ಸಿಎಸ್ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು
Ambati Rayudu mocks RCB: ಐದು ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ನಿಮಗೊಂದು ಟ್ರೋಫಿಯನ್ನು ಕೊಡುತ್ತದೆ. ಬೆಂಗಳೂರಿನಲ್ಲಿ ಮೆರವಣಿಗೆ ಮಾಡಿ ಎಂದು ಆರ್ಸಿಬಿ ತಂಡವನ್ನು ಅಂಬಾಟಿ ರಾಯುಡು ಅಣಕಿಸಿದ್ದಾರೆ.

17ನೇ ಆವೃತ್ತಿಯ ಐಪಿಎಲ್ನ ನಿರ್ಣಾಯಕ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್ಗಳ ಅಂತರದಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಲ್ಕನೇ ತಂಡವಾಗಿ ಲಗ್ಗೆ ಇಟ್ಟಿತು. ಆದರೆ ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಸಿಎಸ್ಕೆ ಮಾಜಿ ಆಟಗಾರ ಅಂಬಾಟಿ ರಾಯುಡು, ಆರ್ಸಿಬಿ ತಂಡವನ್ನು ಅಣಕಿಸಿದ್ದಾರೆ. ಪ್ಲೇಆಫ್ ರೇಸ್ನಿಂದ ಹೊರಗಟ್ಟಿದ ಬೆನ್ನಲ್ಲೇ ನೊಂದ ರಾಯುಡು, ತೀವ್ರ ಸಂಕಟಗೊಳಗಾಗಿ ನಾಲಿಗೆ ಹರಿಯಬಿಟ್ಟಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ಲೇಆಫ್ ಡಿಸೈಡರ್ ಹಾಗೂ ಲೀಗ್ 68ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ, ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಫಾಫ್ ಡು ಪ್ಲೆಸಿಸ್ (54), ವಿರಾಟ್ ಕೊಹ್ಲಿ (47), ರಜತ್ ಪಾಟೀದಾರ್ (41). ಕ್ಯಾಮರೂನ್ ಗ್ರೀನ್ (38*) ಬ್ಯಾಟಿಂಗ್ ನಡೆಸಿದರು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ ತನ್ನ ಪಾಲಿನ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಪ್ಲೇಆಫ್ ಪ್ರವೇಶಿಸಲು ಚೆನ್ನೈ 201 ರನ್ ಗಳಿಸಿದ್ದರೆ ಸಾಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ತನ್ನ ಮಾಜಿ ತಂಡ ಸೋಲಿಗೆ ಶರಣಾಗಿ ಪ್ಲೆಆಫ್ ಪ್ರವೇಶಿಸಲು ವಿಫಲವಾಗುತ್ತಿದ್ದಂತೆ ಅಂಬಾಟಿ ರಾಯುಡು ಮನಬಂದಂತೆ ಮಾತನಾಡಿದ್ದಾರೆ. ಸಿಎಸ್ಕೆ ಎದುರು ದಿಗ್ವಿಜಯ ಸಾಧಿಸಿದ ಆರ್ಸಿಬಿ ಕೇವಲ ಪ್ಲೇಆಫ್ ಪ್ರವೇಶಿಸಿದೆ. ಆದರೆ ಕಪ್ ಗೆದ್ದವರಂತೆ ಹಾರಾಡುತ್ತಿದೆ. ಅವರು ಪ್ರವೇಶಿಸಿರುವುದು ಪ್ಲೇಆಫ್ ಮಾತ್ರ. ಇನ್ನೂ ಟ್ರೋಫಿ ಗೆದ್ದಿಲ್ಲ. ಅವರು ರಾತ್ರಿ ಸಂಭ್ರಮಿಸಿದ್ದು ನೋಡಿದರೆ, ಈಗಾಗಲೇ ಪ್ರಶಸ್ತಿಯನ್ನೇ ಜಯಿಸಿದವರಂತೆ ವರ್ತಿಸಿದರು. ಬೆಂಗಳೂರಿನ ಬೀದಿಗಳಲ್ಲಿ ಅಭಿಮಾನಿಗಳಿಂದ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಮಾಜಿ ಸಿಎಸ್ಕೆ ಆಟಗಾರ, ಈ ಬಾರಿ ಕಪ್ ಗೆಲ್ಲಲು ಆಗದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿರುವ ಐದು ಟ್ರೋಫಿಗಳಲ್ಲಿ ಒಂದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೀಡಬೇಕು. ಅದನ್ನು ಆರ್ಸಿಬಿ ತಂಡದವರು ಪರೇಡ್ ಮಾಡಬಹುದು. ಮೆರವಣಿಗೆ ಮಾಡಬಹುದು ಎಂದು ಅಂಬಾಟಿ ಸ್ಟಾರ್ಸ್ಟೋರ್ಟ್ಸ್ನಲ್ಲಿ ರೆಡ್ ಆರ್ಮಿಯನ್ನು ಅಣಕಿಸಿದ್ದಾರೆ. ಅವರ ಮಾತುಗಳಿಗೆ ಆಕ್ರೋಶಗೊಂಡ ಆರ್ಸಿಬಿ ಫ್ಯಾನ್ಸ್, ರೊಚ್ಚಿಗೆದ್ದಿದ್ದಾರೆ.
ವರುಣ್ ಆರೋನ್ ತಿರುಗೇಟು
ಸ್ಟಾರ್ ಸ್ಪೋರ್ಟ್ಸ್ ಶೋನಲ್ಲಿ ಅಂಬಾಟಿ ಪಕ್ಕದಲ್ಲಿದ್ದ ಆರ್ಸಿಬಿ ಮಾಜಿ ವೇಗಿ ವರುಣ್ ಅರೋನ್, ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ಕೊಟ್ಟಿದ್ದಾರೆ. ಸಿಎಸ್ಕೆ ತಂಡವನ್ನು ಪ್ಲೇಆಫ್ ರೇಸ್ನಿಂದ ಹೊರದಬ್ಬಿದ ಆರ್ಸಿಬಿ ತಂಡದ ದಿಗ್ವಿಜಯವನ್ನು ಅರಗಿಸಿಕೊಳ್ಳಲು ಇವರಿಂದಾಗುತ್ತಿಲ್ಲ ಎಂದು ಅರೋನ್, ರಾಯುಡುಗೆ ಚಾಟಿ ಬೀಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಐಪಿಎಲ್-2024ರ ಪ್ಲೇಆಫ್ ವೇಳಾಪಟ್ಟಿ
ಮೇ 21 - ಕೆಕೆಆರ್ vs ಎಸ್ಆರ್ಹೆಚ್, ನರೇಂದ್ರ ಮೋದಿ ಸ್ಟೇಡಿಯಂ (ಮೊದಲ ಕ್ವಾಲಿಫೈಯರ್)
ಮೇ 22 - ಆರ್ಆರ್ vs ಆರ್ಸಿಬಿ, ನರೇಂದ್ರ ಮೋದಿ ಸ್ಟೇಡಿಯಂ (ಎಲಿಮಿನೇಟರ್)
ಮೇ 24 - ಕ್ವಾಲಿಫೈಯರ್-1 ಸೋತವರು vs ಎಲಿಮಿನೇಟರ್ ಗೆದ್ದವರು, ಚೆಪಾಕ್ ಮೈದಾನ (2ನೇ ಕ್ವಾಲಿಫೈಯರ್)
ಮೇ 26 - ಫೈನಲ್ ಪಂದ್ಯ, ಚೆಪಾಕ್ ಮೈದಾನ
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
