Rohit Sharma: ರೋಹಿತ್​ ಶರ್ಮಾ 37ನೇ ಹುಟ್ಟುಹಬ್ಬ; ಭಾರತೀಯ ನಾಯಕನ 9 ವಿಶ್ವ ದಾಖಲೆಗಳ ಒಂದು ನೋಟ
ಕನ್ನಡ ಸುದ್ದಿ  /  ಕ್ರಿಕೆಟ್  /  Rohit Sharma: ರೋಹಿತ್​ ಶರ್ಮಾ 37ನೇ ಹುಟ್ಟುಹಬ್ಬ; ಭಾರತೀಯ ನಾಯಕನ 9 ವಿಶ್ವ ದಾಖಲೆಗಳ ಒಂದು ನೋಟ

Rohit Sharma: ರೋಹಿತ್​ ಶರ್ಮಾ 37ನೇ ಹುಟ್ಟುಹಬ್ಬ; ಭಾರತೀಯ ನಾಯಕನ 9 ವಿಶ್ವ ದಾಖಲೆಗಳ ಒಂದು ನೋಟ

Rohit Sharma Birthday: ಟೀಮ್ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅವರು ಇಂದು (ಏಪ್ರಿಲ್ 30) ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಭಾರತೀಯ ನಾಯಕನ 9 ವಿಶ್ವ ದಾಖಲೆಗಳ ಒಂದು ನೋಟ ಇಲ್ಲಿದೆ.

ರೋಹಿತ್​ ಶರ್ಮಾ 37ನೇ ಹುಟ್ಟುಹಬ್ಬ; ಭಾರತೀಯ ನಾಯಕನ 9 ವಿಶ್ವ ದಾಖಲೆಗಳ ಒಂದು ನೋಟ
ರೋಹಿತ್​ ಶರ್ಮಾ 37ನೇ ಹುಟ್ಟುಹಬ್ಬ; ಭಾರತೀಯ ನಾಯಕನ 9 ವಿಶ್ವ ದಾಖಲೆಗಳ ಒಂದು ನೋಟ (BCCI Twitter)

ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma Birthday) ಅವರು ಇಂದು (ಏಪ್ರಿಲ್ 30ರ ಮಂಗಳವಾರ) 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಏಪ್ರಿಲ್ 30, 1987 ರಂದು ಜನಿಸಿದ ಬಲಗೈ ಬ್ಯಾಟರ್, ಜೂನ್ 23, 2007ರಂದು ಐರ್ಲೆಂಡ್ ವಿರುದ್ಧ ಬೆಲ್‌ಫಾಸ್ಟ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತದ ಪರ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಕಳೆದ 17 ವರ್ಷಗಳಲ್ಲಿ ಟೀಮ್ ಇಂಡಿಯಾಗೆ 472 ಪಂದ್ಯಗಳನ್ನಾಡಿರುವ ಹಿಟ್​ಮ್ಯಾನ್, 18820 ರನ್​​ ಗಳಿಸಿದ್ದಾರೆ.

ಎಂಎಸ್ ಧೋನಿ ನಾಯಕತ್ವದಲ್ಲಿ 2007ರಲ್ಲಿ ಟಿ20 ವಿಶ್ವಕಪ್‌ನ ಉದ್ಘಾಟನಾ ಆವೃತ್ತಿ ಗೆದ್ದ ಭಾರತೀಯ ತಂಡದ ಭಾಗವಾಗಿದ್ದ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್​​ನಲ್ಲಿ ಆಟಗಾರರಾಗಿ ಮತ್ತು ನಾಯಕರಾಗಿ ದೊಡ್ಡ ಹೆಸರನ್ನು ಸಂಪಾದಿಸಿದ್ದಾರೆ. ಅವರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ಮತ್ತು ನಾಯಕರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ, ಜಂಟಿ ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಅವರ 37ನೇ ಜನ್ಮದಿನದಂದು ಭಾರತೀಯ ನಾಯಕನ 9 ವಿಶ್ವ ದಾಖಲೆಗಳ ನೋಟ ಇಲ್ಲಿದೆ.

ಏಕದಿನದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್: ರೋಹಿತ್ ಏಕದಿನ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ವಿಶ್ವದಾಖಲೆ ಹೊಂದಿದ್ದಾರೆ. ನವೆಂಬರ್ 13, 2014ರಂದು ಕೋಲ್ಕತ್ತಾದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ ಏಕದಿನ ಪಂದ್ಯದಲ್ಲಿ 173 ಬಾಲ್​ಗಳಲ್ಲಿ 264 ರನ್ ಗಳಿಸಿದ್ದಾರೆ. ಆ ಪಂದ್ಯದ ಇನ್ನಿಂಗ್ಸ್‌ನಲ್ಲಿ ಅವರು ಅತಿ ಹೆಚ್ಚು ಬೌಂಡರಿಗಳನ್ನು (33) ಬಾರಿಸಿದ ಮತ್ತು ಸಿಕ್ಸರ್​ (9) ಬೌಂಡರಿ (33) ಮೂಲಕವೇ (186) ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನೂ ಹೊಂದಿದ್ದಾರೆ.

ಏಕದಿನದಲ್ಲಿ ಮೂರು ದ್ವಿಶತಕ: ಭಾರತ ಪರ ಇದುವರೆಗೆ ಆಡಿರುವ 262 ಏಕದಿನ ಪಂದ್ಯಗಳಲ್ಲಿ ರೋಹಿತ್ ಮೂರು ದ್ವಿಶತಕ ಬಾರಿಸಿದ್ದಾರೆ. ವೈಟ್-ಬಾಲ್ ಕ್ರಿಕೆಟ್​​ ಇತಿಹಾಸದಲ್ಲಿ ಮೂರು ದ್ವಿಶತಕ ಗಳಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆಗೆ ಒಳಗಾಗಿದ್ದಾರೆ. ನವೆಂಬರ್ 2, 2023 ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 158 ಎಸೆತಗಳಿಂದ 209 ರನ್ ಗಳಿಸಿದ್ದ ರೋಹಿತ್​, ನವೆಂಬರ್ 13, 2014ರಂದು ಕೋಲ್ಕತ್ತಾದಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಮತ್ತು ಡಿಸೆಂಬರ್ 13, 2017 ರಂದು ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ 208* ರನ್ ಬಾರಿಸಿದ್ದರು.

ಏಕದಿನ ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಹೆಚ್ಚು ಶತಕ

ಇಂಗ್ಲೆಂಡ್‌ನಲ್ಲಿ ನಡೆದ 2019 ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಭಾರತ ಪರ 9 ಪಂದ್ಯಗಳಲ್ಲಿ 5 ಶತಕ ಸಿಡಿಸಿದ್ದರು. ಇದು ಪಂದ್ಯಾವಳಿಯ ಒಂದು ಆವೃತ್ತಿಯಲ್ಲಿ ಯಾವುದೇ ಆಟಗಾರನ ಅತಿ ಹೆಚ್ಚು ಶತಕಗಳ ದಾಖಲೆಯಾಗಿದೆ. ರೋಹಿತ್ ಆ ಟೂರ್ನಿಯಲ್ಲಿ 648 ರನ್ ಗಳಿಸುವ ಮೂಲಕ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು.

ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸೆಂಚುರಿ

ರೋಹಿತ್ ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಅತಿ ಹೆಚ್ಚು 100 ರನ್ ಗಳಿಸಿದ ವಿಶ್ವ ದಾಖಲೆ ಹೊಂದಿದ್ದಾರೆ. ಮೂರು ಆವೃತ್ತಿಗಳಲ್ಲಿ ಭಾರತದ ಪರ ಆಡಿದ 28 ಪಂದ್ಯಗಳಲ್ಲಿ ರೋಹಿತ್ 7 ಶತಕ ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಡೇವಿಡ್ ವಾರ್ನರ್ ತಲಾ ಆರು ಶತಕಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ಸ್

ಭಾರತ ಪರ 472 ಪಂದ್ಯಗಳಲ್ಲಿ (ಟೆಸ್ಟ್‌ + ಏಕದಿನ + ಟಿ20ಐ), ರೋಹಿತ್ 597 ಸಿಕ್ಸರ್‌ ಸಿಡಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವುದೇ ಆಟಗಾರನಿಂದ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ವಿಶ್ವ ದಾಖಲೆಯಾಗಿದೆ. ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ 553 ಗರಿಷ್ಠ ಸ್ಕೋರ್‌ಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇದಲ್ಲದೆ, ರೋಹಿತ್ ಟಿ20ಐಗಳಲ್ಲಿ ಮತ್ತು ಏಕದಿನ ವಿಶ್ವಕಪ್‌ನಲ್ಲಿ (28 ಪಂದ್ಯಗಳಲ್ಲಿ 54) ಅತಿ ಹೆಚ್ಚು ಸಿಕ್ಸರ್‌ (190) ಸಿಡಿಸಿದ್ದಾರೆ.

ಟಿ20ಐಗಳಲ್ಲಿ ಅತ್ಯಧಿಕ ಪಂದ್ಯಗಳು

ಸೆಪ್ಟೆಂಬರ್ 19, 2007ರಂದು ಡರ್ಬನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಪರ ಆಡಿದ ಟಿ20ಐ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ರೋಹಿತ್, ಟಿ20 ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು (151) ಆಡಿದ್ದಾರೆ. 151 ಟಿ20 ಪಂದ್ಯಗಳಲ್ಲಿ ರೋಹಿತ್ 3974 ರನ್ ಗಳಿಸಿ ಒಂದು ವಿಕೆಟ್ ಪಡೆದಿದ್ದಾರೆ.

ಟಿ20ಐಗಳಲ್ಲಿ ಅತಿ ಹೆಚ್ಚು ಶತಕ

ರೋಹಿತ್ ಇದುವರೆಗೆ ಆಡಿರುವ 151 ಟಿ20ಐಗಳ 143 ಇನ್ನಿಂಗ್ಸ್‌ಗಳಲ್ಲಿ 5 ಶತಕಗಳನ್ನು ಗಳಿಸಿದ್ದಾರೆ. ಚುಟುಕು ಕ್ರಿಕೆಟ್​​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿಶ್ವದಾಖಲೆಯಾಗಿದೆ. ಆಸ್ಟ್ರೇಲಿಯಾದ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಟಿ20ಐಗಳಲ್ಲಿ ಐದು ಶತಕ ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಆಟಗಾರ ಮತ್ತು ನಾಯಕ

ರೋಹಿತ್ ಶರ್ಮಾ ಇದುವರೆಗೆ 6 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಾಯಕನಾಗಿ 5 ಟ್ರೋಫಿ ಮತ್ತು ಆಟಗಾರನಾಗಿ 1 (ಡೆಕ್ಕನ್ ಚಾರ್ಜರ್ಸ್‌) ಪ್ರಶಸ್ತಿ ಜಯಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಟ್ರೋಫಿ ಗೆದ್ದವರ ಪಟ್ಟಿಯಲ್ಲಿ ಜಂಟಿ ದಾಖಲೆ ಬರೆದಿದ್ದಾರೆ.

ಏಷ್ಯಾಕಪ್‌ನಲ್ಲಿ ಅತ್ಯಂತ ಯಶಸ್ವಿ ಆಟಗಾರ

ರೋಹಿತ್ ಏಷ್ಯಾಕಪ್ ಇತಿಹಾಸದಲ್ಲಿ ಜಂಟಿ-ಅತ್ಯಂತ ಯಶಸ್ವಿ ಆಟಗಾರ ಮತ್ತು ನಾಯಕ. ಅವರು 2010, 2016, 2018, ಮತ್ತು 2023 ರಲ್ಲಿ 4 ಬಾರಿ ಏಷ್ಯಾ ಕಪ್ ಪ್ರಶಸ್ತಿ ಗೆದ್ದಿದ್ದಾರೆ. ಜಡೇಜಾ ಕೂಡ ಇಷ್ಟೇ ಪ್ರಶಸ್ತಿ ಗೆದ್ದಿದ್ದಾರೆ. ಅಲ್ಲದೆ, ನಾಯಕನಾಗಿ 2018 ಮತ್ತು 2023 ಆವೃತ್ತಿಗಳಲ್ಲಿ ಏಷ್ಯಾಕಪ್ ಟ್ರೋಫಿಗಳನ್ನು ಗೆದ್ದಿದ್ದರು. ಮೊಹಮ್ಮದ್ ಅಜರುದ್ದೀನ್ ಮತ್ತು ಎಂಎಸ್ ಧೋನಿ ಅವರು ಸಹ ಎರಡು ಬಾರಿ ಏಷ್ಯಾಕಪ್ ಟ್ರೋಫಿ ಜಯಿಸಿದ್ದರು.

ಇದಲ್ಲದೆ, ರೋಹಿತ್ ಇದುವರೆಗೆ ಆಡಿದ ಟಿ20 ವಿಶ್ವಕಪ್‌ನ ಎಲ್ಲಾ ಎಂಟು ಆವೃತ್ತಿಗಳಲ್ಲಿ ಆಡಿದ ಇಬ್ಬರು ಆಟಗಾರರಲ್ಲಿ ಒಬ್ಬರು. (ಮತ್ತೊಬ್ಬರು ಶಕೀಬ್ ಅಲ್ ಹಸನ್). 39 ಪಂದ್ಯಗಳಲ್ಲಿ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಅತ್ಯಧಿಕ ಪಂದ್ಯಗಳನ್ನು ಆಡಿದ ಆಟಗಾರನೂ ಹೌದು. ಇದೀಗ ಜೂನ್ 2024ರಲ್ಲಿ ಭಾರತ ತಂಡದ ಪರ ತಮ್ಮ 9ನೇ ಟಿ20 ವಿಶ್ವಕಪ್‌ ಆಡಲು ಸಿದ್ಧರಾಗಿದ್ದಾರೆ.

ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner