42ರ ಹರೆಯದಲ್ಲೂ ಸಿಂಗಲ್ ಹ್ಯಾಂಡ್ ಸಿಕ್ಸ್, ಹೆಲಿಕಾಪ್ಟರ್ ಶಾಟ್; ಎಂಎಸ್ ಧೋನಿ ಧನಾಧನ್ ಬ್ಯಾಟಿಂಗ್ ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  42ರ ಹರೆಯದಲ್ಲೂ ಸಿಂಗಲ್ ಹ್ಯಾಂಡ್ ಸಿಕ್ಸ್, ಹೆಲಿಕಾಪ್ಟರ್ ಶಾಟ್; ಎಂಎಸ್ ಧೋನಿ ಧನಾಧನ್ ಬ್ಯಾಟಿಂಗ್ ವಿಡಿಯೋ ವೈರಲ್

42ರ ಹರೆಯದಲ್ಲೂ ಸಿಂಗಲ್ ಹ್ಯಾಂಡ್ ಸಿಕ್ಸ್, ಹೆಲಿಕಾಪ್ಟರ್ ಶಾಟ್; ಎಂಎಸ್ ಧೋನಿ ಧನಾಧನ್ ಬ್ಯಾಟಿಂಗ್ ವಿಡಿಯೋ ವೈರಲ್

MS Dhoni : ಐಪಿಎಲ್​ 2024ಕ್ಕೆ ಎಂಎಸ್ ಧೋನಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ನೆಟ್ಸ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಸಿಕ್ಸರ್​​ಗಳ ಮೇಲೆ ಸಿಕ್ಸರ್​ ಚಚ್ಚುತ್ತಿದ್ದಾರೆ. ಅದರ ವಿಡಿಯೋ ವೈರಲ್ ಆಗುತ್ತಿದೆ.

ಎಂಎಸ್ ಧೋನಿ ಧನಾಧನ್ ಬ್ಯಾಟಿಂಗ್ ವಿಡಿಯೋ ವೈರಲ್
ಎಂಎಸ್ ಧೋನಿ ಧನಾಧನ್ ಬ್ಯಾಟಿಂಗ್ ವಿಡಿಯೋ ವೈರಲ್

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2024 ಸೀಸನ್‌ಗೆ ಸಜ್ಜಾಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಅಭ್ಯಾಸದ ಸೆಷನ್‌ನಲ್ಲಿ ಶ್ರಮಿಸುತ್ತಿದ್ದಾರೆ. ಧೋನಿ ಅವರ ನೆಟ್ ಸೆಷನ್‌ಗಳನ್ನು ನೋಡಿದರೆ, ಅವರು 42 ವರ್ಷ ವಯಸ್ಸಿನಲ್ಲೂ ಎಷ್ಟು ಫಿಟ್ ಆಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಅಭ್ಯಾಸವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಅವರ ಧನಾಧನ್ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಐಪಿಎಲ್ 2024ರ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾರ್ಚ್ 22ರಂದು ಚೆಪಾಕ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಸದ್ಯ ಧೋನಿ ಅಭ್ಯಾಸ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ. ನೆಟ್ ಪ್ರಾಕ್ಟೀಸ್ ಸೆಷನ್‌ಗಳಲ್ಲಿ ಮಾಹಿ ಕಠಿಣ ಪರಿಶ್ರಮಪಡುತ್ತಿದ್ದು, ಕಷ್ಟದ ಬೌಲಿಂಗ್​ನಲ್ಲೂ ಸುಲಭವಾಗಿ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದಾರೆ.

42ನೇ ವಯಸ್ಸಿನಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಒಂದು ಕೈಯಲ್ಲೇ ಸಿಕ್ಸರ್ ಸಿಡಿಸಿದ್ದಾರೆ. ಅಲ್ಲದೆ, ಹೆಲಿಕಾಪ್ಟರ್ ಶಾಟ್‌ ಕೂಡ ಎಲ್ಲರ ಗಮನ ಸೆಳೆದಿದೆ. ಧೋನಿ ಅವರ ಟ್ರೇಡ್‌ಮಾರ್ಕ್ ಹೆಲಿಕಾಪ್ಟರ್ ಶಾಟ್ ಹೊಡೆಯುತ್ತಿದ್ದಂತೆ ಸಿಎಸ್‌ಕೆ ಸದಸ್ಯರು ದಿಗ್ಭ್ರಮೆಗೊಂಡರು. ಒಟ್ಟಿನಲ್ಲಿ ಧೋನಿಯ ಬ್ಯಾಟಿಂಗ್ ಪ್ರದರ್ಶನ ಸಿಎಸ್​ಕೆ ತಂಡ ಹಾಗೂ ಚೆನ್ನೈ ಅಭಿಮಾನಿಗಳಲ್ಲಿ ಉತ್ಸಾಹ ತುಂಬಿತ್ತು. ಕಳೆದ ಬಾರಿ ಅವರು ಗಾಯದಿಂದ ಹೆಚ್ಚು ಬ್ಯಾಟಿಂಗ್ ನಡೆಸಿರಲಿಲ್ಲ.

2023ರ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದ ಧೋನಿ ಅವರು ಬ್ಯಾಟಿಂಗ್ ಮಾಡಿದ್ದು ಅತಿ ಕಡಿಮೆ. ಏಕೆಂದರೆ ಅವರ ಮೊಣಕಾಲು ಗಾಯಗೊಂಡಿದ್ದರು. ಹಾಗಾಗಿ ಅತ್ಯಂತ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ನಡೆಸಿದ್ದರು. ಅಲ್ಲದೆ, ಕೊನೆಯ ಓವರ್​​​ಗಳಲ್ಲಿ ಬ್ಯಾಟ್ ಬೀಸುತ್ತಿದ್ದರು. ಹಾಗಾಗಿ ಅಭಿಮಾನಿಗಳು ಅವರ ಆಟವನ್ನು ಹೆಚ್ಚಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ವರ್ಷ ಫಿಟ್ ಆಗಿದ್ದು, ಅಭಿಮಾನಿಗಳ ಮನ ತಣಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.

ಕಳೆದ ವರ್ಷ ಮುಂಬೈನಲ್ಲಿ ಧೋನಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರ ಜೊತೆಗೆ ಇದು ಧೋನಿಯ ಕೊನೆಯ ಐಪಿಎಲ್ ಸೀಸನ್ ಆಗಲಿದೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ತಮ್ಮ ಶ್ರೀಮಂತ ಬ್ಯಾಟಿಂಗ್ ಪ್ರದರ್ಶಿಸಲು ಧೋನಿ ಬಯಸಿದ್ದಾರೆ. ತಂಡಕ್ಕೆ ಆರನೇ ಐಪಿಎಲ್ ಪ್ರಶಸ್ತಿ ಗೆಲ್ಲುವ ಸಂಕಲ್ಪ ತೊಟ್ಟಿದ್ದಾರೆ. ಮತ್ತೊಂದೆಡೆ, ಧೋನಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಚಿಟ್ ಚಾಟ್‌ನಲ್ಲಿ ಹೇಳಿದ್ದಾರೆ.

ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಜೊತೆ ಸೆಣಸಾಟ

ಮಾರ್ಚ್ 22ರಿಂದ ಐಪಿಎಲ್ ಆರಂಭವಾಗಲಿದ್ದು, ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಕಳೆದ ಬಾರಿಯ ಐಪಿಎಲ್​ನಲ್ಲಿ ಸಿಎಸ್​ಕೆ ತಂಡವು ಚಾಂಪಿಯನ್ ಆಗಿತ್ತು. ಫೈನಲ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಕೊನೆಯ ಎಸೆತದಲ್ಲಿ ಮಣಿಸಿತ್ತು. ಇನ್ನು ಆರ್​​ಸಿಬಿ ಮತ್ತು ಸಿಎಸ್​ಕೆ ತಂಡಗಳು ಕಳೆದ ಬಾರಿಯ ಒಂದು ಸಲ ಮಾತ್ರ ಮುಖಾಮುಖಿಯಾಗಿದ್ದವು. ಆದರೆ, ಚೆನ್ನೈ ಗೆದ್ದಿತ್ತು.

ಚೆನ್ನೈ ಸೂಪರ್ ಕಿಂಗ್ಸ್ ತಂಡ

ಎಂಎಸ್ ಧೋನಿ (ನಾಯಕ), ಮೊಯಿನ್ ಅಲಿ, ದೀಪಕ್ ಚಹರ್, ಡೆವೊನ್ ಕಾನ್ವೆ, ತುಷಾರ್ ದೇಶಪಾಂಡೆ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗಾಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಕೇಶ್ ಚೌಧರಿ, ಮತೀಶ್ ಪತಿರಾಣ, ಅಜಿಂಕ್ಯ ರಹಾನ್, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.

Whats_app_banner