ಮೊಹಮ್ಮದ್ ಸಿರಾಜ್‌ಗಿಂತ ಮೊದಲು ಡಿಎಸ್‌ಪಿ ಹುದ್ದೆ ಅಲಂಕರಿಸಿದ ಭಾರತದ ಐವರು ಕ್ರಿಕೆಟಿಗರು ಯಾರು?
Mohammed Siraj DSP: ಮೊಹಮ್ಮದ್ ಸಿರಾಜ್‌ಗಿಂತ ಮೊದಲು ಹಲವು ಕ್ರಿಕೆಟಿಗರು ತಮ್ಮ ಅದ್ಭುತ ಪ್ರದರ್ಶನದಿಂದ ಪೊಲೀಸ್ ಹುದ್ದೆ ಗಿಟ್ಟಿಸಿಕೊಂಡಿದ್ದರು. ಸಿರಾಜ್ ಹೊರತಾಗಿ ಪೊಲೀಸ್ ಆಡಳಿತದಲ್ಲಿ ದೊಡ್ಡ ಹುದ್ದೆಗಳನ್ನು ಪಡೆದ ಕ್ರಿಕೆಟಿಗರ ಬಗ್ಗೆ ತಿಳಿಯೋಣ.

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್‌ಗೆ ತೆಲಂಗಾಣ ಸರ್ಕಾರ ದೊಡ್ಡ ಜವಾಬ್ದಾರಿಯನ್ನು ನೀಡಿದೆ. ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆ ಅಲಂಕರಿಸಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಸಿರಾಜ್ ನೀಡಿದ ಅದ್ಭುತ ಪ್ರದರ್ಶನಕ್ಕಾಗಿ ಸರ್ಕಾರಿ ಉದ್ಯೋಗ ನೀಡುವುದಾಗಿ ತೆಲಂಗಾಣ ಸರ್ಕಾರ ಘೋಷಿಸಿತ್ತು. ಅದರಂತೆ ಇದೀಗ ಸಿರಾಜ್‌ಗೆ ಈಗ ಡಿಎಸ್‌ಪಿ ಹುದ್ದೆ ಸಿಕ್ಕಿದೆ. ಮೊಹಮ್ಮದ್ ಸಿರಾಜ್ ಪೊಲೀಸ್ ಕೆಲಸ ಪಡೆದ ಮೊದಲ ಕ್ರಿಕೆಟಿಗನಲ್ಲ. ಸಿರಾಜ್‌ಗಿಂತ ಮೊದಲು ಹಲವು ಕ್ರಿಕೆಟಿಗರು ತಮ್ಮ ಅದ್ಭುತ ಪ್ರದರ್ಶನದಿಂದ ಪೊಲೀಸ್ ಹುದ್ದೆ ಗಿಟ್ಟಿಸಿಕೊಂಡಿದ್ದರು. ಸಿರಾಜ್ ಹೊರತಾಗಿ ಪೊಲೀಸ್ ಆಡಳಿತದಲ್ಲಿ ದೊಡ್ಡ ಹುದ್ದೆಗಳನ್ನು ಪಡೆದ ಕ್ರಿಕೆಟಿಗರ ಬಗ್ಗೆ ತಿಳಿಯೋಣ.
ಜೋಗಿಂದರ್ ಶರ್ಮಾ
2007ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೋಗಿಂದರ್ ಶರ್ಮಾ ಕೂಡ ಪೊಲೀಸ್ ಇಲಾಖೆಯಲ್ಲಿದ್ದಾರೆ. ಹರಿಯಾಣ ಸರ್ಕಾರ ಅವರನ್ನು ಡಿಎಸ್‌ಪಿಯಾಗಿ ನೇಮಿಸಿತು. ಈಗಲೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಹರ್ಭಜನ್ ಸಿಂಗ್
ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನದಿಂದಾಗಿ, ಹರ್ಭಜನ್ ಸಿಂಗ್ ಅವರಿಗೆ ಪಂಜಾಬ್ ಸರ್ಕಾರವು ಡಿಎಸ್‌ಪಿ ಹುದ್ದೆಯನ್ನು ನೀಡಿತು. ಆದರೆ, ಅವರು ಈಗ ಆಮ್ ಆದ್ಮಿ ಪಕ್ಷದಿಂದ ರಾಜ್ಯಸಭಾ ಸಂಸದರಾಗಿರುವ ಕಾರಣ ತಮ್ಮ ಪೊಲೀಸ್ ಕೆಲಸವನ್ನು ತೊರೆದಿದ್ದಾರೆ.
ಬಲ್ವಿಂದರ್ ಸಂಧು
1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಬಲ್ವಿಂದರ್ ಸಿಂಗ್ ಸಂಧು ಅವರನ್ನು ಮಹಾರಾಷ್ಟ್ರ ಸರ್ಕಾರವು ಮುಂಬೈ ಪೊಲೀಸ್‌ನಲ್ಲಿ ಸಹಾಯಕ ಪೊಲೀಸ್ ಕಮಿಷನರ್ (ACP) ಆಗಿ ನೇಮಿಸಿದೆ. ವಿಶ್ವಕಪ್ ಬಳಿಕ ಬಲವಿಂದೂರ್ ಸಂಧು ಕ್ರಿಕೆಟ್ ಜೀವನ ಹೆಚ್ಚು ಕಾಲ ಮುಂದುವರೆಸಲು ಸಾಧ್ಯವಾಗಲಿಲ್ಲ.
ಹರ್ಮನ್‌ಪ್ರೀತ್ ಕೌರ್
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಪಂಜಾಬ್ ಪೊಲೀಸ್‌ನ ಡಿಎಸ್‌ಪಿಯಾಗಿ ನೇಮಕಗೊಂಡಿದ್ದರು. 2017ರ ಮಹಿಳಾ ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್ ಅವರ ಅದ್ಭುತ ಪ್ರದರ್ಶನದ ನಂತರ, ಪಂಜಾಬ್ ಸರ್ಕಾರ ಅವರನ್ನು ಡಿಎಸ್‌ಪಿ ಎಂದು ಘೋಷಿಸಿತು. ಆದರೆ ನಂತರ, ಹರ್ಮನ್‌ಪ್ರೀತ್ ನಕಲಿ ಪದವಿ ಹೊಂದಿದ್ದಾರೆ ಎಂಬ ಕಾರಣದಿಂದ ಪಂಜಾಬ್ ಸರ್ಕಾರ ಅವರನ್ನು ಡಿಎಸ್‌ಪಿ ಹುದ್ದೆಯಿಂದ ವಜಾಗೊಳಿಸಿತು.
ದೀಪ್ತಿ ಶರ್ಮಾ
ಉತ್ತರ ಪ್ರದೇಶ ಸರ್ಕಾರ ಭಾರತ ಮಹಿಳಾ ತಂಡದ ಆಟಗಾರ್ತಿ ದೀಪ್ತಿ ಶರ್ಮಾ ಅವರನ್ನು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್‌ಪಿ) ನೇಮಿಸಿದೆ. ಟೀಮ್ ಇಂಡಿಯಾ ಪರ ಮಾಡಿದ ಸಾಧನೆಗಾಗಿ ಯುಪಿ ಸರ್ಕಾರ ಈ ಗೌರವಾನ್ವಿತ ಹುದ್ದೆಯನ್ನು ನೀಡಿದೆ. ಇನ್ನು ಕ್ರಿಕೆಟ್ ನಿವೃತ್ತಿಯ ಬಳಿಕ ಅವರು ಡಿಎಸ್‌ಪಿ ಹುದ್ದೆಯನ್ನು ಅಲಂಕರಿಸುವ ಮುನ್ನ 2 ವರ್ಷಗಳ ಪೊಲೀಸ್ ಟ್ರೈನಿಂಗ್ ಕೂಡ ಮುಗಿಸಬೇಕು. ಇದಾದ ಬಳಿಕವಷ್ಟೇ ಅವರು ಅಧಿಕೃತವಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರವಹಿಸಿಕೊಳ್ಳಬಹುದಾಗಿದೆ.
ವರದಿ: ವಿನಯ್ ಭಟ್.
ಇದನ್ನೂ ಓದಿ | ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್ ಔಟ್; ನ್ಯೂಜಿಲೆಂಡ್ ವಿರುದ್ಧದ ಬೆಂಗಳೂರು ಟೆಸ್ಟ್ಗೆ ಭಾರತ ಸಂಭಾವ್ಯ ಪ್ಲೇಯಿಂಗ್ 11