ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರ್ಸ್ ಜೊತೆಗೆ ತೀವ್ರ ವಾಗ್ದಾದ, ಹತಾಶೆಯಿಂದ ಬ್ಯಾಟ್ ಹೊಡೆದ ಮಾಜಿ ನಾಯಕ, ವಿಡಿಯೋ
Virat Kohli: 17ನೇ ಆವೃತ್ತಿಯ ಐಪಿಎಲ್ನ 36ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ವಿರಾಟ್ ಕೊಹ್ಲಿ ವಿವಾದಾತ್ಮಕವಾಗಿ ಔಟ್ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ (KKR vs RCB) ವಿರುದ್ಧದ ಐಪಿಎಲ್ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ವಿವಾದಾತ್ಮಕವಾಗಿ ಔಟ್ ಆಗಿದ್ದಾರೆ. ಇನಿಂಗ್ಸ್‌ನ 3ನೇ ಓವರ್‌ನ ಮೊದಲ ಎಸೆತದಲ್ಲಿ ಬೌಲರ್ ಹರ್ಷಿತ್ ರಾಣಾ ಅವರು ವಿರಾಟ್ಗೆ ಫುಲ್ ಟಾಸ್ ಹಾಕಿದರು. ಈ ಚೆಂಡು ನೋ ಬಾಲ್ನಂತೆ ಕಂಡರೂ ಔಟ್ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಚೆಂಡು ಸೊಂಟದ ಮೇಲೆ ಬಂದ ಕಾರಣ ಕೊಹ್ಲಿ ಬ್ಯಾಟ್ ಅನ್ನು ಕೇವಲ ಟಚ್ ಕೊಟ್ಟರು. ಆದರೆ ಬ್ಯಾಟ್ ಎಡ್ಜ್ ಆಗಿ ಚೆಂಡು ಮೇಲಕ್ಕೆ ಪುಟಿಯಿತು. ಆಗ ಬೌಲರ್ ಕ್ಯಾಚ್ ಪಡೆದು ಸಂಭ್ರಮಿಸಿದರು. ಅಂಪೈರ್ಗಳು ಯಾವುದೇ ನೋಬಾಲ್ ನೀಡದ ಕಾರಣ ವಿರಾಟ್ ರಿವ್ಯೂ ಮೊರೆ ಹೋದರು. ಆನ್ಫೀಲ್ಡ್ ಅಂಪೈರ್ ಪರಿಶೀಲನೆ ನಡೆಸುವಂತೆ ಮೂರನೇ ಅಂಪೈರ್ ಮೈಕೆಲ್ ಗಾಫ್‌ಗೆ ಮನವಿ ಮಾಡಿದರು.
ಆದರೆ, ಪರಿಶೀಲನೆ ನಡೆಸುವ ವೇಳೆ ಚೆಂಡು ಸೊಂಟದ ಮೇಲಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಚೆಂಡು ನಿಧಾನಗತಿಯಲ್ಲಿ ಸಾಗಿದ್ದು, ಮುಂದೆ ಹೋದಂತೆ ವಿಕೆಟ್ಗೆ ತಾಗುತ್ತದೆ ಎಂದು 3ನೇ ಅಂಪೈರ್ ಹೇಳಿದ್ದಾರೆ. ತದನಂತರ ಔಟ್ ನಿರ್ಧಾರ ನೀಡುವಂತೆ ಆನ್ಫೀಲ್ಡ್ ಅಂಪೈರ್ಗೆ ಸೂಚಿಸಿದರು. ಕೊಹ್ಲಿಯ ಔಟನ್ನು ಕಾನೂನುಬದ್ಧವೆಂದು ನಿರ್ಣಯಿಸಿದರು. ಆದರೆ ಇದು ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಂಪೈರ್ಗಳ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಅಂಪೈರ್ ಜೊತೆ ವಿರಾಟ್ ಕೊಹ್ಲಿ ವಾಗ್ವಾದ
ಈ ನಿರ್ಧಾರದಿಂದ ಅತೃಪ್ತಿ ವ್ಯಕ್ತಪಡಿಸಿದ ಕೊಹ್ಲಿ, ನಿರ್ಗಮಿಸುವ ಮುನ್ನ ಅಂಪೈರ್ ಜೊತೆ ವಾಗ್ವಾದ ನಡೆಸಿ ಬೌಂಡರಿ ಹಗ್ಗದ ಮೇಲೆ ಬ್ಯಾಟ್ ಬೀಸಿದರು. ಸೊಂಟದ ಮೇಲೆ ಚೆಂಡು ಬಿದ್ದಿದ್ದರೂ ನೋ ಬಾಲ್ ಕೊಡದೆ ಗುಡ್ ನೀಡಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಮೈದಾನದಲ್ಲೇ ತುಂಬಾ ಹೊತ್ತು ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಮತ್ತೊಂದೆಡೆ ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಅಂಪೈರ್ಗಳ ಜೊತೆಗೆ ವಾದ ಮಾಡಿದರು.
ನೋ ಬಾಲ್ ನಿಯಮ ಹೇಳುವುದೇನು?
ಐಸಿಸಿ ಪ್ಲೇಯಿಂಗ್ ಕಂಡೀಷನ್ಸ್‌ನ ಕಾನೂನು 41.7.1ರ ಪ್ರಕಾರ, ಪಾಪಿಂಗ್ ಕ್ರೀಸ್‌ನಲ್ಲಿ ನೇರವಾಗಿ ನಿಂತಿರುವ ಸ್ಟ್ರೈಕರ್‌ನ ಸೊಂಟದ ಮೇಲೆ ಪಿಚ್ ಆಗದೆಯೇ ಹಾದುಹೋಗುವ ಅಥವಾ ಹಾದುಹೋಗುವ ಯಾವುದೇ ಎಸೆತವನ್ನು ಅನ್ಯಾಯವೆಂದು ಪರಿಗಣಿಸಬೇಕು. ಏಕೆಂದರೆ ಇದು ಸ್ಟ್ರೈಕರ್ಗೆ ದೈಹಿಕ ಗಾಯ ಉಂಟುಮಾಡುವ ಸಾಧ್ಯತೆ ಇದೆ. ಬೌಲರ್ ಅಂತಹ ಎಸೆತವನ್ನು ಬೌಲ್ ಮಾಡಿದರೆ ಅಂಪೈರ್ ತಕ್ಷಣವೇ ಕರೆ ಮಾಡಿ ನೋ ಬಾಲ್ ಅನ್ನು ಸೂಚಿಸುತ್ತಾರೆ.
ಎಸೆತಕ್ಕಾಗಿ ಪಾಪಿಂಗ್ ಕ್ರೀಸ್‌ನ ಹೊರಗೆ ನಿಂತಿದ್ದ ಕೊಹ್ಲಿ, ಎಸೆತ ತನ್ನ ಸೊಂಟದ ಮೇಲೆ ದಾಟಿದೆ ಎಂದು ಹೇಳಿಕೊಂಡರು. ಆದರೆ ಮರು ಪರಿಶೀಲನೆ ವೇಳೆ ಚೆಂಡಿನ ಪಥವು ಅವರ ಸೊಂಟದ ಗೆರೆಯಿಂದ ಕೆಳಗೆ ಬೀಳುವುದನ್ನು ತೋರಿಸಿತು. ಕೊಹ್ಲಿ ಕ್ರೀಸ್‌ನಲ್ಲಿ ನಿಂತಿದ್ದರೆ, ಚೆಂಡು ಸೊಂಟದ ಗೆರೆಯಿಂದ ಮತ್ತಷ್ಟು ಕೆಳಗೆ ಹಾದು ಹೋಗುತ್ತಿತ್ತು ಎಂಬುದು ಅದರ ಅರ್ಥವಾಗಿತ್ತು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 7 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಿತ 18 ರನ್ ಗಳಿಸಿದರು.
ಪಾಪಿಂಗ್ ಕ್ರೀಸ್ ಎಂದರೇನು: ವಿಕೆಟ್‌ಗಿಂತ ಮುಂದೆ 4 ಫಿಟ್ ಅಥವಾ 1.22 ಮೀಟರ್ ಎದುರು ಇರುವ ಗೆರೆಗೆ ಬ್ಯಾಟರ್ ಅವನ ಒಂದು ಕಾಲು ಅಥವ ಬ್ಯಾಟ್ ಇಟ್ಟಿದ್ದರೆ ರನೌಟ್ ತಪ್ಪಿಸಬಹುದು
ಈ ಆವೃತ್ತಿಯಲ್ಲಿ ಕೊಹ್ಲಿ ಪ್ರದರ್ಶನ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಅದ್ಭುತ ಲಯದಲ್ಲಿದ್ದಾರೆ. ಬ್ಯಾಟ್ನೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಮತ್ತೊಂದು ತುದಿಯಲ್ಲಿ ಅವರಿಗೆ ಉತ್ತಮವಾದ ಬೆಂಬಲ ಸಿಗುತ್ತಿಲ್ಲ. 8 ಪಂದ್ಯಗಳಲ್ಲಿ 2 ಅರ್ಧಶತಕ, 1 ಶತಕ ಸಹಿತ 379 ರನ್ ಗಳಿಸಿರುವ ಕೊಹ್ಲಿ, ಪ್ರಸ್ತುತ ಆರೆಂಜ್ ಕ್ಯಾಪ್ ಅನ್ನು ಹೊಂದಿದ್ದಾರೆ. ಕೆಕೆಆರ್ ವಿರುದ್ಧ 18 ರನ್ ಗಳಿಸಿ ವಿವಾದಾತ್ಮಕವಾಗಿ ಔಟಾದರು. ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೈದಾನ ತೊರೆದರು.