ನಾಯಕ ಬದಲಾದರೂ ಅದೃಷ್ಟ ಬದಲಾಗಲಿಲ್ಲ; ಸತತ 5ನೇ ಪಂದ್ಯ ಸೋತ ಸಿಎಸ್‌ಕೆ, ಚೆಪಾಕ್‌ನಲ್ಲಿ ಕೆಕೆಆರ್ ಜಯಭೇರಿ
ಚೆಪಾಕ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ 9 ವಿಕೆಟ್ ನಷ್ಟಕ್ಕೆ ಕೇವಲ 103 ರನ್ ಗಳಿಸಿತು. ಚೇಸಿಂಗ್ ನಡೆಸಿದ ಕೆಕೆಆರ್, ಕೇವಲ 10.1 ಓವರ್‌ಗಳಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು 107 ರನ್ ಗಳಿಸಿ ಜಯಭೇರಿ ಬಾರಿಸಿತು.

ನಾಯಕ ಬದಲಾದರೂ ಸಿಎಸ್‌ಕೆ ತಂಡದ ಹಣೆಬರಹ ಮಾತ್ರ ಬದಲಾಗಲಿಲ್ಲ. ಐಪಿಎಲ್ 18ನೇ ಆವೃತ್ತಿಯಲ್ಲಿ ಯೆಲ್ಲೋ ಆರ್ಮಿಗೆ ಅದೃಷ್ಟ ಕೈಹಿಡಿಯುತ್ತಿಲ್ಲ. ಐಪಿಎಲ್ ಆಡಿದ 16 ವರ್ಷಗಳ ಇತಿಹಾಸದಲ್ಲಿ (ಉಳಿದ ಎರಡು ವರ್ಷ ಸಿಎಸ್‌ಕೆ ಬ್ಯಾನ್ ಆಗಿತ್ತು) ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ 5 ಪಂದ್ಯಗಳಲ್ಲಿ ಸೋತಿದೆ. ಅಷ್ಟೇ ಅಲ್ಲ ತಾನು ಬಲಿಷ್ಠವಾಗಿದ್ದ ತವರು ಮೈದಾನ ಚೆಪಾಕ್‌ನಲ್ಲಿ ಇದೇ ಮೊದಲ ಬಾರಿಗೆ ಸತತ ಮೂರು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದೆ. ಕೆಕೆಆರ್ ವಿರುದ್ಧ ಅತ್ಯಲ್ಪ ಮೊತ್ತ ಕಲೆಹಾಕಿ ಕಳಪೆ ದಾಖಲೆ ನಿರ್ಮಿಸಿದ ತಂಡವು, ಟೂರ್ನಿಯಲ್ಲಿ ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಕೆಕೆಆರ್ ತಂಡವು 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಚೆಪಾಕ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ 9 ವಿಕೆಟ್ ನಷ್ಟಕ್ಕೆ ಕೇವಲ 103 ರನ್ ಗಳಿಸಿತು. ಇದು ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈವರೆಗಿನ ಅತ್ಯಂತ ಕನಿಷ್ಠ ಮೊತ್ತವಾಗಿದೆ. ಮಾಹಿ ನಾಯಕತ್ವಕ್ಕೆ ಕಂಬ್ಯಾಕ್ ಮಾಡಿದ ಪಂದ್ಯದಲ್ಲೇ ಈ ಕಳಪೆ ದಾಖಲೆ ನಿರ್ಮಾಣವಾಗಿದೆ.
ಇದಕ್ಕೆ ಪ್ರತಿಯಾಗಿ ಚೇಸಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್, ಕೇವಲ 10.1 ಓವರ್‌ಗಳಲ್ಲಿ 2 ವಿಕೆಟ್ ಮಾತ್ರ ಕಳೆದುಕೊಂಡು 107 ರನ್ ಗಳಿಸಿ ಗೆದ್ದು ಬೀಗಿತು. ಇದು ಸಾಧಾರಣ ಗೆಲುವಲ್ಲ 9.5 ಓವರ್‌ಗಳನ್ನು ಉಳಿಸಿ ಭರ್ಜರಿ ಗೆಲುವು.
ಪ್ರಸಕ್ತ ಆವೃತ್ತಿಯಲ್ಲಿ ಆಡಿದ ಮೊದಲ ಪಂದ್ಯ ಗೆದ್ದ ಬಳಿಕ ಸತತ ಐದು ಪಂದ್ಯಗಳಲ್ಲಿ ಸೋತಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅತ್ತ ಗೆದ್ದ ಕೆಕೆಆರ್ ತಂಡವು ಆರ್‌ಸಿಬಿ ತಂಡವನ್ನು ಕೆಳಕ್ಕಿಳಿಸಿ ಮೂರನೇ ಸ್ಥಾನಕ್ಕೇರಿದೆ.
ನಾಯಕತ್ವ ಬದಲಾವಣೆ
5 ಬಾರಿಯ ಚಾಂಪಿಯನ್ ಆಗಿರುವ ಸಿಎಸ್‌ಕೆ ತಂಡ, ಈ ಬಾರಿ ಗೆಲುವಿಗಾಗಿ ಹೆಣಗಾಡುತ್ತಿದೆ. ಸತತ ನಾಲ್ಕು ಸೋಲಿನ ಬಳಿಕ ತಂಡದ ನಾಯಕನಾಗಿದ್ದ ರುತುರಾಜ್ ಗಾಯಕ್ವಾಡ್ ಗಾಯದಿಂದಾಗಿ ತಂಡದಿಂದ ಹೊರಬಿದ್ದರು. ಎಂಎಸ್ ಧೋನಿ ಎರಡು ವರ್ಷಗಳ ಬಳಿಕ ನಾಯಕನಾಗಿ ತಂಡಕ್ಕೆ ಮರಳಿದರು. ಅನುಭವಿ ನಾಯಕನೊಂದಿಗೆ ತಂಡದ ಅದೃಷ್ಟ ಬದಲಾಗುವ ನಿರೀಕ್ಷೆ ಇತ್ತು. ಆದರೆ, ಅದು ಇನ್ನಷ್ಟು ಕಮರಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್‌ಕೆ ಪರ, ಡಿವೋನ್ ಕಾನ್ವೆ 12 ರನ್, ರಚಿನ್ 4 ಹಾಗೂ ತ್ರಿಪಾಠಿ ಕೇವಲ 16 ರನ್ ಗಳಿಸಿದರು. ಶಿವಂ ದುಬೆ ಅಜೇಯ 31 ರನ್ ಗಳಿಸಿದರೆ, ವಿಜಯ್ ಶಂಕರ್ 29 ರನ್ ಗಳಿಸಿದರು. ನಾಯಕನಾಗಿ ನಿರೀಕ್ಷೆ ಮೂಡಿಸಿದ್ದ ಧೋನಿ 4 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾದರು. ಉಳಿದ ಎಲ್ಲರ ಮೊತ್ತ ಒಂದಂಕಿಗೆ ಸೀಮಿತವಾಯ್ತು. ಕೆಕೆಆರ್ ಪರ ಸುನಿಲ್ ನರೈನ್ 3 ಪ್ರಮುಖ ವಿಕೆಟ್ ಪಡೆದರು.
ಕೆಕೆಆರ್‌ಗೆ ಸುಲಭ ತುತ್ತಾದ ಸಿಎಸ್‌ಕೆ
ಸಿಎಸ್‌ಕೆ ತಂಡದ ಅಲ್ಪಮೊತ್ತ ಕೆಕೆಆರ್‌ಗೆ ಸುಲಭ ಗುರಿಯಾಯ್ತು. ಹೀಗಾಗಿ ಚೇಸಿಂಗ್ ಆರಂಭದಲ್ಲೇ ಅಬ್ಬರಿಸಿತು. ಕ್ವಿಂಟನ್ ಡಿಕಾಕ್ 3 ಸಿಕ್ಸರ್ ಸಹಿತ 23 ರನ್ ಗಳಿಸಿದರೆ, ಅಬ್ಬರಿಸಿದ ನರೈನ್ 5 ಸ್ಫೋಟಕ ಸಿಕ್ಸರ್ ಸಹಿತ 44 ರನ್ ಸಿಡಿಸಿದರು. ರಹಾನೆ ಅಜೇಯ 20 ರನ್ ಕಲೆ ಹಾಕಿದರೆ, ರಿಂಕು 15 ರನ್ ಗಳಿಸುವ ಮೂಲಕ ಗೆಲುವಿನ ಸಿಕ್ಸರ್ ಬಾರಿಸಿದರು.
