ಐಪಿಎಲ್ನಲ್ಲಿ ಶರವೇಗದ ಅರ್ಧಶತಕ, ಪವರ್ಪ್ಲೇನಲ್ಲಿ ಗರಿಷ್ಠ ಸ್ಕೋರ್; ಟ್ರಾವಿಸ್ ಹೆಡ್ ಬೇಟೆಗೆ ದಾಖಲೆಗಳು ಉಡೀಸ್
Travis Head records : ಐಪಿಎಲ್ನಲ್ಲಿ ಮತ್ತೊಮ್ಮೆ ವಿಧ್ವಂಸಕ ಬ್ಯಾಟಿಂಗ್ ನಡೆಸಿದ ಸನ್ರೈಸರ್ಸ್ ಹೈದರಾಬಾದ್ ತಂಡದ ಟ್ರಾವಿಸ್ ಹೆಡ್, ಹಲವು ದಾಖಲೆಗಳನ್ನು ಮುರಿದಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ.

17ನೇ ಆವೃತ್ತಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ರನ್ ಬೇಟೆ ಮುಂದುವರೆಸಿದೆ. ಟೂರ್ನಿಯ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧವೂ ಭರ್ಜರಿ ಬ್ಯಾಟಿಂಗ್ ನಡೆಸಿದೆ. ಬೌಂಡರಿ-ಸಿಕ್ಸರ್ಗಳಿಂದಲೇ ಡೀಲ್ ಮಾಡಿದ ಬ್ಯಾಟರ್ಸ್ ಹಲವು ದಾಖಲೆಗಳನ್ನು ನುಚ್ಚುನೂರು ಮಾಡಿದ್ದಾರೆ. ಅದರಲ್ಲೂ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಮತ್ತೊಮ್ಮೆ ವಿಧ್ವಂಸಕ ಬ್ಯಾಟಿಂಗ್ ನಡೆಸಿ ಹಲವು ದಾಖಲೆಗನ್ನು ಮುರಿದಿದ್ದಾರೆ. ಇನ್ನಿಂಗ್ಸ್ ಆರಂಭ 2ನೇ ಎಸೆತದಿಂದ ದಾಳಿ ನಡೆಸಲು ಶುರುವಿಟ್ಟ ಟ್ರಾವಿಸ್ ಹೆಡ್, ಕೇವಲ 16 ಎಸೆತಗಳಲ್ಲೇ ಅರ್ಧಶತಕ ಪೂರೈಸಿ ವಿಶೇಷ ದಾಖಲೆ ಬರೆದಿದ್ದಾರೆ.
ಎಸ್ಆರ್ಹೆಚ್ ಪರ ವೇಗದ ಅರ್ಧಶತಕ
ಡೆಲ್ಲಿ ಬೌಲಿಂಗ್ ವಿಭಾಗವನ್ನು ಧೂಳೀಪಟಗೊಳಿಸಿದ ಆಸ್ಟ್ರೇಲಿಯಾದ ಆಟಗಾರ ಟ್ರಾವಿಸ್ ಹೆಡ್, ಕೇವಲ 32 ಎಸೆತಗಳಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್ಗಳ ಸಹಿತ ಬರೋಬ್ಬರಿ 89 ರನ್ ಬಾರಿಸಿ ಔಟಾದರು. ಆದರೆ ಅವರು 16 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ ಪೂರೈಸಿದ ಹೆಡ್, ಸನ್ರೈಸರ್ಸ್ ಹೈದರಾಬಾದ್ ಪರ ಶರವೇಗದ ಹಾಫ್ ಸೆಂಚುರಿ ಸಿಡಿಸಿದವರ ಪಟ್ಟಿಯಲ್ಲಿ ಜಂಟಿ ದಾಖಲೆ ಬರೆದಿದ್ದಾರೆ. ಇದೇ ಐಪಿಎಲ್ನಲ್ಲಿ ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ ವೇಗದ 50 ರನ್ ಬಾರಿಸಿದ್ದರು.
ಎಸ್ಆರ್ಹೆಚ್ ಪರ ವೇಗದ ಅರ್ಧಶತಕ ಸಿಡಿಸಿದವರು (ಎಸೆತಗಳಲ್ಲಿ)
16 - ಅಭಿಷೇಕ್ ಶರ್ಮಾ vs ಎಂಐ, ಹೈದರಾಬಾದ್, 2024
16 - ಟ್ರಾವಿಸ್ ಹೆಡ್ vs ಡಿಸಿ, ಡೆಲ್ಲಿ, (20-04-2024) (ಹೊಸ ಸೇರ್ಪಡೆ)
18 - ಟ್ರಾವಿಸ್ ಹೆಡ್ vs ಎಂಐ, ಹೈದರಾಬಾದ್, 2024
20 - ಡೇವಿಡ್ ವಾರ್ನರ್ vs ಸಿಎಸ್ಕೆ, ಹೈದರಾಬಾದ್, 2015
20 - ಡೇವಿಡ್ ವಾರ್ನರ್ vs ಕೆಕೆಆರ್, ಹೈದರಾಬಾದ್, 2017
ಪವರ್ಪ್ಲೇನಲ್ಲೇ ಹೆಡ್ ಮೂರನೇ ಅರ್ಧಶತಕ
ಐಪಿಎಲ್ ಇತಿಹಾಸದಲ್ಲಿ ಪವರ್ಪ್ಲೇ ಓವರ್ಗಳಲ್ಲೇ 3ನೇ ಬಾರಿಗೆ ಅರ್ಧಶತಕ ಸಿಡಿಸಿದ್ದಾರೆ ಟ್ರಾವಿಸ್ ಹೆಡ್. ಈ ಪೈಕಿ ಕ್ರಿಸ್ಗೇಲ್ ಮತ್ತು ಸುನಿಲ್ ನರೇನ್ ಜೊತೆ ಜಂಟಿ 2ನೇ ಸ್ಥಾನ ಪಡೆದಿದ್ದಾರೆ. ಅಗ್ರಸ್ಥಾನದಲ್ಲಿರುವ ಡೇವಿಡ್ ವಾರ್ನರ್, ಪವರ್ನಲ್ಲೇ 6 ಬಾರಿ ಅರ್ಧಶತಕ ಬಾರಿಸಿದ್ದಾರೆ. ಗೇಲ್, ನರೇನ್ ಮತ್ತು ಹೆಡ್ ತಲಾ 3 ಬಾರಿ ಈ ಸಾಧನೆ ಮಾಡಿದ್ದಾರೆ.
ಐಪಿಎಲ್ನಲ್ಲಿ ಪವರ್ಪ್ಲೇನಲ್ಲೇ ಅತಿ ಹೆಚ್ಚು ಅರ್ಧಶತಕ
6 - ಡೇವಿಡ್ ವಾರ್ನರ್
3 - ಕ್ರಿಸ್ಗೇಲ್
3 - ಸುನಿಲ್ ನರೇನ್
3 - ಟ್ರಾವಿಸ್ ಹೆಡ್ (ಹೊಸ ಸೇರ್ಪಡೆ)
ಪವರ್ಪ್ಲೇನಲ್ಲಿ ಹೆಡ್ ಅತಿ ಹೆಚ್ಚು ರನ್
ಪವರ್ಪ್ಲೇನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಅತ್ಯಧಿಕ ಸ್ಕೋರ್ ಮಾಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಟ್ರಾವಿಸ್ ಹೆಡ್ ಪಾತ್ರರಾಗಿದ್ದಾರೆ. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಟ್ರಾವಿಸ್, ಪವರ್ಪ್ಲೇನಲ್ಲೇ 26 ಎಸೆತಗಳಲ್ಲೇ 84 ರನ್ ಬಾರಿಸಿ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿತ್ತು. ವಾರ್ನರ್ 25 ಎಸೆತಗಳಲ್ಲಿ 62 ರನ್ ಬಾರಿಸಿದ್ದರು.
ಪವರ್ಪ್ಲೇನಲ್ಲಿ ಅತ್ಯಧಿಕ ಸ್ಕೋರ್ ಮಾಡಿದವರು (ಎಸ್ಆರ್ಹೆಚ್ ಪರ)
84 (26) - ಟ್ರಾವಿಸ್ ಹೆಡ್ vs ಡಿಸಿ, ಡಿಸಿ (ಹೊಸ ಸೇರ್ಪಡೆ)
62*(25) - ಡೇವಿಡ್ ವಾರ್ನರ್ vs ಕೆಕೆಆರ್, ಹೈದರಾಬಾದ್-2019
59*(20) - ಟ್ರಾವಿಸ್ ಹೆಡ್ vs ಎಂಐ, ಹೈದರಾಬಾದ್, 2024
59*(23) - ಡೇವಿಡ್ ವಾರ್ನರ್ vs ಸಿಎಸ್ಕೆ, ಹೈದರಾಬಾದ್, 2015
* ಸುರೇಶ್ ರೈನಾ (2024 ರಲ್ಲಿ 87 ರನ್ ಪಿಬಿಕೆಎಸ್ ವಿರುದ್ಧ) ಮಾತ್ರ ಪವರ್ಪ್ಲೇನಲ್ಲಿ ಟ್ರಾವಿಸ್ ಹೆಡ್‌ಗಿಂತ ಹೆಚ್ಚು ರನ್ ಗಳಿಸಿದ್ದಾರೆ.
