ಸರ್ಫರಾಜ್ ಖಾನ್ ಕುಟುಂಬಕ್ಕೆ ಡಬಲ್ ಖುಷಿ; ಟೆಸ್ಟ್ ಶತಕದ ಬೆನ್ನಲ್ಲೇ ಮನೆಗೆ ಹೊಸ ಸದಸ್ಯನ ಆಗಮನ
ಕನ್ನಡ ಸುದ್ದಿ  /  ಕ್ರಿಕೆಟ್  /  ಸರ್ಫರಾಜ್ ಖಾನ್ ಕುಟುಂಬಕ್ಕೆ ಡಬಲ್ ಖುಷಿ; ಟೆಸ್ಟ್ ಶತಕದ ಬೆನ್ನಲ್ಲೇ ಮನೆಗೆ ಹೊಸ ಸದಸ್ಯನ ಆಗಮನ

ಸರ್ಫರಾಜ್ ಖಾನ್ ಕುಟುಂಬಕ್ಕೆ ಡಬಲ್ ಖುಷಿ; ಟೆಸ್ಟ್ ಶತಕದ ಬೆನ್ನಲ್ಲೇ ಮನೆಗೆ ಹೊಸ ಸದಸ್ಯನ ಆಗಮನ

ಟೀಮ್‌ ಇಂಡಿಯಾ ಕ್ರಿಕೆಟಿಗ ಸರ್ಫರಾಜ್ ಖಾನ್ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿದ ಬೆನ್ನಲ್ಲೇ ಸರ್ಫರಾಜ್‌ ಕುಟುಂಬಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಮನೆಗೆ ಹೊಸ ಸದಸ್ಯನನ್ನು ಕುಟುಂಬ ಸ್ವಾಗತಿಸಿದೆ.

ಸರ್ಫರಾಜ್ ಖಾನ್ ಕುಟುಂಬಕ್ಕೆ ಡಬಲ್ ಖುಷಿ; ಟೆಸ್ಟ್ ಶತಕದ ಬೆನ್ನಲ್ಲೇ ಮನೆಗೆ ಹೊಸ ಸದಸ್ಯನ ಆಗಮನ
ಸರ್ಫರಾಜ್ ಖಾನ್ ಕುಟುಂಬಕ್ಕೆ ಡಬಲ್ ಖುಷಿ; ಟೆಸ್ಟ್ ಶತಕದ ಬೆನ್ನಲ್ಲೇ ಮನೆಗೆ ಹೊಸ ಸದಸ್ಯನ ಆಗಮನ

ಭಾರತ ಕ್ರಿಕೆಟ್‌ ತಂಡದ ಹೊಸ ಬ್ಯಾಟಿಂಗ್ ಸೆನ್ಸೇಷನ್ ಸರ್ಫರಾಜ್ ಖಾನ್ ಅವರಿಗೆ ವೈಯಕ್ತಿಕ ಬದುಕಿನಲ್ಲಿ ಪ್ರಮೋಷನ್‌ ಸಿಕ್ಕಿದೆ. ಅಂದರೆ, ಅವರು ಗಂಡು ಮಗುವಿನ ತಂದೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಬೆನ್ನಲ್ಲೇ ಅವರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಪತ್ನಿ‌ ರೊಮಾನಾ ಜಹೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿನ್ನಸ್ವಾಮಿ ಮೈದಾನದಲ್ಲಿ ಆಕರ್ಷಕ 150 ರನ್‌ ಸಿಡಿಸಿದ್ದ ಅವರು, ಗಂಡು ಮಗುವಿಗೆ ತಂದೆಯಾಗಿರುವುದರ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಘೋಷಿಸಿದ್ದಾರೆ. ತಮ್ಮ ಮಗುವನ್ನು ಹಿಡಿದಿರುವ ಚಿತ್ರಗಳನ್ನು ಹಂಚಿಕೊಂಡು ಖುಷಿಪಟ್ಟಿದ್ದಾರೆ. ಇದೇ ವೇಳೆ ತಮ್ಮ ತಂದೆ ಜೊತೆಗೂ ನಿಂತು ಫೋಟೊ ಶೇರ್‌ ಮಾಡಿದ್ದಾರೆ.

ಸರ್ಫರಾಜ್ ಖಾನ್‌ ಕಳೆದ ವರ್ಷದ ಆಗಸ್ಟ್‌ನಲ್ಲಿ ರೊಮಾನಾ ಜಹೂರ್ ಅವರ ಕೈಹಿಡಿದಿದ್ದರು. ಅವರ ಯಶಸ್ವಿ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಈದೀಗ ಮಗ ಜನಿಸಿದ್ದಾನೆ. ಈ ವರ್ಷದ ಆರಂಭದಲ್ಲಿ ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯದ ಮೂಲಕ, ಸರ್ಫರಾಜ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಆಗ ಅವರ ಪತ್ನಿ ಮತ್ತು ತಂದೆ ಮೈದಾನಕ್ಕೆ ಬಂದಿದ್ದರು. ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಂದ ಭಾರತ ತಂಡದ ಕ್ಯಾಪ್ ಸ್ವೀಕರಿಸಿದ ನಂತರ ಸರ್ಫರಾಜ್ ತಮ್ಮ ತಂದೆ ಮತ್ತು ಪತ್ನಿಯತ್ತ ಕ್ಯಾಪ್ ತೆಗೆದುಕೊಂಡು ಹೋಗಿ ಸಂಭ್ರಮದಲ್ಲಿ ಭಾಗಿಯಾದರು. ಈ ವೇಳೆ ಅವರ ಕುಟುಂಬ ಭಾವನಾತ್ಮಕವಾಗಿತ್ತು.

ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಸರ್ಫರಾಜ್ ಆಡಿದ ಮೂರು ಟೆಸ್ಟ್‌ಗಳಲ್ಲಿ 200 ರನ್ ಗಳಿಸಿದ್ದರು. ಅವುಗಳಲ್ಲಿ ಪ್ರತಿಯೊಂದರಲ್ಲೂ ಅರ್ಧಶತಕವನ್ನು ಗಳಿಸಿದರು. 50ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿ ಮಿಂಚಿದರು. ಆ ಬಳಿಕ ನಡೆದ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸರ್ಫರಾಜ್‌ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಆದರೆ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲೇ ಪ್ಲೇಯಿಂಗ್ ಇಲೆವೆನ್‌ಗೆ ಆಯ್ಕೆಯಾದರು. ಇದೀಗ ಮುಂದಿನ ಪಂದ್ಯದಲ್ಲಿ ಆಡುವ ಬಳಗದಲ್ಲಿ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಡಕ್ಔಟ್ ಆಗಿದ್ದ ಸರ್ಫರಾಜ್ ಖಾನ್, ಎರಡನೇ ಇನ್ನಿಂಗ್ಸ್‌ನಲ್ಲಿ 195 ಎಸೆತಗಳಲ್ಲಿ 150 ರನ್ ಸಿಡಿಸಿ ಔಟಾದರು. ಇದು ಮುಂಬೈ ಬ್ಯಾಟರ್‌ ಗಳಿಸಿದ ಚೊಚ್ಚಲ ಟೆಸ್ಟ್ ಶತಕವಾಗಿದೆ. ತಮ್ಮ ಇನ್ನಿಂಗ್ಸ್‌ನಲಿ 18 ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಅವರೊಂದಿಗೆ 136 ರನ್‌ಗಳ ಜೊತೆಯಾಟವಾಡಿದರು.

ಸರ್ಫರಾಜ್‌ ಪ್ರಥಮ ದರ್ಜೆ ದಾಖಲೆ

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಗುರುತಿಸಿಕೊಂಡಿದ್ದ ಸರ್ಫರಾಜ್, ಮೊದಲ ಬಾರಿಗೆ ಕ್ರಿಕೆಟ್‌ ಜಗತ್ತಿಗೆ ಪರಿಚಿತರಾದರು. ಆದರೆ, ಆ ನಂತರ ಅವರು ಬೆಳಕಿಗೆ ಬರಲಿಲ್ಲ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಸಹ ಕಷ್ಟಕರವಾಗಿತ್ತು. 2015 ಮತ್ತು 2018ರ ನಡುವೆ ಉತ್ತರ ಪ್ರದೇಶ ಪರ ಆಡಿದ ಅವರು, ಮತ್ತೆ ಮುಂಬೈಗೆ ಮರಳಿದ ನಂತರ ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದರು. 52 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಸರ್ಫರಾಜ್ 69.27ರ ಸರಾಸರಿಯಲ್ಲಿ 4572 ರನ್ ಗಳಿಸಿದ್ದಾರೆ. ಇದರಲ್ಲಿ 16 ಶತಕಗಳು ಮತ್ತು 14 ಅರ್ಧಶತಕಗಳು ಸೇರಿವೆ.