ಮುಂದಿನ 3 ವರ್ಷಗಳಲ್ಲಿ 5 ಐಸಿಸಿ ಟೂರ್ನಿಗಳು; ನೂತನ ಹೆಡ್ಕೋಚ್ ಗೌತಮ್ ಗಂಭೀರ್ ಮುಂದಿರುವ ಸವಾಲುಗಳೇನು?
Gautam Gambhir: ಭಾರತೀಯ ಕ್ರಿಕೆಟ್ ತಂಡದ ನೂತನ ಹೆಡ್ಕೋಚ್ ಆಗಿ ನೇಮಕವಾಗಿರುವ ಗೌತಮ್ ಗಂಭೀರ್ ಅವರಿಗೆ ಎದುರಾಗಿರುವ ಸವಾಲುಗಳೇನು? ಇಲ್ಲಿದೆ ನೋಡಿ ವಿವರ.
ಭಾರತ ತಂಡದ ನೂತನ ಹೆಡ್ಕೋಚ್ ಆಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir) ಅವರು ನೇಮಕಗೊಂಡಿದ್ದಾರೆ. ಇದೇ ತಿಂಗಳ ಶ್ರೀಲಂಕಾ ಸರಣಿಯಿಂದ ಅಧಿಕಾರಕ್ಕೇರುವ ಗಂಭೀರ್, 2027ರ ಏಕದಿನ ವಿಶ್ವಕಪ್ ಟೂರ್ನಿ ತನಕ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ರಾಹುಲ್ ದ್ರಾವಿಡ್ರಿಂದ ತೆರವಾದ ಸ್ಥಾನ ತುಂಬಿದ ಗಂಭೀರ್ರನ್ನು ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷಣಾ ನಾಯಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಸರ್ವಾನುಮತದಿಂದ ಶಿಫಾರಸು ಮಾಡಿದೆ.
ಜುಲೈ 27 ರಿಂದ ಶ್ರೀಲಂಕಾ ವಿರುದ್ಧ ಆರಂಭವಾಗುವ ಟಿ20ಐ ಸರಣಿಯಲ್ಲಿ ಟೀಮ್ ಇಂಡಿಯಾ ಹೆಡ್ಕೋಚ್ ಆಗಿ ಗೌತಮ್ ಗಂಭೀರ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇದೀಗ ನೂತನವಾಗಿ ಆಯ್ಕೆಯಾದ ಕೋಚ್ ಮುಂದೆ ಹಲವು ಸವಾಲುಗಳಿವೆ. ದ್ರಾವಿಡ್ ಗರಡಿಯಲ್ಲಿ ಆಟಗಾರರು ಕೂಲ್ & ಕಾಮ್ ಆಗಿ ಇರುತ್ತಿದ್ದರು. ಆದರೆ ಗಂಭೀರ್ ಅಗ್ರೆಸ್ಸಿವ್ ಆಗಿರುವ ಕಾರಣ ತಂಡದ ವಾತಾವರಣ ಹೇಗಿರಲಿದೆ ಎಂಬುದು ಸಹ ಕುತೂಹಲ ಮೂಡಿಸಿದೆ. ರೋಹಿತ್ ಶರ್ಮಾ ನಾಯಕತ್ವದ ಸ್ಥಾನ ತುಂಬುವುದು ಕೂಡ ದೊಡ್ಡ ಸವಾಲಾಗಿದೆ.
ಐಸಿಸಿ ಟ್ರೋಫಿ ಗೆಲ್ಲುವುದು
ಗಂಭೀರ್ ಮುಂದಿರುವ ಸವಾಲುಗಳ ಪೈಕಿ ಮೊದಲನೇಯದ್ದು ಐಸಿಸಿ ಟ್ರೋಫಿ ಗೆಲ್ಲುವುದು. ಗಂಭೀರ್ ಕೋಚಿಂಗ್ ಅವಧಿಯಲ್ಲಿ ಒಟ್ಟು ಐದು ಐಸಿಸಿ ಟೂರ್ನಿಗಳು ನಡೆಯಲಿವೆ. 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್, 2026ರಲ್ಲಿ ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಟಿ20 ವಿಶ್ವಕಪ್, 2027ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್, ಏಕದಿನ ವಿಶ್ವಕಪ್ ನಡೆಯಲಿದೆ. ಹಾಗಾಗಿ ಐಸಿಸಿ ಟ್ರೋಫಿ ಗೆಲ್ಲುವುದೇ ಗಂಭೀರ್ ಮೊದಲ ಗುರಿಯಾಗಿದೆ.
ಹಿರಿಯ ಆಟಗಾರರ ಮೇಲೆ ಹಿಡಿತ ಸಾಧಿಸುವುದು
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ಆಟಗಾರರ ಮೇಲೆ ಹಿಡಿತ ಸಾಧಿಸುವುದು ಸಹ ಗೌತಿಗೆ ಸವಾಲಿನ ವಿಷಯವಾಗಿದೆ. ಏಕೆಂದರೆ ಈ ಆಟಗಾರರು ಹಲವು ವರ್ಷಗಳಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದು, ಗೌತಮ್ ಗಂಭೀರ್ ಮಾತು ಕೇಳುತ್ತಾರೆಯೇ ಎಂಬ ಪ್ರಶ್ನೆ ಎದ್ದಿದೆ. ಅದರಲ್ಲೂ ಗಂಭೀರ್ ಮತ್ತು ಕೊಹ್ಲಿ ನಡುವೆ ವೈಮನಸ್ಸು ಇನ್ನೂ ಇದೆ ಎಂದು ವರದಿಯಾಗಿದ್ದು, ಅವರನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸಹ ಕುತೂಹಲ ಮೂಡಿಸಿದೆ.
ಭವಿಷ್ಯದ ತಂಡವನ್ನು ರೂಪಿಸುವುದು
ಗಂಭೀರ್ಗೆ ಇದು ದೊಡ್ಡ ಸವಾಲಾಗಿದೆ. ಭಾರತೀಯ ಕ್ರಿಕೆಟ್ನಲ್ಲಿ ಪ್ರತಿಭಾವಂತ ಆಟಗಾರರ ದಂಡು ಹೆಚ್ಚಿದೆ. ಹಾಗಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರ ಯುಗಾಂತ್ಯದ ನಂತರ ಅವರ ಸ್ಥಾನವನ್ನು ತುಂಬುವ ಸೂಕ್ತ ಆಟಗಾರರ ಹುಡುಕಾಟ ನಡೆಸಬೇಕಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಐಸಿಸಿ ಟೂರ್ನಿಗಳಿಗೆ ಯುವ ಆಟಗಾರರನ್ನು ಸಜ್ಜುಗೊಳಿಸಬೇಕಿದೆ. ದ್ರಾವಿಡ್ ಗರಡಿಯಲ್ಲಿ ಸಾಕಷ್ಟು ಯುವ ಆಟಗಾರರು ತಂಡವನ್ನು ಕೂಡಿಕೊಂಡಿದ್ದು, ತಮ್ಮ ಸಾಮರ್ಥ್ಯ ನಿರೂಪಿಸುವ ಮೂಲಕ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ವಿದೇಶಿ ನೆಲದಲ್ಲಿ ಸರಣಿಗಳನ್ನು ಗೆಲ್ಲುವುದು
ಕಳೆದೊಂದು ದಶಕದಿಂದ ವಿದೇಶಿ ನೆಲಗಳಲ್ಲಿ ಭಾರತ ತಂಡ ಪ್ರಾಬಲ್ಯ ಸಾಧಿಸುತ್ತಿದೆ. ಅದೇ ಪರಂಪರೆ ಮುಂದುವರೆಸಿಕೊಂಡು ಹೋಗಬೇಕಿದೆ. ಈಗಾಗಲೇ ಆಸ್ಟ್ರೇಲಿಯಾ ನೆಲದಲ್ಲಿ ಸತತ ಎರಡು ಬಾರಿ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದಿದೆ. ಈಗ ಇದೇ ವರ್ಷದ ಅಂತ್ಯದಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಅದಕ್ಕೂ ಮುನ್ನ ತವರಿನಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಟ್ಯಾಗ್ ಲೈನ್ ಹೊಂದಿತ್ತು.
ರೋಹಿತ್ ಉತ್ತರಾಧಿಕಾರಿ ಹುಡುಕಾಟ
ರೋಹಿತ್ ಶರ್ಮಾ ಹೆಚ್ಚೆಂದರೂ ಭಾರತೀಯ ತಂಡದಲ್ಲಿ ಎರಡು ವರ್ಷಗಳ ಕಾಲ ಆಡಬಹುದು. ಈಗಾಗಲೇ ಟಿ20ಐ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, ಏಕದಿನ ಮತ್ತು ಟೆಸ್ಟ್ನಲ್ಲಿ ಮುಂದುವರೆಯಲಿದ್ದಾರೆ. ಹಾಗಾಗಿ ಅವರಿಗೆ ಉತ್ತರಾಧಿಕಾರಿಯನ್ನು ಹುಡುಕುವುದು ಗಂಭೀರ್ಗೆ ದೊಡ್ಡ ಚಾಲೆಂಜ್ ಆಗಿದೆ. ಟಿ20ಐನಲ್ಲಿ ಹಾರ್ದಿಕ್ ಪಾಂಡ್ಯ ನಾಯಕ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಶುಭ್ಮನ್ ಗಿಲ್ ರೇಸ್ನಲ್ಲಿದ್ದಾರೆ. ಮತ್ತೊಂದೆಡೆ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ನಾಯಕನಾದರೂ ಅಚ್ಚರಿ ಇಲ್ಲ.
ತಂಡವನ್ನು ಅಗ್ರೆಸ್ಸಿವ್ ಆಗಿ ರೂಪಿಸುತ್ತಾರಾ?
ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಕೂಲ್ & ಕಾಮ್ ಆಗಿತ್ತು. ಆದರೆ, ಗಂಭೀರ್ ಹಾಗಲ್ಲ, ತುಂಬಾ ಅಗ್ರೆಸ್ಸಿವ್ ವ್ಯಕ್ತಿ. ಹೀಗಾಗಿ ಇಷ್ಟು ದಿನ ಶಾಂತತೆಯ ವಾತಾವರಣವನ್ನು ಗಂಭೀರ್ ಹೇಗೆ ನಿಭಾಯಿಸುತ್ತಾರೆ ಎಂಬುದು ಸವಾಲಾಗಿದೆ. ಇದ್ದದ್ದನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಹಾಗಾಗಿ, ಕೋಪದಿಂದ ಅಲ್ಲದೆ ಪ್ರೀತಿಯಿಂದ ಆಟಗಾರರನ್ನು ಹೇಗೆ ಗೆಲ್ಲುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ತಂಡದ ಶಿಸ್ತು ಮತ್ತು ಒಗ್ಗಟ್ಟಿನ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವುದರ ಮೇಲೂ ಗಮನ ಹರಿಸಬೇಕಿದೆ.