ಕನ್ನಡ ಸುದ್ದಿ  /  ಕ್ರಿಕೆಟ್  /  ಗುಜರಾತ್ ಟೈಟಾನ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಚಕ ಗೆಲುವು; ಪ್ಲೇಆಫ್ ರೇಸ್ ಇನ್ನೂ​ ಜೀವಂತ

ಗುಜರಾತ್ ಟೈಟಾನ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಚಕ ಗೆಲುವು; ಪ್ಲೇಆಫ್ ರೇಸ್ ಇನ್ನೂ​ ಜೀವಂತ

Cricket News : 17ನೇ ಆವೃತ್ತಿಯ ಐಪಿಎಲ್​ನ 40ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 4 ರನ್​ಗಳ ಅಂತರದಿಂದ ಗೆದ್ದು ಬೀಗಿದೆ.

ಗುಜರಾತ್ ಟೈಟಾನ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಚಕ ಗೆಲುವು
ಗುಜರಾತ್ ಟೈಟಾನ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಚಕ ಗೆಲುವು (PTI)

ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್​ ಮನಮೋಹಕ ಆಟದ ಸಹಾಯದಿಂದ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರೋಚಕ 4 ರನ್​ಗಳ ಅಂತರದಿಂದ ಗೆಲುವು ಸಾಧಿಸಿತು. ಜಿಟಿ ಪರ ಡೇವಿಡ್ ಮಿಲ್ಲರ್ ಮತ್ತು ರಶೀದ್ ಖಾನ್ ಬಿರುಸಿನ ಬ್ಯಾಟಿಂಗ್ ಮೂಲಕ ಹೋರಾಟ ನಡೆಸಿದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಸದ್ಯ ಡೆಲ್ಲಿ ಟೂರ್ನಿಯಲ್ಲಿ 4ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು. ಗುಜರಾತ್ 7ನೇ ಸ್ಥಾನದಲ್ಲಿದೆ. ಇದರೊಂದಿಗೆ ಡೆಲ್ಲಿ ಪ್ಲೇಆಫ್ ರೇಸ್​ ಜೀವಂತವಾಗಿದೆ.

ಟ್ರೆಂಡಿಂಗ್​ ಸುದ್ದಿ

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಭರ್ಜರಿ ಪ್ರದರ್ಶನ ತೋರಿತು. ರಿಷಭ್ ಪಂತ್ ಮತ್ತು ಅಕ್ಷರ್‌ ಪಟೇಲ್ ಬಿರುಸಿನ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ದಾಖಲಿಸಲು ನೆರವಾದರು. 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್‌ ಗಳಿಸಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 20 ಓವರ್‌ಗಳಲ್ಲಿ ಗಳಿಸಿದ್ದು 220 ರನ್. ಜಿಟಿ ಪರ ಸಾಯಿ ಸುದರ್ಶನ್ 65 ರನ್, ಡೇವಿಡ್ ಮಿಲ್ಲರ್​ 55 ರನ್ ಗಳಿಸಿ ಆರ್ಭಟಿಸಿದ ಹೊರತಾಗಿಯೂ ಜಯದ ನಗೆ ಬೀರಲಿಲ್ಲ. ಡಿಸಿ ಪರ ರಸಿಕ್ 3 ಮತ್ತು ಕುಲ್ದೀಪ್ 2 ವಿಕೆಟ್ ಪಡೆದು ಮಿಂಚಿದರು.

ರಶೀದ್ ಮತ್ತು ಮಿಲ್ಲರ್ ಹೋರಾಟ ವ್ಯರ್ಥ

225 ರನ್​ಗಳ ಗುರಿ ಬೆನ್ನಟ್ಟಿದ ಗುಜರಾತ್, ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಶುಭ್ಮನ್ 6 ರನ್ ಗಳಿಸಿ ಆನ್ರಿಚ್ ನೋಕಿಯಾ ಬೌಲಿಂಗ್​ನಲ್ಲಿ ಔಟಾದರು. ಬಳಿಕ ಎರಡನೇ ವಿಕೆಟ್​ಗೆ 82 ರನ್ ಪಾಲುದಾರಿಕೆ ಹರಿದು ಬಂತು. ವೃದ್ದಿಮಾನ್ ಸಾಹ ಮತ್ತು ಸಾಯಿ ಸುದರ್ಶನ್ ಉತ್ತಮ ಪ್ರದರ್ಶನ ನೀಡಿದರು. ಸಾಹ 39 ರನ್ ಗಳಿಸಿದರೆ, ಸುದರ್ಶನ್ 39 ಎಸೆತಗಳಲ್ಲಿ 4 ಸಿಕ್ಸರ್​, 5 ಬೌಂಡರಿ ಸಹಿತ 65 ರನ್ ಗಳಿಸಿ ಡೆಲ್ಲಿ ಬೌಲರ್​​ಗಳ ಮೇಲೆ ಸವಾರಿ ಮಾಡಿದರು. ಆದರೆ, ಅಜ್ಮತುಲ್ಲಾ ಒಮರ್ಜಾಯ್ (1), ಶಾರೂಖ್ ಖಾನ್ (8), ರಾಹುಲ್ ತೆವಾಟಿಯಾ (4) ನಿರಾಸೆ ಮೂಡಿಸಿದರು.

ಸತತ ವಿಕೆಟ್​ಗಳ ನಡುವೆಯೂ ಹೋರಾಡಿದ ಡೇವಿಡ್ ಮಿಲ್ಲರ್ ಮತ್ತು ರಶೀದ್ ಖಾನ್ ಡೆಲ್ಲಿ ತಂಡಕ್ಕೆ ಸೋಲಿನ ಆತಂಕ ಸೃಷ್ಟಿಸಿದರು. ಮಿಲ್ಲರ್ 22 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 55 ಬಾರಿಸಿದರೆ, ರಶೀದ್ ಕೊನೆಯವರೆಗೂ ಕ್ರೀಸ್​ನಲ್ಲಿ ಉಳಿದು ಅದ್ಭುತ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ಕೊನೆಯ ಓವರ್​​ನಲ್ಲಿ 19 ರನ್ ಬೇಕಿತ್ತು. ಆದರೆ ರಶೀದ್ 14 ರನ್ ಗಳಿಸಿದರು. ಇದರೊಂದಿಗೆ ರಶೀದ್ ಮತ್ತು ಮಿಲ್ಲರ್ ಹೋರಾಟ ವ್ಯರ್ಥವಾಯಿತು. ಡೆಲ್ಲಿ 4 ರನ್​ಗಳ ಅಂತರದಿಂದ ಗೆದ್ದು ಬೀಗಿತು. ರಸಿಕ್ ದಾರ್ ಸಲಾಮ್ 3, ಕುಲ್ದೀಪ್ ಯಾದವ್ 2 ವಿಕೆಟ್ ಪಡೆದರು.

ರಿಷಭ್ ಪಂತ್-ಅಕ್ಷರ್​ ಪಟೇಲ್ ಆರ್ಭಟ

ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಪವರ್​ಪ್ಲೇನಲ್ಲೇ ಮೂರು ವಿಕೆಟ್​​ಗಳನ್ನು ಕಳೆದುಕೊಂಡಿತು. ಪೃಥ್ವಿ ಶಾ 11, ಜೇಕ್​ ಫ್ರೇಸರ್ ಮ್ಯಾಕ್​ಗುರ್ಕ್ 23, ಶೈ ಹೋಪ್ 5 ರನ್ ಗಳಿಸಿ ಆಘಾತಕ್ಕೆ ಕಾರಣರಾದರು. ಸಂದೀಪ್ ವಾರಿಯರ್​ ಈ ಮೂರು ವಿಕೆಟ್​ ಪಡೆದು ಡೆಲ್ಲಿ ಆಟಕ್ಕೆ ಬ್ರೇಕ್ ಹಾಕಿದರು. ಆದರೆ ಅಕ್ಷರ್​ ಪಟೇಲ್ ಮತ್ತು ರಿಷಭ್ ಪಂತ್​ ಆರಂಭದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಓವರ್​​ಗಳು ಮುಂದುವರೆದಂತೆ ಗೇರ್​ ಚೇಂಜ್ ಮಾಡಿದ ಈ ಜೋಡಿ, 4ನೇ ವಿಕೆಟ್​ಗೆ 103 ರನ್​ಗಳ ಪಾಲುದಾರಿಕೆ ನೀಡಿದರು.

ಜಿಟಿ ಬೌಲರ್​ಗಳ ಮೇಲೆ ದಂಡಯಾತ್ರೆ ಆರಂಭಿಸಿದ ಇಬ್ಬರು ಸಹ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು. ಮೂರನೇ ಸ್ಥಾನಕ್ಕೆ ಬಡ್ತಿ ಪಡೆದು ಬ್ಯಾಟಿಂಗ್​ನಲ್ಲಿ ಪರಾಕ್ರಮ ಮೆರೆದ ಅಕ್ಷರ್​, ಅಮೋಘ ಅರ್ಧಶತಕ ಬಾರಿಸಿದರು. 43 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 66 ರನ್​ ಗಳಿಸಿದರು. ಅಕ್ಷರ್​ ಔಟಾದ ಬಳಿಕ ಸಿಡಿದೆದ್ದ ಪಂತ್ ಜಿಟಿ ಬೌಲರ್​ಗಳನ್ನು ಚೆಂಡಾಡಿದರು. ಅದರಲ್ಲೂ ಕೊನೆಯ ಓವರ್​​​ನಲ್ಲಿ 4 ಸಿಕ್ಸರ್ ಮತ್ತು 1 ಬೌಂಡರಿ ಸಹಿತ 31 ರನ್ ಚಚ್ಚಿದ್ದರು. ಅಂತಿಮವಾಗಿ 43 ಎಸೆತಗಳಲ್ಲಿ 8 ಸಿಕ್ಸರ್​, 5 ಬೌಂಡರಿ ಸಹಿತ ಅಜೇಯ 88 ರನ್ ಚಚ್ಚಿದರು. ಟ್ರಿಸ್ಟಾನ್ ಸ್ಟಬ್ಸ್ 7 ಎಸೆತಗಳಲ್ಲಿ 26 ರನ್ ಬಾರಿಸಿದರು.

IPL_Entry_Point