ಈಗಲೇ ಆತುರವೇಕೆ? ಇನ್ನಷ್ಟು ಸಮಯ ಇದೆ; ಐಪಿಎಲ್ ನಿವೃತ್ತಿ ಕುರಿತು ಅಡ್ಡ ಗೋಡೆ ಮೇಲೆ ದೀಪ ಇಟ್ಟ ಎಂಎಸ್ ಧೋನಿ
ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ನಂತರ ಎಂಎಸ್ ಧೋನಿ ಐಪಿಎಲ್ ನಿವೃತ್ತಿ ಕುರಿತು ಮಾತನಾಡಿದ್ದಾರೆ. ಆದರೆ, ಈ ಆವೃತ್ತಿಯ ಬಳಿಕ ಮತ್ತೆ ಆಡುವ ಬಗ್ಗೆಯಾಗಲಿ ಅಥವಾ ವಿದಾಯ ಹೇಳುವ ಬಗ್ಗೆಯಾಗಲಿ ಅವರು ಖಚಿತಪಡಿಸಿಲ್ಲ. ಮುಂದಿನ ತಿಂಗಳುಗಳಲ್ಲಿ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ (MS Dhoni) ತಮ್ಮ ಐಪಿಎಲ್ ಭವಿಷ್ಯದ ಕುರಿತ ದೊಡ್ಡ ಪ್ರಶ್ನೆಗೆ ಉತ್ತರಿಸಿದ್ದಾರೆ. ಆದರೆ, ತಮ್ಮ ನಿರ್ಧಾರದ ಬಗ್ಗೆ ಯಾವುದೇ ಖಚಿತ ಸುಳಿವನ್ನು ಅವರು ಬಿಟ್ಟುಕೊಟ್ಟಿಲ್ಲ. ಅಂದರೆ, ತಾವು ಮುಂದಿನ ಆವೃತ್ತಿಯಲ್ಲಿ ಆಡುವ ಬಗ್ಗೆಯಾಗಲಿ ಅಥವಾ ನಿವೃತ್ತಿ ಘೋಷಿಸುವ ಬಗ್ಗೆಯಾಗಲಿ ಖಚಿತಪಡಿಸಿಲ್ಲ. ಅಡ್ಡಗೋಡೆ ಮೇಲೆ ದೀಪ ಇಟ್ಟ ಮಾಹಿ, ನಿರ್ಧಾರ ತೆಗೆದುಕೊಳ್ಳಲು ಇನ್ನೂ ಕೆಲವು ತಿಂಗಳ ಕಾಲ ಇದೆ ಎಂದಷ್ಟೇ ಹೇಳಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಮುಂದಿನ ವರ್ಷ ಆಡುವ ಭರವಸೆಯನ್ನೂ ಉಳಿಸಿದ್ದಾರೆ.
ಐಪಿಎಲ್ 2025ರ ಆವೃತ್ತಿಯ ಪ್ಲೇಆಫ್ ರೇಸ್‌ನಿಂದ ಈ ಮೊದಲೇ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಭಾನುವಾರ (ಮೇ 25) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 83 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ ಸಿಎಸ್‌ಕೆ ತಂಡವು ಗೆಲುವಿನೊಂದಿಗೆ ಐಪಿಎಲ್ 18ನೇ ಆವೃತ್ತಿಯಲ್ಲಿ ಅಭಿಯಾನವನ್ನು ಕೊನೆಗೊಳಿಸಿತು.
ಇತ್ತೀಚಿನ ಕೆಲವು ಐಪಿಎಲ್ ಆವೃತ್ತಿಗಳಲ್ಲಿ ಸಿಎಸ್‌ಕೆ ತಂಡದ ಕೊನೆಯ ಪಂದ್ಯದ ಸಮಯದಲ್ಲಿ ಮಾಹಿ ನಿವೃತ್ತಿ ಘೋಷಿಸಬಹುದು ಎಂಬ ಆತಂಕ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಈ ಬಾರಿಯೂ, ಸಿಎಸ್‌ಕೆ ತಂಡದ ಕೊನೆಯ ಪಂದ್ಯದ ಸಮಯದಲ್ಲಿ ಧೋನಿಯ ಐಪಿಎಲ್ ಭವಿಷ್ಯ ಹಾಗೂ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸುವ ಸಮಯ ಬಂತೇ ಎಂಬ ಬಗ್ಗೆ ಚರ್ಚೆ ನಡೆಯಿತು. ಆದರೆ, ಗುಜರಾತ್ ವಿರುದ್ಧದ ಗೆಲುವಿನ ನಂತರ ಮಾತನಾಡಿದ 43 ವರ್ಷದ ಆಟಗಾರ, ಎಲ್ಲಾ ರೀತಿಯ ಊಹಾಪೋಹಗಳನ್ನು ಮತ್ತಷ್ಟು ಜೀವಂತವಾಗಿರಿಸಿದರು. ನಿವೃತ್ತಿಯ ಬಗ್ಗೆ ನಿರ್ಧರಿಸಲು ಯಾವುದೇ ಆತುರವಿಲ್ಲ. ಮುಂದಿನ 4-5 ತಿಂಗಳಲ್ಲಿ ಈ ಕುರಿತ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.
“ನನಗೆ ನಿರ್ಧಾರಕ್ಕೆ ಬರಲು ಇನ್ನೂ 4-5 ತಿಂಗಳುಗಳಿವೆ. ಈಗಲೇ ನಿರ್ಧರಿಸುವಂಥ ಆತುರ ಏನೂ ಇಲ್ಲ. ದೇಹವನ್ನು ಸದೃಢವಾಗಿಡಬೇಕು. ಅತ್ಯುತ್ತಮ ಸ್ಥಿತಿಯಲ್ಲಿರಬೇಕು” ಎಂದರು.
ರಾಂಚಿಯಲ್ಲಿ ಬೈಕ್ ರೈಡಿಂಗ್ ಮಾಡ್ತೀನಿ
ಭಾರತದ ಮಾಜಿ ನಾಯಕ ಐಪಿಎಲ್ ನಂತರ ತಮ್ಮ ಯೋಜನೆಗಳನ್ನು ಕೂಡಾ ಬಹಿರಂಗಪಡಿಸಿದ್ದಾರೆ. ರಾಂಚಿಗೆ ಮರಳಿ ಕೆಲಕಾಲ ಬೈಕ್ ರೈಡ್ ಮಾಡಿ ಆನಂದಿಸುವುದಾಗಿ ಹೇಳಿದರು. “ರಾಂಚಿಗೆ ಹಿಂತಿರುಗುತ್ತೇನೆ. ಮನೆಯಲ್ಲಿರದೆ ಕೆಲಕಾಲ ಆಯ್ತು. ಅಲ್ಲಿ ಬೈಕ್ ರೈಡ್ ಅನ್ನು ಆನಂದಿಸುತ್ತೇನೆ. ನನ್ನ ಆಟ ಇಲ್ಲಿಗೆ ಮುಗಿಯಿತು ಎಂದು ಹೇಳುತ್ತಿಲ್ಲ. ಹಾಗಂತಾ ನಾನು ಮತ್ತೆ ಆಡುತ್ತೇನೆ ಎಂದೂ ಹೇಳಲ್ಲ. ನನ್ನ ಬಳಿ ಬೇಕಾದಷ್ಟು ಸಮಯವಿದೆ. ಅದರ ಬಗ್ಗೆ ಯೋಚಿಸಿ ನಂತರ ನಿರ್ಧರಿಸುತ್ತೇನೆ,” ಎಂದು ಧೋನಿ ಸ್ಪಷ್ಟಪಡಿಸಿದ್ದಾರೆ.
ಚೆನ್ನೈಗೆ ಗೆಲುವಿನ ವಿದಾಯ
ಚೆನ್ನೈ ಸೂಪರ್ ಕಿಂಗ್ಸ್ ತಂಡವು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಗೆಲುವಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ, 5 ವಿಕೆಟ್ ಕಳೆದುಕೊಂಡು 230 ರನ್ ಗಳಿಸಿತು. ಚೇಸಿಂಗ್ ನಡೆಸಿದ ಟೈಟನ್ಸ್, 18.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 83 ರನ್‌ಗಳಿಂದ ಗೆದ್ದು ಬೀಗಿತು. ಇದು ಪ್ರಸಕ್ತ ಆವೃತ್ತಿಯಲ್ಲಿ ತಂಡದ ಬೃಹತ್ ಜಯವಾಗಿದೆ. ಅಲ್ಲದೆ ತಂಡಕ್ಕೆ ಗೆಲುವಿನ ಖುಷಿ ಸಿಕ್ಕಿದೆ.