ಕನ್ನಡ ಸುದ್ದಿ  /  Cricket  /  Csk Ms Dhoni Felt Discomfort Spotted Limping With Ice Pack After Knock Vs Delhi Capitals Photo With Ground Staff Jra

ವೈಜಾಗ್ ಮೈದಾನ ಸಿಬ್ಬಂದಿ ಜೊತೆ ಫೋಟೋಗೆ ಪೋಸ್, ಕುಂಟುತ್ತಾ ನಡೆದ ಧೋನಿ; ಸ್ಫೋಟಕ ಬ್ಯಾಟಿಂಗ್ ಬಳಿಕ ಮಾಹಿಗೇನಾಯ್ತು?

MS Dhoni: ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್ ನಡುವಿನ‌ ಐಪಿಎಲ್ ಪಂದ್ಯದ ನಂತರ, ಕಾಲಿಗೆ ಐಸ್ ಪ್ಯಾಕ್ ಕಟ್ಟಿಕೊಂಡು ಎಂಎಸ್ ಧೋನಿ ಕುಂಟುತ್ತಾ ನಡೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದೇ ವೇಳೆ ವೈಜಾಗ್‌ ಮೈದಾನದ ಸಿಬ್ಬಂದಿ ಜೊತೆಗೆ ಮಾಹಿ ಫೋಟೋಗೆ ಪೋಸ್‌ ನೀಡಿರುವ ದೃಶ್ಯ ವೈರಲ್‌ ಆಗಿದೆ.

ಕುಂಟುತ್ತಾ ನಡೆದ ಧೋನಿ; ಸ್ಫೋಟಕ ಬ್ಯಾಟಿಂಗ್ ಬಳಿಕ ಮಾಹಿಗೇನಾಯ್ತು
ಕುಂಟುತ್ತಾ ನಡೆದ ಧೋನಿ; ಸ್ಫೋಟಕ ಬ್ಯಾಟಿಂಗ್ ಬಳಿಕ ಮಾಹಿಗೇನಾಯ್ತು

ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಜಯ ಸಾಧಿಸಿತು. ಪಂದ್ಯದಲ್ಲಿ ಸಿಎಸ್‌ಕೆ ತಂಡ ಸೋತರೂ, ಅಭಿಮಾನಿಗಳಿಗೆ ಎಂಎಸ್‌ ಧೋನಿ (MS Dhoni) ಬ್ಯಾಟಿಂಗ್ ಖುಷಿ ಕೊಟ್ಟಿತು. ಮೈದಾನದಲ್ಲಿ ಸಿಎಸ್‌ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಿದ್ದ ಕಾರಣ, ಮಾಹಿಯ ಬ್ಯಾಟಿಂಗ್‌ಗಾಗಿ ಫ್ಯಾನ್ಸ್‌ ತುದಿಗಾಲಿನಲ್ಲಿ ನಿಂತಿದ್ದರು. ಪ್ರಸಕ್ತ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಬ್ಯಾಟಿಂಗ್‌ ಮಾಡಿದ ಅವರು, ಚೆನ್ನೈ ಸೂಪರ್ ಕಿಂಗ್ಸ್ ಪರ ಕೇವಲ 16 ಎಸೆತಗಳಲ್ಲಿ ಅಜೇಯ 37 ರನ್ ಸಿಡಿಸಿದರು. ಪಂದ್ಯದಲ್ಲಿ ಹಳದಿ ಆರ್ಮಿ ಸೋತರೂ, ಧೋನಿ ಸ್ಫೋಟಕ ಆಟವು ಚೆನ್ನೈ ಅಭಿಮಾನಿಗಳಿಗೆ ಸುಖನಿದ್ದೆ ಕೊಟ್ಟಿತು.

ಬರೋಬ್ಬರಿ 302 ದಿನಗಳ ಬಳಿಕ ಬ್ಯಾಟಿಂಗ್‌ ಮಾಡಿದ 42ರ ಹರೆಯದ ಧೋನಿ, ಅದೇ ಹಳೆಯ ಜೋಶ್‌ನೊಂದಿಗೆ ಗಾಂಭೀರ್ಯದಿಂದ ಬ್ಯಾಟ್‌ ಬೀಸಿದರು. ತಂಡದ ಗೆಲುವಿಗೆ ಶತಾಯ ಗತಾಯ ಪ್ರಯತ್ನ ಹಾಕಿದರು. ಆದರೆ, ತಮ್ಮ ಆಟದ ವೇಳೆ ಮಾಹಿ ಅಸ್ವಸ್ಥರಾಗಿದ್ದು ಸತ್ಯ. ಇದಕ್ಕೆ ಪಂದ್ಯದ ಬಳಿಕ ಸಾಕ್ಷಿ ಸಿಕ್ಕಿದೆ.

ಪಂದ್ಯ ಮುಗಿದ ಬಳಿಕ, ವೈಜಾಗ್ ಮೈದಾನದಲ್ಲಿ ಭಾರತದ ದಿಗ್ಗಜ ಆಟಗಾರನ ನಡೆ ಅಭಿಮಾನಿಗಳ ಹೃದಯ ಗೆದ್ದಿದೆ. ವಿಶಾಖಪಟ್ಟಣದ ಮೈದಾನದ ಸಿಬ್ಬಂದಿಯೊಂದಿಗೆ ಬೆರೆತು ಫೋಟೋಗೆ ಪೋಸ್‌ ಕೊಡುವ ಮೂಲಕ, ಕಾಲ ಕಳೆದರು. ಇದು ಆ ಸಿಬ್ಬಂದಿಯ ಖುಷಿಯನ್ನು ಇಮ್ಮಡಿಗೊಳಿಸಿತು. ಇದಕ್ಕೂ ಮುನ್ನ ಅವರು ಎದುರಾಳಿ ತಂಡದ ಆಟಗಾರರಾದ ಕುಲ್ದೀಪ್ ಯಾದವ್, ರಿಷಭ್ ಪಂತ್ ಮತ್ತು ಖಲೀಲ್ ಅಹ್ಮದ್ ಅವರನ್ನು ಕೂಡಾ ಮಾತನಾಡಿಸಿದರು.

ಇದನ್ನ ಓದಿ | ಫಾಸ್ಟ್​ ಬಾಲ್ ಹಾಕಿ ಫಾರ್ಲೋವರ್ಸ್ ಏರಿಸಿಕೊಂಡ ಮಯಾಂಕ್ ಯಾದವ್; ರಾತ್ರೋರಾತ್ರಿ ಹೀರೋ ಆದ ವೇಗಿಗೆ ಮೊದಲಿದ್ದಿದ್ದೇ 4000!

ಮೈದಾನದ ಸಿಬ್ಬಂದಿಯೊಂದಿಗೆ ಮಾತನಾಡಿ ಫೋಟೋ ತೆಗೆಸಿಕೊಳ್ಳಲು ನಡೆಯುವಾಗ, ಧೋನಿ ತಮ್ಮ ಕಾಲಿಗೆ ಐಸ್ ಪ್ಯಾಕ್ ಕಟ್ಟಿಕೊಂಡಿದ್ದರು. ಅಲ್ಲದೆ ಕುಂಟುತ್ತಾ ಸಾಗಿ ಅವರ ಸಿಬ್ಬಂದಿ ಮಧ್ಯೆ ನಿಂತರು. ಧೋನಿ ನಡೆಯಲು ಕಷ್ಟಪಡುತ್ತಿರುವುದು ಅಭಿಮಾನಿಗಳ ಕಳವಳಕ್ಕೆ ಕಾರಣವಾಯ್ತು.

8ನೇ ಕ್ರಮಾಂಕದಲ್ಲಿ ಸ್ಫೋಟಕ ಇನ್ನಿಂಗ್ಸ್‌, 3 ಸಿಕ್ಸರ್

ವೈಜಾಗ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌, ಚೆನ್ನೈ ತಂಡಕ್ಕೆ 192 ರನ್‌ಗಳ ಗುರಿ ನೀಡಿತು. ಭರ್ಜರಿ ಗುರಿ ಬೆನ್ನಟ್ಟಿದ ಸಿಎಸ್‌ಕೆ ಪರ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಧೋನಿ, ತಂಡವನ್ನು ಗೆಲುವಿನ ದಡ ಸೇರಿಸಲು ಪ್ರಯತ್ನಿಸಿದರು. ಅಜೇಯ ಇನ್ನಿಂಗ್ಸ್‌ ಆಡಿದ ಮಾಹಿ, ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸ್ಫೋಟಕ ಸಿಕ್ಸರ್‌ ಸಿಡಿಸಿದರು. ಅಂತಿಮ ಓವರ್‌ನಲ್ಲಿ ಬರೋಬ್ಬರಿ 20 ರನ್‌ ಕಲೆ ಹಾಕಿದರು. ಭರ್ಜರಿ 231ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿ, ವೈಜಾಗ್‌ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಪಂದ್ಯದ ನಂತರ ವೈಜಾಗ್ ಗ್ರೌಂಡ್ ಸ್ಟಾಫ್‌ಗಳನ್ನು ಒಟ್ಟು ಸೇರಿಸಿ, ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು. ಮಾಹಿಯ ಈ ನಡೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಚೆನ್ನೈ ತಂಡವು ಮುಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 5ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

IPL_Entry_Point