ಕನ್ನಡ ಸುದ್ದಿ  /  ಕ್ರಿಕೆಟ್  /  ರಾಷ್ಟ್ರ ರಾಜಧಾನಿಯಲ್ಲಿ ರನ್ ಹೊಳೆ; ಹೈದರಾಬಾದ್ ಗೂಳಿಗಳ ಎದುರು 67 ರನ್​ಗಳಿಂದ ಸೋತ ಡೆಲ್ಲಿ ಕ್ಯಾಪಿಟಲ್ಸ್

ರಾಷ್ಟ್ರ ರಾಜಧಾನಿಯಲ್ಲಿ ರನ್ ಹೊಳೆ; ಹೈದರಾಬಾದ್ ಗೂಳಿಗಳ ಎದುರು 67 ರನ್​ಗಳಿಂದ ಸೋತ ಡೆಲ್ಲಿ ಕ್ಯಾಪಿಟಲ್ಸ್

Sunrisers Hyderabad beat Delhi Capitals: 17ನೇ ಆವೃತ್ತಿಯ ಐಪಿಎಲ್​ನ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 67 ರನ್​ಗಳ ಅಂತರದಿಂದ ಗೆದ್ದು ಬೀಗಿದೆ.

ಹೈದರಾಬಾದ್ ಗೂಳಿಗಳ ಎದುರು 67 ರನ್​ಗಳಿಂದ ಸೋತ ಡೆಲ್ಲಿ ಕ್ಯಾಪಿಟಲ್ಸ್
ಹೈದರಾಬಾದ್ ಗೂಳಿಗಳ ಎದುರು 67 ರನ್​ಗಳಿಂದ ಸೋತ ಡೆಲ್ಲಿ ಕ್ಯಾಪಿಟಲ್ಸ್ (PTI)

ಟ್ರಾವಿಸ್ ಹೆಡ್ (89), ಶಹಬಾಜ್ ಅಹ್ಮದ್ (59*) ಸ್ಫೋಟಕ ಅರ್ಧಶತಕ, ಅಭಿಷೇಕ್ ಶರ್ಮಾ (46) ಅವರ ಪರಾಕ್ರಮದ ಫಲವಾಗಿ ಸನ್​ರೈಸರ್ಸ್ ಹೈದರಾಬಾದ್ 67 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ತವರು ಮೈದಾನ ದೆಹಲಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಶರಣಾಯಿತು. ಅಂಕಪಟ್ಟಿಯಲ್ಲಿ ಎಸ್​ಆರ್​ಹೆಚ್ 10 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಜಂಪ್ ಆಗಿದೆ. ಡೆಲ್ಲಿ 6 ರಿಂದ 7ನೇ ಸ್ಥಾನಕ್ಕೆ ಕುಸಿತಕೊಂಡಿದೆ. ಸನ್​ರೈಸರ್ಸ್​ ಸತತ ನಾಲ್ಕನೇ ಜಯದ ನಗೆ ಬೀರಿತು.

ಟ್ರೆಂಡಿಂಗ್​ ಸುದ್ದಿ

ದೆಹಲಿಯ ಅರುಣ್​ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್​ನ 35ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ಮತ್ತೊಂದು ಬೃಹತ್ ಮೊತ್ತ ಪೇರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್​​ಗಳನ್ನು ಚೆಂಡಾಡಿದ ಬ್ಯಾಟರ್ಸ್, 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 266 ರನ್ ಪೇರಿಸಿತು. ಇದರ ನಡುವೆಯೂ ಕುಲ್ದೀಪ್ 4 ವಿಕೆಟ್ ಪಡೆದು ಮಿಂಚಿದರು. ಈ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲಿ ಅಬ್ಬರಿಸಿದರೂ ಕೊನೆಯಲ್ಲಿ ನೀರಸ ಪ್ರದರ್ಶನ ನೀಡಿತು. ಪ್ರೇಸರ್ ಮ್ಯಾಕ್​ಗುರ್ಕ್​ ಅಬ್ಬರದ ಹೊರತಾಗಿ ಶರಣಾಯಿತು. 19.1 ಓವರ್​​ಗಳಲ್ಲಿ 199 ರನ್ ಗಳಿಸಿ ಆಲೌಟ್ ಆಯಿತು.

ಮ್ಯಾಕ್​ಗುರ್ಕ್ ವೇಗದ ಅರ್ಧಶತಕ ವ್ಯರ್ಥ

267 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ವಿಕೆಟ್ ಒಪ್ಪಿಸಿತು. ಮೊದಲ ಓವರ್​ನ ನಾಲ್ಕು ಎಸೆತಗಳಲ್ಲಿ ನಾಲ್ಕು ಬೌಂಡರಿ ಬಾರಿಸಿದ ಪೃಥ್ವಿ ಶಾ ಕ್ಯಾಚ್​ ನೀಡಿ ಹೊರ ನಡೆದರು. ಡೇವಿಡ್ ವಾರ್ನರ್ (1) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಆದರೆ, ಜೇಕ್ ಫ್ರೇಸರ್​ ಮ್ಯಾಕ್​ಗುರ್ಕ್​ ಆಕ್ರಮಣಕಾರಿ ಇನ್ನಿಂಗ್ಸ್ ಕಟ್ಟಿ ತಂಡಕ್ಕೆ ಭರವಸೆ ಮೂಡಿಸಿದರು. 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದರು. ಇದು ಐಪಿಎಲ್​ನ 4ನೇ ವೇಗದ ಹಾಫ್​ ಸೆಂಚುರಿಯಾಗಿದೆ. ಅಭಿಷೇಕ್ ಪೋರಲ್ 42 ರನ್ ಸಿಡಿಸಿ ಹೋರಾಡಿದರೆ, ಟ್ರಿಸ್ಟಾನ್ ಸ್ಟಬ್ಸ್ 10, ಲಲಿತ್ ಯಾದವ್ 7, ಅಕ್ಷರ್​ ಪಟೇಲ್ 6 ರನ್ ಸಿಡಿಸಿದರು. ರಿಷಭ್ ಪಂತ್ 44 ರನ್ ಗಳಿಸಿದರು. ನಟರಾಜನ್ 4 ವಿಕೆಟ್ ಉರುಳಿಸಿದರು.

ಎಸ್​ಆರ್​ಹೆಚ್ ವಿಧ್ವಂಸಕ ಬ್ಯಾಟಿಂಗ್

ಮೊದಲು ಬ್ಯಾಟಿಂಗ್ ನಡೆಸಿದ ಎಸ್​ಆರ್​ಹೆಚ್​​​ ಬಿರುಸಿನ ಆರಂಭ ಪಡೆಯಿತು. ಟ್ರಾವಿಸ್ ಹೆಡ್​ ಮತ್ತು ಅಭಿಷೇಕ್ ಶರ್ಮಾ ಡೆಲ್ಲಿ ಬೌಲರ್​ಗಳ ವಿರುದ್ಧ ದಂಡಯಾತ್ರೆ ನಡೆಸಿದರು. ಆರಂಭಿಕ ವಿಕೆಟ್​​ಗೆ ದಾಖಲೆಯ 132 ರನ್ ಪೇರಿಸಿತು. ಅದು ಕೂಡ 6.2 ಓವರ್​​ಗಳಲ್ಲಿ. ಈ ಜೋಡಿಯ ವಿಧ್ವಂಸಕ ಆಟಕ್ಕೆ ಕುಲ್ದೀಪ್ ಯಾದವ್ ಬ್ರೇಕ್ ನೀಡಿದರು. ಅಭಿಷೇಕ್ 12 ಎಸೆತಗಳಲ್ಲಿ 6 ಸಿಕ್ಸರ್​​, 2 ಬೌಂಡರಿ ನೆರವಿನಿಂದ ಭರ್ಜರಿ 46 ರನ್ ಚಚ್ಚಿದರು. ಅಭಿಷೇಕ್ ಔಟಾದ ಓವರ್​​ನಲ್ಲೇ ಏಡನ್ ಮಾರ್ಕ್ರಮ್ ಸಹ ವಿಕೆಟ್ ಒಪ್ಪಿಸಿದರು.

ಕುಲ್ದೀಪ್ ಒಂದೇ ಓವರ್​​ನಲ್ಲಿ ಇಬ್ಬರಿಗೆ ಗೇಟ್ ಪಾಸ್ ನೀಡಿದರೂ ಹೆಡ್​ ತನ್ನ ಆರ್ಭಟ ಮುಂದುವರೆಸಿದರು. ಪವರ್​​ಪ್ಲೇನಲ್ಲಿ 125 ರನ್ ಸಿಡಿಸಿದ ಹೈದರಾಬಾದ್, 5 ಓವರ್​​​ಗಳಲ್ಲೇ 100 ರನ್ ಗಳಿಸಿ ದಾಖಲೆ ಬರೆದಿತ್ತು. ಹೆಡ್ ಎರಡು ವಿಕೆಟ್​ ಕಳೆದುಕೊಂಡ 19 ರನ್​ಗಳ ಅಂತರದಲ್ಲಿ ಶತಕದ ಅಂಚಿನಲ್ಲಿ ಪೆವಿಲಿಯನ್ ಸೇರಿದರು. ಎಡಗೈ ಬ್ಯಾಟ್ಸ್​ಮನ್​ 32 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್ ಸಹಿತ 89 ರನ್ ಚಚ್ಚಿದರು. ಹೆನ್ರಿಚ್ ಕ್ಲಾಸೆನ್ 15, ನಿತೀಶ್ ರೆಡ್ಡಿ 37, ಅಬ್ದುಲ್ ಸಮದ್ 13 ರನ್ ಸಿಡಿಸಿದರೆ, ಶಹಬಾಜ್ ಅಜೇಯ 69 ರನ್ ಬಾರಿಸಿ ತಂಡದ ಮೊತ್ತವನ್ನು 3ನೇ ಬಾರಿಗೆ 250ರ ಗಡಿ ದಾಟಿಸಿದರು.

 

IPL_Entry_Point