ್ ಅವರೊಂದಿಗೆ ಕಠಿಣ ಪೈಪೋಟಿ ನಡೆಸುತ್ತಿದ್ದಾರೆ ಎಂದು ಕ್ರಿಕ್ಬಜ್ ವರದಿ ಮಾಡಿದೆ. 2022ರ ಜೂನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ನಾಯಕನಾಗಿದ್ದ ಪಂತ್, ವಿಶ್ವಕಪ್ಗೆ ಮೊದಲ ವಿಕೆಟ್ ಕೀಪರ್ ಎಂದೂ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಕೆಲ ವರದಿಗಳು ಸಂಜು ಸ್ಯಾಮ್ಸನ್ ಮೊದಲ ಆಯ್ಕೆ ಎನ್ನುತ್ತಿವೆ.
15 ತಿಂಗಳ ಬಳಿಕ ಮರಳಲಿದ್ದಾರೆ ರಿಷಭ್
ಐಪಿಎಲ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಫಾರ್ಮ್ನೊಂದಿಗೆ ಹೋರಾಡುತ್ತಿರುವ ಹಾರ್ದಿಕ್ ಅವರ ಸ್ಥಾನವು ಪರಿಶೀಲನೆಗೆ ಒಳಪಟ್ಟಿದೆ. ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಗಾಯಗೊಂಡ ಕಣಕ್ಕಿಳಿದು ಐಪಿಎಲ್ ಆಡುತ್ತಿರುವ ಹಾರ್ದಿಕ್, ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ತಂಡದಲ್ಲಿ ಅವಕಾಶ ಪಡೆದರೂ ಹಾರ್ದಿಕ್ ವೈಸ್ ಕ್ಯಾಪ್ಟನ್ಸಿ ಕಳೆದುಕೊಳ್ಳಲಿದ್ದಾರೆ. ಟಿ20 ವಿಶ್ವಕಪ್ ತಂಡಕ್ಕೆ ರೋಹಿತ್ ಉಪನಾಯಕನಾಗಿ ಹೆಸರಿಸಲು ರಿಷಭ್ ಪಂತ್ ಮೊದಲ ಆದ್ಯತೆ ಆಗಿದ್ದಾರೆ. 26 ವರ್ಷದ ಆಟಗಾರ 15 ತಿಂಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಲಿದ್ದಾರೆ.
ಉಪನಾಯಕತ್ವ ಕಳೆದುಕೊಳ್ಳಲು ಕಾರಣ ಇದೇ?
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಉತ್ತಮವಾಗಿ ಮುನ್ನಡೆಸಲು ವಿಫಲವಾಗಿರುವ ಪಾಂಡ್ಯ, ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಪಾಂಡ್ಯ ಅವರ ಕೆಲವು ಪ್ರಶ್ನಾರ್ಹ ನಿರ್ಧಾರಗಳು ಮತ್ತು ಇತ್ತೀಚಿನ ಸೋಲಿನ ನಂತರ ಆಕ್ರೋಶಕ್ಕೂ ಒಳಗಾಗಿದ್ದಾರೆ. ಇದೇ ಕಾರಣದಿಂದ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಉಪನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ, ಟಿ20 ವರ್ಲ್ಡ್ಕಪ್ಗೆ ಈ ಸ್ಥಾನ ಕಳೆದುಕೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ.
ಟಿ20 ವಿಶ್ವಕಪ್ಗೆ ಭಾರತದ ಸಂಭಾವ್ಯ ಆಟಗಾರರು
ಇತರ ಆಯ್ಕೆ ಸಮಸ್ಯೆಗಳ ಪೈಕಿ ಅಗ್ರ ಕ್ರಮಾಂಕದಲ್ಲಿ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಇರಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವಕಾಶ ಪಡೆಯಲಿದ್ದಾರೆ. ಸಂಜು ಸ್ಯಾಮ್ಸನ್ ಅಥವಾ ಕೆಎಲ್ ರಾಹುಲ್ ಜೊತೆಗೆ ಶಿವಂ ದುಬೆ ಮತ್ತು ರಿಂಕು ಸಿಂಗ್ ಒಬ್ಬರು ಅಥವಾ ಇಬ್ಬರೂ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.
ಕುಲ್ದೀಪ್ ಯಾದವ್ ಸ್ಪೆಷಲಿಸ್ಟ್ ಸ್ಪಿನ್ನರ್ ಸ್ಥಾನವನ್ನು ಆಕ್ರಮಿಸಲಿದ್ದು, ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯ್ ಅವರು ಸ್ಪಿನ್ನರ್ಗಳಾಗಿ ಅವಕಾಶ ಪಡೆಯಲಿದ್ದಾರ. ಆದರೆ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಯುಜ್ವೇಂದ್ರ ಚಹಲ್ ಅವರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ವೇಗಿಗಳ ಕೋಟಾದಲ್ಲಿ ಸ್ಥಾನ ಪಡೆಯಲಿದ್ದಾರೆ. ಈ ಎಲ್ಲದರ ನಡುವೆ 4ನೇ ಸ್ಪೆಷಲಿಸ್ಟ್ ವೇಗಿಯ ಸ್ಥಾನಕ್ಕೆ ಪಾಂಡ್ಯ ಅವರನ್ನು ತಂಡದಲ್ಲಿ ಆಡಿಸಬೇಕೇ ಮತ್ತು ಶುಭ್ಮನ್ ಗಿಲ್ ಅವರನ್ನು ಪರಿಗಣಿಸಬೇಕೇ ಎಂಬುದನ್ನು ನಿರ್ಧರಿಸುವುದು ನಾಯಕ ರೋಹಿತ್‌ಗೆ ಬಿಟ್ಟದ್ದು.
ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.