100 ಟೆಸ್ಟ್ ಪಂದ್ಯಗಳನ್ನು ಆಡುವುದೇ ನನ್ನ ದೊಡ್ಡ ಗುರಿ: ಅಜಿಂಕ್ಯ ರಹಾನೆ
ಕನ್ನಡ ಸುದ್ದಿ  /  ಕ್ರಿಕೆಟ್  /  100 ಟೆಸ್ಟ್ ಪಂದ್ಯಗಳನ್ನು ಆಡುವುದೇ ನನ್ನ ದೊಡ್ಡ ಗುರಿ: ಅಜಿಂಕ್ಯ ರಹಾನೆ

100 ಟೆಸ್ಟ್ ಪಂದ್ಯಗಳನ್ನು ಆಡುವುದೇ ನನ್ನ ದೊಡ್ಡ ಗುರಿ: ಅಜಿಂಕ್ಯ ರಹಾನೆ

Ajinkya Rahane: ರಣಜಿ ಕ್ರಿಕೆಟ್‌ನಲ್ಲಿ ಸದ್ಯ ಮುಂಬೈ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಅಜಿಂಕ್ಯಾ ರಹಾನೆ, ರಣಜಿ ಟ್ರೋಫಿ ಗೆಲ್ಲುವುದು ಮತ್ತು ಭಾರತಕ್ಕಾಗಿ 100 ಟೆಸ್ಟ್ ಪಂದ್ಯಗಳನ್ನು ಆಡುವುದು ನನ್ನ ದೊಡ್ಡ ಗುರಿ ಎಂದು ಹೇಳಿದ್ದಾರೆ.

ಅಜಿಂಕ್ಯಾ ರಹಾನೆ
ಅಜಿಂಕ್ಯಾ ರಹಾನೆ (AP)

ಕ್ರೀಸ್‌ಕಚ್ಚಿ ಆಡಬಲ್ಲ ಸಾಮರ್ಥ್ಯವಿರುವ ಭಾರತದ ಅನುಭವಿ ಬ್ಯಾಟರ್‌ ಅಜಿಂಕ್ಯಾ ರಹಾನೆ (Ajinkya Rahane) ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಸಾಧಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಈವರೆಗೆ 85 ಟೆಸ್ಟ್ ಪಂದ್ಯಗಳನ್ನಾಡಿ ಬರೋಬ್ಬರಿ 5077 ರನ್ ಕಲೆ ಹಾಕಿರುವ ಆಟಗಾರ, ಪ್ರಮುಖ ಸರಣಿಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ.

ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಟೆಸ್ಟ್‌ ತಂಡವು ಐತಿಹಾಸಿಕ ಗೆಲುವು ಸಾಧಿಸಿದ್ದಾಗ ಭಾರತ ತಂಡವನ್ನು ಮುನ್ನಡೆಸಿದವರು ರಹಾನೆ. ಐತಿಹಾಸಿಕ ಲಂಡನ್‌ನ ಲಾರ್ಡ್ಸ್ ಮತ್ತು ಎಂಸಿಜಿಯಲ್ಲಿ ಶತಕ ವೈಭವ, ಅಜಿಂಕ್ಯ ರಹಾನೆ ವೃತ್ತಿಜೀವನದ ಅವಿಸ್ಮರಣೀಯ ಅಧ್ಯಾಯಗಳು. 35 ವರ್ಷ ವಯಸ್ಸಿನ ಆಟಗಾರ ಇನ್ನೂ ಆಡುವ ಜೋಶ್‌ ಹಾಗೂ ಫಿಟ್‌ನೆಸ್‌ ಹೊಂದಿದ್ದಾರೆ. ಆದರೆ, ಸರಿಯಾದ ಅವಕಾಶ ಸಿಗುತ್ತಿಲ್ಲ.‌ ಇತ್ತೀಚೆಗೆ ಭಾರತ ಟೆಸ್ಟ್‌ ತಂಡದಿಂದ ರಹಾನೆ ಅವರನ್ನು ಬಹುತೇಕ ಹೊರಗಿಡಲಾಗಿದೆ.

ಇದನ್ನೂ ಓದಿ | ಸಂಜು ಸ್ಯಾಮ್ಸನ್ ಇನ್, ಮೂವರು ಔಟ್; ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20ಗೆ ಭಾರತ ಸಂಭಾವ್ಯ ತಂಡ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಕಾಶ ಸಿಗದೆ, ದೇಶೀಯ ಕ್ರಿಕೆಟ್‌ನಲ್ಲಿ ರಹಾನೆ ತಮ್ಮ ಆಟ ಮುಂದುವರೆಸಿದ್ದಾರೆ. ರಣಜಿ ಕ್ರಿಕೆಟ್‌ನಲ್ಲಿ ಮುಂಬೈ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷದ ರಣಜಿ ಋತುವಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ರಹಾನೆ, ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯೂಟಿಸಿ ಫೈನಲ್‌ ಪಂದ್ಯದಲ್ಲಿ ಆಡಿದ್ದರು. ಆ ಬಳಿಕ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಇದೀಗ ಮತ್ತೆ ಟೀಮ್‌ ಇಂಡಿಯಾಗೆ ಮರಳುವ ಗುರಿ ಮುಂಬೈ ಆಟಗಾರನದ್ದು.

ರಣಜಿ ಟ್ರೋಫಿ ಗೆಲುವು ಮತ್ತು ಟೆಸ್ಟ್‌ ಶತಕವೇ ನನ್ನ ಗುರಿ

“ನಾನು ಮುಂಬೈ ಪರ ಪ್ರತಿಯೊಂದು ಪಂದ್ಯದಲ್ಲೂ ಚೆನ್ನಾಗಿ ಆಡಬೇಕೆಂದು ಎದುರು ನೋಡುತ್ತಿದ್ದೇನೆ. ರಣಜಿ ಟ್ರೋಫಿ ಎತ್ತಿ ಹಿಡಿಯುವುದು ನನ್ನ ಗುರಿಯಾಗಿದೆ. ಇದೇ ವೇಳೆ 100 ಟೆಸ್ಟ್ ಪಂದ್ಯಗಳನ್ನು ಆಡುವುದು ನನ್ನ ಮುಂದಿನ ದೊಡ್ಡ ಗುರಿ,” ಎಂದು ಸೋಮವಾರ ತವರಿನಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದ ಬಳಿಕ ರಹಾನೆ ಹೇಳಿದ್ದಾರೆ. ಆಂಧ್ರ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡವು 10 ವಿಕೆಟ್‌ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

ಇದನ್ನೂ ಓದಿ | ಕೂಚ್ ಬೆಹಾರ್ ಟ್ರೋಫಿ ಫೈನಲ್‌ನಲ್ಲಿ ಕನ್ನಡಿಗನ ದಾಖಲೆ; 400 ರನ್ ಬಾರಿಸಿದ ಮೊದಲ ಆಟಗಾರನಾದ ಪ್ರಖರ್ ಚತುರ್ವೇದಿ

ಸದ್ಯ ಭಾರತದ ಇಬ್ಬರು ಪ್ರಮುಖ ಟೆಸ್ಟ್‌ ಆಟಗಾರರಾದ ರಹಾನೆ ಮತ್ತು ಚೇತೇಶ್ವರ ಪೂಜಾರ, ಟೀಮ್‌ ಇಂಡಿಯಾದದಿಂದ ಬಹುಪಾಲು ಹೊರಗಿದ್ದಾರೆ. ಅವರ ಜವಾಬ್ದಾರಿಯನ್ನು ಯುವ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಈಗಾಗಲೇ ನಿರ್ವಹಿಸುತ್ತಿದ್ದಾರೆ.

ಮನಸ್ಥಿತಿ ತುಂಬಾ ಮುಖ್ಯ ಎಂದ ರಹಾನೆ

ಉನ್ನತ ಮಟ್ಟದಲ್ಲಿ ಯಶಸ್ಸು ಸಾಧಿಸಲು ಏನು ಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ರಹಾನೆ, “ಇದು ಮನಸ್ಥಿತಿಗೆ ಸಂಬಂಧಿಸಿದ್ದು. ಯಾರ ಆಟವು ಇದ್ದಕ್ಕಿದ್ದಂತೆ ಬದಲಾಗುವುದಿಲ್ಲ. ಏನೇ ಆದರೂ ಬ್ಯಾಟರ್ ಚೆಂಡನ್ನು ನೋಡಿ ಆಡಬೇಕು. ಆದರೆ ನೀವು ಮೈದಾನದಲ್ಲಿರುವಾಗ ಎಲ್ಲವೂ ನಿಮ್ಮ ಮನಸ್ಥಿತಿ ಮೇಲೆ ಅವಲಂಬಿಸಿರುತ್ತದೆ. ಅದು ಪ್ರತಿಯೊಬ್ಬರಿಗೂ ವಿಭಿನ್ನವಾಗಿರುತ್ತದೆ. ನೀವು ಹೇಗೆ ತಯಾರಿ ನಡೆಸುತ್ತೀರಿ, ನೀವು ಅನುಸರಿಸುವ ಪ್ರಕ್ರಿಯೆಯೆಗಳೇನು ಇಂಥಾ ಚಿಕ್ಕ ವಿಷಯಗಳು ಮುಖ್ಯವಾಗುತ್ತವೆ. ಕೇವಲ ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಯೋಚಿಸುವುದಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ಆಟಗಾರನ ಮನಸ್ಥಿತಿ ಸರಿಯಾಗಿರಬೇಕು. ಮಾನಸಿಕವಾಗಿ ಎಷ್ಟು ಬಲಶಾಲಿಯಾಗಿದ್ದೀರಿ ಎಂಬುದು ತುಂಬಾ ಮುಖ್ಯ. ವೇಗವನ್ನು ಹೇಗೆ ನಿಭಾಯಿಸುತ್ತೀರಿ ಮತ್ತು ವೈಫಲ್ಯವನ್ನು ಹೇಗೆ ನಿಭಾಯಿಸುತ್ತೀರಿ ಎಂಬ ವಿಷಯಗಳು ಮುಖ್ಯ, ” ಎಂದು ರಹಾನೆ ಹೇಳಿಕೊಂಡಿದ್ದಾರೆ.

Whats_app_banner