ಹಾಲಿ ಚಾಂಪಿಯನ್ಗೆ ಮತ್ತೊಂದು ಸೋಲು; ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ಗೆ ಭರ್ಜರಿ ಜಯ
SRH vs CSK Highlights: 17ನೇ ಆವೃತ್ತಿಯ ಐಪಿಎಲ್ನ 18ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಸಂಘಟಿತ ಹೋರಾಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಭರ್ಜರಿ ಗೆಲುವು ಸಾಧಿಸಿದೆ. ಯಲ್ಲೋ ಆರ್ಮಿಯನ್ನು 6 ವಿಕೆಟ್ಗಳಿಂದ ಆರೆಂಜ್ ಆರ್ಮಿ ಸೋಲಿಸಿದೆ. ಸಿಎಸ್ಕೆ ಟೂರ್ನಿಯಲ್ಲಿ 2ನೇ ಸೋಲು ಅನುಭವಿಸಿದರೆ, ಎಸ್ಆರ್ಹೆಚ್ ಎರಡನೇ ಜಯದ ನಗೆ ಬೀರಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ ಋತುರಾಜ್ ಗಾಯಕ್ವಾಡ್ ನೇತೃತ್ವದ ತಂಡ 3ನೇ ಸ್ಥಾನದಲ್ಲಿದೆ. ಕಮಿನ್ಸ್ ಪಡೆ 5ನೇ ಸ್ಥಾನದಲ್ಲಿದೆ. ಪ್ರಸಕ್ತ ಆವೃತ್ತಿಯಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಮತ್ತು ಚೆನ್ನೈ ಎರಡೂ ತಂಡಗಳನ್ನು ಎಸ್ಆರ್ಹೆಚ್ ಸೋಲಿಸಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ, ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಶಿವಂ ದುಬೆ ಸಿಡಿಸಿದ 45 ರನ್ಗಳ ಫಲವಾಗಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಹೈದರಾಬಾದ್ 11 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತು.
ಹೈದರಾಬಾದ್ ಸಂಘಟಿತ ಹೋರಾಟ
ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಹೈದರಾಬಾದ್, ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 46 ರನ್ ಹರಿದು ಬಂತು. ಆದರೆ ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿ ಸಹಿತ 37 ರನ್ ಚಚ್ಚಿ ಔಟಾದರು. ಆರಂಭಿಕ ಆಘಾತದ ಬಳಿಕ ಆರ್ಭಟಿಸಿದ ಟ್ರಾವಿಸ್ ಹೆಡ್ ಮತ್ತು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಏಡನ್ ಮಾರ್ಕ್ರಮ್ ಎರಡನೇ ವಿಕೆಟ್ಗೆ 60 ರನ್ ಪೇರಿಸಿದರು. ಅಲ್ಲದೆ, ಪವರ್ ಪ್ಲೇಗೆ 78 ರನ್ಗಳು ಹರಿದು ಬಂದವು.
ಆದರೆ ಮಾರ್ಕ್ರಮ್ಗೆ ಸಾಥ್ ನೀಡುತ್ತಿದ್ದ ಹೆಡ್ 24 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ನೊಂದಿಗೆ 31 ರನ್ ಗಳಿಸಿ ಮಹೀಶಾ ತೀಕ್ಷಾಣ ಬೌಲಿಂಗ್ನಲ್ಲಿ ಔಟಾದರು. ಮತ್ತೊಂದೆಡೆ ಅರ್ಧಶತಕ ಸಿಡಿಸಿದ ಮಾರ್ಕ್ರಮ್ ತಂಡಕ್ಕೆ ಆಧಾರವಾದರು. 36 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ನೊಂದಿಗೆ 50 ರನ್ ಕಲೆ ಹಾಕಿದರು. ಉತ್ತಮ ಪ್ರದರ್ಶನ ನೀಡಿ ಗೆಲುವನ್ನು ಸನಿಹಕ್ಕೆ ತಂದಿಟ್ಟು ವಿಕೆಟ್ ಒಪ್ಪಿಸಿದರು.
ಬಡ್ತಿ ಪಡೆದು 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶಹಬಾಜ್ ಅಹ್ಮದ್, ನೀರಸ ಪ್ರದರ್ಶನ ನೀಡಿದರು. 19 ಎಸೆತಗಳಲ್ಲಿ 18 ರನ್ ಗಳಿಸಿದರು. ಮಾರ್ಕ್ರಮ್ ಮತ್ತ ಶಹಬಾಜ್ಗೆ ಮೊಯಿನ್ ಅಲಿ ಗೇಟ್ಪಾಸ್ ಕೊಟ್ಟರು. ಆರಂಭದಲ್ಲಿ ರನ್ ಲೀಕ್ ಮಾಡಿದ ಸಿಎಸ್ಕೆ ಕೊನೆಯ ಹಂತದಲ್ಲಿ ಟೈಟ್ ಬೌಲಿಂಗ್ ನಡೆಸಿತು. ಆದರೆ ಕೊನೆಯಲ್ಲಿ ಕ್ರೀಸ್ನಲ್ಲಿದ್ದ ಹೆನ್ರಿಚ್ ಕ್ಲಾಸೆನ್-ನಿತಿಶ್ ರೆಡ್ಡಿ ಗೆಲುವು ತಂದುಕೊಟ್ಟರು. ಮೊಯಿನ್ ಅಲಿ 2 ವಿಕೆಟ್, ದೀಪಕ್ ಚಹರ್, ಮಹೀಶಾ ತೀಕ್ಷಣ ತಲಾ ಒಂದು ವಿಕೆಟ್ ಪಡೆದರು.
ಸಿಎಸ್ಕೆ ನೀರಸ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್ಕೆ ಕೆಟ್ಟ ಆರಂಭ ಪಡೆಯಿತು. ರಚಿನ್ ರವೀಂದ್ರ (12) ಮತ್ತು ಋತುರಾಜ್ ಗಾಯಕ್ವಾಡ್ (26) ಬೇಗನೇ ಔಟಾದರು. ಮತ್ತೊಂದೆಡೆ ಚೇತರಿಕೆ ನೀಡುವ ಪ್ರಯತ್ನಿಸಿದ ಅಜಿಂಕ್ಯ ರಹಾನೆ 35 ರನ್ಗಳಿಗೆ ಸುಸ್ತಾದರು. ನಿಧಾನವಾಗಿ ಬ್ಯಾಟ್ ಬೀಸಿ ತಂಡದ ಸ್ಕೋರ್ ಏರಿಸಲು ವಿಫಲವಾದರು. ಆದರೆ ಶಿವಂ ದುಬೆ ಮತ್ತೆ ಸಿಡಿದರು. 24 ಎಸೆತಗಳಲ್ಲಿ 4 ಸಿಕ್ಸರ್, 2 ಬೌಂಡರಿ ಸಹಿತ 45 ರನ್ ಚಚ್ಚಿದರು.
ಚೆನ್ನೈ ಬ್ಯಾಟರ್ಗಳ ಆರ್ಭಟಕ್ಕೆ ಕಡಿವಾಣ ಹಾಕಿದ ಎಸ್ಆರ್ಹೆಚ್, ಯಾವ ಓವರ್ನಲ್ಲೂ ರನ್ ಸೋರಿಕೆ ಮಾಡಲಿಲ್ಲ. ಡ್ಯಾರಿಲ್ ಮಿಚೆಲ್ (13) ಮತ್ತೊಮ್ಮೆ ನಿರಾಸೆ ಮೂಡಿಸಿದರು. ರವೀಂದ್ರ ಜಡೇಜಾ ತನ್ನ ಹಳೆಯ ಖದರ್ ತೋರುವಲ್ಲಿ ವಿಫಲರಾದರು. ಕೊನೆಯವರೆಗೂ ಕ್ರೀಸ್ನಲ್ಲಿದ್ದರೂ 23 ಎಸೆತಗಳಲ್ಲಿ 31 ರನ್ಗಳಿಸಲಷ್ಟೇ ಶಕ್ತವಾಯಿತು. ಧೋನಿ ಅಜೇಯ 1 ರನ್ ಸಿಡಿಸಿದರು. ಭುವನೇಶ್ವರ್, ನಟರಾಜನ್, ಕಮಿನ್ಸ್, ಶಹಬಾಜ್, ಉನಾದ್ಕತ್ ತಲಾ 1 ವಿಕೆಟ್ ಪಡೆದರು.